ಜೆನ್ ಝೀ ‘ಪವರ್’ ಪತರುಗುಟ್ಟಿದ ಮೋ-ಶಾ ಸಾಮ್ರಾಜ್ಯ.. ನಮೋ ಸರಕಾರ ಮೆರೆದಾಡಲು ಕಾಂಗ್ರೆಸ್ ವೈಫಲ್ಯವೂ ಕಾರಣ

ರಾಷ್ಟ್ರೀಯ

ಜೆನ್ ಝೀ ಕ್ರಾಂತಿಕಾರಿ ಹೋರಾಟ ಕಾಂಗ್ರೆಸ್ಸಿಗೊಂದು ಪಾಠವಾಗಲಿ.. ಕಾಂಗ್ರೆಸ್ ನಲ್ಲಿ ಯುವಶಕ್ತಿ ಮೊಳಗಲಿ.!

ಆನೆ ನಡೆದದ್ದೇ ದಾರಿ, ಯಾರೂ ಬಗ್ಗಿಸಲು ಸಾಧ್ಯವಿಲ್ಲ ಅನ್ನುವ ಅಹಂ ನಲ್ಲಿದ್ದ ಮೋ-ಶಾ ಸಾಮ್ರಾಜ್ಯವನ್ನು ತಕ್ಕಮಟ್ಟಿಗೆ ಬಗ್ಗಿಸುವಲ್ಲಿ ತುಂಟ ಜಿರಳೆಗಳಿಗೆ ಸಾಧ್ಯವಾಗಿದೆ. ಕಳೆದ ಹನ್ನೆರಡು ವರ್ಷಗಳಿಂದ ನಮ್ಮ ಸರಕಾರ ರಾಜೀನಾಮೆ ನೀಡುವ ಸರಕಾರವಲ್ಲ ಎಂದು ಲಂಗು ಲಗಾಮಿಲ್ಲದೆ ಚಲಿಸುತ್ತಿದ್ದ ಸರಕಾರಕ್ಕೆ ಬ್ರೇಕ್ ಹಾಕುವಲ್ಲಿ ನಿನ್ನೆ ಮೊನ್ನೆ ಹುಟ್ಟಿದ ಆನ್ ಲೈನ್ ಜಿರಳೆಗಳಿಗೆ ಸಾಧ್ಯವಾಗುವುದಾದರೆ ನೂರಾರು ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷವೊಂದಕ್ಕೆ ಆಡಳಿತಾರೂಢರ ಹುಳುಕುಗಳನ್ನು ಎತ್ತಿ ತೋರಿಸಲು ಏಕೆ ಸಾಧ್ಯವಾಗುತ್ತಿಲ್ಲ ಅನ್ನುವುದೇ ಯಕ್ಷಪ್ರಶ್ನೆ. ನಮೋ ಸರ್ಕಾರವನ್ನು ಬಗ್ಗುಬಡಿದ ಕಾಕ್ರೋಚ್ ಕ್ರಾಂತಿಕಾರಿ ಹೋರಾಟ ವಿರೋಧ ಪಕ್ಷವಾದ ಕಾಂಗ್ರೆಸ್ ಗೂ ಕೂಡ ಒಂದು ಪಾಠವಾಗಿದೆ ಅನ್ನುವುದು ನೂರಕ್ಕೆ ನೂರು ಸತ್ಯ.

