ಮಂಗಳೂರು: ನಗರದ ಅಪಾರ್ಟ್ ಮೆಂಟ್ ನ ಮೂರು ಪ್ಲಾಟ್ ನಲ್ಲಿ ಕಳ್ಳತನ. 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವು

ಕರಾವಳಿ

ಪೊಲೀಸರ ಶೀಘ್ರ ಕಾರ್ಯಾಚರಣೆ; ಕಳವುಗೈದ ಆರೋಪಿಗಳನ್ನು 20 ಗಂಟೆಯೊಳಗೆ ಬಂಧನ. ಚಿನ್ನಾಭರಣ, ನಗದು, ವಿದೇಶಿ ಕರನ್ಸಿ ವಶ

ಮಂಗಳೂರು ನಗರದ ಲಾಲ್ ಬಾಗ್ ಹ್ಯಾಟ್ ಹಿಲ್ ನ ಅಪಾರ್ಟ್ ಮೆಂಟ್ ನ ಮೂರು ಪ್ಲಾಟ್ ಗಳಲ್ಲಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ,ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವು. ಪೊಲೀಸರ ಶೀಘ್ರ ಕಾರ್ಯಾಚರಣೆಯಿಂದ ಕಳವು ಮಾಡಿದ ಇಬ್ಬರು ಆರೋಪಿಗಳನ್ನು 20 ಗಂಟೆಯ ಒಳಗೆ ಬಂಧನ. ಚಿನ್ನಾಭರಣ, ನಗದು ಹಾಗೂ 3000 ವಿದೇಶಿ ಕರನ್ಸಿ ವಶ.

ದಿನಾಂಕ 20-10-2025 ರಂದು ರಾತ್ರಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ನ ಲಾಲ್ ಬಾಗ್ ಹ್ಯಾಟ್ ಹಿಲ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿರುವ ಮೂರು ಫ್ಲಾಟ್ ಗಳಿಗೆ ನುಗ್ಗಿದ ಕಳ್ಳರು ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು, ರೂ 5 ಸಾವಿರ ನಗದು ಹಣ, 3000 ವಿದೇಶಿ ಕರೆನ್ಸಿ ಹಾಗೂ ಮೊಬೈಲ್ ಫೋನ್ ನ್ನು ಕಳ್ಳತನ ಮಾಡಿರುವ ಬಗ್ಗೆ ರಿಯಾಜ್ ರಶೀದ್ ಎಂಬವರು ನೀಡಿದ ದೂರಿನ ಮೇರೆಗೆ ದಿನಾಂಕ 20-10-2025 ರಂದು ಬೆಳಿಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಉರ್ವ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಶ್ವಾನ ದಳ ಹಾಗೂ ಫಿಂಗರ್ ಪ್ರಿಂಟ್ ತಜ್ಞರ ತಂಡವು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಆರೋಪಿ ಪತ್ತೆ ಕಾರ್ಯವನ್ನು ನಡೆಸಿದ್ದು, ಪ್ರಕರಣ ದಾಖಲಾಗಿ ಸುಮಾರು 20 ಗಂಟೆಗಳ ಒಳಗಾಗಿ ಶೀಘ್ರ ಕಾರ್ಯ ಪ್ರವೃತ್ತರಾಗಿ, ಸದ್ರಿ ಮನೆಗಳ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರಾಜ್ಯ ಮನೆ ಕಳ್ಳರನ್ನು ದಿನಾಂಕ 21-10-2025 ರ ಬೆಳಗಿನ ಜಾವ ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಆರೋಪಿತರಿಂದ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಎಲ್ಲಾ ಚಿನ್ನಾಭರಣಗಳನ್ನು, ರೂ 5ಸಾವಿರ ನಗದು ಹಣ, ರೂ 70 ಸಾವಿರ ಮುಖ ಬೆಲೆಯ 3000 ವಿದೇಶಿ ಕರೆನ್ಸಿ ಹಾಗೂ ಮೊಬೈಲ್ ಫೋನನ್ನು ವಶಕ್ಕೆ ಪಡೆದಿರುತ್ತಾರೆ.

ಅಭಿಜಿತ್ ದಾಸ್, ಪ್ರಾಯ 24 ವರ್ಷ. ದೇಬಾ ದಾಸ್, ಪ್ರಾಯ 21 ವರ್ಷ, ಅಸ್ಸಾಂ ರಾಜ್ಯ. ಆರೋಪಿ ಅಭಿಜಿತ್ ದಾಸ್ ಎಂಬಾತನ ಮೇಲೆ ಈ ಮೊದಲು ಬೆಂಗಳೂರು ನಗರ ಮತ್ತು ಅಸ್ಸಾಂ ಸೇರಿದಂತೆ ಹಲವು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತವೆ. ಮೇಲಾಧಿಕಾರಿಗಳ ನಿರ್ದೇಶನದಂತೆ, ಉರ್ವಾ ಪೊಲೀಸರ ತಂಡವು ಬೆಂಗಳೂರಿನಲ್ಲಿ ಸದ್ರಿ ಆರೋಪಿಗಳನ್ನು ದಿನಾಂಕ 21-10-2025 ರಂದು ಬೆಳಗ್ಗಿನ ಜಾವ ಬೆಂಗಳೂರು ನಗರ ಪೊಲೀಸ್ ರವರ ಸಹಕಾರದಿಂದ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಲಾಗುತ್ತಿದೆ. ಡಿಸಿಪಿ ಕ್ರೈಂ ರವರ ಮೇಲ್ವಿಚಾರಣೆಯಲ್ಲಿ ಕೇಂದ್ರ ಉಪ ವಿಭಾಗದ ಎಸಿಪಿ, ಪಿ.ಐ, ಉರ್ವ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತದೆ.