ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಿದ ಸರಕಾರಿ ಅಭಿಯೋಜಕರಿಗೆ ಮಂಗಳೂರು ಪೊಲೀಸ್ ಆಯುಕ್ತ ಕಚೇರಿಯಲ್ಲಿ ಸನ್ಮಾನ
ಮಂಗಳೂರು ನಗರಕ್ಕೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿಗಳು ಪತ್ತೆ ಹಚ್ಚಿ, ಮಾದಕ ವಸ್ತುಗಳನ್ನು ಸ್ವಾಧೀನಪಡಿಸಿ, ಆರೋಪಿತರನ್ನು ಬಂಧಿಸಿ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿರುತ್ತಾರೆ.
ದಿನಾಂಕ 14-06-2022 ರಂದು ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 54/2022 ಪ್ರಕರಣಕ್ಕೆ ಸಂಬಂಧಿಸಿ, ಮಂಗಳೂರಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ದಿನಾಂಕ 6.12.2025 ರಂದು ಓರ್ವ ಸುಡಾನ್ ದೇಶದ ಪ್ರಜೆ ಸಹಿತ 5 ಮಂದಿ ಆರೋಪಿಗಳಿಗೆ ತಲಾ 12 ರಿಂದ 14 ವರ್ಷದ ತನಕ ಕಠಿಣ ಸಜೆ ಮತ್ತು ದಂಡದ ಶಿಕ್ಷೆ ವಿಧಿಸಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿರುತ್ತದೆ.
ಈ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ಸಮರ್ಥವಾಗಿ ವಾದ ಮಂಡಿಸಿ, ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸುವಲ್ಲಿ ಮಹತ್ತರದ ಪಾತ್ರ ವಹಿಸಿದ ಸರಕಾರಿ ಅಭಿಯೋಜಕರಾದ ಶ್ರೀಮತಿ ಜುಡಿತ್ ಓಲ್ಗ ಮಾರ್ಗರೇಟ್ ಕ್ರಾಸ್ತಾ ಇವರನ್ನು ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್, ಪೊಲೀಸ್ ಆಯುಕ್ತರು, ಮಂಗಳೂರು ನಗರ ಇವರು ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಇಂದು ಪೊಲೀಸ್ ಇಲಾಖೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಿಥುನ್ ಐಪಿಎಸ್, ಡಿಸಿಪಿ,(ಕಾನೂನು ಮತ್ತು ಸುವ್ಯವಸ್ಥೆ), ರವೀಶ್ ನಾಯಕ್, ಎಸಿಪಿ ಸೆನ್ ಪೊಲೀಸ್ ಠಾಣೆ ಉಪಸ್ಥಿತರಿದ್ದರು.
