2017 ರಲ್ಲಿ ಹಕ್ಕುಪತ್ರ ವಿತರಿಸಿ, ಈವರೆಗೂ ಜಮೀನು ಸ್ವಾಧೀನ ನೀಡದ ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ ಮನೆ ನಿವೇಶನ ವಂಚಿತರು, ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗ ಧರಣಿ ನಡೆಸಿದರು. ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಹಕ್ಕು ಪತ್ರ ವಿತರಿಸಿ ನಿವೇಶನ ಸ್ವಾಧೀನ ನೀಡದೆ ಸತಾಯಿಸುವುದು ಅಮಾನವೀಯ ನಡೆ, ಇದು ಬಡವರ ಕುರಿತಾದ ಅನಾದಾರವನ್ನು ತೋರಿಸುತ್ತದೆ. ಕಳೆದ ಮೇ ತಿಂಗಳಲ್ಲಿ ನಡೆಸಿದ ಅನಿರ್ದಿಷ್ಟಾವಧಿ ಧರಣಿಯ ಸಂದರ್ಭ ಮೂರು ತಿಂಗಳ ಒಳಗಡೆ ಗುರುತಿಸಲಾಗಿರುವ ಬದಲಿ ಜಮೀನು ವಿತರಿಸುವುದಾಗಿ ನೀಡಿದ ಭರವಸೆಯನ್ನು ಜಿಲ್ಲಾಡಳಿತ ಮರೆತು ಬಿಟ್ಟಿದೆ. ಇದು ನಿರ್ಲಜ್ಜ ವಂಚನೆ, ಹಕ್ಕು ಪತ್ರ ಪಡೆದಿರುವ ಎಲ್ಲಾ 80 ಸಂತ್ರಸ್ತ ಕುಟುಂಬಗಳಿಗೂ ನಿವೇಶನ ದೊರಕದೆ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ಆ ಸಂದರ್ಭ ಮಂಗಳೂರು ತಾಲೂಕು ತಹಶೀಲ್ದಾರ್ ಟಿ. ರಮೇಶ್ ಬಾಬು ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಈಗ ಕಾದಿರಿಸಿದ ಜಮೀನಿನ ಒಡೆತನಕ್ಕೆ ಸಂಬಂಧಿಸಿ ವ್ಯಾಜ್ಯ ಇದ್ದು, ಒಂದಿಷ್ಟು ಕಾಲಾವಕಾಶ ಕೋರಿದರು. ಈ ಸಂದರ್ಭ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿ ತಕ್ಷಣವೆ ನಿವೇಶನ ಸ್ವಾಧೀನ ನೀಡುವಂತೆ ಆಗ್ರಹಿಸಿದರು. ಪಂಚಾಯತ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ತಹಶೀಲ್ದಾರ್, ವಾರದ ಒಳಗಡೆ ಪರ್ಯಾಯ ಜಮೀನು ಗುರುತಿಸಿ, ಜನವರಿ 15 ರ ಒಳಗಡೆ ಹಕ್ಕು ಪತ್ರ ಪಡೆದಿರುವ ನಿವೇಶನ ರಹಿತರಿಗೆ ವಿತರಿಸಲು ಪಂಚಾಯತ್ ಗೆ ಹಸ್ತಾಂತರಿಸುವುದಾಗಿ ಸ್ಪಷ್ಟ ಭರವಸೆ ನೀಡಿದರು. ತಹಶೀಲ್ದಾರ್ ರವರ ಈ ಭರವಸೆಗೆ ಧರಣಿ ನಿರತರು ಒಪ್ಪಿಗೆ ಸೂಚಿಸಿದರು. ಈ ಕುರಿತು ಕ್ರಮಗಳು ನಿಧಾನಗೊಂಡಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸುವಾದಾಗಿ ಎಚ್ಚರಿಸಿ, ಧರಣಿಯನ್ನು ಮುಕ್ತಾಯಗೊಳಿಸಿದರು.

ನಿವೇಶನ ರಹಿತರ ಹೋರಾಟ ಸಮಿತಿ, ಕುಪ್ಪೆಪದವು ಇದರ ಸಂಚಾಲಕರಾದ ವಸಂತಿ ಕುಪ್ಪೆಪದವು ಪ್ರಾಸ್ತಾವಿಕವಾಗಿ ಮಾತಾಡಿದರು. ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ಕಾರ್ಮಿಕ ಮುಖಂಡರಾದ ನೋಣಯ್ಯ ಗೌಡ, ಸಾಮಾಜಿಕ ಕಾರ್ಯಕರ್ತರಾದ ಬಾವ ಪದರಂಗಿ, ಹೋರಾಟ ಸಮಿತಿಯ ಪ್ರಮುಖರಾದ ಕುಸುಮ, ಸಾಲಿ, ಹಸನಬ್ಬ, ಮುಸ್ತಫಾ, ಮುನೀರ್ ಕುಪ್ಪೆಪದವು, ಮಜೀದ್, ಭವಾನಿ, ಜಮೀಲಾ, ಮತ್ತಿತರರು ಉಪಸ್ಥಿತರಿದ್ದರು.
