ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬ್ಯಾಂಕ್‌ವೊಂದರ ದರೋಡೆ ಪ್ರಕರಣ: ಆರೋಪಿಗಳನ್ನು ಬಂಧಿಸಿ ಕೆಜಿಗಟ್ಟಲೆ ಚಿನ್ನ, ನಗದು ವಶ

ರಾಜ್ಯ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿನ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ವಿಜಯಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೆಜಿಗಟ್ಟಲೆ ಚಿನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ. ಕಳೆದ ಮೇ ತಿಂಗಳ 29 ರಂದು ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ನಡೆದಿದ್ದ ಬಹುದೊಡ್ಡ ಕಳ್ಳತನ ಪ್ರಕರಣದಲ್ಲಿ ಲಾಕರ್‌ನಲ್ಲಿ ಇರಿಸಿದ್ದ 53.26 ಕೋಟಿ ರೂಪಾಯಿ ಮೌಲ್ಯದ 58.97 ಕೆಜಿ ಚಿನ್ನಾಭರಣ ಹಾಗೂ 5,20,450 ರೂ.ನಗದು ಕಳ್ಳತನವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ಒಟ್ಟು ಎಂಟು ತನಿಖಾ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿತ್ತು. ಇದೀಗ ತನಿಖಾ ತಂಡ ಮೊದಲ ಹಂತದ ಕಾರ್ಯಾಚರಣೆ ಮುಗಿಸಿದ್ದು, ಎರಡನೇ ಹಂತದ ತನಿಖೆಗೆ ಹೆಜ್ಜೆಯನ್ನಿರಿಸಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ವಿವರಿಸಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ಆಗಿದ್ದ ಹುಬ್ಬಳ್ಳಿಯ ಗದಗ ರಸ್ತೆಯ ಕೋಠಾರಿ ನಗರದ ನಿವಾಸಿ ವಿಜಯಕುಮಾರ ಮೋಹನರಾವ ಮಿರಿಯಾಲ, ಜನತಾ ಕಾಲನಿಯ ನಿವಾಸಿ ಚಂದ್ರಶೇಖರ ಕೊಟಿಲಿಂಗಮ್ ನೆರೆಲ್ಲಾ ಹಾಗೂ ಚಾಲುಕ್ಯ ನಗರದ ನಿವಾಸಿ ಸುನೀಲ ನರಸಿಂಹಲು ಮೋಕಾ ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಹಾಗೂ ಅಂದಾಜು 10.75 ಕೋಟಿ ರೂಪಾಯಿ ಮೌಲ್ಯದ 10.5 ಕೆಜಿ ಬಂಗಾರದ ಆಭರಣ ಹಾಗೂ ಕರಗಿಸಿದ ಬಂಗಾರ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳ ಪೈಕಿ ವಿಜಯಕುಮಾರ ಅದೇ ಬ್ಯಾಂಕ್‌ನ ಮ್ಯಾನೇಜರ್ ಆಗಿ ಕಳ್ಳತನಕ್ಕೂ ಕೆಲವ ದಿನ ಮುಂಚೆ ವರ್ಗವಾಗಿದ್ದರು. ಆರೋಪಿ ಚಂದ್ರಶೇಖರ ಕ್ಯಾಸಿನೋಗಳಲ್ಲಿ ಜೂಜಾಡುತ್ತಿದ್ದನು. ಅದಕ್ಕಾಗಿ ಈತ ಶ್ರೀಲಂಕಾದವರೆಗೂ ಹೋಗಿ ಬರುತ್ತಿದ್ದನು. ಇನ್ನು ಇವರಿಬ್ಬರಿಗೆ ಸುನೀಲ ಸಹಾಯಕನಾಗಿದ್ದು, ಬ್ಯಾಂಕ್ ಕಳ್ಳತನಕ್ಕಾಗಿ ತಿಂಗಳಾನುಗಟ್ಟಲೆ ಯೋಜನೆ ರೂಪಿಸಿದ್ದರು. ಇವರು ಫೆಬ್ರವರಿಯಿಂದಲೇ ರೂಪುರೇಷೆ ಸಿದ್ಧಪಡಿಸಿಕೊಂಡು, ಮಾರ್ಚ್ ಮತ್ತು ಏಪ್ರೀಲ್ ತಿಂಗಳಲ್ಲಿ ಒಟ್ಟು ಸೇರಿ ಗೂಢಾಲೋಚನೆ ನಡೆಸಿದ್ದರು. ಮೇ ತಿಂಗಳ 9 ಕ್ಕೆ ವರ್ಗಾವಣೆಯಾಗುವ ಮಾಹಿತಿ ಅರಿತ ಮ್ಯಾನೇಜರ್ ವಿಜಯಕುಮಾರ ಮೊದಲೇ ಬ್ಯಾಂಕ್‌ನ ಕೀಲಿಗಳನ್ನು ನಕಲಿಯಾಗಿ ಸಿದ್ಧಪಡಿಸಿಕೊಂಡಿದ್ದನು. ಹೊಸ ಅಧಿಕಾರಿ ಬಂದ ಮೇಲೆ ಕೃತ್ಯ ಎಸಗಿದರೆ ಸಂಶಯ ಬರುವುದಿಲ್ಲವೆಂದು ಅರಿತಿದ್ದರು. ಮೇ 23 ರಂದು ಆರ್‌ಸಿಬಿ ಹಾಗೂ ಹೈದ್ರಾಬಾದ್ ತಂಡದ ಐಪಿಎಲ್ ಪಂದ್ಯಾವಳಿ ಸಂದರ್ಭವೇ ಕೃತ್ಯ ಎಸಗಲು ಮುಹೂರ್ತ ನಿಗದಿಗೊಳಿಸಿದ್ದರು. ಆರ್‌ಸಿಬಿ ಗೆದ್ದರೆ ಸಂಭ್ರಮಾಚರಣೆ ಸಂದರ್ಭ ಗದ್ದಲದಲ್ಲಿಯೇ ಕಳ್ಳತನ ನಡೆಸುವ ಹುನ್ನಾರ ನಡೆಸಿದ್ದರು. ಆದರೆ, ಆರ್‌ಸಿಬಿ ತಂಡ ಸೋಲನುಭವಿಸಿದ ಹಿನ್ನೆಲೆ ಮುಹೂರ್ತ ಮುಂದೂಡಿದ್ದರು. ಮೇ 24 ರಂದು ಸಿಸಿ ಕ್ಯಾಮೆರಾ ತಿರುಗಿಸಿಟ್ಟಿದ್ದರಲ್ಲದೇ ಕೇಬಲ್ ಸಹ ಕಡಿತಗೊಳಿಸಿದ್ದರು. ಆದರೆ ಕಳ್ಳತನ ಮಾಡಲಾಗಲಿಲ್ಲ. ಹೀಗಾಗಿ ಮೇ 29ರಂದು ವ್ಯವಸ್ಥಿತವಾಗಿ ಮಾಟ ಮಂತ್ರ ಮಾಡಿಸಿ, ಖಾರದ ಪುಡಿ ಎರಚಿ, ನಕಲಿ ಕೀ ಬಳಸಿ ಕಳ್ಳತನ ನಡೆಸಿದ್ದಾರೆ. ಸಾಗಾಟಕ್ಕಾಗಿ ಲಾರಿ ಮತ್ತು ಬೈಕ್ ಸಹ ಬಳಸಿರುವುದು ತಿಳಿದು ಬಂದಿದೆ ಎಂದು ನಿಂಬರಗಿ ತಿಳಿಸಿದರು.

ಕಳ್ಳತನಕ್ಕಾಗಿ ಸಾಕಷ್ಟು ಮಾನಸಿಕ, ದೈಹಿಕ ತಯಾರಿ ಮಾಡಿಕೊಂಡಿದ್ದ ಕಳ್ಳರು ನೆಟ್‌ಫ್ಲಿಕ್ಸ್ ಸೇರಿದಂತೆ ಮುಂತಾದ ಕಡೆ ಸಿನೆಮಾಗಳನ್ನು ನೋಡಿದ್ದಾರೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಕಳ್ಳರು ಮಾಟ ಮಂತ್ರ ಮಾಡಿಸಿದ್ದನ್ನು ತಿಳಿದು ಅದನ್ನು ಅನುಸರಿಸಿದ್ದಾರೆ. ಶ್ವಾನದಳದ ದಿಕ್ಕು ತಪ್ಪಿಸಲು ಖಾರದ ಪುಡಿ ಎರಚಿದ್ದಾರೆ. ಇದೆಲ್ಲವನ್ನು ತಂಡ ಚುರುಕಿನ ಕಾರ್ಯಾಚರಣೆ ಮೂಲಕ ಕಂಡುಕೊಂಡಿದ್ದು, ಇನ್ನೊಂದು ಹಂತದ ತನಿಖೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ತನಿಖೆ ಪೂರ್ಣಗೊಳಿಸಿ ಕುತೂಹಲಗಳಿಗೆ ತೆರೆ ಎಳೆಯಲಾಗುವುದು ಎಂದು ಎಸ್‌ಪಿ ನಿಂಬರಗಿ ತಿಳಿಸಿರುತ್ತಾರೆ.