ಎಲ್ಲವೂ ಮುಗಿದ ಮೇಲೆ ನಿದ್ದೆಯಿಂದ ಎದ್ದೇಳುವುದು ಕಾಂಗ್ರೆಸ್ ನ ಹಳೆಯ ಚಾಳಿ. ಯಾರೋ ಉಣಬಡಿಸಿದ್ದನ್ನು ಕುಳಿತಲ್ಲೇ ಉಣ್ಣುವುದು ಕಾಂಗ್ರೆಸ್ ಜಾಯಮಾನ. ಅಧಿಕಾರಕ್ಕೆ ಕಷ್ಟಪಡುವುದು ಕಾಂಗ್ರೆಸ್ ಗೆ ಬೇಕಿಲ್ಲ. ಹೋರಾಟ ಮರೆತು ದಶಕಗಳೇ ಕಳೆದಿವೆ. ಇನ್ನು ಇಂದಿರಾಜಿಯ ಗುಂಗಿನಲ್ಲೇ ಕಾಲ ಕಳೆಯುತ್ತಿರುವ ಕಾಂಗ್ರೆಸ್ ಗೆ ಜೆನ್ ಝೀ ಕ್ರಾಂತಿಕಾರಿ ಹೋರಾಟ ಮತ್ತೆ ಎದ್ದೇಳಲು ಸುವರ್ಣಾವಕಾಶ. ಆದರೆ ಇದನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿದೆ ಅನ್ನುವುದೇ ಇದೀಗ ಎದ್ದಿರುವ ಪ್ರಶ್ನೆ. ಹಳ್ಳಿಯಿಂದ ದಿಲ್ಲಿ ವರೆಗೆ 75 ದಾಟಿದ ವಯೋವೃದ್ಧರನ್ನೇ ಬಗಲಲ್ಲಿಟ್ಟು, ಯುವಕರಿಗೆ ಅವಕಾಶ ನೀಡದೆ ಮೋದಿ ಸಾಮ್ರಾಜ್ಯವನ್ನು ಮಣಿಸುತ್ತೇವೆ ಅನ್ನುವ ಹಗಲು ಕನಸು ಕಾಣುತ್ತಿರುವುದು ಕಾಂಗ್ರೆಸ್ ಪಕ್ಷದ ದೊಡ್ಡ ದುರಂತ. ಯುವ ಜನತೆಯ ಹೃದಯ ಗೆಲ್ಲದೆ ಕಾಂಗ್ರೆಸ್ ಅಧಿಕಾರದ ಸನಿಹ ಬರುವುದಕ್ಕೂ ಸಾಧ್ಯವೇ ಇಲ್ಲ ಅನ್ನುವ ಸತ್ಯವನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.

ಕಳೆದ ಹನ್ನೆರಡು ವರ್ಷಗಳಿಂದ ಕೇಂದ್ರದಲ್ಲಿ ಮೋದಿ ಸರಕಾರ ಮೆರೆದಾಡಲು ಪರೋಕ್ಷವಾಗಿ ಕಾಂಗ್ರೆಸ್ ವೈಫಲ್ಯ ಕೂಡ ಕಾರಣ ಅಂದರೂ ತಪ್ಪಾಗಲ್ಲ. ಕೇಂದ್ರದ ಮೋದಿ ಸರಕಾರದ ವೈಫಲ್ಯದ ವಿರುದ್ಧ ಜನಾಭಿಪ್ರಾಯ ರೂಪಿಸಲು ವಿರೋಧ ಪಕ್ಷವಾಗಿ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬರೇ ಭಾರತ್ ಜೋಡೋ ಹೆಸರಿನಲ್ಲಿ ದೇಶದಾದ್ಯಂತ ನಡಿಗೆ ಆರಂಭಿಸಿದ್ದು ಬಿಟ್ಟರೆ ಇಡೀ ಪಕ್ಷ ಅವರ ಜೊತೆ ನಿಲ್ಲಲಿಲ್ಲ. ಕಾಂಗ್ರೆಸ್ ಆಯಕಟ್ಟಿನ ಜಾಗದಲ್ಲಿ ಅದು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ವಯೋವೃದ್ಧರನ್ನೇ ಬಗಲಲ್ಲಿಟ್ಟು ಕೊಂಡಿದೆಯೇ ವಿನಃ ಯುವ ಸಮೂಹವನ್ನು ಕಾಂಗ್ರೆಸ್ ಪಕ್ಷದಲ್ಲಿ ಸಮಾನ ಅವಕಾಶ ನೀಡದೇ ಇರುವುದು ಅದರ ಮತ್ತೊಂದು ವೈಫಲ್ಯ. ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಳ್ಳಲು ಕಾಂಗ್ರೆಸ್ ಪಕ್ಷದಲ್ಲೂ ಅಂತಹ ಅವಕಾಶ ಇಲ್ಲ. ಇದರಿಂದಾಗಿ ಯುವ ಜನತೆ ಆಮ್ ಆದ್ಮಿ, ಕಾಕ್ರೋಚ್ ಜನತಾ ಪಾರ್ಟಿ ಕಡೆಗೆ ಒಲವು ತೋರಲು ಕಾರಣವಾಗಿದೆ. ಕಾಂಗ್ರೆಸ್ ನಿದ್ದೆಯಿಂದ ಎದ್ದೇಳದೆ, ಜೆನ್ ಝೀ ಹೃದಯ ಗೆಲ್ಲಲಾಗದೇ ಈಗಲೂ ಇಂದಿರಾ ಗಾಂಧಿ ಎಂದು ಕನವರಿಸುತ್ತಲೇ ಇರುವುದರಿಂದ ಆಡಳಿತ ಪಕ್ಷದ ವಿರುದ್ಧದ ಜನಾಕ್ರೋಶವನ್ನು ಎನ್ ಕ್ಯಾಶ್ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.

ಕಾಕ್ರೋಚ್ ಜನತಾ ಪಾರ್ಟಿ ಅನ್ನುವುದು ಕಳೆದ ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಉದಯಿಸಿರುವಂತದ್ದು. ಇವತ್ತಿನ ಕಾಲಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಂಡು ಸಾಮಾನ್ಯ ವ್ಯಕ್ತಿಯಾಗಿದ್ದ ಅಭಿಜಿತ್ ದೀಪ್ತೆ ಮತ್ತವರ ಸಂಗಡಿಗರು ದೊಡ್ಡದಾದ ಹಂಗಾಮ ನಡೆಸಲು ಯಶಸ್ವಿಯಾದರು. ಕಳೆದ ಹನ್ನೆರಡು ವರ್ಷಗಳಿಂದ ಮೋದಿ ಸರಕಾರದ ಒಬ್ಬನೇ ಒಬ್ಬ ಸಚಿವರನ್ನು ಮುಟ್ಟಲು ವಿರೋಧ ಪಕ್ಷಕ್ಕೆ ಸಾಧ್ಯವಾಗಿಲ್ಲ. ರೈತರ ಆತ್ಮಹತ್ಯೆ ಪ್ರಕರಣ, ಇವಿಎಂ, ಭ್ರಷ್ಟಾಚಾರ ಸೇರಿದಂತೆ ಹತ್ತಾರು ಸಮಸ್ಯೆಗಳು ದೇಶದಲ್ಲಿ ತಾಂಡವವಾಡುತ್ತಿದ್ದರೂ ಒಂದು ಶಕ್ತಿಶಾಲಿ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ಎಡವಿದೆ. ಆದರೆ ಆನ್ ಲೈನ್ ನಲ್ಲಿ ಹುಟ್ಟಿದ ತುಂಟ ಜಿರಳೆಗಳು ಮೋದಿ ಸರಕಾರದ ಅತ್ಯಾಪ್ತ ಸಚಿವರೊಬ್ಬರನ್ನು ರಾಜೀನಾಮೆ ನೀಡಲು ಯಶಸ್ಸು ಕಂಡಿರುವುದು ಜೆನ್ ಝೀ ಪವರ್ ಮುಂದೆ ನಮೋ ಸರಕಾರ ಮಂಡಿಯೂರಿದ್ದು ವಿರೋಧ ಪಕ್ಷಗಳಿಗೂ ದೊಡ್ಡದೊಂದು ಪಾಠವಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪರ ಗಟ್ಟಿ ಧ್ವನಿಯಲ್ಲಿ ನಿಂತು ಶಿಕ್ಷಣ ಸಚಿವರನ್ನು ಸಂಪುಟದಿಂದ ಕೈಬಿಡಲು ಹೋರಾಟ ಮಾಡುವ ಅವಕಾಶ ಇದ್ದರೂ ಕೈ ಚೆಲ್ಲಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಯುವ ಘಟಕ, ಎನ್ ಎಸ್ ಯು ಐ ರಂತಹ ಘಟಕವಿದ್ದರೂ ಅದು ಮದುವೆ, ಮುಂಜಿ, ತಿಥಿಗಷ್ಟೇ ಸೀಮಿತವಾಗಿದೆ. ವಿದ್ಯಾರ್ಥಿಗಳ ಪರ ಗಟ್ಟಿ ಧ್ವನಿ ಮೊಳಗಿಸುವಲ್ಲಿ ವಿಫಲವಾಗಿದೆ. ಕಾಕ್ರೋಚ್ ಜನತಾ ಪಾರ್ಟಿಯ ರಣ ಹೋರಾಟ ಬಿಜೆಪಿಗೊಂದು ಎಚ್ಚರಿಕೆ ಗಂಟೆಯಾದರೆ, ಕಾಂಗ್ರೆಸ್ ಗೊಂದು ಪಾಠ ಕಲಿಸುವಂತಿದೆ.