ಕಮೀಷನರ್ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳ ಮೂಲ ಬೇರು ಪತ್ತೆ ಹಚ್ಚಿ ಕಂಬಿ ಹಿಂದೆ ತಳ್ಳುತ್ತಿದೆ ಪೊಲೀಸ್ ಇಲಾಖೆ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಬಿಲ್ಡಿಂಗ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಅಗಸ್ಟ್ 29 ರಂದು ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ ಅನಾಮಿಕ ವ್ಯಕ್ತಿಯೊಬ್ಬ ಟರ್ಮಿನಲ್ ಬಿಲ್ಡಿಂಗ್ ನ್ನು ಖಾಲಿ ಮಾಡಬೇಕು ಇಲ್ಲವಾದರೆ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದ, ಕರೆ ಬಂದ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಇದರ ಡ್ಯೂಟಿ ಟರ್ಮಿನಲ್ ಮ್ಯಾನೇಜರ್, ಬಜಪೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಮೊಕದ್ದಮೆ ಸಂಖ್ಯೆ: 156/2025 ಕಲಂ:- 351(2), 351(3) BNS U/s:- 3(1)d Suppression of unlawful acts against safety of civil aviation act 1982 ಪ್ರಕಾರ ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.

ಬೆದರಿಕೆ ಕರೆ ಮಾಡಿದ ಆರೋಪಿ ತಮಿಳುನಾಡು ಮೂಲದ ಶಶಿಕುಮಾರ್ ಎಂಬಾತನನ್ನು ವೆಲ್ಲೂರು ನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಶಶಿಕುಮಾರ್ ದೇಶದ ಎಲ್ಲಾ ವಿಮಾನ ನಿಲ್ದಾಣಗಳ ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪಡೆದು, ಕರೆ ಮಾಡಿ ಬೆದರಿಕೆ ಹಾಕಿದ್ದು, ಅದೇ ತರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಹ ಫೋನ್ ಮಾಡಿ ಟರ್ಮಿನಲ್ ಬಿಲ್ಡಿಂಗನ್ನು ಖಾಲಿ ಮಾಡಲು ತಿಳಿಸಿ, ಖಾಲಿ ಮಾಡದೆ ಹೋದರೆ ಟರ್ಮಿನಲ್ ಬಿಲ್ಡಿಂಗನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿಸಿರುತ್ತಾನೆ. ಆರೋಪಿ ಶಶಿ ಕುಮಾರನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪಿಯನ್ನು ಕ್ಲಿಪ್ರ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಮಂಗಳೂರು ಪೊಲೀಸರ ಕಾರ್ಯವನ್ನು ಮೆಚ್ಚಲೇಬೇಕಾಗಿದೆ. ಮಂಗಳೂರು ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ ಚಾರ್ಜ್ ತೆಗೆದುಕೊಳ್ಳುತ್ತಿದ್ದಂತೆ ಮಂಗಳೂರಿನ ಮತೀಯ ಹಿಂಸಾ ಕೃತ್ಯಕ್ಕೆ ಕಡಿವಾಣ ಹಾಕಿದ್ದರು. ಧೋ ನಂಬರ್ ದಂಧೆಕೋರರು, ದ್ವೇಷ ಭಾಷಣಕಾರರು ಬಿಲ ಸೇರುವಂತೆ ಮಾಡಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳೇ ದರೋಡೆಕೋರರಾಗಿ ಪ್ರಯಾಣಿಕರನ್ನು ಯಾಮಾರಿಸುತ್ತಿದ್ದ ಖದೀಮರನ್ನು ಜೈಲಿಗೆ ಅಟ್ಟಿದ್ದರು. ಇದೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದಾತನ ಮೂಲ ಕಂಡುಹಿಡಿದು ಕಂಬಿ ಹಿಂದೆ ತಳ್ಳುವಲ್ಲಿ ಕಮೀಷನರ್ ನೇತೃತ್ವದ ಪೊಲೀಸ್ ತಂಡ ಸಫಲವಾಗಿದೆ.
