ಇಸ್ಲಾಮಿನಲ್ಲಿ ವಿವಾಹ ವಿಚ್ಛೇದನ ಇಸ್ಲಾಮಿಕ್ ಕಾನೂನು, ಕುರಾನ್, ಹದೀಸ್ ಮತ್ತು ಭಾರತೀಯ ಕಾನೂನು ಚೌಕಟ್ಟಿನಲ್ಲಿ ವಿವಾಹ ವಿಚ್ಛೇದನ

ರಾಷ್ಟ್ರೀಯ

✍️. ಇಸ್ಮಾಯಿಲ್ ಎಸ್. ನ್ಯಾಯವಾದಿ

ವಿವಾಹ ವಿಚ್ಛೇದನವು ಇಸ್ಲಾಂನಲ್ಲಿ ಮಹತ್ವದ ಕಾನೂನು ಮತ್ತು ಧಾರ್ಮಿಕ ಪರಿಕಲ್ಪನೆಯಾಗಿದೆ, ಇದು ಖುರಾನ್, ಹದೀಸ್ ಮತ್ತು ಶರಿಯತ್ ನೆಲೆಗಟ್ಟನ್ನು ಹೊಂದಿದೆ. ಈ ಬರಹವು ಇಸ್ಲಾಮಿಕ್ ವಿವಾಹ ವಿಚ್ಛೇದನ, ಅದರ ಕಾನೂನು ಚೌಕಟ್ಟು ಮತ್ತು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಅದರ ಅನ್ವಯದ ಸಮಗ್ರ ವಿಶ್ಲೇಷಣೆಯನ್ನು ಒದಗಿಸುವ ಸಲುವಾಗಿ ಬರೆಯುತ್ತಿದ್ದೇನೆ. ನನ್ನ ಈ ಬರಹವು ಇಸ್ಲಾಮಿಕ್ ತತ್ವಗಳನ್ನು ಭಾರತೀಯ ಕಾನೂನು ದೃಷ್ಟಿಕೋನಗಳೊಂದಿಗೆ ಹೋಲಿಸುವ ಸಲುವಾಗಿಯಾಗಿರುತ್ತದೆ. ವಿಚ್ಛೇದನ ಕಾನೂನುಗಳ ವಿಕಾಸ, ನ್ಯಾಯಾಂಗ ವ್ಯಾಖ್ಯಾನಗಳು ಮತ್ತು ಮುಸ್ಲಿಂ ಮಹಿಳೆಯರ ಮೇಲಿನ ಪರಿಣಾಮಗಳನ್ನು ತಿಳಿಹೇಳುವ ಒಂದು ಸಣ್ಣ ಪ್ರಯತ್ನವನ್ನು ನಾನು ಮಾಡಲಿದ್ದೇನೆ. ಈ ಬರಹದ ಮೂಲಕ ನಮ್ಮ ಸಮಕಾಲೀನ ಸವಾಲುಗಳು ಮತ್ತು ನಾವು ಮಾಡಿಕೊಳ್ಳಬಹುದಾದ ಕೆಲವೊಂದು ಸುಧಾರಣೆಗಳನ್ನು ಸಹಿತ ಸೂಚಿಸುವ ಪ್ರಯತ್ನವನ್ನು ನಾನು ಈ ಮೂಲಕ ಮಾಡಲಿದ್ದೇನೆ. ವಿವಾಹ ವಿಚ್ಛೇದನ ಪ್ರಕ್ರಿಯೆಗಳಲ್ಲಿ ನ್ಯಾಯ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಕೆಲವೊಂದು ಸುಧಾರಣೆಗಳನ್ನು ನಾವು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಇಸ್ಲಾಂ ವಿವಾಹ ವಿಚ್ಛೇದನವನ್ನು ಅನುಮತಿಸಿದೆ. ಆದರೆ ವಿವಾಹ ವಿಚ್ಛೇದನವನ್ನು ಇಸ್ಲಾಂ ನಿರುತ್ಸಾಹಗೊಳಿಸಿದ್ದು, ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ವಿಚ್ಛೇದನಕ್ಕೆ ಅವಕಾಶ ನೀಡಿದ್ದರೂ ಮದುವೆಯ ಪಾವಿತ್ರ್ಯವನ್ನು ಎತ್ತಿಹಿಡಿಯುವ ಎಲ್ಲ ಪ್ರಯತ್ನವನ್ನು ಇಸ್ಲಾಂ ಮಾಡಿದೆ. ಇಸ್ಲಾಂನಲ್ಲಿ ಮದುವೆಯನ್ನು ಒಂದು ಒಪ್ಪಂದವಾಗಿ ನೋಡಲಾಗುತ್ತದೆ ಮತ್ತು ಹಾಗೂ ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುವುದನ್ನು ಪ್ರೋತ್ಸಾಹಿಸುತ್ತದೆ. ಸಮನ್ವಯ ಸಾಧಿಸಲು ಮಾಡುವ ಎಲ್ಲ ಪ್ರಯತ್ನಗಳು ವಿಫಲವಾದರೆ ಮಾತ್ರ ಪ್ರತ್ಯೇಕತೆಗೆ ಅವಕಾಶ ನೀಡುತ್ತದೆ. ಇಸ್ಲಾಮಿಕ್ ಕಾನೂನು ಚೌಕಟ್ಟು ಮತ್ತು ಮುಸ್ಲಿಂ ವಿಚ್ಛೇದನ ಕಾನೂನುಗಳಿಗೆ ಭಾರತೀಯ ಕಾನೂನು ವ್ಯವಸ್ಥೆಯ ವಿಧಾನವನ್ನು ನಾವು ತಿಳಿದುಕೊಳ್ಳೋಣ.
ಈ ಬರಹದ ಪ್ರಾಥಮಿಕ ಉದ್ದೇಶಗಳು:

  1. ಖುರಾನ್ ಮತ್ತು ಹದೀಸ್ ಮೂಲಕ ವಿಚ್ಛೇದನದ ಬಗ್ಗೆ ಇಸ್ಲಾಮಿಕ್ ದೃಷ್ಟಿಕೋನವನ್ನು ಪರೀಕ್ಷಿಸಲು.
  2. ಶರಿಯಾ ಕಾನೂನಿನ ಅಡಿಯಲ್ಲಿ ವಿವಿಧ ರೀತಿಯ ವಿಚ್ಛೇದನವನ್ನು ವಿಶ್ಲೇಷಿಸಲು.
  3. ಇಸ್ಲಾಮಿಕ್ ವಿಚ್ಛೇದನ ಕಾನೂನುಗಳನ್ನು ಭಾರತೀಯ ಕಾನೂನು ಚೌಕಟ್ಟಿನೊಂದಿಗೆ ಹೋಲಿಸುವುದು.
  4. ಭಾರತದಲ್ಲಿನ ಮುಸ್ಲಿಂ ವಿಚ್ಛೇದನ ಪದ್ಧತಿಗಳ ಮೇಲೆ ನ್ಯಾಯಾಂಗ ಸುಧಾರಣೆಗಳ ಪ್ರಭಾವವನ್ನು ಮೌಲ್ಯಮಾಪನ ಮಾಡಲು.
  5. ಎರಡೂ ಕಾನೂನು ವ್ಯವಸ್ಥೆಗಳಲ್ಲಿ ಲಿಂಗ ನ್ಯಾಯ, ಆರ್ಥಿಕ ಹಕ್ಕುಗಳು ಮತ್ತು ವಿಚ್ಛೇದನದ ನಂತರದ ಜವಾಬ್ದಾರಿಗಳನ್ನು ಚರ್ಚಿಸಲು.
    ಈ ಬರಹವನ್ನು ನಾನು ಸೈದ್ಧಾಂತಿಕ ವಿಧಾನವನ್ನು ಬಳಸಿಕೊಂಡು ಬರೆದಿರುತ್ತೇನೆ. ಇಸ್ಲಾಮಿಕ್ ಕಾನೂನಿನ ಪ್ರಾಥಮಿಕ ಮೂಲಗಳನ್ನು (ಕುರಾನ್, ಹದೀಸ್, ಷರಿಯಾ ಕಾನೂನು, ಭಾರತೀಯ ಶಾಸನ ಮತ್ತು ನ್ಯಾಯಾಂಗ ತೀರ್ಪುಗಳು) ಮತ್ತು ಪೂರಕ ಮೂಲಗಳಾದ ಪುಸ್ತಕಗಳು, ಲೇಖನಗಳು, ಕಾನೂನು ವ್ಯಾಖ್ಯಾನಗಳು ಮತ್ತು ಕೇಸ್ ಸ್ಟಡೀಸ್ ಗಳ ಆಧಾರದಲ್ಲಿ ಬರೆದಿರುತ್ತೇನೆ.

ಇಸ್ಲಾಂನಲ್ಲಿ ವಿಚ್ಛೇದನ: ಒಂದು ಅವಲೋಕನ
ಇಸ್ಲಾಮಿಕ್ ವಿಚ್ಛೇದನವು ಷರಿಯಾ ತತ್ವಗಳನ್ನು ಆಧರಿಸಿದೆ, ವಿವಾಹ ವಿಚ್ಛೇದನದ ಕಾನೂನು ಪ್ರಾಥಮಿಕವಾಗಿ ಕುರಾನ್ ಮತ್ತು ಹದೀಸ್‌ ಗಳಿಂದ ಬಂದುವುಗಳಾಗಿವೆ. ಪಾಶ್ಚಿಮಾತ್ಯ ವಿಚ್ಛೇದನ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಇಸ್ಲಾಮಿಕ್ ಕಾನೂನು ಪ್ರತ್ಯೇಕತೆಯನ್ನು ಅನುಮತಿಸುವ ಮೊದಲು ಸಮನ್ವಯವನ್ನು ಉತ್ತೇಜಿಸುತ್ತದೆ. ಇಸ್ಲಾಮಿ ವಿವಾಹ ವಿಚ್ಛೇದನ ನಿಯಮಗಳನ್ನು ಈ ಕೆಳಗಿನ ವಿವಿಧ ವಿಧಗಳಡಿಯಲ್ಲಿ ಗುರುತಿಸಲಾಗುತ್ತದೆ.

