ಶೋಷಣೆಗೊಳಗಾದ ಸಮುದಾಯಗಳು ಸಮಾನತೆಯ ತತ್ವದ ಅಡಿಯಲ್ಲಿ ಒಂದಾಗಿ ನಿಲ್ಲಬೇಕು: ನವೀನ್ ಸೂರಿಂಜೆ
ಬೆಳ್ತಂಗಡಿ: ಮಲೆಕುಡಿಯ ಸಮುದಾಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳ್ತಂಗಡಿಯ ಕುತ್ಲೂರು ಮಲೆಯಲ್ಲಿ ‘ಮಲೆಕುಡಿಯ ಆದಿವಾಸಿ ಸಮಾವೇಶ’ ಡಿಸೆಂಬರ್ 25 ಗುರುವಾರದಂದು ನಡೆಯಿತು. ನಕ್ಸಲ್ ಚಳವಳಿಯಿಂದ ಮುಕ್ತಗೊಂಡ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗಿನ ಗ್ರಾಮದಲ್ಲಿ ನಡೆದ ಮೊದಲ ಮಹತ್ವದ ಸಮಾವೇಶ ಇದಾಗಿದ್ದು, ಹಲವು ಗ್ರಾಮಗಳ ಮಲೆಕುಡಿಯ ಮುಖಂಡರು ಭಾಗವಹಿಸಿದ್ದರು.
ಸಮಾವೇಶವನ್ನು ಪತ್ರಕರ್ತ ನವೀನ್ ಸೂರಿಂಜೆ ಉದ್ಘಾಟಿಸಿದರು. ದಮನಿತ ಸಮುದಾಯಗಳು ಜಾತಿ ಚೌಕಟ್ಟಿನಲ್ಲಿ ವ್ಯವಸ್ಥೆಯ ದೌರ್ಜನ್ಯ, ಕಡೆಗಣನೆ, ಅವಕಾಶಗಳ ನಿರಾಕರಣೆಯನ್ನು ಎದುರಿಸಿ ಮುನ್ನಡೆಯಲು ಸಾಧ್ಯವಿಲ್ಲ. ಶೋಷಣೆಗೆ ಒಳಗಾದ ಸಮುದಾಯಗಳು ಸಮಾನತೆಯ ತತ್ವದ ಅಡಿಯಲ್ಲಿ ಒಂದಾಗಿ ನಿಲ್ಲಬೇಕು, ಮುಲಾಜಿಲ್ಲದೆ ಪ್ರಶ್ನಿಸುವ, ಪ್ರಜಾತಾಂತ್ರಿಕ ದಾರಿಯಲ್ಲಿ ಹೋರಾಡುವ ಮೂಲಕ ಆತ್ಮಗೌರವ, ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದರು.
ಸಮಾವೇಶದಲ್ಲಿ ಸಮಾರೋಪ ಭಾಷಣ ಮಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ “ಕುತ್ಲೂರು ಮುಖ್ಯರಸ್ತೆಯಿಂದ ಕುತ್ಲೂರು ಮಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಕುಸಿತದಿಂದ ಕಡಿತಗೊಂಡಿದೆ. ಈ ಕುರಿತು ಮಾತನಾಡಬೇಕಾದ ಜನಪ್ರತಿನಿದಿಗಳು ಕೋಳಿ ಅಂಕ, ಧರ್ಮರಕ್ಷಣೆಯ ಮಾತನಾಡುತ್ತಿದ್ದಾರೆ. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸಶಸ್ತ್ರ ಹೋರಾಟದಲ್ಲಿ ಸಕ್ರಿಯವಾಗಿದ್ದ ನಕ್ಸಲ್ ಚಳವಳಿಯ ನಾಯಕರನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಉಳಿದವರನ್ನು ಶರಣಾಗತಿಯ ಹೆಸರಿನಲ್ಲಿ ಜೈಲಿನಲ್ಲಿ ಇಡಲಾಗಿದೆ, ಅಥವಾ ಜೈಲು ಸೇರಿದ್ದಾರೆ. ಅವರುಗಳು ಎತ್ತಿದ ಪ್ರಶ್ನೆಗಳು ಹಾಗೆಯೆ ಉಳಿದಿದೆ. ಅವರ ಮಾರ್ಗ ಸರಿ ಇಲ್ಲದಿರಬಹುದು. ಆದರೆ ಅವರು ಎತ್ತಿರುವ ಪ್ರಶ್ನೆಗಳಿಗೆ ನಾವು ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಉತ್ತರ ಕಂಡುಕೊಳ್ಳಬೇಕಿದೆ” ಎಂದು ಹೇಳಿದರು.

ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿಯ ಡಾ ಕೃಷ್ಣಪ್ಪ ಕೊಂಚಾಡಿ ಮಾತನಾಡಿ “ಮಲೆಕುಡಿಯರು ಸೇರಿದಂತೆ ಎಲ್ಲಾ ಆದಿವಾಸಿ, ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಕೋಮುವಾದಿಗಳಿಂದ ದೂರ ಇರಬೇಕು. ರಾಜ್ಯದ ಎಲ್ಲಾ ಆದಿವಾಸಿ ಸಂಘಟನೆಗಳು ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ. ಇಲ್ಲದೇ ಸಮುದಾಯ ಚಲನೆ ಕಳೆದುಕೊಳ್ಳುತ್ತದೆ” ಎಂದು ಹೇಳಿದರು.
ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ. ಭಟ್ ಮಾತನಾಡಿ “ಮಲೆಕುಡಿಯರ ಈಗಿನ ಜನಸಂಖ್ಯೆ ನೋಡಿದರೆ ಈ ಸಮುದಾಯ ಯಾವತ್ತೂ ಕೂಡಾ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಪ್ರತಿನಿದಿಗಳಾಗಲು ಸಾಧ್ಯವಿಲ್ಲ. ಹಾಗಾಗಿ ಸಮುದಾಯಕ್ಕೆ ಪ್ರತ್ಯೇಕ ರಾಜಕೀಯ ಮೀಸಲಾತಿ ನೀಡಬೇಕಿದೆ. ಮಲೆಕುಡಿಯ ಕುಟುಂಬಗಳು ಇರುವ ಗ್ರಾಮ ಪಂಚಾಯತ್ ಗಳಲ್ಲಿ ಒರ್ವ ಮಲೆಕುಡಿಯ ಪ್ರತಿನಿಧಿಯನ್ನು ಗ್ರಾಮ ಪಂಚಾಯತ್ ಗೆ ನಾಮನಿರ್ದೇಶನ ಮಾಡಬೇಕಿದೆ” ಎಂದು ಆಗ್ರಹಿಸಿದರು.

ಮಲೆಕುಡಿಯ ಸಂಘದ ಶಿಶಿಲ ರಾಮಚಂದ್ರ, ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ಕುತ್ಲೂರು ಆದಿವಾಸಿ ಹಕ್ಕುಗಳ ಸಮಿತಿಯ ಚೀಂಕ್ರ ಮಲೆಕುಡಿಯ, ಪೂವಪ್ಪ ಮಲೆಕುಡಿಯ, ಜಯಾನಂದ ಮಲೆಕುಡಿಯ, ಡಾ. ಯಶೋಧರ ಮಲೆಕುಡಿಯ ಉಪಸ್ಥಿತರಿದ್ದರು. ಸುಕುಮಾರ ಮಲೆಕುಡಿಯ ದಿಡುಪೆ ಅಧ್ಯಕ್ಷತೆ ವಹಿಸಿದ್ದರು.
2025 ಡಿಸೆಂಬರ್ 25 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕುತ್ಲೂರು ಮಲೆಯಲ್ಲಿ ನಡೆದ ಮಲೆಕುಡಿಯ ಆದಿವಾಸಿ ಸಮಾವೇಶದಲ್ಲಿ ಈ ಕೆಳಕಂಡ 5 ನಿರ್ಣಯಗಳನ್ನು ಮಂಡಿಸಿ, ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ನಿರ್ಣಯಗಳು ಈ ರೀತಿ ಇದೆ.
