ಸೂಕ್ತ ಕ್ರಮ ಕೈಗೊಂಡು ತ್ವರಿತಗತಿಯಲ್ಲಿ ದೂರುದಾರರಿಗೆ ಹಣವನ್ನು ಹಿಂದುರುಗಿಸಿರುವ ಸೈಬರ್ ಠಾಣಾ ಪೊಲೀಸರು
ಅಕ್ಟೋಬರ್ 23 ರಂದು ಬೆಳಿಗ್ಗೆ ಸುಮಾರು 10:00 ರ ಸಮಯಕ್ಕೆ ಬಿಜೈ ನಿವಾಸಿ 79 ವರ್ಷ ಪ್ರಾಯದ ಹಿರಿಯ ಮಹಿಳಾ ನಾಗರೀಕರಿಗೆ ಯಾರೋ ಅಪರಿಚಿತ ವ್ಯಕ್ತಿಯು ಫೋನ್ ಕರೆ ಮಾಡಿ ಪಿರ್ಯಾದಿದಾರರ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿರುವುದಾಗಿ ಹಾಗೂ ಪಿರ್ಯಾದಿದಾರರನ್ನು ಬಂಧಿಸುವುದಾಗಿ ಹೆದರಿಸಿರುತ್ತಾರೆ. ನಂತರ ಬಂಧನದಿಂದ ಪಾರಾಗಲು ಪಿರ್ಯಾದಿದಾರರು ಹಣವನ್ನು ಆರ್ ಬಿ ಐ ನಲ್ಲಿ ಡೆಪಾಸಿಟ್ ಇಡುವುವಂತೆ ಹಾಗೂ ಸದ್ರಿ ಡೆಪಾಸಿಟ್ ಎಲ್ಲಾ ಹಣವನ್ನು ಪರಿಶೀಲನೆ ಮುಗಿದ ನಂತರ ಪಿರ್ಯಾದಿದಾರರಿಗೆ ವಾಪಾಸು ನೀಡುವುದಾಗಿ ತಿಳಿಸಿ, ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಹಾಗೂ ಒಂದು ವೇಳೆ ತಿಳಿಸಿದರೆ ಪಿರ್ಯಾದಿದಾರರನ್ನು ಬಂಧಿಸುವುದಾಗಿಯೂ ಭಯ ಹುಟ್ಟಿಸಿರುತ್ತಾರೆ, ಇದರಿಂದ ಪಿರ್ಯಾದಿದಾರರು ಸಂಪೂರ್ಣವಾಗಿ ಭಯಭೀತಳಾಗಿ ಈ ವಿಚಾರವನ್ನು ಯಾರಿಗೂ ತಿಳಿಸಿರುವುದಿಲ್ಲ.
ಸುಮಾರು 5 ರಿಂದ 6 ಗಂಟೆಯ ಕಾಲ ದೂರವಾಣಿ ಕರೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರರಿಗೆ ವಾಟ್ಸ್ ಆಪ್ ಮೂಲಕ ವಿಡಿಯೋ ಕರೆ ಮಾಡಿ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಂತೆ ಕಾಣಿಸಿಕೊಂಡು ಹಾಗೂ ಜಡ್ಜ್ ರವರು ಕುಳಿತಿರುವ ಹಾಗೆ ವಿಡಿಯೋದಲ್ಲಿ ತೋರಿಸಿ ಪಿರ್ಯಾದಿದಾರರನ್ನು ನಂಬಿಸಿರುತ್ತಾರೆ. ಪಿರ್ಯಾದಿದಾರರು ತನ್ನಲ್ಲಿರುವ 17 ಲಕ್ಷ ಪಿಕ್ಸೆಡ್ ಡಿಪಾಸಿಟ್ ಹಣವನ್ನು ಅಪರಿಚಿತ ವ್ಯಕ್ತಿಯು ನೀಡಿದ ಬ್ಯಾಂಕ್ ಖಾತೆಗೆ RTGS ಮೂಲಕ ತಮ್ಮ ಬ್ಯಾಂಕ್ ಖಾತೆಯಿಂದ ಖುದ್ದಾಗಿ ಬ್ಯಾಂಕಿಗೆ ತೆರಳಿ ದಿನಾಂಕ: 23-10-2025 ರಂದು ಮಧ್ಯಾಹ್ನ 3:00 ಗಂಟೆಗೆ ವರ್ಗಾಯಿಸಿರುತ್ತಾರೆ.
