5,65,000 ರೂ. ಮೌಲ್ಯದ 56.850 ಗ್ರಾಂ ತೂಕದ ಚಿನ್ನಾಭರಣ, ದ್ವಿಚಕ್ರ ವಾಹನ ವಶ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತೂರು ಎಂಬಲ್ಲಿ ದಿನಾಂಕ 02.10.2025 ರಿಂದ ದಿನಾಂಕ 6.10.2025ರ ಮಧ್ಯದ ಅವಧಿಯಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ನಡೆದ ಸುಮಾರು 149 ಗ್ರಾಂ ತೂಕದ ಒಟ್ಟು 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 85/2025 ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನುಹತ್ತಿದ ಪೊಲೀಸರು ತನಿಖೆ ನಡೆಸಲಾಗಿ, ಹೊರ ರಾಜ್ಯಗಳಲ್ಲಿ ಹಾಗೂ ಹಲವು ಜಿಲ್ಲೆಗಳಲ್ಲಿ ಸುಮಾರು 40 ಕ್ಕೂ ಅಧಿಕ ಕಳವು ಪ್ರಕರಣದ ಕುಖ್ಯಾತ ಆರೋಪಿ, ಮಂಗಳೂರು, ಜೋಕಟ್ಟೆ ನಿವಾಸಿ ಅಬುಬಕ್ಕರ್ @ ಅಬ್ದುಲ್ ಖಾದರ್ @ ಇತ್ತೆ ಬರ್ಪೆ ಅಬುಬಕ್ಕರ್ ಎಂಬಾತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಸುಮಾರು 5,65,000 ರೂ. ಬೆಲೆಬಾಳುವ ಒಟ್ಟು 56.850 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಮಂಗಳೂರು ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ 60 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿಕೊಂಡು, ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಆರೋಪಿಯ ಪತ್ತೆಕಾರ್ಯದಲ್ಲಿ, ಬೆಳ್ತಂಗಡಿ ಡಿ.ವೈ.ಎಸ್. ಪಿ. ಶ್ರೀಮತಿ ರೋಹಿಣಿ ಸಿ.ಕೆ. ರವರ ಮಾರ್ಗದರ್ಶನದಂತೆ, ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಬಿ.ಜಿ. ಸುಬ್ಬಾಪೂರ ಮಠ ರವರ ತಂಡ, ವೇಣೂರು ಪೊಲೀಸ್ ಉಪನಿರೀಕ್ಷಕರಾದ ಅಕ್ಷಯ್ ಡವಗಿ, ಶ್ರೀಮತಿ ಓಮನ ಎನ್. ಹಾಗೂ ಧರ್ಮಸ್ಥಳ ಠಾಣಾ ಪೊಲೀಸರ ತಂಡ, ವೇಣೂರು ಪೊಲೀಸರ ತಂಡ, ಪೂಂಜಾಲಕಟ್ಟೆ ಪೊಲೀಸರು ಮತ್ತು ಮಂಗಳೂರು ಜಿಲ್ಲಾ ಗಣಕ ಯಂತ್ರದ ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಬಾಗವಹಿಸಿರುತ್ತಾರೆ.