ನಿರ್ಣಯ – 1 : ಅರಣ್ಯ ಹಕ್ಕು ಕಾಯ್ದೆ–2006 (Forest Rights Act) ಅನ್ನು ಕರ್ನಾಟಕದಲ್ಲಿ ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವೈಯಕ್ತಿಕ ಮತ್ತು ಸಮೂಹ ಅರಣ್ಯ ಉತ್ಪನ್ನ ಸಂಗ್ರಹದ ಹಕ್ಕುಗಳನ್ನು ನೀಡಬೇಕು. ಅರಣ್ಯದಲ್ಲಿ ವಾಸ ಮಾಡುವ ಮಲೆಕುಡಿಯರಿಗೆ ಹಕ್ಕುಪತ್ರ ಸೇರಿದಂತೆ ಎಲ್ಲಾ ಭೂದಾಖಲೆಗಳನ್ನು ಒದಗಿಸಬೇಕು. ಹುಲಿ ಯೋಜನೆ ಮತ್ತಿತರ ಅರಣ್ಯ, ಪ್ರಾಣಿ ಸಂಬಂಧಿತ ಯೋಜನೆಗಳ ನೆಪದಲ್ಲಿ ಯಾವುದೇ ಮಲೆಕುಡಿಯರನ್ನು ಅರಣ್ಯದಿಂದ ಒಕ್ಕಲೆಬ್ಬಿಸಬಾರದು. ಈ ನಿಟ್ಟಿನಲ್ಲಿ ನಡೆಯುವ ಕಂದಾಯ ಮತ್ತು ಅರಣ್ಯ ಇಲಾಖೆಯ ದಬ್ಬಾಳಿಕೆಯನ್ನು ತಕ್ಷಣ ನಿಲ್ಲಿಸಬೇಕು.
ನಿರ್ಣಯ – 2 : ಕುದುರೇಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪ್ರದೇಶದಲ್ಲಿ ಗಣಿ, ರೆಸಾರ್ಟ್, ಕೈಗಾರಿಕಾ ಮತ್ತು ಅಭಿವೃದ್ಧಿ ಯೋಜನೆ, ಎನ್ ಜಿಒಗಳ ಜೀವವೈವಿದ್ಯ ಕೇಂದ್ರಗಳು, ಎನ್ ಜಿಒಗಳ ಅಧ್ಯಯನ ಕೇಂದ್ರಗಳನ್ನು ನಿಲ್ಲಿಸಬೇಕು ಮತ್ತು ತೆರವುಗೊಳಿಸಬೇಕು. ನಗರದತ್ತಾ ಬರುವ ಪ್ರಾಣಿ, ಸರೀಸೃಪಗಳು, ಬೇರೆ ಕಾಡಿನ ಅಂಚಿನಿಂದ ಸೆರೆಹಿಡಿದ ಪ್ರಾಣಿ, ಸರೀಸೃಪಗಳನ್ನು ಮಲೆಗಳಲ್ಲಿರುವ ಜನವಸತಿ ಪ್ರದೇಶದಲ್ಲಿ ಬಿಡುವುದನ್ನು ನಿಲ್ಲಿಸಬೇಕು. ಎಲ್ಲಾ ಮಲೆಕುಡಿಯ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು. ಕುಸಿದು ಬಿದ್ದ ಸೇತುವೆಗಳ ಪುನರ್ ನಿರ್ಮಾಣ ಮಾಡಬೇಕು.