ನಂತರ ಅದೇ ದಿನ ಸಂಜೆ ಸುಮಾರು 6:00 ಗಂಟೆಯ ವೇಳೆಗೆ ಪಿರ್ಯಾದಿದಾರರು ಸದ್ರಿ ವಿಚಾರವನ್ನು ತಮ್ಮ ಪಕ್ಕದ ಮನೆಯ ಹೆಂಗಸರಿಗೆ ತಿಳಿಸಿದಾಗ ಸದ್ರಿ ಮಹಿಳೆಯರು ಎಚ್ಚೆತ್ತುಕೊಂಡು ಪಿರ್ಯಾದಿದಾರರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೂಡಲೇ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಠಾಣಾಧಿಕಾರಿಗಳು 1930 ಸಹಾಯವಾಣಿ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ 17 ಲಕ್ಷ ರೂಪಾಯಿಗಳನ್ನು Hold ಮಾಡಿಸಿ, ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್ ಗೆ ಕರೆ ಮಾಡಿ ಹಣ ಇರುವ ಬಗ್ಗೆ ಖಚಿತಪಡಿಸಿಕೊಂಡು, ದಿನಾಂಕ: 24-10-2025 ರಂದು ಹಣ ಬಿಡುಗಡೆಗಾಗಿ ಮಾಹಿತಿಯನ್ನು ವರದಿಯೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುವುದಾಗಿದೆ.
ದಿನಾಂಕ: 25-10-2025 ಮತ್ತು 26-10-2025 ರಂದು ಸಾರ್ವತ್ರಿಕ ರಜೆ ಇದ್ದುದರಿಂದ, ದಿನಾಂಕ:27-10-2025 ರಂದು ಮಾನ್ಯ ನ್ಯಾಯಾಲಯವು ಹಣ ಬಿಡುಗಡೆ ಮಾಡುವಂತೆ ಆದೇಶವನ್ನು ನೀಡಿದ್ದು, ಸದ್ರಿ ಆದೇಶವನ್ನು ಸ್ವೀಕರಿಸಿಕೊಂಡು ಪಿರ್ಯಾದಿದಾರರ ಬ್ಯಾಂಕ್ ಖಾತೆಗೆ 17ಲಕ್ಷ ರೂ. ಗಳನ್ನು ವರ್ಗಾವಣೆ ಮಾಡಿಸಲಾಗಿದೆ. ಒಟ್ಟಾರೆಯಾಗಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ನಾಗರೀಕರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಅನ್ ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಬಗ್ಗೆ ತಕ್ಷಣ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರಿಂದ 1930 ಸಹಾಯವಾಣಿ ಮೂಲಕ ಹಣವನ್ನು ತಕ್ಷಣ Hold ಮಾಡಿಸಿ ಪಿರ್ಯಾದುದಾರರಿಗೆ ಹಿಂದಿರುಗಿಸಲು ಸಾಧ್ಯವಾಗಿರುತ್ತದೆ. ಸೈಬರ್ ವಂಚನೆಗೆ ಒಳಗಾದವರು ಎಷ್ಟು ಬೇಗ ಪೊಲೀಸ್ ಠಾಣೆಗೆ ಅಥವಾ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸುತ್ತಾರೋ, ಅವರ ಹಣ ವಾಪಸ್ ಬರಲು ಅಷ್ಟೇ ಸಾಧ್ಯತೆ ಇರುತ್ತದೆ, ವಿಳಂಬವಾದಲ್ಲಿ ಆರೋಪಿತರು ಹಣವನ್ನು ಬೇರೆ ಕಡೆಗೆ ವರ್ಗಾವಣೆ ಮಾಡುತ್ತಾರೆ. ಭಾರತ ದೇಶದ ಕಾನೂನು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಡಿಜಿಟಲ್ ಅರೆಸ್ಟ್ ಎಂಬ ಪ್ರಕ್ರಿಯೆ ಇರುವುದಿಲ್ಲ, ಪೊಲೀಸರು, ನ್ಯಾಯಾಧೀಶರು, ಸಿ.ಬಿ.ಐ, ಇ.ಡಿ ಹಾಗೂ ಇನ್ನಿತರ ಕಾನೂನು ಜಾರಿ ಸಂಸ್ಥೆಗಳ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಯಾವುದೇ ಕಾನೂನು ಪ್ರಕ್ರಿಯಯನ್ನು ನಡೆಸುವುದಿಲ್ಲ. ಇದೇ ರೀತಿ Digital investment Sacm ಈಗಾಗಲೇ ಹೆಚ್ಚುತ್ತಿದ್ದು, ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ RBI/SEBI ಯ ಮಾನ್ಯತೆ ಪಡೆದಿದಯೋ ಇಲ್ಲವೋ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳದೇ ಯಾವುದೋ ಅಪರಿಚಿತರಿಂದ ಪರಿಚಿತವಾದ ಡಿಮ್ಯಾಟ್ ಅಕೌಂಟ್ ಇಲ್ಲದ ನಕಲಿ Share Marake/Trading ನಲ್ಲಿ ಹಣ ಹೂಡಿಕೆ ಮಾಡುವುದರಿಂದ ಮೋಸ ಹೋಗುತ್ತಿರುವುದಾಗಿದೆ.