ಇಸ್ಲಾಂನಲ್ಲಿ ವಿಚ್ಛೇದನದ ವಿಧಗಳು

  1. ತಲಾಖ್ (ಗಂಡನಿಂದ ಏಕಪಕ್ಷೀಯ ವಿಚ್ಛೇದನ): ತಲಾಖ್ ಅನ್ನು ಉಚ್ಚರಿಸಲು ಪತಿಗೆ ಹಕ್ಕಿದೆ, ಆದರೆ ಅದನ್ನು ಜವಾಬ್ದಾರಿ ಮತ್ತು ಸಂಯಮದಿಂದ ಚಲಾಯಿಸಬೇಕು.
  2. ಖುಲಾ (ಹೆಂಡತಿಯಿಂದ ವಿಚ್ಛೇದನವನ್ನು ಪ್ರಾರಂಭಿಸಲಾಗಿದೆ): ಹೆಂಡತಿ ತನ್ನ ವರದಕ್ಷಿಣೆಯನ್ನು (ಮಹರ್) ಹಿಂದಿರುಗಿಸುವ ಮೂಲಕ ಅಥವಾ ಪರಿಹಾರವನ್ನು ನೀಡುವ ಮೂಲಕ ಪ್ರತ್ಯೇಕತೆಯನ್ನು ಬಯಸಬಹುದು.
  3. ಮುಬಾರತ್ (ಪರಸ್ಪರ ವಿಚ್ಛೇದನ): ಇಬ್ಬರೂ ಸಂಗಾತಿಗಳು ಮದುವೆಯನ್ನು ಸೌಹಾರ್ದಯುತವಾಗಿ ವಿಸರ್ಜಿಸಲು ಒಪ್ಪಿಕೊಳ್ಳುವ ಮೂಲಕ ವಿವಾಹ ವಿಚ್ಛೇದನವನ್ನು ಮಾಡಿಕೊಳ್ಳಬಹುದಾಗಿದೆ.
  4. ಲಿಯಾನ್ (ವ್ಯಭಿಚಾರದ ಆರೋಪಗಳಿಂದ ವಿಚ್ಛೇದನ): ಪುರಾವೆ ಇಲ್ಲದೆ ಪತಿ ತನ್ನ ಹೆಂಡತಿಯನ್ನು ವ್ಯಭಿಚಾರದ ಆರೋಪ ಮಾಡಿದರೆ, ಲಿಯಾನ್ ಎಂದು ಕರೆಯಲ್ಪಡುವ ವಿಶೇಷ ವಿಧಾನವನ್ನು ಅನುಸರಿಸಲಾಗುತ್ತದೆ.
  5. ಫಸ್ಖ್ (ನ್ಯಾಯಾಂಗ ವಿಚ್ಛೇದನ): ಕ್ರೌರ್ಯ ಅಥವಾ ತೊರೆದು ಹೋಗುವಂತಹ ನಿರ್ದಿಷ್ಟ ಆಧಾರದ ಮೇಲೆ ನ್ಯಾಯಾಧೀಶರ ಮೂಲಕ ಪತ್ನಿ ವಿವಾಹವನ್ನು ರದ್ದುಗೊಳಿಸಬಹುದು.
    ಖುರಾನ್ ವಿಚ್ಛೇದನಕ್ಕೆ ವಿವರವಾದ ಮಾರ್ಗಸೂಚಿಗಳನ್ನು ನೀಡುತ್ತದೆ, ಹಾಗೂ ನ್ಯಾಯ, ತಾಳ್ಮೆ ಮತ್ತು ನ್ಯಾಯವನ್ನು ಒತ್ತಿಹೇಳುತ್ತದೆ. ಕುರಾನಿನ ಈ ಕೆಳಗಿನ ಸೂಕ್ತಿಗಳಲ್ಲಿ ನಾವು ವಿವಾಹ ವಿಚ್ಛೇದನ ಬಗ್ಗೆ ವಿವರವಾದ ಕ್ರಮಣಗಳನ್ನು ಸೂಚಿಸಿರುವುದನ್ನು ನಾವು ಕಾಣಬಹುದು.
  6. ಸೂರಾ ಅಲ್-ಬಕರಹ್ (2:226-232): ವಿಚ್ಛೇದನವನ್ನು ಅಂತಿಮಗೊಳಿಸುವ ಮೊದಲು ಸಮನ್ವಯ ಮತ್ತು ಮಧ್ಯಸ್ಥಿಕೆಯನ್ನು ಪ್ರೋತ್ಸಾಹಿಸುತ್ತದೆ.
  7. ಸೂರಾ ಅತ್-ತಲಾಕ್ (65:1-7): ವಿಚ್ಛೇದಿತ ಮಹಿಳೆಯರ ಕಡೆಗೆ ಆರ್ಥಿಕ ಜವಾಬ್ದಾರಿಗಳನ್ನು ವಿವರಿಸುತ್ತದೆ, ಅವರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
  8. ಸೂರಾ ಅನ್-ನಿಸಾ (4:34-35): ವಿಚ್ಛೇದನವನ್ನು ಆಶ್ರಯಿಸುವ ಮೊದಲು ವಿವಾದ ಪರಿಹಾರ ಕಾರ್ಯವಿಧಾನಗಳನ್ನು ಸೂಚಿಸುತ್ತದೆ.
    ಈ ಈ ಸೂಕ್ತಿಗಳಲ್ಲಿ ಏನು ಹೇಳಲಾಗಿದೆ ಎಂದು ತಿಳಿದುಕೊಳ್ಳೋಣ.

ಸೂರಾ ಅಲ್-ಬಕರಹ್ 2:226
لِلَّذِينَ يُؤْلُونَ مِنْ نِسَائِهِمْ تَرَبُّصُ أَرْبَعَةِ أَشْهُرٍ ۖ فَإِنْ فَاءُوا فَإِنَّ اللَّهَ غَفُورٌ رَحِيمٌ ۞
ತಮ್ಮ ಪತ್ನಿಯರಿಂದ ದೂರವಿರುವುದಾಗಿ ಪ್ರತಿಜ್ಞೆ ಮಾಡಿಕೊಂಡವರು ನಾಲ್ಕು ತಿಂಗಳ ತನಕ ಕಾಯಲಿ. (ಈ ಮಧ್ಯೆ) ಅವರು (ತಮ್ಮ ನಿರ್ಧಾರದಿಂದ) ಮರಳಿದರೆ, ಅಲ್ಲಾಹನು (ಅವರ ಪಾಲಿಗೆ) ಖಂಡಿತ ಕ್ಷಮಿಸುವವನು ಮತ್ತು ಕರುಣಾಮಯಿ ಯಾಗಿದ್ದಾನೆ.
ಸೂರಾ ಅಲ್-ಬಕರಹ್ 2:227
وَإِنْ عَزَمُوا الطَّلَاقَ فَإِنَّ اللَّهَ سَمِيعٌ عَلِيمٌ ۞
ಇನ್ನು ಅವರು ವಿಚ್ಛೇದನವನ್ನೇ ತೀರ್ಮಾನಿಸಿಕೊಂಡಿದ್ದರೆ, (ಅವರಿಗೆ ತಿಳಿದಿರಲಿ) ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.

ಸೂರಾ ಅಲ್-ಬಕರಹ್ 2:228
وَالْمُطَلَّقَاتُ يَتَرَبَّصْنَ بِأَنْفُسِهِنَّ ثَلَاثَةَ قُرُوءٍ ۚ وَلَا يَحِلُّ لَهُنَّ أَنْ يَكْتُمْنَ مَا خَلَقَ اللَّهُ فِي أَرْحَامِهِنَّ إِنْ كُنَّ يُؤْمِنَّ بِاللَّهِ وَالْيَوْمِ الْآخِرِ ۚ وَبُعُولَتُهُنَّ أَحَقُّ بِرَدِّهِنَّ فِي ذَٰلِكَ إِنْ أَرَادُوا إِصْلَاحًا ۚ وَلَهُنَّ مِثْلُ الَّذِي عَلَيْهِنَّ بِالْمَعْرُوفِ ۚ وَلِلرِّجَالِ عَلَيْهِنَّ دَرَجَةٌ ۗ وَاللَّهُ عَزِيزٌ حَكِيمٌ ۞
ವಿಚ್ಛೇದನ ಪಡೆದ ಸ್ತ್ರೀಯರು ಮೂರು (ಮಾಸಿಕ ಸ್ರಾವದ) ಅವಧಿಗಳ ತನಕ ತಮ್ಮನ್ನು ತಡೆದುಕೊಂಡಿರಬೇಕು (ಬೇರೆ ವಿವಾಹವಾಗಬಾರದು). ಅವರು ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಅಲ್ಲಾಹನು ತಮ್ಮ ಗರ್ಭಗಳಲ್ಲಿ ಏನನ್ನು ಸೃಷ್ಟಿಸಿರುವನೆಂಬುದನ್ನು ಬಚ್ಚಿಡುವುದು ಅವರ ಪಾಲಿಗೆ ಸಮ್ಮತವಲ್ಲ. ಅವರ ಪತಿಯು, ಸಂಬಂಧದಲ್ಲಿ ಸುಧಾರಣೆ (ಪುನರ್ಮಿಲನ) ಬಯಸಿದ್ದರೆ ಈ ಅವಧಿಯಲ್ಲಿ ಆ ಸ್ತ್ರೀಯರನ್ನು (ಪತ್ನಿಯರಾಗಿ) ಮರಳಿ ಪಡೆಯಲು ಅವರೇ ಹೆಚ್ಚು ಹಕ್ಕುದಾರರು. ಸ್ತ್ರೀಯರಿಗೆ ಕರ್ತವ್ಯಗಳಿರುವಂತೆಯೇ ಅವರಿಗೆ ಅಧಿಕಾರಗಳೂ ಇವೆ ಮತ್ತು ಸ್ತ್ರೀಯರ ಮೇಲೆ ಪುರುಷರಿಗೆ ಒಂದು ಮಟ್ಟದ ಹಿರಿಮೆ ಇದೆ. ಅಲ್ಲಾಹನಂತು ತುಂಬಾ ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ.

