ಉಡುಪಿ: ಬಿಜೆಪಿ ಪಟ್ಟಿ ಬಹುತೇಕ ಫೈನಲ್; ಹಿಂದುತ್ವದ ಪ್ರಬಲ ಪ್ರತಿಪಾದಕ ಯಶ್’ಪಾಲ್,ಆರ್ ಎಸ್ ಎಸ್ ಪ್ರಚಾರಕ ಗುರುರಾಜ್ ಗೆ ಟಿಕೆಟ್.!

ಕರಾವಳಿ

ಸುನೀಲ್ ಕುಮಾರ್ ಹೊರತುಪಡಿಸಿ ಹಾಲಿ ನಾಲ್ವರು ಶಾಸಕರಿಗೆ ಕೈ ಕೊಟ್ಟ ಬಿಜೆಪಿ.!

ಹೇಳಿ ಕೇಳಿ ಉಡುಪಿ ಸಂಘ ಪರಿವಾರದ ಭದ್ರಕೋಟೆ. ಬಿಜೆಪಿಯ ನೆಚ್ಚಿನ ತಾಣ. ಇಲ್ಲಿ ಕಾಂಗ್ರೆಸ್ಸಿನದ್ದು ಶೂನ್ಯ ಸಾಧನೆ. ಕಳೆದ ಚುನಾವಣೆಯಲ್ಲಿ ಉಡುಪಿಯ ಎಲ್ಲಾ ಕ್ಷೇತ್ರಗಳು ಬಿಜೆಪಿಯ ಪಾಲಾಗಿತ್ತು. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಠಾತ್ ರಾಜಕೀಯ ನಿವೃತ್ತಿ ಘೋಷಣೆ ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗೆ ಬುಡ ಅಲ್ಲಾಡಿದರೂ ಬಿಜೆಪಿ ಹೈಕಮಾಂಡ್ ಹಾಗೂ ಆರ್ ಎಸ್ ಎಸ್ ಅದಕ್ಕೆಲ್ಲ ತೇಪೆ ಹಚ್ಚಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಮಾಡಿದೆ. ಏಪ್ರಿಲ್ 8 ಕ್ಕೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಉಡುಪಿಯ ಬಹುತೇಕ ಟಿಕೆಟ್ ಫೈನಲ್ ಆದಂಗಿದೆ. ಅಧಿಕೃತ ಘೋಷಣೆಯೊಂದಷ್ಟೇ ಬಾಕಿ ಉಳಿದಿದೆ.

ಬಿಜೆಪಿ ಉಡುಪಿಯ ಮಟ್ಟಿಗೆ ಕೆಲವೊಂದು ಮಹತ್ವದ ಹಾಗೂ ಅಚ್ಚರಿದಾಯಕ ತೀರ್ಮಾನಕ್ಕೆ ಮುಂದಾಗಿದ್ದು, ಹಾಲಿ ಐವರು ಶಾಸಕರ ಪೈಕಿ ನಾಲ್ವರು ಶಾಸಕರನ್ನು ಬದಲಾಯಿಸುವ ಶಾಕಿಂಗ್ ತೀರ್ಮಾನಕ್ಕೆ ಬಂದಿದೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ನಿನ್ನೆಯಷ್ಟೇ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಯವರನ್ನು ಬಿಜೆಪಿ ಕೈ ಬಿಟ್ಟು ಯಂಗ್ ಅಂಡ್ ಡೈನಾಮಿಕ್ ರೀತಿಯ ವ್ಯಕ್ತಿಗಳಿಗೆ ಟಿಕೆಟ್ ಕೊಡುವ ತೀರ್ಮಾನಕ್ಕೆ ಬಿಜೆಪಿ ಮುಂದಾಗಿದೆ.

ಉಡುಪಿ ಕ್ಷೇತ್ರದಲ್ಲಿ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಲು ನಿರ್ಧರಿಸಿದೆ. ಹಲವಾರು ವಿವಾದಗಳಲ್ಲಿ ಸಿಲುಕಿದ್ದ ರಘುಪತಿ ಭಟ್ಟರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಅವರ ಸ್ಥಾನಕ್ಕೆ ಮೊಗವೀರ ಸಮುದಾಯದ ಯಂಗ್ ಅಂಡ್ ಡೈನಾಮಿಕ್, ಹಿಂದುತ್ವದ ಪ್ರಬಲ ಪ್ರತಿಪಾದಕ ಯಶ್ ಪಾಲ್ ಸುವರ್ಣ ರಿಗೆ ಟಿಕೆಟ್ ಫೈನಲ್ ಆಗಿದೆ. ಹಿಜಾಬ್ ವಿವಾದದ ಮೂಲಕ ರಾಜ್ಯ, ದೇಶದಾದ್ಯಂತ ಸುದ್ಧಿಯಾಗಿದ್ದ ಯಶ್ ಪಾಲ್ ಸುವರ್ಣ ರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡುವ ಮೂಲಕ ತಾವು ಹಿಂದುತ್ವದ ಪರ ಎಂದು ಬಿಂಬಿಸಿಕೊಳ್ಳಲು ಮುಂದಾಗಿದೆ.

