ಕೇಂದ್ರದ ಯಾವುದೇ ಕಾನೂನನ್ನು ಪಾಲಿಸದಿರುವುದು ಸಂವಿಧಾನದ ವೈಫಲ್ಯವೆಂದು ಪರಿಗಣಿಸಲಾಗುತ್ತದೆ.
ಭಾರತಾದ್ಯಂತ ವಕ್ಫ್ ಕಾಯಿದೆಯ ಬಗ್ಗೆ ಬಹಳ ಜೋರಾದ ಚರ್ಚೆ ನಡೆಯುತ್ತಿದೆ. ಸಮಾಜದ ವಿವಿಧ ಸಮುದಾಯಗಳ ಒಳಗೆ ವಾದ-ವಿವಾದಗಳು ಜೋರಾಗಿವೆ. ಕಾರಣ, ಕೇಂದ್ರ ಸರ್ಕಾರ 1995ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು. ಈಗಾಗಲೇ ತಿದ್ದುಪಡಿಯೂ ಆಗಿ, ಲೋಕಸಭೆ, ರಾಜ್ಯಸಭೆಯಲ್ಲಿ ಅಂಗಿಕಾರಗೊಂಡು, ರಾಷ್ಟ್ರಪತಿಗಳ ಅಂಕಿತವೂ ಆಗಿ ಕಾಯ್ದೆಯಾಗಿ ಜಾರಿಯಾಗಿದೆ. ಕಳೆದ ಏಪ್ರಿಲ್ 3ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಏ. 4ರಂದು ರಾಜ್ಯಸಭೆಯಲ್ಲಿ ಪಾಸ್ ಆಗಿದೆ. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ವಕ್ಪ್ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ.
ಈ ನಡುವೆ ಈಗಾಗಲೇ ವಿಧೇಯಕದ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್, ಮುಸ್ಲಿಂ ಧಾರ್ಮಿಕ ಸಂಘಟನೆ, ಎಐಎಂಐಎಂ, ಆಪ್ ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ವಕ್ಫ್ ಆಸ್ತಿಗಳ ನಿರ್ವಹಣೆ, ಮೇಲ್ವಿಚಾರಣೆ, ಸುಧಾರಣೆ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಜತೆಗೆ ಹಳೆಯ ಕಾಯಿದೆಯಲ್ಲಿದ್ದ ಕೆಲವು ವಿವಾದಾತ್ಮಕ ಅಂಶಗಳನ್ನು ತಿದ್ದುಪಡಿ ವಿಧೇಯಕದಲ್ಲಿ ತೆಗೆದುಹಾಕಲಾಗಿದೆ.

ಇದೀಗ ಕಾಯಿದೆ ಯಾರಿಗೆ ನಿರಾಕರಿಸುತ್ತಿರುವ ರಾಜ್ಯಗಳ ವಿರುದ್ದ ಕಿಡಿಕಾರಿರುವ ಬಿಜೆಪಿ, ರಾಜ್ಯಗಳು ವಕ್ಫ್ ಕಾನೂನನ್ನು ಜಾರಿಗೆ ತರಲು ನಿರಾಕರಿಸುವಂತಿಲ್ಲ ಎಂದು ಹೇಳಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ ಶಾಸಕ ಅಫಿಝುಲ್ ಹಸನ್, ಕರ್ನಾಟಕದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ರಾಜ್ಯಗಳಲ್ಲಿ ವಕ್ಫ್ ಕಾನೂನನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ತಮ್ಮ ರಾಜ್ಯದಲ್ಲಿ ಈ ಕಾಯಿದೆಯನ್ನು ಅನುಷ್ಠಾಣಗೊಳಿಸಲು ಬಿಡುವುದಿಲ್ಲ ಎಂದು ತಾಕೀತು ಮಾಡಿದ್ದಾರೆ.
ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಪ್ರಕಾರ, ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸರ್ಕಾರಗಳ ಅಧಿಕಾರಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದ್ದು, ರಾಜ್ಯ ವಿಧಾನಸಭೆ ಅಂಗೀಕರಿಸಿದ ಕಾನೂನನ್ನು ಯಾವುದೇ ಜಿಲ್ಲಾ ಪಂಚಾಯತ್ ಮೀರಲು ಸಾಧ್ಯವಿಲ್ಲ ಮತ್ತು ಕೇಂದ್ರ (ಸಂಸತ್ತು) ಅಂಗೀಕರಿಸಿದ ಕಾನೂನನ್ನು ಯಾವುದೇ ರಾಜ್ಯವು ಬೈಪಾಸ್ ಮಾಡುವಂತಿಲ್ಲ.

ಇನ್ನು 254ನೇ ವಿಧಿಯ ಪ್ರಕಾರ, ಕೇಂದ್ರದ ಕಾನೂನುಗಳು ರಾಜ್ಯ ಕಾನೂನುಗಳಿಗಿಂತ ಆದ್ಯತೆಯನ್ನು ಹೊಂದಿರುವುದರಿಂದ ಕಾನೂನನ್ನು ಪಾಲಿಸುವುದು ರಾಜ್ಯಗಳ ಜವಾಬ್ದಾರಿಯಾಗಿದ್ದು, 256ನೇ ವಿಧಿಯ ಪ್ರಕಾರ, ಕೇಂದ್ರ ಸರ್ಕಾರ ಮಾಡಿದ ಕಾನೂನುಗಳು ಮತ್ತು ಅದರ ಸೂಚನೆಗಳನ್ನು ಪಾಲಿಸಲು ರಾಜ್ಯ ಸರ್ಕಾರಗಳು ನಿರಾಕರಿಸುವಂತಿಲ್ಲ. ಕೇಂದ್ರದ ಸೂಚನೆಗಳನ್ನು ಪಾಲಿಸುವುದು ಆಯಾ ರಾಜ್ಯಗಳ ಜವಾಬ್ದಾರಿ ಕೂಡಾ ಎಂದು ತಜ್ಞರು ಹೇಳುತ್ತಾರೆ. ಕೇಂದ್ರದ ಯಾವುದೇ ಕಾನೂನನ್ನು ಪಾಲಿಸದಿರುವುದು ಸಂವಿಧಾನದ ವೈಫಲ್ಯವೆಂದು ಪರಿಗಣಿಸಲಾಗುತ್ತದೆ. ಇದು ಸಂಭವಿಸಿದಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ನೀಡಲಾಗಿದೆ.
