ಗ್ರಾ.ಪಂ.ಗೂ ವಿಸ್ತರಣೆಗೆ ಚಿಂತನೆ; ರಾಜ್ಯ ಕಂದಾಯ ಇಲಾಖೆಯ ಭೂ ಸುರಕ್ಷಾ ಯೋಜನೆ ಹೊಸ ಮೈಲಿಗಲ್ಲು
ಇನ್ನು ಮುಂದೆ ಭೂ ದಾಖಲೆಗಳ ದೃಢೀಕೃತ ನಕಲು ನಿಮಗೆ ಸಿಗುವುದಿಲ್ಲ. ಕೈ ಬರಹದ ಭೂ ದಾಖಲೆಗಳಿಗೆ ವಿದಾಯ ಹೇಳಲಾಗಿದೆ. ಇನ್ನು ಮುಂದೆ ಎಲ್ಲವೂ ಡಿಜಿಟಲ್ ಮಯ.
ಕಂದಾಯ ಇಲಾಖೆ ಕೈಬರಹದ ಭೂ ದಾಖಲೆ ನೀಡುವ ವ್ಯವಸ್ಥೆಗೆ ತೀಲಾಂಜಲಿ ನೀಡಿದ್ದು, ಡಿಜಿಟಲ್ ರೂಪದಲ್ಲೇ ದಾಖಲೆಗಳ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಇನ್ನು ಮುಂದೆ ಎ ಮತ್ತು ಬಿ ವರ್ಗದ ಭೂ ದಾಖಲೆಗಳನ್ನು ಸಾಂಪ್ರದಾಯಿಕ ದೃಢೀಕೃತ ನಕಲು ಪ್ರತಿ ಅಥವಾ ಕೈ ಬರಹದ ಮೂಲಕ ನೀಡುವ ಬದಲಾಗಿ ಡಿಜಿಟಲ್ ರೂಪದಲ್ಲಿಯೇ ನೀಡಲಿದೆ.

ಭೂಸುರಕ್ಷಾ ಯೋಜನೆಯಡಿ ಡಿಜಿಟಲೀಕರಿಸಿರುವ ಆಸ್ತಿ ಗಳ ದಾಖಲೆಗಳನ್ನು ಈಗಾಗಲೇ ಆನ್ಲೈನ್ ಮೂಲಕ ವಿತರಿಸಲಾ ಗುತ್ತಿದ್ದು, ಇನ್ನು ಮುಂದೆ ಹೋಬಳಿ ಮಟ್ಟದಲ್ಲಿರುವ ನಾಡ ಕಚೇರಿಗಳಲ್ಲಿ ರುವ ಅಟಲ್ ಜೀ ಜನಸ್ನೇಹಿ ಕೇಂದ್ರ (ಎಜೆಎಸ್ಕೆ)ಗಳಲ್ಲೂ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ರಾಜ್ಯದ 240 ತಹಶೀಲ್ದಾರ್ ಕಚೇರಿಗಳಲ್ಲಿ ಡಿಜಿಟಲ್ ದಾಖಲೆಗಳನ್ನು ನೀಡಲಾಗುತ್ತಿದೆ. ಇದೀಗ ರಾಜ್ಯದಲ್ಲಿರುವ 700 ಕ್ಕೂ ಮಿಕ್ಕ ಅಟಲ್ ಜನಸ್ನೇಹಿ ಕೇಂದ್ರ (ನಾಡಕಚೇರಿ) ಗಳಿಗೆ ವಿಸ್ತರಣೆಗೊಂಡಿದೆ. ಈಗಾಗಲೇ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರಕಾರದ ವತಿಯಿಂದ ಲ್ಯಾಪ್ ಟಾಪ್ ವಿತರಣೆ ಕೂಡ ನಡೆದಿದೆ.
ದಾಖಲೆಗಳಿಗಾಗಿ ಜನ ಅಲೆದಾಡುವು ದನ್ನು ತಪ್ಪಿಸಲು ಈ ಯೋಜನೆ ಜಾರಿಗೊಳಿಸ ಲಾಗಿದೆ. ಇದರಡಿ ಈಗಾಗಲೇ 32.64 ಕೋಟಿ ದಾಖಲೆಗಳ ಸ್ಕ್ಯಾನ್ ಮಾಡಲಾಗಿದೆ. ಇದರ ಮುಂದಿನ ಹಂತವಾಗಿ ಅರ್ಜಿ ಸಲ್ಲಿಸಿದವರಿಗೆ ಆನ್ಲೈನ್ನಲ್ಲೇ ಅವರಿದ್ದಲ್ಲಿಗೆ ತಲುಪಿಸುವ ಕೆಲಸ ಕೂಡ ಈ ತಿಂಗಳಿನಿಂದ ಆರಂಭವಾಗಿದೆ. ಈಗಾಗಲೇ ಸುಮಾರು ಎರಡು ಲಕ್ಷ ದಾಖಲೆ ಗಳ ಪುಟಗಳನ್ನು ಆನ್ಲೈನ್ ಮೂಲಕ ಜನರಿಗೆ ವಿತರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಗೊತ್ತಿಲ್ಲದವರಿಗೂ ಈ ಡಿಜಿಟಲ್ ದಾಖಲೆಗಳನ್ನು ತಲುಪಿಸಲು ಈಗ ನಾಡ ಕಚೇರಿಗಳಲ್ಲಿ ಎಜೆಎಸ್ಕೆ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜನ ಈ ಕೇಂದ್ರಗಳಿಗೆ ಭೇಟಿ ನೀಡಿ ನೇರವಾಗಿ ದಾಖಲೆ ಪಡೆಯಬಹುದಾಗಿದೆ ಎಂದು ಭೂ ಸುರಕ್ಷಾ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಅನಂತರ ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ಗ್ರಾ.ಪಂ.ಗೂ ವಿಸ್ತರಣೆ
ನಾಡ ಕಚೇರಿಗಳಲ್ಲಿ ಉತ್ತಮ ಸ್ಪಂದನೆ ದೊರೆತರೆ, ಮುಂಬರುವ ದಿನಗಳಲ್ಲಿ ಈ ಸೇವೆಗಳನ್ನು ಗ್ರಾ.ಪಂ. ಮಟ್ಟಕ್ಕೂ ವಿಸ್ತರಿಸಲು ರಾಜ್ಯ ಕಂದಾಯ ಇಲಾಖೆ ಮುಂದಾಗಿದೆ. ಅಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ಗಳ ಮೂಲಕ ಜನ ಡಿಜಿಟಲ್ ದಾಖಲೆಗಳನ್ನು ಪಡೆಯಬಹುದಾಗಿದೆ. ರೆಕಾರ್ಡ್ ರೂಂ ಮತ್ತಿತರ ಕಡೆಗಳಲ್ಲಿ ದಾಖಲೆಗಳಿಗಾಗಿ ಅಲೆದಾಡುವುದನ್ನು ತಪ್ಪಿಸಿ, ತಮ್ಮ ಆಸ್ತಿಯ ದಾಖಲೆಗಳನ್ನು ತಾವೇ ಬೆರಳತುದಿಯಲ್ಲಿ ಪಡೆಯುವಂತೆ ಮಾಡುವುದು ಯೋಜನೆಯ ಮೂಲ ಆಶಯವಾಗಿದೆ.
