ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ

ರಾಜ್ಯ

ರಾಜ್ಯ ಹೆದ್ದಾರಿ, ಪಿಡಬ್ಲ್ಯೂಡಿ ಜಿಲ್ಲಾ ಮುಖ್ಯ ರಸ್ತೆಗಳ ಭೂ ಗಡಿ 6 ಮೀ ನಿಗದಿಗೊಳಿಸಿ ಆದೇಶ; ಕಟ್ಟಡ ಕಟ್ಟುವವರಿಗೆ ಫುಲ್ ಖುಷ್.!

ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದ್ದು, ಇದರಿಂದ ರಸ್ತೆ ಮಾರ್ಜಿನ್ ಅಂತರದಲ್ಲಿ ಕಟ್ಟಡ ನಿರ್ಮಿಸುವವರು ಪುಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ ಸರಕಾರದ ಆ ಆದೇಶ ಏನಿದು ಗೊತ್ತೆ?

ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗಳಿಗೆ ಕಟ್ಟಡ ಕಟ್ಟಲು ಈ ಹಿಂದೆ 25 ಮೀ ನಿಗದಿಪಡಿಸಲಾಗಿದ್ದು, ಆದರೆ ಇದೀಗ ಸರಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ರಾಜ್ಯ ಹೆದ್ದಾರಿ ಮತ್ತು ಪಿಡಬ್ಯೂಡಿ ಇಲಾಖಾ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗಳ ರಸ್ತೆ ಭೂ ಗಡಿಯ ಅಂಚಿನಿಂದ ಕಟ್ಟಡಗಳ ರೇಖೆಯ ಅಂತರದ ವಿಷಯವಾಗಿ ಹಿಂದಿನ ಆದೇಶವನ್ನು ಪರಿಷ್ಕರಿಸಿ 6 ಮೀ.ಗೆ ಸರಕಾರ ನಿಗದಿಗೊಳಿಸಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿಗಳಲ್ಲಿ ಬರುವ ಕಾರ್ಪೊರೇಶನ್‌, ಮುನ್ಸಿಪಲ್‌ ಕೌನ್ಸಿಲ್‌, ಟೌನ್‌ ಮುನ್ಸಿಪಲ್‌ ಕೌನ್ಸಿಲ್‌, ಟೌನ್‌ ಪಂಚಾಯತ್‌ ಮತ್ತು ಗ್ರಾಮ ಪಂಚಾಯತ್‌ ಪರಿಮಿತಿಗಳಲ್ಲಿ ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂ ಗಡಿಯ ಅಂಚಿನಿಂದ ಕಟ್ಟಡಗಳ ರೇಖೆಯ ಅಂತರ 6 ಮೀ.ಆಗಿದ್ದು, ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗಳಿಗೆ ಕೂಡ 6ಮೀ. ನಿಗದಿಗೊಳಿಸಿ ಆದೇಶಿಸಿದೆ. ಇದರಿಂದ ಸಾರ್ವಜನಿಕರಿಗೆ ವಾಸ್ತವ್ಯ ಹಾಗೂ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲು ಇನ್ನಷ್ಟು ಸುಲಭವಾಗಿದೆ.

ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು 2024ರ ಡಿ. 2ರಂದು ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ರಾಜ್ಯ ಹೆದ್ದಾರಿಗಳಂತೆ ಜಿಲ್ಲಾ ಮುಖ್ಯ ರಸ್ತೆಗಳಿಗೂ ಭೂ ಗಡಿ ಅಂಚಿನಿಂದ 6 ಮೀ. ಅಂತರದಲ್ಲಿ ಕಟ್ಟಡ ನಿಯಂತ್ರಣ ರೇಖೆಯನ್ನು ನಿಗದಿಪಡಿಸುವಂತೆ ಕೋರಿದ್ದರು. ಅದರಂತೆ ಸರಕಾರ ಪರಿಷ್ಕೃತ ಆದೇಶ ಹೊರಡಿಸಿದ್ದು ಫೆಬ್ರವರಿ 17 ರಂದು ಈ ಸಂಬಂಧ ಸುತ್ತೋಲೆ ಹೊರಡಿಸಿದೆ.

2024ರ ಅ. 10ರಂದು ಹೊರಡಿಸಿದ್ದ ಹಿಂದಿನ ಆದೇಶವನ್ನು ಪರಿಷ್ಕರಿಸಿ ಭೂ ಗಡಿಯ ಅಂಚಿನಿಂದ ಕಟ್ಟಡದ ರೇಖೆಯ ಪರಿಮಿತಿಯನ್ನು 6ಮೀ ನಿಗದಿಪಡಿಸಿರುವುದ ಆದೇಶವನ್ನು ರಾಜ್ಯ ಹೆದ್ದಾರಿಗಳ ಜತೆಗೆ ಲೊಕೋಪಯೋಗಿ ಇಲಾಖಾ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗಳಿಗೂ ವಿಸ್ತರಿಸಿರುವುದಾಗಿ ತಿಳಿಸಿದೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳಲ್ಲಿ ಬರುವ ಸಿಟಿ ಕಾರ್ಪೊರೇಶನ್‌, ಸಿಟಿ ಮುನ್ಸಿಪಲ್‌ ಕೌನ್ಸಿಲ್‌, ಟೌನ್‌ ಮುನ್ಸಿಪಲ್‌ ಕೌನ್ಸಿಲ್‌, ಟೌನ್‌ ಪಂಚಾಯತ್‌ ಮತ್ತು ಗ್ರಾಮ ಪಂಚಾಯತ್‌ನ ಪ್ರತೀ ಗ್ರಾಮ ಠಾಣಾ ಪರಿಮಿತಿಗೂ ಈ ಆದೇಶ ಅನ್ವಯಿಸಲಿದೆ. ಅದರ ಜತೆಗೆ ಸಿಟಿ ಕಾರ್ಪೋರೇಶನ್‌ ಪರಿಮಿತಿಯಿಂದ 15 ಕಿ. ಮೀ. ದೂರದವರೆಗೆ 12 ಮೀಟರ್‌ ವರೆಗೆ ಪರಿಷ್ಕರಿಸಿದೆ.