ಕೊನೆಗೂ ಸತ್ಯಕ್ಕೆ ಸಂದ ಜಯ: ಕಾಂಗ್ರೆಸ್. ಹೃದಯವಂತ ಇನಾಯತ್ ಆಲಿಗೂ ರಿಲೀಫ್ ಕೊಟ್ಟ ತೀರ್ಪು

ಕರಾವಳಿ

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿಸಿಎಂ ಡಿಕೆಶಿ, ಇನಾಯತ್ ಅಲಿ ವಿರುದ್ಧದ ಪ್ರಕರಣ ಕೈಗೆತ್ತಿಕೊಳ್ಳಲು ಕೋರ್ಟ್ ನಕಾರ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಹಣ ವರ್ಗಾವಣೆ ಆರೋಪಪಟ್ಟಿಯನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ. ಮಾತ್ರವಲ್ಲ ಚಾರ್ಜ್‌ಶೀಟ್‌ಅನ್ನು ತಿರಸ್ಕರಿಸಿದೆ.

ಪ್ರಕರಣದ ವಿಚಾರಣೆ ನಡೆಸಿರುವ ರೂಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಪಿಸಿ ಕಾಯ್ದೆ) ವಿಶಾಲ್ ಗೋಗ್ನೆ, “ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಸಲ್ಲಿಸಿದ ದೂರು ಸಮರ್ಥನೀಯವಲ್ಲ. ಈ ಪ್ರಕರಣದ ತನಿಖೆಯು ಯಾವುದೇ ಎಫ್‌ಐಆರ್‌ಅನ್ನು ಆಧರಿಸಿಲ್ಲ. ಬದಲಾಗಿ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರನ್ನು ಆಧರಿಸಿದೆ” ಎಂದು ಹೇಳಿದ್ದಾರೆ.

“ಪ್ರಕರಣದ ತನಿಖೆ ಮತ್ತು ಚಾರ್ಜ್‌ಶೀಟ್‌ಅನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರು ಮತ್ತು ಮ್ಯಾಜಿಸ್ಟ್ರೇಟ್ ಅವರ ಸಮನ್ಸ್ ಆದೇಶಗಳಿಂದ ಸಿದ್ದಪಡಿಸಲಾಗಿದೆಯೇ ಹೊರತು ಎಫ್‌ಐಆರ್‌ನಿಂದಲ್ಲ.ಆದ್ದರಿಂದ, ಈ ಚಾರ್ಜ್‌ಶೀಟ್‌ಅನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ” ಎಂದು ಕೋರ್ಟ್‌ ಹೇಳಿದೆ.

ಪ್ರಕರಣದಲ್ಲಿ ಗಾಂಧಿ ಕುಟುಂಬದವರಲ್ಲದೆ, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್, ಡಾಟೆಕ್ಸ್ ಮರ್ಚಂಡೈಸ್ ಹಾಗೂ ಸುನಿಲ್ ಭಂಡಾರಿ ಅವರನ್ನು ಸಹ ಜಾರಿ ನಿರ್ದೇಶನಾಲಯವು ಆರೋಪಿಗಳನ್ನಾಗಿ ಮಾಡಿದೆ.

ಸೋಮವಾರ ನಡೆದ ವಿಚಾರಣೆಯಲ್ಲಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಇತರ ಆರೋಪಿತರು ಈ ಹಂತದಲ್ಲಿ ಎಫ್‌ಐಆರ್‌ ಪ್ರತಿಯನ್ನು ಪಡೆಯಲು ಅರ್ಹರಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು. ಆದಾಗ್ಯೂ, ಮಂಗಳವಾರ, ಇಡಿ ಸಲ್ಲಿಸಿದ ಚಾರ್ಜ್‌ಶೀಟ್‌ಅನ್ನು ಪರಿಗಣಿಸಲು ನ್ಯಾಯಾಲಯವು ನಿರಾಕರಿಸಿದೆ.

ಈ ಪ್ರಕರಣದಲ್ಲಿ ಮಂಗಳೂರು ಮೂಲದ ಡಿಕೆಶಿ ಆಪ್ತರಾಗಿರುವ ಇನಾಯತ್ ಅಲಿ ವಿರುದ್ಧ ದೆಹಲಿ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿ ಹಾಜರಾಗುವಂತೆ ತಿಳಿಸಿತ್ತು. ಇನಾಯತ್ ಅಲಿ ಉದ್ಯಮಿಯಾಗಿದ್ದು, ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು, ವಿವಿಧ ಅದ್ಧೂರಿ ಕಾರ್ಯಕ್ರಮ ನಡೆಸುವ ಮೂಲಕ ಪಕ್ಷಕ್ಕೆ ಚೈತನ್ಯ ತಂದುಕೊಡುತ್ತಿದ್ದಾರೆ. ಇಡೀ ಜಿಲ್ಲೆಯ ಕಾಂಗ್ರೆಸ್ ನಾಯಕರೇ ಇನಾಯತ್ ಅಲಿ ಸಂಘಟನಾ ಚಾತುರ್ಯತೆಗೆ ಭೇಷ್ ಅನ್ನುತ್ತಿದ್ದಾರೆ. ರಾಜಕೀಯ ಮಾತ್ರವಲ್ಲ ಸಾಮಾಜಿಕ ಕ್ಷೇತ್ರದಲ್ಲೂ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಜಿಲ್ಲೆಯೆಲ್ಲೆಡೆ ಹೃದಯವಂತ ರಾಜಕರಣಿ ಅನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.