ಸೂರಾ ಅಲ್-ಬಕರಹ್ 2:229
الطَّلَاقُ مَرَّتَانِ ۖ فَإِمْسَاكٌ بِمَعْرُوفٍ أَوْ تَسْرِيحٌ بِإِحْسَانٍ ۗ وَلَا يَحِلُّ لَكُمْ أَنْ تَأْخُذُوا مِمَّا آتَيْتُمُوهُنَّ شَيْئًا إِلَّا أَنْ يَخَافَا أَلَّا يُقِيمَا حُدُودَ اللَّهِ ۖ فَإِنْ خِفْتُمْ أَلَّا يُقِيمَا حُدُودَ اللَّهِ فَلَا جُنَاحَ عَلَيْهِمَا فِيمَا افْتَدَتْ بِهِ ۗ تِلْكَ حُدُودُ اللَّهِ فَلَا تَعْتَدُوهَا ۚ وَمَنْ يَتَعَدَّ حُدُودَ اللَّهِ فَأُولَٰئِكَ هُمُ الظَّالِمُونَ ۞
‘ತಲಾಕ್’ (ವಿಚ್ಛೇದನ) ಎರಡು ಬಾರಿ (ಎರಡು ಹಂತಗಳಲ್ಲಿ). ಆ ಬಳಿಕ (ಪತಿಯು ಪತ್ನಿಯನ್ನು ಪತ್ನಿಯಾಗಿ) ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳಬೇಕು ಅಥವಾ ಉದಾರವಾಗಿ ಬಿಡುಗಡೆಗೊಳಿಸಬೇಕು. ಮತ್ತು ನೀವು ಅವರಿಗೆ (ಪುರುಷರು ಸ್ತ್ರೀಯರಿಗೆ) ಕೊಟ್ಟಿರುವ ಏನನ್ನೂ ಮರಳಿ ಪಡೆಯುವುದು ನಿಮ್ಮ ಪಾಲಿಗೆ ಸಮ್ಮತವಲ್ಲ – ಅವರಿಬ್ಬರಿಗೂ, ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಪಾಲಿಸಲು ತಮಗೆ ಸಾಧ್ಯವಾಗಲಾರದೆಂಬ ಭಯವಿರುವ ಸ್ಥಿತಿಯ ಹೊರತು. ಇನ್ನು ನಿಮಗೆ, ಅವರಿಬ್ಬರೂ ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಪಾಲಿಸಲಾರರೆಂಬ ಭಯವಿರುವಾಗ, ಪತ್ನಿಯು ಪರಿಹಾರ ನೀಡಿ ಬಿಡುಗಡೆ ಪಡೆದರೆ ಅವರಿಬ್ಬರಿಗೂ ದೋಷವಿಲ್ಲ. ಇವು ಅಲ್ಲಾಹನು ವಿಧಿಸಿರುವ ಮಿತಿಗಳು. ಇವುಗಳನ್ನು ಮೀರಬೇಡಿ. ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಮೀರುವವರೇ ಅಕ್ರಮಿಗಳು.
ಸೂರಾ ಅಲ್-ಬಕರಹ್ 2:230
فَإِنْ طَلَّقَهَا فَلَا تَحِلُّ لَهُ مِنْ بَعْدُ حَتَّىٰ تَنْكِحَ زَوْجًا غَيْرَهُ ۗ فَإِنْ طَلَّقَهَا فَلَا جُنَاحَ عَلَيْهِمَا أَنْ يَتَرَاجَعَا إِنْ ظَنَّا أَنْ يُقِيمَا حُدُودَ اللَّهِ ۗ وَتِلْكَ حُدُودُ اللَّهِ يُبَيِّنُهَا لِقَوْمٍ يَعْلَمُونَ ۞
ಇನ್ನು ಅವನು ಆಕೆಗೆ (ಮೂರನೆಯ) ‘ತಲಾಕ್’ ಕೊಟ್ಟು ಬಿಟ್ಟರೆ, ತರುವಾಯ ಆಕೆ ಬೇರೊಬ್ಬ ಪತಿಯನ್ನು ವಿವಾಹವಾಗುವ (ಹಾಗೂ ಆತನಿಂದ ಬಿಡುಗಡೆ ಪಡೆಯುವ) ತನಕವೂ ಆಕೆ ಆತನ (ಮೊದಲ ಪತಿಯ) ಪಾಲಿಗೆ ಸಮ್ಮತಳಾಗುವುದಿಲ್ಲ. ಆ ಬಳಿಕ ಆತ (ಎರಡನೇ ಪತಿ) ಆಕೆಯನ್ನು ವಿಚ್ಛೇದಿಸಿದರೆ – ತಾವು ಅಲ್ಲಾಹನು ವಿಧಿಸಿರುವ ಮಿತಿಗಳನ್ನು ಪಾಲಿಸಬಲ್ಲೆವೆಂದು ಅವರಿಬ್ಬರೂ ಭಾವಿಸುವುದಾದರೆ – ಅವರಿಬ್ಬರೂ (ಆಕೆ ಮತ್ತು ಮೊದಲನೇ ಪತಿ) ಮತ್ತೆ ಪರಸ್ಪರ ಕೂಡಿಕೊಳ್ಳುವುದರಲ್ಲಿ ದೋಷವಿಲ್ಲ. ಇವು ಅಲ್ಲಾಹನು ವಿಧಿಸಿರುವ ಮಿತಿ ಮೇರೆಗಳು. ತಿಳುವಳಿಕೆ ಉಳ್ಳವರಿಗಾಗಿ ಅವನು ಇವುಗಳನ್ನು ವಿವರಿಸುತ್ತಿದ್ದಾನೆ.
ಸೂರಾ ಅಲ್-ಬಕರಹ್ 2:231
وَإِذَا طَلَّقْتُمُ النِّسَاءَ فَبَلَغْنَ أَجَلَهُنَّ فَأَمْسِكُوهُنَّ بِمَعْرُوفٍ أَوْ سَرِّحُوهُنَّ بِمَعْرُوفٍ ۚ وَلَا تُمْسِكُوهُنَّ ضِرَارًا لِتَعْتَدُوا ۚ وَمَنْ يَفْعَلْ ذَٰلِكَ فَقَدْ ظَلَمَ نَفْسَهُ ۚ وَلَا تَتَّخِذُوا آيَاتِ اللَّهِ هُزُوًا ۚ وَاذْكُرُوا نِعْمَتَ اللَّهِ عَلَيْكُمْ وَمَا أَنْزَلَ عَلَيْكُمْ مِنَ الْكِتَابِ وَالْحِكْمَةِ يَعِظُكُمْ بِهِ ۚ وَاتَّقُوا اللَّهَ وَاعْلَمُوا أَنَّ اللَّهَ بِكُلِّ شَيْءٍ عَلِيمٌ ۞
ನೀವು ಸ್ತ್ರೀಯರಿಗೆ ತಲಾಕ್ ನೀಡಿರುವಾಗ ಅವರು ತಮ್ಮ ನಿರ್ದಿಷ್ಟ ಅವಧಿಯನ್ನು ಪೂರ್ತಿಗೊಳಿಸಿದ ಬಳಿಕ ಉತ್ತಮ ರೀತಿಯಲ್ಲಿ ಅವರನ್ನು ಉಳಿಸಿಕೊಳ್ಳಿರಿ ಅಥವಾ ಉತ್ತಮ ರೀತಿಯಲ್ಲಿ ಅವರನ್ನು ಬಿಡುಗಡೆಗೊಳಿಸಿರಿ. ಅವರಿಗೆ ಹಾನಿ ಮಾಡುವುದಕ್ಕಾಗಿ ಹಾಗೂ ಕಿರುಕುಳ ನೀಡುವುದಕ್ಕಾಗಿ ನೀವು ಅವರನ್ನು ತಡೆದಿಟ್ಟುಕೊಳ್ಳಬೇಡಿ. ಹಾಗೆ ಮಾಡಿದವನು ನಿಜವಾಗಿ ಸ್ವತಃ ತನ್ನ ಮೇಲೆಯೇ ಅಕ್ರಮ ವೆಸಗಿಕೊಂಡನು. ನೀವು ಅಲ್ಲಾಹನ ವಚನಗಳನ್ನು ಅಪಹಾಸ್ಯದ ವಸ್ತುವಾಗಿಸಿಕೊಳ್ಳಬೇಡಿ. ಮತ್ತು ನೀವು, ಅಲ್ಲಾಹನು ನಿಮಗೆ ಒದಗಿಸಿರುವ ಅನುಗ್ರಹಗಳನ್ನು ಹಾಗೂ ಅವನು ನಿಮಗೆ ಗ್ರಂಥವನ್ನೂ ಯುಕ್ತಿಯನ್ನೂ ಇಳಿಸಿಕೊಟ್ಟಿರುವುದನ್ನು ಮತ್ತು ಆ ಮೂಲಕ ಅವನು ನಿಮಗೆ ಉಪದೇಶಿಸುತ್ತಿದ್ದಾನೆ ಎಂಬುದನ್ನು ನೆನಪಿಡಿರಿ. ನೀವು, ಅಲ್ಲಾಹನಿಗೆ ಅಂಜಿರಿ ಹಾಗೂ ಅಲ್ಲಾಹನು ಎಲ್ಲವನ್ನೂ ಬಲ್ಲವನೆಂಬುದು ನಿಮಗೆ ತಿಳಿದಿರಲಿ.
