ಭಾರತದ ಅನಿವಾಸಿ ಉದ್ಯಮಿ, ಯುಎಇ ಕಂಪನಿ ಎನ್ ಎಂ ಸಿ ಹೆಲ್ತ್ ಸಂಸ್ಥಾಪಕ ಬಿ ಆರ್ ಶೆಟ್ಟಿಗೆ ಭಾರತದ ಐಸಿಐಸಿಐ ಬ್ಯಾಂಕ್ ಗೆ 106 ಮಿಲಿಯನ್ ಡಾಲರ್ ಪಾವತಿಸುವಂತೆ ದುಬೈ ನ್ಯಾಯಾಲಯ ಆದೇಶ ನೀಡಿದೆ.
ಯುಎಇಯಾದ್ಯಂತ 85 ವೈದ್ಯಕೀಯ ಸೌಲಭ್ಯಗಳನ್ನು ನಿರ್ವಹಿಸುತ್ತಿರುವ ಎನ್ ಎಂ ಸಿ 2022 ರಲ್ಲಿ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ ನೇತೃತ್ವದ $4 ಬಿಲಿಯನ್ ಸಾಲ ಪುನರ್ರಚನೆ ನಂತರ ಆಡಳಿತದಿಂದ ಹೊರಬಂದಿತ್ತು. $963 ಮಿಲಿಯನ್ ಬಾಕಿ ಇತ್ತು. ಎನ್ ಎಂ ಸಿ ಹೆಲ್ತ್ ಕೇರ್ ಖರೀದಿದಾರರನ್ನು ಹುಡುಕುತ್ತಿದೆ. ಆದರೆ ಇನ್ನೂ ಖರೀದಿದಾರರನ್ನು ಪಡೆದುಕೊಂಡಿಲ್ಲ ಎಂದು ಕಂಪನಿಯು ಎಜಿಬಿಐ ಗೆ ತಿಳಿಸಿದೆ.
ಉದ್ಯಮಿ ಬಿ ಆರ್ ಶೆಟ್ಟಿಗೆ ಸಂಕಷ್ಟದ ಮೇಲೆ ಸಂಕಷ್ಟ ಬರುತ್ತಿದ್ದು, ಈ ತಿಂಗಳ ಆರಂಭದಲ್ಲಿ ಬ್ಯಾಂಕ್ ಆಫ್ ಬರೋಡಾ ಗೆ $33 ಬಿಲಿಯನ್ ಪಾವತಿಸಲು ಆದೇಶಿಸಿತ್ತು. 2020 ರಲ್ಲಿ ಎನ್ ಎಂ ಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು $6.6 ಶತಕೋಟಿಗೂ ಹೆಚ್ಚಿನ ಸಾಲದ ಸುಳಿಗೆ ಸಿಲುಕಿದೆ. ಈ ಸಾಲವನ್ನು ಹಿಂಪಡೆಯಲು ಯುಎಇ ಮತ್ತು ಸಾಲ ನೀಡಿರುವ ಬ್ಯಾಂಕ್ ಗಳು ಹರಸಾಹಸ ಪಡುತ್ತಿದೆ.

ದುಬೈ ಅಂತರಾಷ್ಟ್ರೀಯ ಹಣಕಾಸು ಕೇಂದ್ರ (DIFC) ನ್ಯಾಯಾಲಯಗಳು ತನ್ನ ತೀರ್ಪಿನಲ್ಲಿ ಐಸಿಐಸಿಐ ಬ್ಯಾಂಕ್ ಗೆ ನೀಡಬೇಕಾದ ಸಾಲಕ್ಕೆ ಶೆಟ್ಟಿ ಅವರೇ ಹೊಣೆಗಾರರು ಎಂದು ತಿಳಿಸಿದೆ. ಯುಎಇ ಮತ್ತು ವಿದೇಶ ರಾಷ್ಟ್ರಗಳಲ್ಲಿ ಹಣಕಾಸಿಗೆ ಸಂಬಂಧಿಸಿ ಹಲವಾರು ಕಾನೂನು ಹೋರಾಟಗಳನ್ನು ಎದುರಿಸುತ್ತಿರುವ ಬಿ ಆರ್ ಶೆಟ್ಟಿ ಗ್ಯಾರಂಟಿಗಳ ಮೇಲಿನ ಸಹಿಗಳು ನಕಲಿ ಎಂದು ವಾದಿಸಿದ್ದರು. ಆದರೆ ನ್ಯಾಯಾಲಯ ವಿವಿಧ ಸಾಕ್ಷ್ಯಗಳನ್ನು ಪರಿಗಣಿಸಿ ಶೆಟ್ಟಿ ಅವರ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ತಿರಸ್ಕರಿಸಿತು.
ಭಾರತ, ಯುಎಇ ಮತ್ತು ಯುನೈಟೆಡ್ ಕಿಂಗ್ ಡಮ್ ಗಳಲ್ಲಿ ಹಲವಾರು ಮೊಕದ್ದಮೆಗಳನ್ನು ಬಿ ಆರ್ ಶೆಟ್ಟಿ ಎದುರಿಸುತ್ತಿದ್ದಾರೆ. ಐಸಿಐಸಿಐ ಬ್ಯಾಂಕ್ 125 ಮಿಲಿಯನ್ ಡಾಲರ್ ಹಣ ಪಾವತಿಸುವಂತೆ ಕೇಳಿತ್ತು. ಹಒಂದು ಕಾಲದಲ್ಲಿ ಭಾರತದ ಅತ್ಯಂತ ಪ್ರಭಾವಿ ಅನಿವಾಸಿ ಉದ್ಯಮಿ ಗಳಲ್ಲಿ ಬಿ ಆರ್ ಶೆಟ್ಟಿ ಒಬ್ಬರಾಗಿದ್ದರು. ಆದರೆ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಶೆಟ್ಟಿ ಸಾಲದಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ.
