ಮಂಗಳೂರು ಸ್ಮಾರ್ಟ್ ಸಿಟಿಯೋಜನೆಯಡಿ ಪಡೀಲ್ ಜಂಕ್ಷನ್ ನಿಂದ ಪಂಪ್ ವೆಲ್ ವರೆಗಿನ ಮುಖ್ಯರಸ್ತೆಯ ಅಗಲೀಕರಣ ಮತ್ತು ಕಾಂಕ್ರಟೀಕರಣ ಕಾಮಗಾರಿ ಕೆಲಸ ಕೈಗೊಂಡು ಹಲವು ವರುಷಗಳು ಕಳೆದರೂ ಈವರೆಗೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಮಿತಿ ಮೀರಿದ ಟ್ರಾಫೀಕ್ ಅಡಚಣೆಯಿಂದ ದಿನನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತ ಹಾಗೂ ಜಿಲ್ಲಾಡಳಿತ ಕೂಡಲೇ ಗಮನಹರಿಸಿ ರಸ್ತೆ ಕಾಮಗಾರಿ ಕೆಲಸದ ವೇಗ ಹೆಚ್ಚಿಸಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಒತ್ತಾಯಿಸಿದೆ.

ಪಡೀಲ್ ಜಂಕ್ಷನ್ ನಿಂದ ಪಂಪ್ ವೆಲ್ ವರೆಗಿನ ಮುಖ್ಯ ರಸ್ತೆ ಕಾಮಗಾರಿಯನ್ನು ಸ್ಮಾರ್ಟ್ ಸಿಟಿ ಕೈಗೆತ್ತಿಗೊಂಡು ಅಂದಾಜು ಮೂರು ವರುಷಗಳು ಕಳೆದಿದೆ. ಸುಮಾರು 26 ಕೋಟಿ ಮೌಲ್ಯದ 3 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಲು ವರ್ಷಾನುಗಟ್ಟಲೆ ತೆಗೆದುಕೊಂಡ ಈ ನಡೆ ಜನವಿರೋಧಿಯಾಗಿದೆ. ಕಾಮಗಾರಿ ಕೆಲಸ ಪ್ರಾರಂಭದಿಂದಲೇ ಆಮೆವೇಗದಿಂದ ಸಾಗುತ್ತಿದ್ದು 2022 ರ ಅಂತ್ಯದ ವೇಳೆಗೆ ಈ ರಸ್ತೆ ಪೂರ್ಣಗೊಳಿಸಬೇಕೆಂದಿದ್ದರೂ ಈವರೆಗೂ ಸಾಧ್ಯವಾಗದೆ ಇರೋದರ ಹಿಂದೆ ಪಾಲಿಕೆಯ ಬಿಜೆಪಿ ಆಡಳಿತದ ಬೇಜವಾಬ್ದಾರಿ ಮತ್ತು ಸ್ಥಳೀಯ ಶಾಸಕರ, ಜಿಲ್ಲೆಯ ಸಂಸದರ ಇಚ್ಚಾಸಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ದಿನನಿತ್ಯ ಪರದಾಡುತ್ತಿದ್ದು ಅವೈಜ್ಞಾನಿಕ ರೀತಿಯ ಕಾಮಗಾರಿಯಿಂದ ಗಂಟೆಗಟ್ಟಲೆ ಟ್ರಾಫೀಕ್ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಮಾತ್ರವಲ್ಲ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಸರಿಯಾದ ರಸ್ತೆ ಸೂಚಕ ಫಲಕಗಳನ್ನು ಅಳವಡಿಸದೆ ಇರೋದರಿಂದ ಅರ್ಧಕ್ಕೆ ನಿಂತಿರುವ ಕಾಮಗಾರಿ ಗುಂಡಿಗಳು, ಕಾಂಕ್ರೀಟಿನಿಂದ ಎದ್ದಿರುವ ಕಬ್ಬಿಣದ ಸರಳುಗಳು ಹಾಗೂ ರಸ್ತೆಯುದ್ದಕ್ಕೂ ಬಿದ್ದಿರುವ ಗುಂಡಿಗಳನ್ನು ಮುಚ್ಚದೆ ಇರುವ ಕಾರಣ ಹಲವು ಸವಾರರು ಅಪಘಾತಕ್ಕೊಳಗಾಗಿ ಜೀವಹಾನಿ ಸಂಭವಿಸಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಈ ಕೂಡಲೇ ಆಮೆವೇಗದಲ್ಲಿ ಸಾಗುತ್ತಿರುವ ಪಡೀಲ್ ಜಂಕ್ಷನ್ ನಿಂದ ಪಂಪ್ ವೆಲ್ ವರೆಗಿನ ರಸ್ತೆ ಕಾಮಗಾರಿ ಕೆಲಸವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಆವರೆಗೆ ಪರ್ಯಾಯ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಗುಂಡಿಗಳನ್ನು ಮುಚ್ಚಿ ಡಾಮರೀಕರಣಗೊಳಿಸಲು ಕ್ರಮಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪಾಲಿಕೆಯ ಬಿಜೆಪಿ ಆಡಳಿತದ ಮತ್ತು ಶಾಸಕ ವೇದವ್ಯಾಸ ಕಾಮತರ ಬೇಜವಾಬ್ದಾರಿ ನಡೆಯ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
