ಲೋಕಲ್ ಪಾಲಿಟಿಕ್ಸ್ ಗೆ ಇಳಿದ ಕೈ ಹೈಲೆವೆಲ್ ನಾಯಕರು; ಕಿಂಗ್ ಮೇಕರ್ ಯಾರು ಗೊತ್ತಾ.?
ಒಂದು ಜುಜುಬಿ ಪಟ್ಟಣ ಪಂಚಾಯತ್ ಗೆಲ್ಲಲು ಕಾಂಗ್ರೆಸ್ ಹೈ ಲೆವೆಲ್ ನಾಯಕರು ಇಷ್ಟೊಂದು ಕಠಿಣ ಪರಿಶ್ರಮ ಪಡುವ ಅಗತ್ಯವಿತ್ತಾ..?ದೊಡ್ಡ ದೊಡ್ಡ ನಾಯಕರೆಲ್ಲ ಅಖಾಡಕ್ಕೆ ಇಳಿಯುವ ಪರಿಸ್ಥಿತಿಯ ಅಗತ್ಯವಿತ್ತಾ.? ಬಜಪೆಯ ಜನಮೆಚ್ಚುಗೆ ಪಡೆದ ನಾಯಕ ಸಿರಾಜ್ ಬಜಪೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿದ್ದರೆ ಕಾಂಗ್ರೆಸ್ ಹೈ ಲೆವೆಲ್ ನಾಯಕರೆಲ್ಲ ಬಜಪೆಯಲ್ಲಿ ಬೀಡು ಬಿಡುವ ಅಗತ್ಯವಿರಲಿಲ್ಲ. ಒಂದಂತೂ ಸತ್ಯ. ಸಿರಾಜ್ ಬಜ್ಪೆ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಹೈ ಲೆವೆಲ್ ನಾಯಕರನ್ನೆಲ್ಲ ರೋಡಿಗೆ ತಂದು ನಿಲ್ಲಿಸಿದ್ದಾರೆ ಅನ್ನುವ ಕುಹಕದ ಮಾತು ಇದೀಗ ಬಜಪೆ ಪೇಟೆಯಾದ್ಯಂತ ಹರಿದಾಡುತ್ತಿದೆ.
ಸುಲಭದಲ್ಲಿ ಗೆಲ್ಲಬಹುದಾಗಿದ್ದ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ತನ್ನ ಹಠಮಾರಿ ಧೋರಣೆಯಿಂದ ಕಬ್ಬಿಣದ ಕಡಲೆಯಾಗಿ ಪರಿವರ್ತಿಸಿದೆ ಅನ್ನುವ ಮಾತುಗಳು ಕೇಳಿ ಬರತೊಡಗಿದೆ. ಅಲ್ಪಸಂಖ್ಯಾತರೇ ಹೆಚ್ಚಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ಬಾರಿ ಗೆಲ್ಲಲು ಸಾಕಷ್ಟು ಬೆವರು ಹರಿಸಬೇಕಿದೆ. ಮೂರು ಬಾರಿ ಚುನಾವಣೆಯಲ್ಲಿ ಗೆದ್ದು, ಪಂಚಾಯತ್ ಸದಸ್ಯನಾಗಿ ತನ್ನ ವಾರ್ಡಿನಲ್ಲಿ ಉತ್ತಮ ಕಾರ್ಯನಿರ್ವಹಿಸಿ, ಜನಮೆಚ್ಚುಗೆ ಪಡೆದು, ಹಲವಾರು ಕಾಲ ಕಾಂಗ್ರೆಸಿಗಾಗಿ ಹಗಲಿರುಲು ದುಡಿದು, ಕಾಂಗ್ರೆಸಿನ ಓಟು ಬ್ಯಾಂಕನ್ನು ಭದ್ರಪಡಿಸಿದ, ಸರ್ವಧರ್ಮಿಯರು ಮೆಚ್ಚುವ ಸಿರಾಜ್ ಬಜ್ಪೆ ಎಂಬ ಉತ್ಸಾಹಿ ಯುವ ನಾಯಕನಿಗೆ ಕೆಲವು ಮಂದಿ ನಾಯಕರ ಸ್ವಾರ್ಥಕ್ಕಾಗಿ ಟಿಕೆಟ್ ನಿರಾಕರಿಸಿ ಎಡವಟ್ಟು ಮಾಡಿಕೊಂಡು ತಾವೇ ತೋಡಿದ ಹಳ್ಳಕ್ಕೆ ತಾವೇ ಬೀಳುವಂತಾಗಿದೆ ಪರಿಸ್ಥಿತಿ.!

