ಗ್ರಾಮ ಪಂಚಾಯಿತಿಗೂ ಬಂತು ‘ರೆರಾ’. ಪಂಚಾಯತ್ ವ್ಯಾಪ್ತಿಯಲ್ಲಿ ಅನುಮೋದಿತ ಬಡಾವಣೆಗಳಿಗೆ ‘ರೆರಾ’ ನೋಂದಣಿ ಕಡ್ಡಾಯ

ರಾಜ್ಯ

ಭೂ ಪರಿವರ್ತನೆಗೊಂಡ ಭೂಮಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನುಮೋದನೆ ನೀಡುವಾಗ ರೆರಾ ನೋಂದಣಿ ಕಡ್ಡಾಯಗೊಳಿಸಿ ಆದೇಶ

ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಮೋದಿತ ಬಡಾವಣೆಗಳಿಗೆ ‘ರೆರಾ’ ನೋಂದಣಿಯನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತರಲಾಗಿದೆ. ಹೊಸ ಕಾನೂನಿನ ಪ್ರಕಾರ, ಜಿಲ್ಲಾ ಪಂಚಾಯಿತ್, ತಾಲೂಕು ಪಂಚಾಯಿತ್, ಮತ್ತು ಗ್ರಾಮ ಪಂಚಾಯಿತ್ ಗಳು ಕಟ್ಟಡ ನಿರ್ಮಾಣದ ಮೇಲೆ ನಿಯಂತ್ರಣ ಹೊಂದಿರುತ್ತವೆ. ಭೂ ಪರಿವರ್ತನೆಗೊಂಡ ಭೂಮಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನುಮೋದನೆ ನೀಡುವಾಗ ರೆರಾ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸುವ ಷರತ್ತನ್ನು ವಿಧಿಸಲಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ, ಅರ್ಹ ವಾಸ್ತುಶಿಲ್ಪಿಯಿಂದ ಕಟ್ಟಡದ ಮೇಲ್ವಿಚಾರಣೆ ನಡೆಸಿದ ಅರ್ಹ ಇಂಜಿನಿಯರ್ ಅಥವಾ ಮೇಲ್ವಿಚಾರಕರಿಂದ ಕಟ್ಟಡ ಪೂರ್ಣಗೊಂಡಿರುವ ದೃಢೀಕರಣ ಪತ್ರವನ್ನು ಪಡೆಯಬೇಕು. ಇದಾದ ಬಳಿಕ, ಪಂಚಾಯಿತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರದ ತಾಂತ್ರಿಕ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಬೇಕು.

ಪರಿಶೀಲನೆಯ ಸಂದರ್ಭದಲ್ಲಿ, ಕಟ್ಟಡವು ಅನುಮೋದಿತ ನಕ್ಷೆಗೆ ಅನುಗುಣವಾಗಿ ನಿರ್ಮಿತವಾಗಿದೆಯೇ ಮತ್ತು ರೆರಾ ನೋಂದಣಿಯಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈ ಎಲ್ಲಾ ಷರತ್ತುಗಳು ಈಡೇರಿದ ನಂತರ, ತಾಂತ್ರಿಕ ಅಧಿಕಾರಿ ಮತ್ತು ಪಿಡಿಒ ಜಂಟಿಯಾಗಿ ಸಹಿ ಮಾಡಿ ಕಟ್ಟಡಕ್ಕೆ ಅಂತಿಮ ದಾಖಲೆಯನ್ನು ನೀಡಬೇಕು ಎಂದು ತಿದ್ದುಪಡಿಯಲ್ಲಿ ತಿಳಿಸಲಾಗಿದೆ. ಈ ಕಾನೂನು ಗ್ರಾಮೀಣ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳ ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಖಾತರಿಪಡಿಸಲು ಮಹತ್ವದ ಕ್ರಮವಾಗಿದೆ.