ಪದೇ ಪದೇ ಹೊಂದಾಣಿಕೆ ರಾಜಕೀಯ ಮಾಡುವ ಮೂಲಕ, ಮುಸ್ಲಿಮರ ಭಾವನೆಗಳಿಗೆ ದಕ್ಕೆ ತರುವ ಕೆಲಸ ಮಾಡಬೇಡಿ: ಸಿರಾಜ್ ಬಜ್ಪೆ

ಕರಾವಳಿ

ಸರಕಾರ ವಿಧಿಸಿದ ಕಾನೂನಿಗೂ, ಮುಸ್ಲಿಮರಿಗೂ ಏನು ಸಂಬಂಧ.? ಡಾ.ಬಿ ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಅಡಿಯಲ್ಲಿ ಯಾವ ಕಾನೂನು ತಂದರು ಮುಸ್ಲಿಂ ಸಮುದಾಯ ಸ್ವಾಗತಿಸುತ್ತದೆ ಮತ್ತು ಅದನ್ನು ಪಾಲಿಸುತ್ತದೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಆಡಳಿತ ಸರಕಾರ ಏನಾದರೂ ಕಾನೂನು ತಂದಲ್ಲಿ, ಅದಕ್ಕೆ ಬಡಬಡಾಯಿಸುವ ವಿರೋಧಪಕ್ಷಗಳು ಎಳೆದು ತರುವುದು ಮುಸ್ಲಿಮರನ್ನು. ಹೋಗಲಿ ಬಿಡಿ ವಿರೋಧ ಪಕ್ಷಗಳಿಗೆ ಕೇವಲ ಜಾತಿ ಆಧಾರದಲ್ಲಿ ರಾಜಕೀಯ ಮಾಡಿಕೊಂಡು ದಿನ ದೂಡುವ ವಿಷಯ ಮತದಾರ ಬಾಂಧವರಿಗೆ ಚೆನ್ನಾಗಿ ಅರ್ಥ ಆಗಿಬಿಟ್ಟಿದೆ. ಸರ್ಕಾರ ಏನಾದರೂ ಒಳ್ಳೆಯ ಕಾನೂನನ್ನು ಜಾರಿಗೆ ತಂದರೆ ಮುಸ್ಲಿಂ ಸಮಾಜವನ್ನು ಬೊಟ್ಟು ಮಾಡುವುದು ಚಾಳಿಯಾಗಿಬಿಟ್ಟಿದೆ. ದಿನಬೆಳಗಾದರೆ ಮುಸ್ಲಿಮರ ಹೆಸರು ತರದೆ ರಾಜಕೀಯ ಮಾಡಲು ಬಿಜೆಪಿ ಯವರಿಗೆ ಸಾಧ್ಯವಿಲ್ಲವಂತಾಗಿದೆ.

ಆದರೆ ಪಕ್ಷದ ಕೆಲವು ನಮ್ಮ ನಾಯಕರುಗಳು, ಮುಸ್ಲಿಂ ಧರ್ಮದ ವಿಚಾರದಲ್ಲಿ ಮಾತನ್ನಾಡುವುದು ಎಷ್ಟು ಸರಿ.? ಮುಸ್ಲಿಮರು ಏನಾದರೂ ಇಂಥದೇ ಕಾನೂನು ತರಲು ಹೇಳಿದ್ದಾರಾ.? ಮಾನ್ಯ ಪ್ರಿಯಾಂಕ್ ಖರ್ಗೆಯವರು ಈ ರಾಜ್ಯದ ಕಾನೂನು ಸುವ್ಯವಸ್ಥೆಗಾಗಿ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಅವರನ್ನು ಬೆಂಬಲಿಸುವ ಕೆಲಸ ಮಾಡೋಣ. ಅದು ಬಿಟ್ಟು ರಸ್ತೆಯಲ್ಲಿ ನಮಾಜು ಮಾಡುವುದಕ್ಕೂ ಅನುಮತಿ ಬೇಕು ಎಂಬ ಹೇಳಿಕೆ ಕೊಡುವುದು ಎಷ್ಟು ಸರಿ.? ನಾವೇನಾದರೂ ರಸ್ತೆಯಲ್ಲಿಯೇ ನಮಾಜು ಮಾಡುತ್ತೇವೆ ಎಂದು ಡಂಗುರ ಹೊಡೆದಿದ್ದೇವೆಯೇ.? ನಾವು ಸಾರ್ವಜನಿಕರಿಗೆ ತೊಂದರೆ ಆಗುವಂತ ಕೆಲಸ ಮಾಡುವುದು ಇಲ್ಲ. ಈ ದೇಶದ ಕಾನೂನಿಗೆ ಬೆಲೆ ಕೊಡುತ್ತೇವೆ. ಈ ದೇಶದ ಸಂವಿಧಾನದ ಅಡಿಯಲ್ಲಿ ಬದುಕು ಸಾಗಿಸುವ ಕೆಲಸ ಮಾಡುತ್ತಿದ್ದೇವೆ. ಸುಖಾಸುಮ್ಮನೆ ಮುಸ್ಲಿಮರನ್ನು ಎತ್ತಿ ತರುವ ಮೂಲಕ, ಮುಸ್ಲಿಮರಿಗೆ ನೋವು ತರುವ ಕೆಲಸ ಮಾಡಬೇಡಿ. ಮುಸ್ಲಿಮರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಪಕ್ಷದ ಹಿತಕ್ಕಾಗಿ ಮುಸ್ಲಿಮರ ಕೊಡುಗೆ ಅಪಾರ ಇದೆ.

ಈ ದೇಶದ, ನೆಲದ ಕಾನೂನಿಗೆ ಗೌರವ ಕೊಡುವ ಸಮಾಜ ನಮ್ಮದು ಅನ್ನುವುದನ್ನು ಅರ್ಥಮಾಡಿಕೊಳ್ಳಿ. ರಾಹುಲ್ ಗಾಂಧಿಯವರು ಹೇಳಿದಂತೆ ಆರ್ಎಸ್ಎಸ್ ಮನೋಸ್ಥಿತಿಯುಳ್ಳ ವರು ಪಕ್ಷದಿಂದ ಹೊರಗೆ ಹೋಗಿ, ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ತಮ್ಮಂಥ ನಾಯಕರುಗಳ ರಾಜಕೀಯ ಭವಿಷ್ಯಕ್ಕೆ ತಾವೇ ಕೊಡಲಿ ಏಟು ಹಾಕಿಕೊಳ್ಳುವ ದಿನಗಳು ಎದುರಾಗಬಹುದು ಎಂದು ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಎಚ್ಚರಿಕೆ ನೀಡಬೇಕಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷರಾದ ಸಿರಾಜ್ ಬಜ್ಪೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.