ಸೂರಾ ಅಲ್-ಬಕರಹ್ 2:232
وَإِذَا طَلَّقْتُمُ النِّسَاءَ فَبَلَغْنَ أَجَلَهُنَّ فَلَا تَعْضُلُوهُنَّ أَنْ يَنْكِحْنَ أَزْوَاجَهُنَّ إِذَا تَرَاضَوْا بَيْنَهُمْ بِالْمَعْرُوفِ ۗ ذَٰلِكَ يُوعَظُ بِهِ مَنْ كَانَ مِنْكُمْ يُؤْمِنُ بِاللَّهِ وَالْيَوْمِ الْآخِرِ ۗ ذَٰلِكُمْ أَزْكَىٰ لَكُمْ وَأَطْهَرُ ۗ وَاللَّهُ يَعْلَمُ وَأَنْتُمْ لَا تَعْلَمُونَ ۞
ಮತ್ತು ನೀವು ಪತ್ನಿಯರಿಗೆ ತಲಾಕ್ ನೀಡಿರುವಾಗ, ಅವರು ತಮ್ಮ ಅವಧಿಯನ್ನು ಪೂರ್ತಿಗೊಳಿಸಿದ ಬಳಿಕ, ನಿಯಮಾನುಸಾರ, ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ (ಆಯ್ಕೆಯ) ಬೇರೆ ಪತಿಯರನ್ನು ವಿವಾಹವಾಗುವುದಕ್ಕೆ ನೀವು ತಡೆಯೊಡ್ಡಬೇಡಿ. ನಿಮ್ಮ ಪೈಕಿ, ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ನಂಬಿಕೆ ಉಳ್ಳವರಿಗಾಗಿ ಇದನ್ನು ಬೋಧಿಸಲಾಗುತ್ತಿದೆ. ಇದು ನಿಮ್ಮ ಪಾಲಿಗೆ ಹೆಚ್ಚು ಶುದ್ಧ ಹಾಗೂ ನಿರ್ಮಲ ಧೋರಣೆಯಾಗಿದೆ. ಅಲ್ಲಾಹನು ಬಲ್ಲನು ಆದರೆ, ನೀವು ಅರಿತಿಲ್ಲ.
ಸೂರಾ ಅತ್-ತಲಾಕ್ 65:1
يَا أَيُّهَا النَّبِيُّ إِذَا طَلَّقْتُمُ النِّسَاءَ فَطَلِّقُوهُنَّ لِعِدَّتِهِنَّ وَأَحْصُوا الْعِدَّةَ ۖ وَاتَّقُوا اللَّهَ رَبَّكُمْ ۖ لَا تُخْرِجُوهُنَّ مِنْ بُيُوتِهِنَّ وَلَا يَخْرُجْنَ إِلَّا أَنْ يَأْتِينَ بِفَاحِشَةٍ مُبَيِّنَةٍ ۚ وَتِلْكَ حُدُودُ اللَّهِ ۚ وَمَنْ يَتَعَدَّ حُدُودَ اللَّهِ فَقَدْ ظَلَمَ نَفْسَهُ ۚ لَا تَدْرِي لَعَلَّ اللَّهَ يُحْدِثُ بَعْدَ ذَٰلِكَ أَمْرًا ۞
ಪ್ರವಾದಿ ವರ್ಯರೇ, (ವಿಶ್ವಾಸಿಗಳೊಡನೆ ಹೇಳಿರಿ;) ನೀವು ಮಹಿಳೆಯರಿಗೆ (ಪತ್ನಿಯರಿಗೆ) ತಲಾಕ್ ನೀಡುವಾಗ (ವಿಚ್ಛೇದಿಸುವಾಗ) ಅವರ (ನೈರ್ಮಲ್ಯದ) ಅವಧಿಯಲ್ಲಿ ತಲಾಕ್ ನೀಡಿರಿ ಮತ್ತು ಅವಧಿಯ ದಿನಗಳನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮೊಡೆಯನಾದ ಅಲ್ಲಾಹನಿಗೆ ಅಂಜಿರಿ. ಅವರು ಸ್ಪಷ್ಟವಾದ ಅಶ್ಲೀಲ ಕೃತ್ಯವನ್ನು ಎಸಗಿರದಿದ್ದರೆ, ಅವರನ್ನು (ಇದ್ದತ್‌ನ ಅವಧಿಯಲ್ಲಿ) ಅವರ ಮನೆಗಳಿಂದ ಹೊರ ಹಾಕ ಬೇಡಿ, ಮತ್ತು ಸ್ವತಃ ಅವರೂ ಹೊರ ಹೋಗದಿರಲಿ. ಇವು ಅಲ್ಲಾಹನು ನಿಶ್ಚಯಿಸಿರುವ ಮಿತಿಗಳು. ಅಲ್ಲಾಹನು ನಿಶ್ಚಯಿಸಿರುವ ಮಿತಿಗಳನ್ನು ಉಲ್ಲಂಘಿಸಿದವನು ಸ್ವತಃ ತನ್ನ ಮೇಲೆ ಅಕ್ರಮವೆಸಗಿಕೊಂಡನು. ನಿಮಗೆ ತಿಳಿಯದು, ಇಷ್ಟಾದ ಬಳಿಕ ಅಲ್ಲಾಹನು ಹೊಸ ಮಾರ್ಗವನ್ನೇನಾದರೂ ತೋರಿಸಲೂಬಹುದು.
ಸೂರಾ ಅತ್-ತಲಾಕ್ 65:2
فَإِذَا بَلَغْنَ أَجَلَهُنَّ فَأَمْسِكُوهُنَّ بِمَعْرُوفٍ أَوْ فَارِقُوهُنَّ بِمَعْرُوفٍ وَأَشْهِدُوا ذَوَيْ عَدْلٍ مِنْكُمْ وَأَقِيمُوا الشَّهَادَةَ لِلَّهِ ۚ ذَٰلِكُمْ يُوعَظُ بِهِ مَنْ كَانَ يُؤْمِنُ بِاللَّهِ وَالْيَوْمِ الْآخِرِ ۚ وَمَنْ يَتَّقِ اللَّهَ يَجْعَلْ لَهُ مَخْرَجًا ۞
ಮುಂದೆ ಅವರು ತಮ್ಮ ಅವಧಿಯ ಕೊನೆಯನ್ನು ಮುಟ್ಟಿದಾಗ ಅವರನ್ನು ನಿಯಮಾನುಸಾರ (ಪತ್ನಿಯರಾಗಿ) ಇಟ್ಟುಕೊಳ್ಳಿರಿ ಅಥವಾ ನಿಯಮಾನುಸಾರ ಅವರನ್ನು ಪ್ರತ್ಯೇಕಿಸಿರಿ ಹಾಗೂ ನಿಮ್ಮ ಪೈಕಿ ಇಬ್ಬರು ನ್ಯಾಯವಂತರನ್ನು ಸಾಕ್ಷಿಯಾಗಿಸಿಕೊಳ್ಳಿರಿ. ಮತ್ತು ನೀವು, ಅಲ್ಲಾಹನಿಗಾಗಿ ಸಾಕ್ಷಿ ಹೇಳಿರಿ. ಇವು, ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವನಿಗೆ ನೀಡಲಾಗುತ್ತಿರುವ ಉಪದೇಶಗಳು. ಅಲ್ಲಾಹನ ಭಯ ಉಳ್ಳವನಿಗೆ ಅವನು (ಅಲ್ಲಾಹನು, ಸಂಕಟಗಳಿಂದ) ಹೊರ ಬರುವ ದಾರಿ ತೋರುವನು.
ಸೂರಾ ಅತ್-ತಲಾಕ್ 65:3
وَيَرْزُقْهُ مِنْ حَيْثُ لَا يَحْتَسِبُ ۚ وَمَنْ يَتَوَكَّلْ عَلَى اللَّهِ فَهُوَ حَسْبُهُ ۚ إِنَّ اللَّهَ بَالِغُ أَمْرِهِ ۚ قَدْ جَعَلَ اللَّهُ لِكُلِّ شَيْءٍ قَدْرًا ۞
ಮತ್ತು ಅವನು ಊಹಿಸಿಯೂ ಇಲ್ಲದ ಕಡೆಯಿಂದ ಅವನಿಗೆ ಸಾಧನಗಳನ್ನು ಒದಗಿಸುವನು. ಅಲ್ಲಾಹನಲ್ಲಿ ಭರವಸೆ ಇಟ್ಟವನಿಗೆ ಅವನೇ (ಅಲ್ಲಾಹನೇ) ಸಾಕು. ಅಲ್ಲಾಹನು ತನ್ನ ಕಾರ್ಯವನ್ನು ಪೂರ್ತಿಗೊಳಿಸಿಯೇ ತೀರುವನು. (ಆದರೆ) ಅಲ್ಲಾಹನು ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ಪ್ರಮಾಣವನ್ನು ನಿಶ್ಚಯಿಸಿರುವನು.

