ಕಿದ್ವಾಯಿ ಕ್ಯಾನ್ಸರ್, ಜಯದೇವ ಹೃದಯದ ಆಸ್ಪತ್ರೆಗಳನ್ನು ಮಂಗಳೂರಿನಲ್ಲಿ ತೆರೆಯಲು ರಾಜ್ಯ ಸರಕಾರ ಪ್ರಸ್ತಾವ. ಹೋರಾಟ ಸಮಿತಿ ಸ್ವಾಗತ

ಕರಾವಳಿ

ಬಲಾಢ್ಯ ಖಾಸಗಿ ಲಾಬಿಯ ಎದುರಾಗಿ ಇದು ಜಾರಿಗೆ ಬರಬೇಕಿದೆ. ಜನತೆಯ ಒಗ್ಗಟ್ಟಿನ ಹೋರಾಟ ಮಾತ್ರ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರುವಂತೆ ಮಾಡಲು ಸಾಧ್ಯ: ಮುನೀರ್ ಕಾಟಿಪಳ್ಳ

ಕಳೆದ ಎರಡು ದಶಕಗಳಿಂದ ನಡೆಸುತ್ತಿರುವ ಹೋರಾಟದ ಆಗ್ರಹ ಸರಕಾರದ ಶಕ್ತಿ ಕೇಂದ್ರವಾದ ವಿಧಾನ ಮಂಡಲ ತಲುಪಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಆರೋಗ್ಯ ಲಾಭಿಯ ಏಕಸ್ವಾಮ್ಯದಿಂದ ಕಂಗೆಟ್ಟಿರುವ ಜನ ಸಾಮಾನ್ಯರ ನೆರವಿಗೆ ಸರಕಾರ ಮುಂದಾಗಬೇಕು, ಸಾರ್ವಜನಿಕ (ಸರಕಾರಿ) ರಂಗದ ಆಸ್ಪತ್ರೆಗಳನ್ನು ಬಲಪಡಿಸಬೇಕು ಎಂದು ಹಲವು ಹಂತಗಳಲ್ಲಿ, ವಿವಿಧ ರೀತಿಯಲ್ಲಿ ನಡೆಸುತ್ತಾ ಬಂದಿರುವ ಹೋರಾಟ, ಅಭಿಯಾನ ಈಗ ಜಿಲ್ಲೆಯ ಜನತೆಯ ಕೂಗಾಗಿ ಮಾರ್ಪಟ್ಟಿದೆ. ಬೆಳಗಾವಿ ಅಧಿವೇಶನದಲ್ಲಿಯೂ ಮೊಳಗಿದೆ.

2007 ರಲ್ಲಿ 20:20 ಸರಕಾರದ ಅವಧಿಯಲ್ಲಿ ಪ್ರಥಮವಾಗಿ ಡಿವೈಎಫ್ಐ ಬ್ಯಾನರ್ ಅಡಿ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಖಾಸಗೀಕರಣಕ್ಕೆ ತಡೆ ಹಾಕಿ” ಎಂಬ ಅಭಿಯಾನವನ್ನು ಆರಂಭಿಸಿದ್ದೆವು. ಒಂದು ದಶಕಗಳ ಕಾಲ ಡಿವೈಎಫ್ಐ ಈ ಅಭಿಯಾನವನ್ನು ವಿವಿಧ ರೀತಿಯಲ್ಲಿ ಮುಂದುವರಿಸಿತು.

ಕರೋನಾ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ಲಜ್ಜವಾಗಿ ನಡೆಸಿದ ಸುಲಿಗೆ ನೀತಿಯಿಂದ ಜನಸಾಮಾನ್ಯರು ಪೂರ್ತಿ ಕಂಗಾಲಾಗಿದ್ದರು. ಆ ಸಂದರ್ಭದಲ್ಲಿಯೂ ಡಿವೈಎಫ್ಐ ದೃಢವಾದ ಹೋರಾಟ ನಡೆಸಿತ್ತು.

ಆ ತರುವಾಯ ಹೋರಾಟಕ್ಕೆ ತೀವ್ರಸ್ವರೂಪ, ವ್ಯಾಪಕತೆ ಕೊಡುವ ನಿಟ್ಟಿನಲ್ಲಿ ಸಮಾನ ಮನಸ್ಕರ ಒಳಗೊಳ್ಳುವಿಕೆಯಲ್ಲಿ 2020 ಇಸವಿಯಲ್ಲಿ “ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ” ರಚಿಸಿ ಜಿಲ್ಲೆಯ ಎಂಟು ಶಾಸಕರ ಕಚೇರಿ ಮುಂಭಾಗದಲ್ಲೂ ಧರಣಿ ನಡೆಸಿ ಸರಕಾರದ ಗಮನ ಸೆಳೆಯಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಹಲವು ಗ್ರಾಮಗಳಲ್ಲಿ, ಹೋಬಳಿ ಕೇಂದ್ರ ಗಳಲ್ಲಿ ಸಾಮೂಹಿಕ ಧರಣಿ ನಡೆಸಲಾಗಿತ್ತು.

