ಹೆಚ್ಚಿನ ಅಂಕ, ಕೆಲಸದ ಆಸೆ ತೋರಿಸಿ ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ; ವಿಡಿಯೋ ಮಾಡಿ ಬ್ಲಾಕ್‌ ಮೇಲ್‌ ಮಾಡುತ್ತಿದ್ದ ಶಿಕ್ಷಕ ರಜನೀಶ್ ಕುಮಾರ್

ರಾಷ್ಟ್ರೀಯ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲೇಜಿನ ಶಿಕ್ಷಕನೊಬ್ಬ ತನ್ನ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಅದನ್ನು ರೆಕಾರ್ಡ್‌ ಮಾಡಿ ಬ್ಲಾಕ್‌ಮೇಲ್‌ ಮಾಡಿದ ಆರೋಪ ಕೇಳಿ ಬಂದಿದೆ. ರಜನೀಶ್ ಕುಮಾರ್ ಎಂಬ ಶಿಕ್ಷಕ ಸೇಥ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನ ಶಿಕ್ಷಕನಾಗಿದ್ದಾನೆ. ಆರೋಪಗಳು ಬೆಳಕಿಗೆ ಬಂದ ನಂತರ ಆಡಳಿತ ಮಂಡಳಿಯು ಆತನನ್ನು ಅಮಾನತುಗೊಳಿಸಿದೆ. ಶಿಕ್ಷಕ ಕುಮಾರ್ ಪರಾರಿಯಾಗಿದ್ದಾನೆ. ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಆತನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೊಲೀಸರು ಆತನಿಗೋಸ್ಕರ ಹುಡುಕಾಟ ನಡೆಸುತ್ತಿದ್ದಾರೆ.

ಸುಮಾರು 10 ತಿಂಗಳ ಹಿಂದೆ ಲಖೌನ ಪೊಲೀಸರಿಗೆ ಅನಾಮಧೇಯ ಪತ್ರವೊಂದು ಬಂದಿದ್ದು, ಅದರಲ್ಲಿ ಕುಮಾರ್ ಹೆಚ್ಚಿನ ಅಂಕ ಹಾಗೂ ಉದ್ಯೋಗಾವಕಾಶವನ್ನು ನೀಡುವುದಾಗಿ ಆಮಿಷವೊಡ್ಡಿ ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ. ಅಷ್ಟೇ ಅಲ್ಲದೆ ತನ್ನ ಕೃತ್ಯದ ವಿಡಿಯೋ ಮಾಡಿಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಿದ್ದ ಎಂದು ಉಲ್ಲೇಖಿಸಲಾಗಿತ್ತು. ಅನಾಮಧೇಯ ಪತ್ರದೊಂದಿಗೆ ಶಿಕ್ಷಕ ಕುಮಾರ್ ವಿದ್ಯಾರ್ಥಿಗಳೊಂದಿಗೆ ನಡೆಸಿರುವ ಕೃತ್ಯದ 59 ವೀಡಿಯೊಗಳನ್ನು ಹೊಂದಿರುವ ಪೆನ್ ಡ್ರೈವ್ ಕೂಡ ಇಡಲಾಗಿತ್ತು. ಕುಮಾರ್ ತನ್ನ ಕೃತ್ಯವನ್ನು ಗುಪ್ತ ಕ್ಯಾಮೆರಾದೊಂದಿಗೆ ರೆಕಾರ್ಡ್ ಮಾಡಿ, ನಂತರ ವಿದ್ಯಾರ್ಥಿಗಳನ್ನು ಮತ್ತೆ ತನ್ನ ಜೊತೆ ಬರುವಂತೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಉತ್ತರಪ್ರದೇಶದ ಪೊಲೀಸರು ಶಿಕ್ಷಕ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಸಂಭೋಗಕ್ಕೆ ಸಂಬಂಧಿಸಿದ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಸದ್ಯ ಆರೋಪಿ ಶಿಕ್ಷಕನನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ದೂರುದಾರು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ವಿದ್ಯಾರ್ಥಿನಿಯರು ಯಾರೂ ದೂರನ್ನು ದಾಖಲಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿರುತ್ತಾರೆ.