ಅನಕ್ಷರಸ್ಥರು, ಹೆಬ್ಬೆಟ್ಟು ದಾಸರು ಮೋಸದ ಜಾಲಕ್ಕೆ ಬಲಿಯಾಗುವ ಮುನ್ನ ಹತ್ತಾರು ಬಾರಿ ಯೋಚಿಸುತ್ತಾರೆ. ಇದರಲ್ಲಿ ನಿಜ ಯಾವುದು? ಸುಳ್ಳು ಯಾವುದು? ಎಂಬ ಬಗ್ಗೆ ಅವರಿಗೆ ಕನಿಷ್ಠ ಜ್ಞಾನವಂತೂ ಇದೆ. ಆದರೆ ನಾವು ಮಹಾ ಬುದ್ಧಿವಂತರು, ಶಿಕ್ಷಿತರು ಅನ್ನುವ ಕೆಲವರಂತೂ ಲೋಕ ಜ್ಞಾನ ಇಲ್ಲದೆ ಮಹಾ ವಂಚನೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಹೆಸರಿಗೆ ಇಂಜಿನಿಯರ್, ಡಾಕ್ಟರ್, ಅನ್ನುವ ಮಾಸ್ಟರ್ ಡಿಗ್ರಿ ಅಂತೂ ಇದೆ. ಅಕ್ಷರ ಜ್ಞಾನವಿಲ್ಲದ ಅನಕ್ಷರಸ್ಥರಿಗಿಂತಲೂ ಶಿಕ್ಷಿತ ವರ್ಗ ಕಡೆಯಾಗಿ ಹೋದರಲ್ಲ.. ಇಲ್ಲೊಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಡಿಜಿಟಲ್ ಅರೆಸ್ಟ್ ಅನ್ನುವ ಮಹಾ ಮೋಸಕ್ಕೆ ಬಲಿಯಾಗಿ ತನ್ನ ಸ್ವಂತ ಫ್ಯ್ಯಾಟ್ ಹಾಗೂ ಎರಡು ನಿವೇಶನಗಳನ್ನು ಮಾರಿ ವಂಚಕರಿಗೆ 2 ಕೋಟಿ ನೀಡಿದ್ದಾರೆ. ಆನಂತರವೇ ತಾನು ಮೋಸ ಹೋಗಿರುವುದಾಗಿ ಅರಿವು ಬಂದಿದೆ. ಈ ಸ್ಟೋರಿ ಇಲ್ಲಿದೆ ನೋಡಿ.
ಆಕೆಯ ಹೆಸರು ಬಬಿತಾ ದಾಸ್. ಮಾಯಾನಗರಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾಳೆ. ವಿಜ್ಞಾನ್ ನಗರದ ಫ್ಲ್ಯಾಟ್ ನಲ್ಲಿ ತನ್ನ ಹತ್ತು ವರ್ಷದ ಮಗನೊಂದಿಗೆ ವಾಸವಿದ್ದಾಳೆ.
ಮಹಾ ವಂಚಕರು ಈಕೆಯನ್ನು ಡಿಜಿಟಲ್ ಅರೆಸ್ಟ್ ಅನ್ನುವ ಮಹಾ ಕೂಪಕ್ಕೆ ತಳ್ಳುವ ಪ್ರಯತ್ನ ಮಾಡಿದ್ದಾರೆ. ಜೂನ್ ತಿಂಗಳಲ್ಲಿ ಕರೆ ಮಾಡಿರುವ ಅಪರಿಚಿತ ವ್ಯಕ್ತಿ ತಾನು ಕೊರಿಯರ್ ಕಂಪನಿಯ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಕಾರ್ಡ್ ಗೆ ಲಿಂಕ್ ಆಗಿರುವ ಪಾರ್ಸೆಲ್ ಒಂದರಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಂಬಿಸಿದ್ದಾರೆ. ಇದರಿಂದ ಗಾಬರಿಗೊಂಡ ಮಹಿಳೆಯ ಕರೆಯನ್ನು ತಕ್ಷಣವೇ ಮುಂಬೈ ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಳ್ಳುತ್ತಾ ಮತ್ತೊಂದು ಗುಂಪಿಗೆ ವರ್ಗಾಯಿಸಲಾಗಿದೆ. ವಿಡಿಯೋ ಕಾಲ್ ಮೂಲಕ ಮಾತನಾಡಿದ ನಕಲಿ ಪೊಲೀಸರು ನಿಮ್ಮ ಮೇಲೆ ಗಂಭೀರ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಮನೆಯಿಂದ ಹೊರಗೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿ ಡಿಜಿಟಲ್ ಅರೆಸ್ಟ್ ಮಾದರಿಯಲ್ಲಿ ಇರಿಸಿದ್ದಾರೆ.
ವಂಚಕರು ಮಹಿಳೆಯ ಮೊಬೈಲ್ ನಲ್ಲಿ ನಿರ್ದಿಷ್ಟ ಅಪ್ಲಿಕೇಶನ್ ಒಂದನ್ನು ಡೌನ್ ಲೋಡ್ ಮಾಡಿಸಿ, ಅದರ ಮೂಲಕ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದಾರೆ. ತನಿಖೆಗೆ ಸಹಕರಿಸದಿದ್ದರೆ ನಿಮ್ಮ 10 ವರ್ಷದ ಮಗ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮಹಿಳೆಯ ಭವಿಷ್ಯದ ಬಗ್ಗೆ ತೀವ್ರ ಆತಂಕಕ್ಕೊಳಗಾದ ಮಹಿಳೆ, ವಂಚಕರು ನೀಡಿದ ಎಲ್ಲಾ ಸೂಚನೆಗಳನ್ನು ಅನುಸರಿಸಿದ್ದಾರೆ. ಪ್ರಕರಣದಿಂದ ಮುಕ್ತವಾಗಲು ಹಣದ ಬೇಡಿಕೆ ಇಟ್ಟಿದ್ದಾರೆ. ಮಹಿಳೆ ತನ್ನ ಸ್ವಂತ ಫ್ಯ್ಯಾಟ್ ಹಾಗೂ ಮಾಲೂರಿನಲ್ಲಿದ್ದ ಎರಡು ನಿವೇಶನಗಳನ್ನು ತುರ್ತಾಗಿ ಮಾರಿ ಬಂದ ಎರಡು ಕೋಟಿ ದುಡ್ಡನ್ನು ವಂಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಹಣ ಕೈ ಸೇರಿದ ನಂತರ ವಂಚಕರು ಪೋನ್ ಸ್ವಿಚ್ ಆಫ್ ಮಾಡಿದ್ದಾರೆ. ತಾನು ಮೋಸ ಹೋಗಿರುವುದಾಗಿ ಅರಿತ ಮಹಿಳೆ ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
