ರಿವಾಲ್ವರ್, ಲಾಠಿ ಪ್ರಯೋಗಿಸದೇ ಮಂಗಳೂರಿನಲ್ಲಿ ಅಕ್ರಮ ದಂಧೆ, ಕೋಮುವಾದವನ್ನು ಮಟ್ಟಹಾಕಿದ್ದೇ ಕಮೀಷನರ್ ಸುಧೀರ್ ರೆಡ್ಡಿ, ಎಸ್ಪಿ ಅರುಣ್

ಕರಾವಳಿ

ಗುಂಡು ಹಾರಿಸಿ ಸದೆಬಡಿಯಿರಿ. ಸಚಿವ ಖಾದರ್ ಸಲಹೆ ಪ್ರಜಾಪ್ರಭುತ್ವ ವಿರೋಧಿ, ದಕ್ಷ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುವ ಹುನ್ನಾರ: ಮುನೀರ್ ಕಾಟಿಪಳ್ಳ ಆಕ್ರೋಶ

ಜಿಲ್ಲೆಯ ವಿಪತ್ತು ನಿರ್ವಹಣಾ ಸಭೆಯಲ್ಲಿ ಆರೋಗ್ಯ ಸಚಿವ ಯು ಟಿ ಖಾದರ್ ಅವರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರಲ್ಲಿ, ಮಂಗಳೂರಿನಲ್ಲಿ ನಡೆದಿರುವ ಕೊಲೆ, ಸುಲಿಗೆ, ಗಡೀಪಾರು ಮುಂತಾದವುಗಳ ಲೆಕ್ಕ (ಅಂಕಿ ಅಂಶ) ಕೇಳುವ, ಕ್ರಿಮಿನಲ್‌ ಗಳ ಕಾಲಿಗೆ ಗುಂಡು ಹಾರಿಸುವಂತೆ ಸಲಹೆ ನೀಡುವ, ಕಾನೂನು ಸುವ್ಯವಸ್ಥೆ ಕುರಿತಾಗಿ ಮಾರ್ಗದರ್ಶನ ಮಾಡುವ ವೀಡಿಯೋ ವೈರಲ್ ಆಗಿದೆ, ಚರ್ಚೆಗೆ ಗ್ರಾಸ ಆಗಿದೆ.

ಸಚಿವ ಖಾದರ್ ಅವರು, ಸಿದ್ದರಾಮಯ್ಯ ಅವರ ಪ್ರಥಮ ಸರಕಾರದ ಅವಧಿಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಸಂದೀಪ್ ಪಾಟೀಲ್ IPS ಅವರನ್ನು ಉಲ್ಲೇಖಿಸಿ “ಅಂದು ರೌಡಿಗಳಿಗೆ ಎನ್ಕೌಂಟರ್ ಹೆಸರಿನಲ್ಲಿ ಕಾಲಿಗೆ ಗುಂಡು ಹೊಡೆಯುತ್ತಿದ್ದರು, ಇದರಿಂದ ನಾಲ್ಕೇ ದಿನಗಳಲ್ಲಿ ಅಂದು ಉಸ್ತುವಾರಿ ಸಚಿವನಾಗಿದ್ದ ನನ್ನ ಮುಂದೆ ರೌಡಿಗಳು ತಮ್ಮ ತಾಯಿ, ಹೆಂಡತಿ, ಮದುವೆ ಅಗಲಿರುವ ಹುಡುಗಿಯರನ್ನು ಜೊತೆಗಿಟ್ಟುಕೊಂಡು ಬಂದು ” ನಾವು ಸುಧಾರಿಸಿದ್ದೇವೆ ಗುಂಡು ಹಾರಿಸಬೇಡಿ ಎಂದು ದಯವಿಟ್ಟು ಕಮೀಷನರ್ ಬಳಿ ಹೇಳಿ”ಎಂದು ಸಾಲು ನಿಂತು ಅಂಗಲಾಚಿದ್ದರು ಎಂದು ಹೇಳುವುದು ವೀಡಿಯೋದಲ್ಲಿ ಕಾಣುತ್ತದೆ.

ಸರಕಾರದ ಸಂಪುಟ ದರ್ಜೆಯ ಸಚಿವರೊಬ್ಬರು ಕಮೀಷನರ್ ಹಂತದ ಪೊಲೀಸ್ ಅಧಿಕಾರಿಗೆ “ಕಾನೂನು ಮೀರಿ ಗುಂಡು ಹಾರಿಸಿ (ನಕಲಿ ಎನ್ಕೌಂಟರ್) ಮಾಡಿ, ಆ ಮೂಲಕ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ತನ್ನಿ” ಎಂದು ಹೇಳುವುದು (ಅದೂ ಬಹಿರಂಗವಾಗಿ) ಸರಿಯೆ ?

ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ಕ್ರಿಮಿನಲ್ ಗಳನ್ನು ಮಟ್ಟ ಹಾಕಲು (ಅದನ್ನು ಜಿಲ್ಲೆಯ ಈಗಿನ IPS ಅಧಿಕಾರಿಗಳು ಮಾಡಿ ತೋರಿಸಿದ್ದಾರೆ) ನಕಲಿ ಎನ್ಕೌಂಟರ್ ಗಳನ್ನು ಮಾಡಿ, ಕಾಲಿಗೆ ಗುಂಡು ಹಾರಿಸಿ ಭಯ ಮೂಡಿಸಿ ಎಂದು ಸಚಿವರಾದವರು ಹೇಳುವುದು ಎಷ್ಟು ಸರಿ, ಎಷ್ಟು ನ್ಯಾಯಯುತ !. ಪೊಲೀಸರು ಅನಗತ್ಯವಾಗಿ ಗುಂಡು ಹಾರಿಸಿದರೆ, ಅದು ಸರಿಯಲ್ಲ, ನಿಯಮ ಬದ್ದವಾಗಿ ಕಾರ್ಯಾಚರಿಸಿ ಎಂದು ಮಾರ್ಗದರ್ಶನ ಮಾಡುವುದು, ಕ್ರಮ ತೆಗೆದುಕೊಳ್ಳುವುದು ಸರಕಾರದ, ಸಚಿವರ, ಜನಪ್ರತಿನಿಧಿಗಳ ಜವಾಬ್ದಾರಿ.

ಅದರ ಬದಲಿಗೆ ಕಾನೂನಿನ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿರುವ ಪೊಲೀಸ್ ಕಮೀಷನರ್ ಅವರಿಗೆ ತಪ್ಪು ಮಾದರಿಗಳನ್ನು ಉಲ್ಲೇಖಿಸಿ “ಕಾಲಿಗೆ ಗುಂಡು ಹಾರಿಸಿ” ಎಂದು ಅಧಿಕೃತ ಸಭೆಯಲ್ಲಿ ಬಹಿರಂಗವಾಗಿ ಸೂಚಿಸುವುದುಸಚಿವರ ಅರಿವಿನ ಕೊರತೆಯೊ ? ರಾಜಕಾರಣಿಗಳ ನಿಯಮ ಮೀರಿದ ಸೂಚನೆ, ಪ್ರಭಾವಗಳಿಗೆ ಮಣಿಯದ ಕಮೀಷನರ್ ಅವರನ್ನು ಕುಂದಿಸುವ ಯತ್ನವೊ ಅಥವಾ ಪ್ರಚಾರದ ಉದ್ದೇಶವೊ ಎಂದು ಜನ ಮಾತಾಡುತ್ತಿದ್ದಾರೆ.

ಅದೇನೆ ಇದ್ದರೂ, ಸಚಿವ ಖಾದರ್ ಅವರ ನಕಲಿ ಎನ್ಕೌಂಟರ್ ನಡೆಸುವ, ಕಾಲಿಗೆ ಗುಂಡು ಹಾರಿಸುವ ಸೂಚನೆ ಸಂವಿಧಾನ, ನೆಲದ ಕಾನೂನಿಗೆ ವಿರುದ್ಧವಾದದ್ದು. ಈ ಕುರಿತು ವ್ಯಾಪಕ ಚರ್ಚೆ ನಡೆಯಬೇಕಿದೆ, ಸರಕಾರ ಸ್ಪಷ್ಟನೆ ನೀಡಬೇಕಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಇತ್ತೀಚಿನ ದಶಕದಲ್ಲಿಯೆ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ ಇರುವ ಅತ್ಯುತ್ತಮ ಅವಧಿ ಈಗಿನದ್ದು. ಕೋಮುವಾದಿ ಕ್ರಿಮಿನಲ್ ಗಳು ಅಷ್ಟೆ ಅಲ್ಲ, ಭೂಗತ ಜಗತ್ತು, ವಿವಿಧ ಗ್ಯಾಂಬ್ಲರ್ ಗಳು, ದಂಧೆಕೋರರು ಈ ಅವಧಿಯಲ್ಲಿ ಊರು ಬಿಟ್ಟಿದ್ದಾರೆ, ಅಥವಾ ತಾತ್ಕಾಲಿಕ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ. ಇದನ್ನು ಈಗಿನ IPS ಅಧಿಕಾರಿಗಳು ಗುಂಡು ಹಾರಿಸದೆ, ಕಾನೂನಿನ ಪರಿಧಿ ದಾಟದೆ ಸಾಧಿಸಿದ್ದಾರೆ.

ಇದು ಸಚಿವ ಖಾದರ್ ಅವರಿಗೆ ಹೆಮ್ಮೆಯ ಸಂಗತಿ ಆಗಬೇಕಿತ್ತು. ರಾಜ್ಯದ ಉಳಿದ ಜಿಲ್ಲೆಗಳಿಗೂ ಇದು ಮಾದರಿ ಆಗಬೇಕು ಎಂದು ಸಂಪುಟ ಸಭೆಯಲ್ಲಿ ಉಲ್ಲೇಖಿಸಬೇಕಿತ್ತು. ತಿಂಗಳುಗಳ ಹಿಂದೆ ಸ್ವತಹ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೊಲೀಸ್ ಅಧಿಕಾರಿಗಳ ರಾಜ್ಯಮಟ್ಟದ ಸಭೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಎಸ್ ಪಿ ಅರುಣ್ ಅವರನ್ನು ಉಲ್ಲೇಖಿಸಿ ‘ಅವರ ಮಾದರಿ ಅನುಸರಿಸಿ, ಅವರಿಗೆ ಸಾಧ್ಯ ಆಗಿರುವುದು ನಿಮಗೇಕೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿರುವುದನ್ನು ಆರೋಗ್ಯ ಸಚಿವ ಯು ಟಿ ಖಾದರ್ ಅವರಿಗೆ ನೆನಪಿಸಲು ಬಯಸುತ್ತೇನೆ.