ಸೂರಾ ಅತ್-ತಲಾಕ್ 65:4
وَاللَّائِي يَئِسْنَ مِنَ الْمَحِيضِ مِنْ نِسَائِكُمْ إِنِ ارْتَبْتُمْ فَعِدَّتُهُنَّ ثَلَاثَةُ أَشْهُرٍ وَاللَّائِي لَمْ يَحِضْنَ ۚ وَأُولَاتُ الْأَحْمَالِ أَجَلُهُنَّ أَنْ يَضَعْنَ حَمْلَهُنَّ ۚ وَمَنْ يَتَّقِ اللَّهَ يَجْعَلْ لَهُ مِنْ أَمْرِهِ يُسْرًا ۞
ನಿಮ್ಮ (ವಿಚ್ಛೇದಿತ) ಮಹಿಳೆಯರ ಪೈಕಿ ಋತು ಸ್ರಾವದ ಕುರಿತು ನಿರಾಶರಾಗಿರುವವರ (ಋತುಸ್ರಾವ ನಿಂತವರ) ಅವಧಿಯ ವಿಷಯದಲ್ಲಿ ನಿಮಗೆ ಸಂಶಯವಿದ್ದರೆ, ಅವರ ಅವಧಿ ಮೂರು ತಿಂಗಳಾಗಿದೆ. ಇನ್ನೂ ಋತುಸ್ರಾವ ಆರಂಭವಾಗಿಲ್ಲದವರಿಗೂ ಇದು ಅನ್ವಯಿಸುತ್ತದೆ. ಗರ್ಭಿಣಿಯರ ಅವಧಿಯು ಪ್ರಸವದವರೆಗಿರುತ್ತದೆ. ಅಲ್ಲಾಹನು, ತನ್ನನ್ನು ಅಂಜುವವನಿಗೆ ಅವನ ವ್ಯವಹಾರಗಳನ್ನು ಸುಲಭಗೊಳಿಸಿ ಕೊಡುತ್ತಾನೆ.
ಸೂರಾ ಅತ್-ತಲಾಕ್ 65:5
ذَٰلِكَ أَمْرُ اللَّهِ أَنْزَلَهُ إِلَيْكُمْ ۚ وَمَنْ يَتَّقِ اللَّهَ يُكَفِّرْ عَنْهُ سَيِّئَاتِهِ وَيُعْظِمْ لَهُ أَجْرًا ۞
ಇವು ನಿಮ್ಮೆಡೆಗೆ ಇಳಿಸಿ ಕೊಡಲಾಗಿರುವ ಅಲ್ಲಾಹನ ಆದೇಶಗಳು. ಅಲ್ಲಾಹನು ತನ್ನನ್ನು ಅಂಜುವವನ ಪಾಪಗಳನ್ನೆಲ್ಲಾ ನಿವಾರಿಸುವನು ಮತ್ತು ಅವನಿಗೆ ಭವ್ಯ ಪ್ರತಿಫಲವನ್ನು ನೀಡುವನು.
ಸೂರಾ ಅತ್-ತಲಾಕ್ 65:6
أَسْكِنُوهُنَّ مِنْ حَيْثُ سَكَنْتُمْ مِنْ وُجْدِكُمْ وَلَا تُضَارُّوهُنَّ لِتُضَيِّقُوا عَلَيْهِنَّ ۚ وَإِنْ كُنَّ أُولَاتِ حَمْلٍ فَأَنْفِقُوا عَلَيْهِنَّ حَتَّىٰ يَضَعْنَ حَمْلَهُنَّ ۚ فَإِنْ أَرْضَعْنَ لَكُمْ فَآتُوهُنَّ أُجُورَهُنَّ ۖ وَأْتَمِرُوا بَيْنَكُمْ بِمَعْرُوفٍ ۖ وَإِنْ تَعَاسَرْتُمْ فَسَتُرْضِعُ لَهُ أُخْرَىٰ ۞
(ಇದ್ದತ್‌ನ ಅವಧಿಯಲ್ಲಿ) ಸಾಧ್ಯವಾದಷ್ಟು ಮಟ್ಟಿಗೆ ಆ ಮಹಿಳೆಯರನ್ನು ನೀವು ವಾಸಿಸುವಲ್ಲೇ ವಾಸಗೊಳಿಸಿರಿ ಮತ್ತು ಅವರ ಬದುಕನ್ನು ದುಸ್ತರಗೊಳಿಸಲಿಕ್ಕಾಗಿ ಅವರಿಗೆ ಕಿರುಕುಳ ನೀಡಬೇಡಿ. ಒಂದು ವೇಳೆ ಅವರು ಗರ್ಭಿಣಿಯರಾಗಿದ್ದರೆ ಅವರು ಪ್ರಸವಿಸುವ ತನಕ ಅವರ ಖರ್ಚು ವೆಚ್ಚಗಳನ್ನು ಭರಿಸಿರಿ. ಅವರು ನಿಮಗಾಗಿ (ಮಗುವಿಗೆ) ಎದೆಹಾಲುಣಿಸಿದರೆ – ಅವರಿಗೆ ಅವರ ಸಂಭಾವನೆಯನ್ನು ನೀಡಿರಿ. ನೀವು (ಎಲ್ಲ ವಿಷಯಗಳನ್ನೂ) ನಿಯಮಾನುಸಾರ ಪರಸ್ಪರ ಸಮಾಲೋಚಿಸಿ ನಿರ್ಧರಿಸಿರಿ. ಇನ್ನು, ನಿಮಗೆ ಕಷ್ಟವೆನಿಸಿದರೆ, ಅದಕ್ಕೆ (ಮಗುವಿಗೆ) ಬೇರೊಬ್ಬಳು ಎದೆಹಾಲುಣಿಸಲಿ.
ಸೂರಾ ಅತ್-ತಲಾಕ್ 65:7
لِيُنْفِقْ ذُو سَعَةٍ مِنْ سَعَتِهِ ۖ وَمَنْ قُدِرَ عَلَيْهِ رِزْقُهُ فَلْيُنْفِقْ مِمَّا آتَاهُ اللَّهُ ۚ لَا يُكَلِّفُ اللَّهُ نَفْسًا إِلَّا مَا آتَاهَا ۚ سَيَجْعَلُ اللَّهُ بَعْدَ عُسْرٍ يُسْرًا ۞
ಸ್ಥಿತಿವಂತನು ತನ್ನ ಸಾಮರ್ಥ್ಯಾನುಸಾರ ಖರ್ಚುಮಾಡಲಿ ಮತ್ತು ಆರ್ಥಿಕ ಸಂಕಷ್ಟದಲ್ಲಿರುವವನು ತನಗೆ ಅಲ್ಲಾಹನು ನೀಡಿರುವಷ್ಟರಿಂದ ಖರ್ಚುಮಾಡಲಿ. ಅಲ್ಲಾಹನು ಯಾವ ಜೀವಿಯ ಮೇಲೂ ತಾನು ಅದಕ್ಕೆ ನೀಡಿರುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸುವುದಿಲ್ಲ. ಅಲ್ಲಾಹನು ದಾರಿದ್ರ್ಯದ ಬೆನ್ನಿಗೇ ಸಂಪನ್ನತೆಯನ್ನು ನೀಡಬಹುದು.
ಸೂರಾ ಅನ್-ನಿಸಾ 4:34
الرِّجَالُ قَوَّامُونَ عَلَى النِّسَاءِ بِمَا فَضَّلَ اللَّهُ بَعْضَهُمْ عَلَىٰ بَعْضٍ وَبِمَا أَنْفَقُوا مِنْ أَمْوَالِهِمْ ۚ فَالصَّالِحَاتُ قَانِتَاتٌ حَافِظَاتٌ لِلْغَيْبِ بِمَا حَفِظَ اللَّهُ ۚ وَاللَّاتِي تَخَافُونَ نُشُوزَهُنَّ فَعِظُوهُنَّ وَاهْجُرُوهُنَّ فِي الْمَضَاجِعِ وَاضْرِبُوهُنَّ ۖ فَإِنْ أَطَعْنَكُمْ فَلَا تَبْغُوا عَلَيْهِنَّ سَبِيلًا ۗ إِنَّ اللَّهَ كَانَ عَلِيًّا كَبِيرًا ۞
ಪುರುಷರು ಸ್ತ್ರೀಯರ ಸಂರಕ್ಷಕರು. ಏಕೆಂದರೆ, ಅಲ್ಲಾಹನು ನಿಮ್ಮಲ್ಲಿ ಕೆಲವರಿಗೆ ಮತ್ತೆ ಕೆಲವರಿಗಿಂತ ಹಿರಿಮೆಯನ್ನು ದಯಪಾಲಿಸಿರುತ್ತಾನೆ ಮತ್ತು ಅವರು (ಪುರುಷರು) ತಮ್ಮ ಸಂಪತ್ತಿನಿಂದ (ಕುಟುಂಬಕ್ಕಾಗಿ) ಖರ್ಚು ಮಾಡುತ್ತಾರೆ. ಸಜ್ಜನ ಸ್ತ್ರೀಯರು ವಿಧೇಯರಾಗಿರುತ್ತಾರೆ ಮತ್ತು ಅಲ್ಲಾಹನು ರಕ್ಷಿಸಬೇಕೆಂದಿರುವುದನ್ನು (ತಮ್ಮ ಮಾನವನ್ನು ಹಾಗೂ ಪತಿಯ ಸೊತ್ತುಗಳನ್ನು) ಗುಪ್ತ ಸ್ಥಿತಿಯಲ್ಲೂ (ಪತಿಯ ಅನುಪಸ್ಥಿತಿಯಲ್ಲೂ) ರಕ್ಷಿಸುವವರಾಗಿರುತ್ತಾರೆ. ನಿಮಗೆ ವಿದ್ರೋಹದ ಆತಂಕವಿರುವಂತಹ ಮಹಿಳೆಯರಿಗೆ ಉಪದೇಶಿಸಿರಿ. (ಅವರು ತಿದ್ದಿಕೊಳ್ಳದಿದ್ದರೆ) ಆ ಬಳಿಕ ಮಲಗುವಲ್ಲಿ ಅವರನ್ನು ಒಂಟಿಯಾಗಿ ಬಿಡಿರಿ ಮತ್ತು (ಆಗಲೂ ಅವರು ತಮ್ಮನ್ನು ತಿದ್ದಿಕೊಳ್ಳದಿದ್ದರೆ,) ಅವರನ್ನು ದಂಡಿಸಿರಿ. ಇನ್ನು ಅವರು ನಿಮಗೆ ವಿಧೇಯರಾದರೆ, ಅವರ ವಿರುದ್ಧ (ಆರೋಪ ಅಥವಾ ಕಿರುಕುಳಕ್ಕೆ) ದಾರಿ ಹುಡುಕುತ್ತಿರಬೇಡಿ. ಅಲ್ಲಾಹನು ಖಂಡಿತವಾಗಿಯೂ ಉನ್ನತನೂ ಮಹಾನನೂ ಆಗಿರುತ್ತಾನೆ.
ಸೂರಾ ಅನ್-ನಿಸಾ 4:35
وَإِنْ خِفْتُمْ شِقَاقَ بَيْنِهِمَا فَابْعَثُوا حَكَمًا مِنْ أَهْلِهِ وَحَكَمًا مِنْ أَهْلِهَا إِنْ يُرِيدَا إِصْلَاحًا يُوَفِّقِ اللَّهُ بَيْنَهُمَا ۗ إِنَّ اللَّهَ كَانَ عَلِيمًا خَبِيرًا ۞
ನಿಮಗಿನ್ನು ಅವರಿಬ್ಬರ (ದಂಪತಿಯರ) ನಡುವೆ ಬಿಕ್ಕಟ್ಟಿನ ಭಯವಿದ್ದರೆ ಆತನ ಕುಟುಂಬದಿಂದ ಒಬ್ಬ ಮಧ್ಯಸ್ಥನನ್ನು ಹಾಗೂ ಆಕೆಯ ಕುಟುಂಬದಿಂದಲೂ ಒಬ್ಬ ಮಧ್ಯಸ್ಥನನ್ನು ನೇಮಿಸಿರಿ. ಅವರಿಬ್ಬರೂ ಸುಧಾರಣೆಯನ್ನು ಬಯಸಿದ್ದರೆ, ಅಲ್ಲಾಹನು ಅವರ ನಡುವೆ ಸಾಮರಸ್ಯವನ್ನು ಬೆಳೆಸುವನು. ಅಲ್ಲಾಹನಂತು ಸರ್ವಜ್ಞನೂ ಎಲ್ಲ ವಿಷಯಗಳ ಕುರಿತು ಜಾಗೃತನೂ ಆಗಿರುವನು.
ಈ ಅವತೀರ್ಣಗಳಲ್ಲಿ ವಿವಾಹ ವಿಚ್ಛೇದನವು ಎರಡೂ ಸಂಗಾತಿಗಳ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುವ ಕೊನೆಯ ಉಪಾಯವಾಗಿರಬೇಕು ಎಂದು ಕುರಾನ್ ಪದೇ ಪದೇ ಒತ್ತಿಹೇಳುತ್ತದೆ.
ವಿವಾಹ ವಿಚ್ಛೇದನದ ಬಗ್ಗೆ ಪ್ರವಾದಿ ﷺ ರವರ ಹದೀಸ್ ಗಳು:
ಪ್ರವಾದಿ ಮಹಮ್ಮದ್ (ಸ.ಅ.) ರವರ ಹದೀಸ್ ಗಳಲ್ಲಿ ವಿವಾಹ ವಿಚ್ಛೇದನದ ಬಗ್ಗೆ ಏನು ಹೇಳಲಾಗಿದೆ ಎಂಬುವುದನ್ನು ತಿಳಿದುಕೊಳ್ಳೋಣ.