ಸಿರಾಜ್ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದ ಮತದಾರರ ಆಶೀರ್ವಾದ ಖಂಡಿತ ಪಕ್ಷೇತರನ ಪಾಲಿಗಿದೆ ಅನ್ನುವ ಮಾತು ಕೇಳಿ ಬರುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಿದೆ. ಇಲ್ಲಿ ಒಂದಾ ಪಕ್ಷೇತರ ಅಭ್ಯರ್ಥಿ ಸಿರಾಜ್ ಗೆಲ್ಲಬಹುದು, ಇಲ್ಲವಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬಹುದು. ಸಿರಾಜ್ ಬಜ್ಪೆ ಪರ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇದನ್ನು ಮನಗಂಡ ಕಾಂಗ್ರೆಸ್ ಹೈಲೆವೆಲ್ ನಾಯಕರೆಲ್ಲ ಈಗ ಬಜಪೆಯಲ್ಲೇ ಬೀಡುಬಿಟ್ಟಿದ್ದಾರೆ. ಮಾಜಿ ಸಚಿವ, ಮಾಜಿ ಶಾಸಕ, ಡಿಕೆಶಿ ಬಂಟ, ಬಜಪೆಯವರೇ ಆಗಿ ಬಜಪೆಯತ್ತ ತಿರುಗಿ ನೋಡದ ಕೆಲವು ಕಾಂಗೆಸ್ ನಾಯಕ, ನಾಯಕಿಯರು ಹೀಗೆ ಘಟಾನುಘಟಿ ನಾಯಕರೆಲ್ಲ ಲೋಕಲ್ ಪಾಲಿಟಿಕ್ಸ್ ಗೆ ಇಳಿದುಬಿಟ್ಟಿದ್ದಾರೆ. ಸಿರಾಜ್ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಘಟಾನುಘಟಿ ನಾಯಕರೆಲ್ಲ ಕ್ಯಾಂಪೈನ್ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಹಣೆಬರಹವೇ.

ಓರ್ವ ನಾಯಕನನ್ನು ರಾಜಕೀಯವಾಗಿ ಬೆಳೆಸಲು ಪಕ್ಷದ ನಾಯಕರು ಮುಂದಾಗದಿದ್ದರೂ, ರಾಜಕೀಯವಾಗಿ ಮುಗಿಸಲು ನಾಯಕರೆಲ್ಲ ಒಟ್ಟಾಗುತ್ತಾರೆ . ಕ್ಷೇತ್ರದಾದ್ಯಂತ ಸಿರಾಜ್ ಅವರಿಗಿರುವ ಇಮೇಜ್ ಕಂಡು ಬೆದರಿ ಹೈ ಲೆವೆಲ್ ನಾಯಕರೆಲ್ಲ ಪಟ್ಟಣ ಪಂಚಾಯತ್ ಪ್ರಚಾರಕ್ಕೆ ಇಳಿದಿದ್ದಾರೆ. ಬಹುಶಃ ಜಿಲ್ಲೆಯ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹೈ ಲೆವೆಲ್ ನಾಯಕರೆಲ್ಲ ಚುನಾವಣೆ ಪ್ರಚಾರಕ್ಕೆ ಇಳಿದಿರುವುದು ಇದೇ ಮೊದಲು ಇರಬೇಕು. ಕ್ಷೇತ್ರದಲ್ಲಿ ಸ್ಥಳೀಯ ನಾಯಕರ ಚಾರ್ಮ್ ಇಲ್ಲದಿರುವಾಗ ದೊಡ್ಡ ದೊಡ್ಡ ನಾಯಕರನ್ನೆಲ್ಲ ಕರೆಸಿ ಕ್ಯಾಂಪೈನ್ ಮಾಡುವುದು ಸಹಜ. ಇಲ್ಲಿಯೂ ಕೂಡ ಇದೇ ಹಾಗಿದೆ. ಕ್ಷೇತ್ರದಲ್ಲಿ ಸಿರಾಜ್ ಬಜ್ಪೆ ಪರ ಇರುವ ಚಾರ್ಮು ಕಾಂಗ್ರೆಸ್ ನಾಯಕರ ಬೆವರಿಳಿಸಿದೆ. ಬಜಪೆಯಲ್ಲಿ ನಾಯಕರ ದಂಡನ್ನೇ ಕರೆಸಿ ಪ್ರಚಾರದ ಕಣಕ್ಕೆ ಇಳಿಸಲಾಗಿದೆ. ಗೆಲ್ಲಿಸಲು ಸಾಧ್ಯವಾಗದ ಕೆಲವು ಕಾಂಗ್ರೆಸ್ ನಾಯಕರು ಸೋಲಿಸಲು ತಯಾರಾಗಿರುತ್ತಾರೆ. ಇದು ದುರಂತ.

ಇತ್ತ ಸಿರಾಜ್ ತಾನು ಪಂಚಾಯತ್ ಸದಸ್ಯನಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ. ಆದರೆ ಗೆಲುವು ಯಾರು ಪಡೆಯುತ್ತಾರೆ ಅನ್ನುವುದು ಡಿಸೆಂಬರ್ 24 ರವರೆಗೆ ಕಾಯಬೇಕಿದೆ.
ಇತ್ತ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಎಸ್ ಡಿಪಿಐ ತನ್ನ ತಂತ್ರಗಾರಿಕೆಯಲ್ಲಿ ತೊಡಗಿದೆ. ಕಾಂಗ್ರೆಸ್ ಬಂಡಾಯದ ಲಾಭ ನಷ್ಟ ಲೆಕ್ಕಾಚಾರದಲ್ಲಿ ತೊಡಗಿದೆ. ಕನಿಷ್ಠ ಮೂರರಿಂದ ನಾಲ್ಕು ಸ್ಥಾನ ಪಡೆದು ಬಜಪೆ ಪಟ್ಟಣ ಪಂಚಾಯತ್ ನಲ್ಲಿ ಕಿಂಗ್ ಮೇಕರ್ ಆಗಲು ತುದಿಗಾಲಲ್ಲಿ ನಿಂತಿದೆ. ಒಟ್ಟಾರೆ ಬಜಪೆ ಪಟ್ಟಣ ಪಂಚಾಯತ್ ರಿಸಲ್ಟ್ ಜಿಲ್ಲೆಯಾದ್ಯಂತ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