ಇನ್ನು ಕಾರ್ಕಳದಲ್ಲಿ ಬಿಲ್ಲವ ಸಮುದಾಯದ ಸುನೀಲ್ ಕುಮಾರ್ ರಿಗೆ ಟಿಕೆಟ್ ಫೈನಲ್ ಆಗಿದ್ದು, ಕುಂದಾಪುರದಲ್ಲಿ ಹಾಲಾಡಿ ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಅದರಂತೆ ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿ ಗೆ ಟಿಕೆಟ್ ಕನ್ಫರ್ಮ್ ಆಗಿದೆ.

ಕಾಪು ಕ್ಷೇತ್ರಕ್ಕೆ ಹಾಲಿ ಶಾಸಕ ಲಾಲಾಜಿ ಮೆಂಡನ್ ರಿಗೆ ಬಿಜೆಪಿ ಕೈ ಕೊಡಲಿದ್ದು ಆ ಕ್ಷೇತ್ರದಲ್ಲಿ ಬಂಟ ಸಮುದಾಯದ, ಹೋಟೆಲ್ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಯವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಗುರ್ಮೆ ಫೌಂಡೇಶನ್ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸುರೇಶ್ ಶೆಟ್ಟಿ ಯವರನ್ನು ಕಾಂಗ್ರೆಸ್ ನ ವಿನಯ್ ಕುಮಾರ್ ಸೊರಕೆ ಎದುರು ಪ್ರಬಲ ಸ್ಪರ್ಧಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದೆ.

ಬೈಂದೂರಿನಲ್ಲಿ ಬಿಜೆಪಿ ಅಚ್ಚರಿಯ ಪ್ರಯೋಗಕ್ಕೆ ಮುಂದಾಗಿದ್ದು, ಹಾಲಿ ಶಾಸಕ ಸುಕುಮಾರ ಶೆಟ್ಟಿ ಬದಲು ಅವರದೇ ಸಮುದಾಯಕ್ಕೆ ಸೇರಿದ ಆರ್ ಎಸ್ ಎಸ್ ಪ್ರಚಾರಕ ಗುರುರಾಜ್ ಗಂಟಿಹೊಳೆ ಯವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಆರ್ ಎಸ್ ಎಸ್ ಪೂರ್ಣಾವಧಿ ಕಾರ್ಯಕರ್ತರಾಗಿರುವ ಗುರುರಾಜ್ ಗೆ ಟಿಕೆಟ್ ನೀಡುವ ಮೂಲಕ ಕರಾವಳಿ ಭಾಗದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರನ್ನು ಬಿಜೆಪಿ ಪರ ಪ್ರಚಾರಕ್ಕೆ ಸಂಪೂರ್ಣ ತೊಡಗಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ.

ಬಿಜೆಪಿ ಏಪ್ರಿಲ್ 8 ರಂದು ಅಧಿಕೃತವಾಗಿ ಪಟ್ಟಿ ಬಿಡುಗಡೆಗೊಳಿಸಲಿದ್ದು, ಆದರೆ ಉಡುಪಿಯ ಮಟ್ಟಿಗೆ ಇದೇ ಪಟ್ಟಿ ಫೈನಲ್ ಎಂಬುದಾಗಿ ಬಿಜೆಪಿ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ ‌ ಇದೇ ಪಟ್ಟಿ ಫೈನಲ್ ಆದರೆ ಉಡುಪಿಯಲ್ಲಿ ಹಾಲಿ ನಾಲ್ವರು ಶಾಸಕರನ್ನು ಬದಲಾಯಿಸಿ ಗಟ್ಟಿತನದ ನಿರ್ಧಾರ ತೆಗೆದುಕೊಂಡ ಖ್ಯಾತಿ ಬಿಜೆಪಿಗೆ ದೊರೆಯಲಿದೆ.