ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ಸ್ ಪೆಕ್ಟರ್ ಬದಲಾವಣೆ ಪರ್ವ ಶುರು: ಸುರತ್ಕಲ್ ಗೆ ಪ್ರಮೋದ್ ಕುಮಾರ್, ಮಂಗಳೂರು ಗ್ರಾಮಾಂತರ ಠಾಣೆಗೆ ಗವಿರಾಜು, ಕದ್ರಿಗೆ ಅನಂತ ಪದ್ಮನಾಭ

Uncategorized

ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಳಹಂತದ ಪೊಲೀಸ್ ಅಧಿಕಾರಿಗಳ ಬದಲಾವಣೆ ಆರಂಭವಾಗಿದೆ. ರಾಜ್ಯ ಸರಕಾರ ಹಲವು ಜಿಲ್ಲೆಗಳಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ. ಮಂಗಳೂರಿನಲ್ಲಿ ಅಬ್ದುಲ್ ರಹಿಮಾನ್ ಹತ್ಯೆಯ ನಂತರ ಪೊಲೀಸ್ ಕಮೀಷನರ್, ಜಿಲ್ಲಾ ಎಸ್ಪಿಯವರನ್ನು ವರ್ಗಾವಣೆಗೊಳಿಸಿ ಖಡಕ್ ಅಧಿಕಾರಿಗಳನ್ನು ನೇಮಿಸಿತ್ತು.

ಸುರತ್ಕಲ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಉಡುಪಿ ಕರಾವಳಿ ಕಾವಲು ಪಡೆಯ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಮಹೇಶ್ ಪ್ರಸಾದ್ ಅವರು ಇನ್ಸ್ ಪೆಕ್ಟರ್ ಆಗಿದ್ದರು. ಪ್ರಮೋದ್ ಕುಮಾರ್ ಸೂಪರ್ ಕಾಪ್, ದಕ್ಷ ಪೊಲೀಸ್ ಅಧಿಕಾರಿ ಎಂದೇ ಖ್ಯಾತರಾಗಿದ್ದವರು. ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಜನಾನುರಾಯಿಯಾಗಿದ್ದರು.

ದೇಶದಾದ್ಯಂತ ಸುದ್ದಿ ಮಾಡಿದ್ದ ಕುಡುಪು ಮಾಬ್ ಲಿಂಚಿಂಗ್ ಪ್ರಕರಣಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್ ಎಂಬವರ ತಲೆದಂಡ ಆಗಿತ್ತು. ಇದೀಗ ಗ್ರಾಮಾಂತರ ಠಾಣೆಗೆ ಚಿಕ್ಕಮಗಳೂರು ಸೆನ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಗವಿರಾಜ ಆರ್ ಪಿ ಅವರನ್ನು ನೇಮಿಸಲಾಗಿದೆ.

ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಇನ್ಸ್ ಪೆಕ್ಟರ್ ಸೋಮಶೇಖರ್ ಉದ್ಯೋಗ ನೀಡುವುದಾಗಿ ವಂಚಿಸಿ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ ಪ್ರಕರಣದಲ್ಲಿ ಆರೋಪಿಗಳ ಜೊತೆ ಸಾಥ್ ಹೊಂದಿದ್ದರು ಅನ್ನುವ ಕಾರಣಕ್ಕೆ ಸಸ್ಪೆಂಡ್ ಆಗಿದ್ದರು ಅವರ ಸ್ಥಾನಕ್ಕೆ ಮಂಗಳೂರು ಕರಾವಳಿ ಕಾವಲು ಪಡೆಯಿಂದ ಅನಂತ ಪದ್ಮನಾಭ ಅವರನ್ನು ನೇಮಿಸಲಾಗಿದೆ.

ಇನ್ನು ರಾಜ್ಯಾದಾದ್ಯಂತ 36 ಪೊಲೀಸ್ ಉಪನಿರೀಕ್ಷರು ಪದೋನ್ನತಿ ಹೊಂದಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಮುಂಬಡ್ತಿ ಪಡೆದಿದ್ದಾರೆ. ಪೂಂಜಾಲಕಟ್ಟೆ ಠಾಣೆಯಲ್ಲಿ ದಕ್ಷ ಸಬ್ ಇನ್ಸ್ ಪೆಕ್ಟರ್ ಆಗಿ ಜನಾನುರಾಯಿಯಾಗಿದ್ದ ನಂದಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಮುಂಬಡ್ತಿ ಪಡೆದು ಮಂಗಳೂರು ಡಿ.ಎಸ್. ಬಿ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.