ಪ್ರವಾದಿ ﷺ ರವರ ಪ್ರಕಾರ “ಅಲ್ಲಾಹ್ ಅನುಮತಿಸಿದ ವಿಷಯಗಳಲ್ಲಿ ವಿವಾಹ ವಿಚ್ಛೇದನವು ಆತ ಅತ್ಯಂತ ದ್ವೇಷಿಸುವುದು ವಿಚ್ಛೇದನವಾಗಿದೆ.” (ಸುನನ್ ಅಬು ದಾವೂದ್ 2178, ಇಬ್ನ್ ಮಾಜಾ 2018, ಹಸನ್). ಇಸ್ಲಾಂನಲ್ಲಿ ವಿಚ್ಛೇದನವನ್ನು ಅನುಮತಿಸಲಾಗಿದ್ದರೂ, ಸಮನ್ವಯಕ್ಕಾಗಿ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಇದು ಕೊನೆಯ ಉಪಾಯವಾಗಿರಬೇಕು ಎಂದು ಈ ಹದೀಸ್ ಒತ್ತಿಹೇಳುತ್ತದೆ.
ಪ್ರವಾದಿ ﷺ ಹೇಳಿದರು: “ಕಾನೂನುಬದ್ಧವಾದ ವಿಷಯಗಳಲ್ಲಿ ವಿಚ್ಛೇದನವು ಅಲ್ಲಾಹನಿಗೆ ಹೆಚ್ಚು ಇಷ್ಟವಿಲ್ಲ.”
(ಸುನನ್ ಇಬ್ನ್ ಮಜಾ 2018, ಹಸನ್). ವಿಚ್ಛೇದನವನ್ನು ಆಶ್ರಯಿಸುವ ಮೊದಲು ಮದುವೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವ ಪ್ರಾಮುಖ್ಯತೆಯನ್ನು ಇದು ಪುನರುಚ್ಚರಿಸುತ್ತದೆ.
ಪ್ರವಾದಿ ﷺ ಹೇಳಿದರು: “ಯಾವುದೇ ಮಹಿಳೆ ತನ್ನ ಪತಿಗೆ ಸರಿಯಾದ ಕಾರಣವಿಲ್ಲದೆ ವಿಚ್ಛೇದನವನ್ನು ಕೇಳಿದರೆ, ಅವಳಿಗೆ ಸ್ವರ್ಗದ ಪರಿಮಳವನ್ನು ನಿಷೇಧಿಸಲಾಗಿದೆ”. (ಸುನನ್ ಅಬು ದಾವೂದ್ 2226, ಸಹಿಹ್). ಈ ಹದೀಸ್ ಕ್ಷುಲ್ಲಕ ಕಾರಣಗಳಿಗಾಗಿ ವಿಚ್ಛೇದನವನ್ನು ಬಯಸುವುದರ ವಿರುದ್ಧ ಎಚ್ಚರಿಸುತ್ತದೆ ಮತ್ತು ಅದರ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
ವಿಚ್ಛೇದನವನ್ನು ಸರಿಯಾದ ರೀತಿಯಲ್ಲಿ ನೀಡಬೇಕು ಎಂದು ಪ್ರವಾದಿ ﷺ ಕಲಿಸಿದರು: “ಅವಳನ್ನು ಹಿಂದಕ್ಕೆ ಕರೆದುಕೊಂಡು ಹೋಗಿ ಅವಳು ಶುದ್ಧವಾಗುವವರೆಗೆ ಅವಳನ್ನು ಇಟ್ಟುಕೊಳ್ಳಲು ಹೇಳು, ನಂತರ ಅವಳು ಅವಳ ಋತುಚಕ್ರವನ್ನು ಹೊಂದಿ ಮತ್ತೆ ಶುದ್ಧಳಾಗುತ್ತಾಳೆ. ನಂತರ ಅವನು ಬಯಸಿದರೆ, ಅವನು ಅವಳೊಂದಿಗೆ ಸಂಭೋಗಿಸುವ ಮೊದಲು ಅವಳನ್ನು ವಿಚ್ಛೇದನ ಮಾಡಬಹುದು. ಅದು ಮಹಿಳೆಯರಿಗೆ ವಿಚ್ಛೇದನಕ್ಕಾಗಿ ಅಲ್ಲಾಹನು ಆಜ್ಞಾಪಿಸಿದ ಅವಧಿಯಾಗಿದೆ.” (ಸಾಹಿಹ್ ಮುಸ್ಲಿಂ 1471a)
ಇಸ್ಲಾಮಿಕ್ ಕಾನೂನು ಮತ್ತು ವಿಚ್ಛೇದನ ಪ್ರಕ್ರಿಯೆಗಳ
ಇಸ್ಲಾಮಿಕ್ ಕಾನೂನು ವಿಚ್ಛೇದನಕ್ಕೆ ರಚನಾತ್ಮಕ ಪ್ರಕ್ರಿಯೆಯನ್ನು ಸೂಚಿಸುತ್ತದೆ:

