ಬೆಳಗಾವಿ: ಸೈಬರ್ ವಂಚಕರ ಜಾಲ ಪತ್ತೆ; ಅಮೇರಿಕದ ಬ್ಯಾಂಕಿಗೆ ಕನ್ನ, 33 ಮಂದಿ ಆರೋಪಿಗಳ ಬಂಧನ

ರಾಜ್ಯ

ಅನಧಿಕೃತ ಕಾಲ್‌ ಸೆಂಟರ್‌ ಬಗ್ಗೆ ಸಂಶಯಗೊಂಡ ನಾಗರಿಕರೊಬ್ಬರು ನೀಡಿರುವ ಮಾಹಿತಿಯಿಂದ ಪತ್ತೆ

ಅಮೆರಿಕಾ ದೇಶದ ನಾಗರಿಕರ ಮೊಬೈಲ್‌ ಹಾಗೂ ಬ್ಯಾಂಕ್‌ ಖಾತೆಗಳನ್ನು ಹ್ಯಾಕ್‌ ಮಾಡಿ ವಂಚಿಸುತ್ತಿದ್ದ ಕಾಲ್‌ ಸೆಂಟರ್‌ ಮೇಲೆ ದಾಳಿ ನಡೆಸಿದ ಬೆಳಗಾವಿ ಸೈಬರ್‌ ಅಪರಾಧ ವಿಭಾಗದ ಪೊಲೀಸರು 33 ಆರೋಪಿಗಳನ್ನು ಬಂಧಿಸಿ, ಹಲವಾರು ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಜಂ ನಗರದ ಸರ್ಕಲ್‌ ಬಳಿಯ ಕುಮಾರ್‌ ಹಾಲ್‌ನಲ್ಲಿ ಅನಧಿಕೃತ ಕಾಲ್‌ ಸೆಂಟರ್‌ ಕಾರ‍್ಯ ನಿರ್ವಹಿಸುತ್ತಿರುವ ಕುರಿತು ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸೈಬರ್‌ ಅಪರಾಧ ವಿಭಾಗದ ಪೊಲೀಸರು ಬುಧವಾರ ದಾಳಿ ನಡೆಸಿ, ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ಜನರಿಗೆ ವಂಚಿಸಿ ಹಣ ವರ್ಗಾಯಿಸಿಕೊಳ್ಳುತ್ತಿದ್ದ ಜಾಲವೊಂದನ್ನು ಭೇದಿಸಿದ್ದಾರೆ.

ಕಳೆದ 6- 7 ತಿಂಗಳಿಂದ ಈ ಅನಧಿಕೃತ ಕಾಲ್‌ ಸೆಂಟರ್‌ ಕಾರ್ಯನಿರ್ವಹಿಸುತ್ತಿದ್ದು, 33 ಜನ ಕೆಲಸ ಮಾಡುತ್ತಿದ್ದರು. ಇವರು ಅಮೆರಿಕಾದ ಪ್ರಜೆಗಳಿಗೆ ಕರೆ ಮಾಡಿ ಶೇರ್‌ ಟ್ರೇಡಿಂಗ್‌, ಹೊಸ ಮೊಬೈಲ್‌ ಆಫರ್‌ ಸೇರಿದಂತೆ ನಾನಾ ಆಮಿಷ ಒಡ್ಡಿ ಹಣ ದೋಚುತ್ತಿದ್ದರು. ದಾಳಿ ವೇಳೆ ಪತ್ತೆಯಾದ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಪರಿಶೀಲಿಸಿದಾಗ ವಿಶೇಷ ಸಾಫ್ಟ್‌ವೇರ್‌ ಬಳಸಿ ಅಮೆರಿಕಾದ ಅಸಂಖ್ಯಾತ ಮೊಬೈಲ್‌ಗಳಿಗೆ ಕರೆ ಮಾಡಿರುವುದು ಗೊತ್ತಾಗಿದೆ. ನೈಜ ಲೊಕೇಷನ್‌ ಮಾಹಿತಿ ಮರೆಮಾಚಿ ನಕಲಿ ಲೊಕೇಷನ್‌ ತೋರಿಸುವ ಸಾಫ್ಟ್‌ವೇರ್‌ ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತ 33 ಮಂದಿ ಆರೋಪಿಗಳು ಹೊರ ರಾಜ್ಯದವರಾಗಿದ್ದು, ಅಸ್ಸಾಂ, ನಾಗಾಲ್ಯಾಂಡ್‌, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಸೇರಿದವರಾಗಿರುತ್ತಾರೆ. ಬಂಧಿತರಿಂದ 6.50 ಲಕ್ಷ ರೂ. ಮೌಲ್ಯದ 37 ಲ್ಯಾಪ್‌ಟಾಪ್‌, 1.50 ಲಕ್ಷ ರೂ. ಮೌಲ್ಯದ 37 ಮೊಬೈಲ್‌ ಹಾಗೂ 10 ಸಾವಿರ ರೂ. ಮೌಲ್ಯದ ಮೂರು ವೈಫೈ ರೂಟರ್‌ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಸಿಐಡಿ ನೆರವು ಪಡೆದು ಅಮೆರಿಕಾದಲ್ಲಿ ದಾಖಲಾದ ಪ್ರಕರಣಗಳ ಪರಿಶೀಲನೆಗೆ ಕ್ರಮ ವಹಿಸಲಾಗಿದೆ.

