ಮಾದಕ ವಸ್ತು ಪಾರ್ಸಲ್ ಬಂದಿದ್ದು, ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ವಾಟ್ಸ್‌ಆಯಪ್ ವೀಡಿಯೋ ಕಾಲ್ ಮಾಡಿ, ನಾವು ಪೊಲೀರು ಎಂದು ಬೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ಬಿಹಾರ ಮೂಲದ ವಂಚಕ ಹರ್ದೀಪ್ ಸಿಂಗ್ ಎಂಬಾತನನ್ನು ಕಾರವಾರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಕಾರವಾರದ ವಿಲ್ಸನ್ ಫೆರ್ನಾಂಡಿಸ್‌ಗೆ ವೀಡಿಯೋ ಕರೆ ಮಾಡಿ ಹೆದರಿಸಿ 3.80 ಲಕ್ಷ ರೂ. ವಸೂಲಿ ಮಾಡಿದ್ದ ಈ ಆಸಾಮಿ. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಬಿಹಾರಕ್ಕೆ ಹೋದಾಗ ಪಾಟ್ನಾದ ಜಕನಪುರದಲ್ಲಿದ್ದ ಹರ್ದಿಪ್ ಸಿಂಗ್ ಸಿಕ್ಕಿಬಿದ್ದಿದ್ದ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 11 ರಾಜ್ಯಗಳಲ್ಲಿ ಸರಿ ಸುಮಾರು 30ಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣ ಈತ ಮೇಲೆ ದಾಖಲಾಗಿವೆ.

ತಮಿಳುನಾಡಿನಲ್ಲಿ 9.9 ಕೋ. ರೂ. ವಂಚನೆ, ಆಂಧ್ರಪ್ರದೇಶ 2.47 ಕೋ.ರೂ. ವಹಿವಾಟು, ಬೆಂಗಳೂರಿನ ಮಾರತ್‌ಹಳ್ಳಿಯ ವ್ಯಕ್ತಿಗೆ 80 ಲಕ್ಷ ರೂಪಾಯಿ, ಪುಲಕೇಶಿನಗರದ ವ್ಯಕ್ತಿಗೆ 74.60 ಲಕ್ಷ ರೂಪಾಯಿ, ಸಹಿತ ಹಲವು ಕಡೆ 41 ಕೋಟಿಗೂ ಮಿಕ್ಕ ವಂಚನೆ ನಡೆಸಿರುವುದು ದೃಢಪಟ್ಟಿದೆ. ಈತನ ಬಳಿ ಬ್ಯಾಂಕ್‌ಗಳಲ್ಲಿ 8 ಉಳಿತಾಯ ಖಾತೆ ಮತ್ತು 2 ಚಾಲ್ತಿ ಖಾತೆ ಪತ್ತೆಯಾಗಿವೆ.