  1. ತಲಾಖ್ ಘೋಷಣೆ: ಸಮನ್ವಯ ಪ್ರಯತ್ನಗಳೊಂದಿಗೆ ವಿವಾಹ ವಿಚ್ಛೇದನ ವನ್ನು ಹಂತ ಹಂತವಾಗಿ ಆದರ್ಶಪ್ರಾಯವಾಗಿ ಮಾಡಲಾಗುತ್ತದೆ.
  2. ಇದ್ದಾ ಅವಧಿ: ಇಸ್ಲಾಂ ತಲಾಕ್ ಬಳಿಕ ಇದ್ದಾ ಅವಧಿಯನ್ನು ನಿಶ್ಚಯಿಸಿದ್ದು, ಈ ಇದ್ದತ್ ಅವಧಿ ಮೂರು ಮುಟ್ಟಿನ ಚಕ್ರಗಳ ಕಾಯುವ ಅವಧಿಯಾಗಿದ್ದು, ಇದ್ದತ್ ಅವಧಿಯಲ್ಲಿ ತಲಾಕನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಅನುಮತಿಸುತ್ತದೆ.
  3. ಮಧ್ಯಸ್ಥಿಕೆ: ವಿಚ್ಛೇದನವನ್ನು ಅಂತಿಮಗೊಳಿಸುವ ಮೊದಲು ಹಿರಿಯರು ಅಥವಾ ಮಧ್ಯವರ್ತಿಗಳನ್ನು ಮಧ್ಯಸ್ಥಿಕೆ ಮಾಡಬೇಕೆಂದೂ ನಿಯಮವಿದ್ದು, ಈ ಮಧ್ಯಸ್ಸ್ಥಿಕೆ ಬಳಿಕವೇ ವಿವಾಹ ವಿಚ್ಛೇದನ ಮಾಡಿಕೊಳ್ಳಬೇಕಾಗಿರುವುದು ಸರಿಯಾದ ಕ್ರಮವಾಗಿರುತ್ತದೆ.
  4. ಆರ್ಥಿಕ ಬೆಂಬಲ: ವಿಚ್ಛೇದನದ ನಂತರ ಪತಿ ಪತ್ನಿ ಮತ್ತು ಮಕ್ಕಳಿಗೆ ಒದಗಿಸಬೇಕು ಎಂಬುದನ್ನು ಇಸ್ಲಾಂ ಕಲಿಸುತ್ತದೆ.
    ಭಾರತದಲ್ಲಿ, ಮುಸ್ಲಿಂ ವೈಯಕ್ತಿಕ ಕಾನೂನುಗಳ ಮೂಲಕವೇ ವಿವಾಹ ವಿಚ್ಛೇದನವನ್ನು ಮಾಡಿಕೊಳ್ಳಬಹುದಾದರೂ, ಈ ಬಗ್ಗೆ ಕೆಲವೊಂದು ನಿಯಂತ್ರಕ ಕಾನೂನುಗಳು ಜ್ಯಾರಿಯಲ್ಲಿವೆ. ಈ ಪ್ರಮುಖ ಕಾನೂನು ಗಳೆಂದರೆ:
  5. ಮುಸ್ಲಿಂ ವಿವಾಹಗಳ ವಿಸರ್ಜನೆ ಕಾಯಿದೆ, 1939: ಮುಸ್ಲಿಂ ಮಹಿಳೆಯರಿಗೆ ನ್ಯಾಯಾಂಗ ವಿಚ್ಛೇದನ ಪಡೆಯುವ ಹಕ್ಕನ್ನು ನೀಡುತ್ತದೆ.
  6. ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆ, 1986: ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆ ಮತ್ತು ನಿರ್ವಹಣೆ ಹಕ್ಕುಗಳನ್ನು ಒದಗಿಸುತ್ತದೆ.
  7. ತ್ರಿವಳಿ ತಲಾಖ್ (ತಲಾಕ್-ಎ-ಬಿದ್’): ಭಾರತದ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ (ತಲಾಕ್-ಎ-ಬಿದ್’)ನ್ನು ಅಸಂವಿಧಾನಿಕ ಎಂದು ಘೋಷಿಸಿದೆ ಹಾಗೂ ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರಗೊಳಿಸುತ್ತದೆ.
  8. ಮುಸ್ಲಿಂ ಮಹಿಳೆಯರು (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 2019. ಸಹಿತ ತ್ರಿವಳಿ ತಳಕನ್ನು ಕಾನೂನು ಬಾಹಿರಗೊಳಿಸುತ್ತದೆ.
    ಈ ಮುಸ್ಲಿಂ ಮಹಿಳೆಯರು (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 2019ರ ಪ್ರಮುಖ ನಿಬಂಧನೆಗಳು ಈ ಕೆಳಗಿನಂತಿವೆ
    1) ತ್ರಿವಳಿ ತಲಾಖ್ ಕಾನೂನುಬಾಹಿರವೆಂದು ಘೋಷಿಸಲಾಗಿದೆ: ಲಿಖಿತ ಅಥವಾ ವಿದ್ಯುನ್ಮಾನ ರೂಪದಲ್ಲಿ ತಲಾಖ್’ನ ಯಾವುದೇ ಉಚ್ಚಾರಣೆಯನ್ನು ಅನೂರ್ಜಿತ ಮತ್ತು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.
    2) ಶಿಕ್ಷೆ: ತಲಾಖ್ ಹೇಳುವ ಮುಸ್ಲಿಂ ಪತಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ.
    3) ಜೀವನಾಧಾರ ಭತ್ಯೆ: ತಲಾಖ್‌ನಿಂದ ಪೀಡಿತ ಮಹಿಳೆಯರು ಮ್ಯಾಜಿಸ್ಟ್ರೇಟ್ ನಿರ್ಧರಿಸಿದಂತೆ ತಮಗೆ ಮತ್ತು ಅವರ ಅವಲಂಬಿತ ಮಕ್ಕಳಿಗೆ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ.
    4) ಅಪ್ರಾಪ್ತ ಮಕ್ಕಳ ಪಾಲನೆ: ತಲಾಖ್ ಸಂದರ್ಭದಲ್ಲಿ ಮಹಿಳೆಯರು ತಮ್ಮ ಅಪ್ರಾಪ್ತ ಮಕ್ಕಳ ಪಾಲನೆಗೆ ಅರ್ಹರಾಗಿರುತ್ತಾರೆ.
    5) ಗುರುತಿಸಬಹುದಾದ ಅಪರಾಧ (Cognizable offence) ಎಂದು ಪರಿಗಣಿಸಿದ್ದು, ಪೊಲೀಸರು ಆರೋಪಿಯನ್ನು ವಾರಂಟ್ ಇಲ್ಲದೆ ಬಂಧಿಸಬಹುದು, ಆದರೆ ಪೀಡಿತ ಮಹಿಳೆ ಅಥವಾ ಅವಳ ಸಂಬಂಧಿಕರ ದೂರಿನ ಮೇಲೆ ಮಾತ್ರ. ತ್ರಿವಳಿ ತಲಾಖ್ ಪದ್ಧತಿಯನ್ನು ಅಸಂವಿಧಾನಿಕ ಮತ್ತು ಮಹಿಳೆಯರ ವಿರುದ್ಧ ತಾರತಮ್ಯ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ಕಾನೂನನ್ನು ಜಾರಿಗೊಳಿಸಲಾಗಿದೆ.