ನಿರ್ಣಯ – 3 : ಕುತ್ಲೂರಿನ ಸುಂದರಿ ಸಹಿತ ಸರ್ಕಾರದ ಮುಂದೆ ಶರಣಾಗಿರುವ ಎಲ್ಲಾ ಆದಿವಾಸಿ ಮಲೆಕುಡಿಯ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡಿ ಜೀವನೋಪಾಯ ಸಹಾಯ ಧನ ಮತ್ತು ಸವಲತ್ತುಗಳನ್ನು ನೀಡಬೇಕು. ಪೊಲೀಸರ ಗುಂಡಿಗೆ ಬಲಿಯಾದ ಮಲೆಕುಡಿಯರ ಕುಟುಂಬಗಳು ತಬ್ಬಲಿಯಾಗಿದ್ದು, ಸರಕಾರ ಪರಿಹಾರ ಧನ ಒದಗಿಸಬೇಕು, ಆದಿವಾಸಿ ಮಲೆಕುಡಿಯರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣಗಳು, FIRಗಳು ಮತ್ತು ದಮನಾತ್ಮಕ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು. ಪೊಲೀಸ್, ಅರಣ್ಯ ಮತ್ತು ಇತರೆ ಇಲಾಖೆಗಳ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಮತ್ತು ಪರಿಹಾರ ಒದಗಿಸಬೇಕು.
ನಿರ್ಣಯ – 4 : ಮಲೆಕುಡಿಯ ಆದಿವಾಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ವಸತಿ ಶಾಲೆಗಳ ಸುಧಾರಣೆ ಮತ್ತು ಉನ್ನತ ಶಿಕ್ಷಣಕ್ಕೆ ವಿಶೇಷ ಮೀಸಲಾತಿ ನೀಡಬೇಕು. ಮಲೆಕುಡಿಯರು ವಾಸವಿರುವ ಪ್ರದೇಶದಲ್ಲಿ ಸಮರ್ಪಕ ಆರೋಗ್ಯ ಕೇಂದ್ರಗಳು, ವೈದ್ಯರು ಮತ್ತು ಔಷಧ ಸೌಲಭ್ಯ ಒದಗಿಸಬೇಕು. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮಲೆಕುಡಿಯ ಎನ್ನುವುದು ಸೂಕ್ಷ್ಮ ಸಮುದಾಯವಾಗಿರುವುದರಿಂದ ಮಲೆಕುಡಿಯರಿಗೆ ಒಳಮೀಸಲಾತಿ ಘೋಷಿಸಬೇಕು. ಮಲೆಕುಡಿಯರನ್ನು ಮಲೈ ಕುಡಿಯರು ಎಂಬಿತ್ಯಾದಿಯಾಗಿ ಅಪಭೃಂಶಗೊಳಿಸಿ ಸರ್ಕಾರಿ ದಾಖಲೆಗಳಲ್ಲಿ, ಜಾತಿಗಣತಿಯಲ್ಲಿ ಉಲ್ಲೇಖಿಸುವುದನ್ನು ನಿಲ್ಲಿಸಬೇಕು.
ನಿರ್ಣಯ – 5 : ಆದಿವಾಸಿ ಮಲೆಕುಡಿಯರಿಗೆ ಗ್ರಾಮ ಪಂಚಾಯತ್ ಗಳಲ್ಲಿ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಮಲೆಕುಡಿಯರ ಪುರ್ಸ ಪೂಜೆ, ಸುದೆ ಪೂಜೆ ಸೇರಿದಂತೆ ಎಲ್ಲಾ ಆಚರಣೆ, ಕಿರು ಸಂಸ್ಕೃತಿಗಳನ್ನು, ಪ್ರಕೃತಿ ಆರಾಧನಾ ಪದ್ದತಿಗಳನ್ನು ರಕ್ಷಣೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಸರ್ಕಾರವು ಮಲೆಕುಡಿಯರು ವಾಸಿಸುತ್ತಿರುವ ಪ್ರದೇಶ, ಸಮುದಾಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮಲೆಕುಡಿಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ, ಮಲೆಕುಡಿಯರದ್ದೇ ಆದ ‘ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ’ ಜೊತೆ ಸಮಾಲೋಚನೆ ನಡೆಸಬೇಕು.
