ಶುದ್ಧ ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡುವವರಿಂದ 5.60 ಲಕ್ಷ ದಂಡ ವಸೂಲಿ ಮಾಡಿದ ಜಲಮಂಡಳಿ

ರಾಷ್ಟ್ರೀಯ

ಕುಡಿಯುವ ನೀರನ್ನು ಕೈದೋಟ, ಕಟ್ಟಡ ನಿರ್ಮಾಣಕ್ಕೆ ಬಳಸಿದವರ ಮೇಲೆ ದಾಖಲಾಯ್ತು 112 ಪ್ರಕರಣಗಳು

ಕುಡಿಯುವ ನೀರಿನ ಅನಗತ್ಯ ಪೋಲು ಮಾಡುವವರ ವಿರುದ್ಧ ಬೆಂಗಳೂರು ಜಲಮಂಡಳಿಯ ದಂಡ ಅಭಿಯಾನ ಚುರುಕುಗೊಂಡಿದೆ. ಕಳೆದ ಒಂದು ವಾರದಲ್ಲಿ 112 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕುಡಿಯುವ ನೀರಿನ ಅನಗತ್ಯ ಪೋಲು ಮಾಡಿದವರಿಂದ 5.60 ಲಕ್ಷ ರೂಪಾಯಿ ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.

ಮುಂಬರುವ ಬೇಸಿಗೆಯಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವ ನಿಟ್ಟಿನಲ್ಲಿ ಅನಗತ್ಯ ಪೋಲು ಮಾಡದಂತೆ ಜಲಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿತವಾಗಿದ್ದು, ಮುಂದಿನ ಬೇಸಿಗೆಯಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಅಭಾವ ಎದುರಾಗಬಹುದು ಎಂದು ಐಐಎಸ್ ಡಿ ವಿಜ್ಞಾನಿಗಳು ವರದಿಯಲ್ಲಿ ತಿಳಿಸಿದ್ದಾರೆ. ಈಗಿನಿಂದಲೇ ಸಾರ್ವಜನಿಕರು ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸಬೇಕು. ಅನಗತ್ಯವಾಗಿ ನೀರು ಪೋಲು ಮಾಡುವುದನ್ನ ತಡೆಯುವುದು ಈ ಆದೇಶದ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ 1964 ರ ಕಲಂ 34ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮತ್ತು ಮಾಲ್ ಗಳಲ್ಲಿ ಇನ್ನಿತರ ಕಾರ್ಯಕ್ಕೆ ಬಳಸುವಂತಿಲ್ಲ. ರಸ್ತೆ ನಿರ್ಮಾಣ ಹಾಗೂ ಸ್ವಚ್ಛತೆಗೆ ಶುದ್ಧ ಕುಡಿಯುವ ನೀರನ್ನು ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಕಳೆದ 7 ದಿನಗಳಲ್ಲಿ ಕಾರ್ಯಾಚರಣೆ ನಡೆಸಿದ ಇಲಾಖೆ ಪೋಲು ಮಾಡಿದವರ ವಿರುದ್ಧ ಕ್ರಮ ಕೈಗೊಂಡು 112 ಪ್ರಕರಣಗಳನ್ನು ಪತ್ತೆ ಹಚ್ಚಿದೆ.