ವಿಟ್ಲ: 10 ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ 04.11.2015 ರಾತ್ರಿ ಹೊತ್ತು ಅತ್ಯಾಚಾರ ನಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ 218/2015 ಕಲಂ: 448,341,323, 376(G),506,34 ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಯಾದ ಬಿಹಾರ, ಪಾಟ್ನಾ ನಿವಾಸಿ ಬಬ್ಲೂ ಕುಮಾರ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಕೆಲ ತಿಂಗಳ ಬಳಿಕ ಜಾಮೀನು ಪಡೆದು ಹೊರಗಡೆ ಬಂದಿದ್ದ ಆರೋಪಿ ಬಬ್ಲೂ ಆಗ ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ಈ ಬಗ್ಗೆ ಹಲವು ಬಾರಿ ವಾರಂಟ್ ಜಾರಿಯಾಗಿ ಪೊಲೀಸರು ಸಾಕಷ್ಟು ಹುಡುಕಾಡಿದ್ದರೂ ಪತ್ತೆಯಾಗಿರಲಿಲ್ಲ. ಇದೀಗ ವಿಟ್ಲ ಠಾಣಾ ಪೊಲೀಸರ ತಂಡ ಬಿಹಾರದ ಪಾಟ್ನಾ ಜಿಲ್ಲೆಯ ಬೀಟಾ ಎಂಬಲ್ಲಿದ್ದ ಆರೋಪಿ ಬಬ್ಲೂನನ್ನು ಅಲ್ಲಿನ ಪೊಲೀಸರ ಸಹಕಾರದಲ್ಲಿ ವಶಕ್ಕೆ ಪಡೆದು ಕರೆತಂದಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