ಇವರ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡ ನಾಗರಿಕರೊಬ್ಬರು ನಗರ ಪೊಲೀಸ್‌ ಕಮಿಷನರ್‌ಗೆ ಪತ್ರ ಬರೆದಿದ್ದರು. ಅನಾಮಧೇಯ ಪತ್ರ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ, ಈ ದೊಡ್ಡ ಅಪರಾಧ ಜಾಲ ಪತ್ತೆಯಾಗಿದೆ. ಇವರೆಲ್ಲರ ‘ಮಾಸ್ಟರ್‌ ಮೈಂಡ್‌’ಗಳು ಎನ್ನಲಾದ ಇಬ್ಬರು ವ್ಯಕ್ತಿ ಗುಜರಾತ್ ಹಾಗೂ ಪಶ್ಚಿಮಬಂಗಾಳದವರು, ಅವರ ಬಂಧನವಾಗಬೇಕಿದೆ.

ಮನೆ ಆರ್ಡರ್‌, ಗಿಫ್ಟ್‌ ಕಾರ್ಡ್‌ಗಳು, ವಸ್ತುಗಳನ್ನು ಆನ್‌ಲೈನ್‌ ಮೂಲಕ ಖರೀದಿ ಮಾಡಿದ್ದೀರಿ, ಅದರ ಹಣ ಪಾವತಿಸಿ ಎಂದು ಕೇಳುತ್ತಿದ್ದರು. ಅತ್ತ ಅಮೆರಿಕದ ನಾಗರಿಕರು ತಾವು ಯಾವುದೇ ವಸ್ತು ಖರೀದಿ ಮಾಡಿಲ್ಲ ಎಂದು ಉತ್ತರಿಸಿದಾಗ, ನಿಮ್ಮ ಆರ್ಡರ್‌ ಕ್ಯಾನ್ಸಲ್‌ ಮಾಡಬೇಕೆಂದರೆ ಇಂತಿಷ್ಟು ದಂಡದ ಹಣ ಪಾವತಿಸಬೇಕು. ಪಾವತಿಸದಿದ್ದರೆ ನಿಮ್ಮ ಬ್ಯಾಂಕ್‌ ಖಾತೆಯಿಂದ ನೇರವಾಗಿ ಹಣ ಕಡಿತವಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದರು. ಹೆಚ್ಚು ಹಣ ಕಳೆದುಕೊಳ್ಳುವ ಬದಲು ಸ್ವಲ್ಪ ಕೊಟ್ಟರಾಯಿತು ಎಂದು ಹಲವು ನಾಗರಿಕರು ಆನ್‌ಲೈನ್‌ ಮೂಲಕ ಹಣ ಸಂದಾಯ ಮಾಡಿದ ದಾಖಲೆಗಳು ಪೊಲೀಸರಿಗೆ ದೊರಕಿದೆ. ‘ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ ಅಧಿಕಾರಿ ಎಂದು ಹೇಳಿಕೊಂಡು ಮತ್ತಷ್ಟು ಜನರನ್ನು ವಂಚಿಸಿದ್ದಾರೆ. ನೀವು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದೀರಿ. ಅದರ ದಂಡ ತೆರಬೇಕಾಗುತ್ತದೆ. ದಂಡ ಬೇಡವೆಂದರೆ ಇಂತಿಷ್ಟು ಡಾಲರ್‌ ಸಂದಾಯ ಮಾಡಿ ಎಂದು ಹೇಳಿ ಹಣ ಪಡೆದಿದ್ದಾರೆ.

ನಗರ ಸೈಬರ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಬಿಎನ್‌ಎಸ್‌ ಐಟಿ ಕಾಯ್ದೆ ಅಡಿ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಲಾಗಿದೆ. ಈ ಮಾದರಿ ಪ್ರಕರಣ ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಈ ಪ್ರಕರಣದ ಬಗ್ಗೆ ಪೊಲೀಸ್‌ ಆಯುಕ್ತರಾದ ಭೂಷಣ ಭೋರಸೆ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುತ್ತಾರೆ.