ಭಾರತದಲ್ಲಿ ನ್ಯಾಯಾಂಗ ವ್ಯಾಖ್ಯಾನಗಳು ಮತ್ತು ಸುಧಾರಣೆಗಳು

  1. ಶಾಬಾನೋ ಕೇಸ್ (1985): ಮುಸ್ಲಿಂ ಮಹಿಳೆಯರಿಗೆ ಜೀವನಾಂಶದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹೆಗ್ಗುರುತು ಪ್ರಕರಣವಾಗಿದೆ.
  2. ಶಾಯರಾ ಬಾನೋ ಕೇಸ್ (2017): ಭಾರತದಲ್ಲಿ ತ್ವರಿತ ತ್ರಿವಳಿ ತಲಾಖ್’ಅನ್ನು ರದ್ದುಗೊಳಿಸಲು ಕಾರಣವಾಯಿತು.
  3. ಡೇನಿಯಾ ಸಿದ್ದಿಕಿ ಕೇಸ್ (2021): ವೈಯಕ್ತಿಕ ಕಾನೂನಿನ ಅಡಿಯಲ್ಲಿ ವಿಚ್ಛೇದನದ ನಂತರದ ನಿರ್ವಹಣೆ ಹಕ್ಕುಗಳನ್ನು ತಿಳಿಸಲಾಗಿದೆ.
    ಈ ಪ್ರಕರಣಗಳು ಭಾರತದಲ್ಲಿ ಮುಸ್ಲಿಂ ವಿಚ್ಛೇದನ ಕಾನೂನುಗಳ ವಿಕಸನ ಸ್ವರೂಪವನ್ನು ವಿವರಿಸುತ್ತದೆ, ಸಾಂವಿಧಾನಿಕ ತತ್ವಗಳೊಂದಿಗೆ ಧಾರ್ಮಿಕ ತತ್ವಗಳನ್ನು ಸಮತೋಲನಗೊಳಿಸುತ್ತದೆ.
    ಸಮಕಾಲೀನ ಸಮಸ್ಯೆಗಳು ಮತ್ತು ಚರ್ಚೆಗಳು
  4. ತ್ರಿವಳಿ ತಲಾಖ್ ಮತ್ತು ಕಾನೂನು ಸುಧಾರಣೆಗಳು: ತ್ರಿವಳಿ ತಲಾಖ್ ರದ್ದತಿ ವಿವಾದಾತ್ಮಕ ವಿಷಯವಾಗಿ ಉಳಿದಿದೆ. ಇದು ಅನಿಯಂತ್ರಿತ ವಿಚ್ಛೇದನದಿಂದ ಮಹಿಳೆಯರನ್ನು ರಕ್ಷಿಸುತ್ತದೆ, ಕೆಲವರು ಇದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತದೆ ಎಂದು ವಾದಿಸುತ್ತಾರೆ. ಈ ಬಗ್ಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ, ಸದ್ಯಕ್ಕಂತೂ ತ್ರಿವಳಿ ತಲಾಖ್ ನೀಡಿದಲ್ಲಿ ಶಿಕ್ಷೆ ಕಟ್ಟಿಟ್ಟ ಬುಟ್ಟಿ ಎಂಬುದನ್ನು ಪ್ರತಿಯೊಬ್ಬರೂ ಮನಗಂಡಿರತಕ್ಕದ್ದು.
  5. ಮುಸ್ಲಿಂ ವಿಚ್ಛೇದನ ಕಾನೂನುಗಳಲ್ಲಿ ಲಿಂಗ ನ್ಯಾಯ: ಆರ್ಥಿಕ ಭದ್ರತೆ ಮತ್ತು ಮಕ್ಕಳ ಪಾಲನೆ ಸೇರಿದಂತೆ ವಿಚ್ಛೇದನದಲ್ಲಿ ಮಹಿಳೆಯರ ಹಕ್ಕುಗಳು ಪ್ರಮುಖ ಸಮಸ್ಯೆಗಳಾಗಿ ಉಳಿದಿವೆ. ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸುವ ಮೂಲಕ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಣೆಗಳ ಅಗತ್ಯವಿದೆ.
  6. ವಿಚ್ಛೇದನದ ಸಾಮಾಜಿಕ ಪರಿಣಾಮಗಳು: ವಿಚ್ಛೇದಿತ ಮುಸ್ಲಿಂ ಮಹಿಳೆಯರು ಸಾಮಾನ್ಯವಾಗಿ ಕಳಂಕ, ಆರ್ಥಿಕ ಸಂಕಷ್ಟಗಳು ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಾರೆ. ಸಮಾಜದಲ್ಲಿ ಅವರ ಏಕೀಕರಣವನ್ನು ಬೆಂಬಲಿಸುವ ಕ್ರಮಗಳು ಅತ್ಯಗತ್ಯ.
  7. ಮುಸ್ಲಿಂ ವಿವಾಹ ಹಾಗೂ ವಿಚ್ಛೇದಗಳ ನಿರ್ವಹಣೆಗಾಗಿ ಕುರಾನ್, ಹದೀಸ್ ಗಳ ಮಾನದಂಡಗಳಡಿಯಲ್ಲಿ ಸೂಕ್ತ ಕಾನೂನು ಜ್ಯಾರಿಯಾಗುವುದು ಅಗತ್ಯ ಎನ್ನುವುದು ನನ್ನ ವೈಯುಕ್ತಿಕ ಅಭಿಪ್ರಾಯ.
    ಸುಧಾರಣೆಗಾಗಿ ಶಿಫಾರಸುಗಳು
  8. ಮಧ್ಯಸ್ಥಿಕೆ ಮತ್ತು ಸಮಾಲೋಚನೆಯನ್ನು ಉತ್ತೇಜಿಸುವುದು: ಅನಿಯಂತ್ರಿತ ವಿಚ್ಛೇದನವನ್ನು ತಡೆಗಟ್ಟಲು ವಿವಾದ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸುವುದು.
  9. ಕಾನೂನು ಅರಿವು ಮತ್ತು ಸಾಕ್ಷರತೆ: ಮುಸ್ಲಿಂ ಮಹಿಳೆಯರಿಗೆ ಶರಿಯಾ ಮತ್ತು ಭಾರತೀಯ ಕಾನೂನಿನ ಅಡಿಯಲ್ಲಿ ಅವರ ಕಾನೂನು ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವುದು.
  10. ಆರ್ಥಿಕ ಭದ್ರತೆಯನ್ನು ಖಾತರಿಪಡಿಸುವುದು: ವಿಚ್ಛೇದನದ ನಂತರದ ನಿರ್ವಹಣೆ ಮತ್ತು ಪೀಡಿತ ಮಹಿಳೆಯರಿಗೆ ಆಶ್ರಯಕ್ಕಾಗಿ ಕಾರ್ಯವಿಧಾನಗಳನ್ನು ಅಳವಡಿಸುವುದು.
  11. ವಿಚ್ಛೇದನವನ್ನು ಕೋರ್ಟ್ ಮೂಲಕವೇ ನಿರ್ವಹಿಸಲು ಸೂಕ್ತ ಕಾಯ್ದೆಯ ಅಗತ್ಯವಿದೆ. ಇದರಿಂದ ನ್ಯಾಯಸಮ್ಮತತೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಹಾಗೂ ಪ್ರಮಾಣಿತ ಕಾನೂನು ಪ್ರಕ್ರಿಯೆಗಳನ್ನು ರಚಿಸುವುದು ಸಾಧ್ಯವಾಗುತ್ತದೆ. ಇದರಿಂದ ಅನಿಯಂತ್ರಿತ ವಿಚ್ಛೇದನವನ್ನು ತಡೆಯುವ ನಿಟ್ಟಿನಲ್ಲಿ ವಿಚ್ಛೇದನವನ್ನು ಕೌಟುಂಬಿಕ ನ್ಯಾಯಾಲದ ಮೂಲಕವೇ ನಿರ್ವಹಿಸುವುದು ತೀರಾ ಅಗತ್ಯವಾಗಿದೆ. .
    ಈ ಬರಹವು ಧಾರ್ಮಿಕ ಕಾನೂನುಗಳು ಮತ್ತು ಆಧುನಿಕ ಕಾನೂನು ತತ್ವಗಳ ತಿಳಿಸಿ ಕೊಡುವ ಹಾಗೂ ಈ ಕಾನೂನುಗಳಲ್ಲಿ ಆಗಬೇಕಾದ ಸೂಕ್ತ ಸುಧಾರಣಾ ಕಾನೂನುಗಳ ಬಗ್ಗೆ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಇಸ್ಲಾಮಿಕ್ ವಿಚ್ಛೇದನ ಕಾನೂನುಗಳು ಕುರಾನ್ ಮತ್ತು ಹದೀಸ್‌ನಲ್ಲಿ ಬೇರೂರಿದ್ದರೂ, ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಅವುಗಳ ಅನ್ವಯವು ಗಮನಾರ್ಹ ಸುಧಾರಣೆಗಳಿಗೆ ಒಳಗಾಗಿದೆ ಎಂಬುವುದು ನಿಮಗೀಗ ಮನದಟ್ಟಾಗಿರಬಹುದು. ಧಾರ್ಮಿಕ ಹಕ್ಕುಗಳು ಮತ್ತು ಲಿಂಗ ನ್ಯಾಯ ಎರಡನ್ನೂ ಎತ್ತಿಹಿಡಿಯಲು ಹೆಚ್ಚು ಸಮತೋಲಿತ ಕಾನೂನು ವಿಧಾನದ ಅಗತ್ಯವಿದೆ. ಭವಿಷ್ಯದ ಕಾನೂನು ಚೌಕಟ್ಟುಗಳು ಇಸ್ಲಾಮಿಕ್ ತತ್ವಗಳನ್ನು ಸಾಂವಿಧಾನಿಕ ಸುರಕ್ಷತೆಗಳೊಂದಿಗೆ ಸಂಯೋಜಿಸುವ ಗುರಿಯನ್ನು ಹೊಂದಿರಬೇಕು, ಪುರುಷ ಮತ್ತು ಮಹಿಳೆ ಇಬ್ಬರಿಗೂ ವಿಚ್ಛೇದನ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆಯನ್ನು ಖಾತ್ರಿಪಡಿಸತಕ್ಕದ್ದು. ಧಾರ್ಮಿಕ ನಂಬಿಕೆಗಲ್ಲನು ಸಂರಕ್ಷಿಸಿ, ವೈವಾಹಿಕ ವಿಷಯಗಲ್ಲಿ ಸೂಕ್ತ ಕಾನೂನು ರೂಪುಕೊಂಡಲ್ಲಿ ನಮ್ಮ ಮುಸ್ಲಿಂ ಸಮಾಜದ ಬಹುದೊಡ್ಡ ಸಮಸ್ಯೆ ಪರಿಹಾರವಾಗಬಹುದು.

✍️. ಇಸ್ಮಾಯಿಲ್ ಎಸ್. ನ್ಯಾಯವಾದಿ

(ಈ ಬರಹದಲ್ಲಿ ನಾನು ಕೆಲವೊಂದು ವೈಯುಕ್ತಿಕ ಅಭಿಪ್ರಾಯಗಳನ್ನು ಮಂಡಿಸಿದ್ದು, ಇದು ಯಾರಿಗಾದರೂ ಇಷ್ಟವಾಗದಿದ್ದಲ್ಲಿ ಅದಕ್ಕಾಗಿ ಕ್ಷಮೆ ಇರಲಿ)