ಈ ಧರಣಿಗಳಲ್ಲಿ ವೆನ್ಲಾಕ್ ಅನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಪರಿವರ್ತಿಸಬೇಕು, ಜಿಲ್ಲೆಗೆ ಒಂದು ಸರಕಾರಿ ಮೆಡಿಕಲ್ ಕಾಲೇಜು ಒದಗಿಸಬೇಕು, ಖಾಸಗಿ ಆರೋಗ್ಯ ಲಾಬಿಗಳನ್ನು, ಆಸ್ಪತ್ರೆಗಳನ್ನು ನಿಯಂತ್ರಿಸಬೇಕು, ಹೊಸ ತಾಲೂಕುಗಳಿಗೆ ತಾಲೂಕು ಆಸ್ಪತ್ರೆ ಮಂಜೂರುಗೊಳಿಸಬೇಕು, ಸಮುದಾಯ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಬೇಕು, ಜನ ಸಂಖ್ಯೆಗೆ ಅನುಗುಣವಾಗಿ ಅವುಗಳನ್ನು ತೆರೆಯಬೇಕು ಎಂಬ ಬೇಡಿಕೆಯ ಜೊತೆಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಪ್ರಧಾನವಾಗಿ ಸರಕಾರ ಹಾಗು ಜನರ ಮುಂದಿಟ್ಟಿದ್ದೆವು. ಜನಸಾಮಾನ್ಯರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದರು. ಜನಾಭಿಪ್ರಾಯವಾಗಿ ಇದು ಬದಲಾಯಿತು.

ಕಳೆದ ವಾರ ಆರೋಗ್ಯ ಹಾಗು ಜಿಲ್ಲಾ ಉಸ್ತುವಾರಿ ಸಚಿವರು ಕಿದ್ವಾಯಿ ಹಾಗು ಜಯದೇವ ಆಸ್ಪತ್ರೆಗಳ ಘಟಕ ಮಂಗಳೂರಿನಲ್ಲಿ ಸ್ಥಾಪಿಸಲು ಮಂಜೂರಾತಿ ಕೋರಿ ಮುಖ್ಯಮಂತ್ರಿ ಹಾಗು ವೈದ್ಯಕೀಯ ಸಚಿವರಿಗೆ ಪತ್ರ ಬರೆದಿದ್ದರು. ಈಗ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅಧಿವೇಶನದಲ್ಲಿ ಸರಕಾರಕ್ಕೆ ಈ ಕುರಿತು ಮನವಿ ಮಾಡಿದರು (ಅವರಿಗೆ ಅಭಿನಂದನೆಗಳು)

ಭಂಡಾರಿಯವರ ಆಗ್ರಹಕ್ಕೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ಉತ್ತರಿಸಿದ್ದಾರೆ. ‘ಆಸ್ಪತ್ರೆ ಆರಂಭಿಸದಂತೆ ಯಾವುದೇ ಲಾಬಿಗಳ ಒತ್ತಡ ನಮ್ಮ ಮೇಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದು ಒಂದಿಷ್ಟು ಸಮಾಧಾನಕರ ಸಂಗತಿ, ಆಶಾದಾಯಕ ಬೆಳವಣಿಗೆ. ಸರಕಾರಿ ಆಸ್ಪತ್ರೆಗಳ ಬಲವರ್ಧನೆ, ಕಿದ್ವಾಯಿ, ಜಯದೇವ ಘಟಕಗಳ ತೆರೆಯುವಿಕೆಯ ವಿರುದ್ಧ ಖಾಸಗಿ‌ ಲಾಬಿಗಳ ಒತ್ತಡ ಇಲ್ಲ ಎಂಬುದನ್ನು ನಂಬಲು ಕಷ್ಟ. ಹಾಗಿಲ್ಲದಿದ್ದರೆ, ವೆನ್ಲಾಕ್ ನಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಸಹಭಾಗಿತ್ವದಲ್ಲಿ ಹೃದಯದ ಘಟಕ ತೆರೆಯುತ್ತಿರಲಿಲ್ಲ. ಅದೇನೆ ಇರಲಿ. ದ.ಕ. ಜಿಲ್ಲಾಸ್ಪತ್ರೆ ವೆನ್ಲಾಕ್ ಮೇಲ್ದರ್ಜೆಗೆ ಏರಿಕೆ ಸಹಿತ ಯಾವುದೆ ಪ್ರಸ್ತಾವನೆಯಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಸಹಭಾಗಿತ್ವ ಇರಬಾರದು. ಸರಕಾರದ ಒಡೆತನವೇ ಪೂರ್ಣಪ್ರಮಾಣದಲ್ಲಿ‌ ಇರಬೇಕು.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ತೆರೆಯಲು ಪ್ರಸ್ತಾವನೆ ಇದೆ ಎಂದು ಹೇಳಿಕೆ ನೀಡಿದ ರಾಜ್ಯ ಸರಕಾರಕ್ಕೆ ಅಭಿನಂದನೆಗಳು. ಆದರೆ, ಈ ಪ್ರಸ್ತಾವನೆ ಕಾರ್ಯರೂಪಕ್ಕೆ ಬರುವುದು ಅಷ್ಟು ಸುಲಭ ಇಲ್ಲ. 10 ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ದ.ಕ. ಜಿಲ್ಲೆಯಲ್ಲಿ ಬಲಾಢ್ಯ ಖಾಸಗಿ ಲಾಬಿಯ ಎದುರಾಗಿ ಇದು ಜಾರಿಗೆ ಬರಬೇಕಿದೆ. ಜನತೆಯ ಒಗ್ಗಟ್ಟಿನ ಹೋರಾಟ ಮಾತ್ರ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ಇಳಿಸುವಂತೆ ಮಾಡಲು ಸಾಧ್ಯ.