ರಾಜ್ಯಾದ್ಯಂತ ಏಕರೂಪದ ರಿಯಾಯಿತಿ. ಅನಧಿಕೃತ ವಸತಿ ಕಟ್ಟಡಗಳಿಗೆ ಪಂಚಾಯತ್ ವ್ಯಾಪ್ತಿಯಲ್ಲೂ ‘ಓಸಿ’ ನಿಯಮದಿಂದ ವಿನಾಯಿತಿ; ಸಚಿವ ಸಂಪುಟ ತೀರ್ಮಾನ

ರಾಜ್ಯ

ನಗರ ಪ್ರದೇಶಗಳ ಮಾದರಿಯಲ್ಲಿಯೇ ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಅನಧಿಕೃತ ವಸತಿ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಲು ಕಡ್ಡಾಯವಾಗಿದ್ದ ‘ಸ್ವಾಧೀನಾನುಭವ ಪ್ರಮಾಣಪತ್ರ’ (OC) ನಿಯಮದಿಂದ ವಿನಾಯಿತಿ ನೀಡಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಇದರಿಂದ ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ಅನುಕೂಲವಾಗಲಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1200 ಚದರ ಅಡಿ (30×40 ಅಡಿ) ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಒಸಿ ಕಡ್ಡಾಯವಿರುವುದಿಲ್ಲ. ಇಲ್ಲಿಯವರೆಗೆ ಒಸಿ ಇಲ್ಲದ ಕಾರಣಕ್ಕಾಗಿ ಅನೇಕ ಮನೆಗಳಿಗೆ ಅಧಿಕೃತವಾಗಿ ವಿದ್ಯುತ್ ಮೀಟರ್ ಅಳವಡಿಸಲು ಅಥವಾ ನೀರಿನ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರದ ಈ ನಿರ್ಧಾರದಿಂದ ಈ ತಾಂತ್ರಿಕ ಅಡೆತಡೆ ನಿವಾರಣೆಯಾಗಲಿದ್ದು, ಸುಲಭವಾಗಿ ಮೂಲಸೌಕರ್ಯಗಳನ್ನು ಪಡೆಯಬಹುದಾಗಿದೆ.

ಗ್ರಾಮೀಣ ಭಾಗದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಸ್ವಂತ ಮನೆ ನಿರ್ಮಿಸಿಕೊಂಡಿದ್ದರೂ, ದಾಖಲೆಗಳ ತೊಡಕಿನಿಂದಾಗಿ ಕರೆಂಟ್ ಮತ್ತು ನೀರು ಪಡೆಯಲು ಪರದಾಡುತ್ತಿದ್ದರು. ಈಗ ಸಂಪುಟದ ತೀರ್ಮಾನದಿಂದ ಈ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.

ಈ ಹಿಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಈ ವಿನಾಯಿತಿಯನ್ನು ನೀಡಲಾಗಿತ್ತು. ನಂತರ ನಗರ ಸ್ಥಳೀಯ ಸಂಸ್ಥೆಗಳಿಗೂ (ಪುರಸಭೆ, ನಗರಸಭೆ) ಇದನ್ನು ವಿಸ್ತರಿಸಲಾಗಿತ್ತು. ಈಗ ಅಂತಿಮವಾಗಿ ಗ್ರಾಮೀಣ ಭಾಗದ ಜನರಿಗೂ ಈ ಸೌಲಭ್ಯ ಒದಗಿಸುವ ಮೂಲಕ, ರಾಜ್ಯಾದ್ಯಂತ ಏಕರೂಪದ ರಿಯಾಯಿತಿ ಕಲ್ಪಿಸಿದಂತಾಗಿದೆ.