ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು 14 ತಿಂಗಳಿನಿಂದ 3 ತಿಂಗಳಿಗೆ ಇಳಿಕೆ

ರಾಷ್ಟ್ರೀಯ

ಅಪರಾಧಿಗಳ ತ್ವರಿತ ಬಂಧನ ಪ್ರಕ್ರಿಯೆಗೆ ಇದು ಸಹಕಾರಿ: ಸಿಬಿಐ ನಿರ್ದೇಶಕ ಪ್ರವೀಣ್ ಸೂದ್

ದೇಶದಿಂದ ಪರಾರಿಯಾದ ಘೋಷಿತ ಅಪರಾಧಿಗಳ ಪತ್ತೆ ಅಥವಾ ಬಂಧನಕ್ಕೆ ತನಿಖಾ ಸಂಸ್ಥೆಗಳು ಹೊರಡಿಸುವ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಇಂಟರ್ ಪೋಲ್ ತೆಗೆದುಕೊಳ್ಳುತ್ತಿದ್ದ ಸಮಯವನ್ನು 14 ತಿಂಗಳ ಬದಲು ಮೂರು ತಿಂಗಳಿಗೆ ಇಳಿಕೆ ಮಾಡಲಾಗಿದೆ.

“ಭಾರತ್ ಪೋಲ್ ವ್ಯವಸ್ಥೆ ಜಾರಿಯಾದ ಬಳಿಕ ರೆಡ್ ಕಾರ್ನರ್ ನೋಟಿಸ್ ಜಾರಿ ಸಂಬಂಧ ಇಂಟರ್ ಪೋಲ್ ನಡೆಸುತ್ತಿದ್ದ ಕಾನೂನು ಪ್ರಕ್ರಿಯೆ 14 ತಿಂಗಳ ಬದಲು ಮೂರು ತಿಂಗಳಿಗೆ ಇಳಿಕೆಯಾಗಿದೆ. ಇದರಿಂದ ಅಪರಾಧಿಗಳ ಪತ್ತೆ ಅಥವಾ ಬಂಧನ ಪ್ರಕ್ರಿಯೆ ಮತ್ತಷ್ಟು ತ್ವರಿತವಾಗಿ ನಡೆಯಲಿದೆ” ಎಂದು ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಗಳು ಆಯೋಜಿಸಿದ್ದ ಸಮ್ಮೇಳನದಲ್ಲಿ ‘ದೇಶಭ್ರಷ್ಟರ ಹಸ್ತಾಂತರ: ಸವಾಲುಗಳು ಮತ್ತು ತಂತ್ರಗಳು’ ವಿಷಯದ ಕುರಿತು ಮಾತನಾಡಿದ ಪ್ರವೀಣ್ ಸೂದ್ “ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಇಂಟರ್ ಪೋಲ್ ತೆಗೆದುಕೊಳ್ಳುತ್ತಿದ್ದ ಸಮಯವು ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ ಇಂಟರ್ ಪೋಲ್ ನಲ್ಲಿ ಸಿಬಿಐ ಸಲ್ಲಿಸಿರುವ ಎಂಟು ರೆಡ್ ಕಾರ್ನರ್ ನೋಟಿಸ್ ಮನವಿಗಳು ಬಾಕಿ ಉಳಿದಿದೆ” ಎಂದು ಹೇಳಿದರು.

“ವಿವಿಧ ದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳ ಹಸ್ತಾಂತರಕ್ಕೆ ಭಾರತ ಸಲ್ಲಿಸಿದ 338 ಮನವಿಗಳು ಬಾಕಿ ಉಳಿದಿವೆ. ಪ್ರಸಕ್ತ ವರ್ಷ ಪಲಾಯನ ಮಾಡಿದ್ದ 35 ಅಪರಾಧಿಗಳನ್ನು ಮರಳಿ ದೇಶಕ್ಕೆ ತರಲಾಗಿದೆ” ಎಂದು ಸೂದ್ ಮಾಹಿತಿ ನೀಡಿದರು.

“ಇಂಟರ್ ಪೋಲ್ ಮೂಲಕ ಇದುವರೆಗೂ 975 ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ. 231 ಸಿಬಿಐ, 130 ಎನ್ ಐಎ, 21 ಇ.ಡಿ, 12 ಎನ್ ಸಿಬಿ ಕಡೆಯಿಂದ ಜಾರಿಯಾಗಿವೆ. 189 ಆರ್ಥಿಕ ಅಪರಾಧಗಳಾಗಿದ್ದು , 254 ಉಗ್ರ ಕೃತ್ಯಕ್ಕೆ ಸಂಬಂಧಿಸಿವೆ. 21 ಹಣ ಅಕ್ರಮ ವರ್ಗಾವಣೆ, 55 ಮಾದಕ ದ್ರವ್ಯ ಕಳ್ಳಸಾಗಣೆಗೆ ಸಂಬಂಧಿಸಿವೆ” ಎಂದು ಸೂದ್ ತಿಳಿಸಿದರು.