ಸಂತ್ರಸ್ತೆ ಪರ ಆರೋಪಿಗಳಿಂದ ಮನೆಗೆ ನುಗ್ಗಿ ದಾಂಧಲೆ, ಸೊತ್ತು ಹಾನಿ. ಬೆಂಕಿ ಹಚ್ಚಿ ಸಜೀವದಹನದ ಬೆದರಿಕೆ; ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು.

ಕರಾವಳಿ

ಮದುವೆಯಾಗಿ ಕೈಕೊಟ್ಟು ಬೀದಿಪಾಲು ಮಾಡಿದ್ದಾನೆಂದು ಮಾಣಿ ರಫೀಕ್ ವಿರುದ್ಧ ಬಂಟ್ವಾಳ ಠಾಣೆಗೆ ಪತ್ನಿ ಮಂಜನಾಡಿ ನಿವಾಸಿ ನಸೀಮಾ ಎಂಬವರು ದೂರು ನೀಡಿದ್ದರು. ಇದೀಗ ದೂರು ನೀಡಿದ್ದ ಸಂತ್ರಸ್ತೆ ಪರ ತಂಡದ ವಿರುದ್ಧ ರಫೀಕ್ ಪುತ್ರಿ ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ.

ಮನೆಗೆ ನುಗ್ಗಿ ದಾಂಧಲೆ ನಡೆಸಿದ ತಂಡದ ದುಷ್ಕೃತ್ಯ ಸಿಸಿ ಟೀವಿಯಲ್ಲಿ ದಾಖಲಾಗಿದ್ದು ವೀಡಿಯೋ, ಫೊಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲಾಗಿವೆ. ಮದುವೆಯಾಗಿ ತ್ರಿವಳಿ ತಲಾಖ್ ನೀಡಿ ಜೀವನ ನಡೆಸದೇ ಕೈಕೊಟ್ಟನೆಂದೂ, ಮನೆಗೆ ಮಗುವಿನ ಜೊತೆ ಬಂದಾಗ ಚಿನ್ನಾಭರಣ ಕಿತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಹೊರದಬ್ಬಿದ್ದನೆಂದು ಪತ್ನಿ ನಸೀಮಾ ಮಂಜನಾಡಿ ಬಂಟ್ವಾಳ ಠಾಣೆಗೆ ದೂರು ನೀಡಿದ್ದರು.

ದೂರಿಗೆ ಸಂಬಂಧಿಸಿದಂತೆ ಆರೋಪಿ ಮಾಣಿ ರಫೀಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಮಧ್ಯೆ ದೂರು ನೀಡಿದ್ದ ಸಂತ್ರಸ್ತೆ ಪರ ಒಂದಿಷ್ಟು ಯುವಕರು ಮಾಣಿ ರಫೀಕ್ ಮನೆಗೆ ಬಂದು ದಾಂದಲೆ ನಡೆಸಿದ್ದಾರೆ. ಮನೆಯೊಳಗೆ ಇಬ್ಬರು ಪುತ್ರಿಯರು ಮಾತ್ರ ಇದ್ದ ಸಂದರ್ಭ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಸೊತ್ತುಗಳನ್ನೆಲ್ಲಾ ಧ್ವಂಸಗೊಳಿಸಿ ಮನೆಗೆ ಬೆಂಕಿ ಹಚ್ಚಿ ಪುತ್ರಿಯರನ್ನು ಸಂಜೀವ ದಹನ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ರಫೀಕ್ ಪುತ್ರಿ ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ.

ಇಪ್ಪತ್ತೈದಕ್ಕೂ ಹೆಚ್ಚು ಜನರು ದುಷ್ಕೃತ್ಯ ಎಸಗಿದ್ದಾರೆಂದು ದೂರುದಾರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ರಫೀಕ್ ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಗೂಡಿನ ಬಳಿಯ ಮನೆ ಪುತ್ರಿಯರ ಹೆಸರಲ್ಲಿ ದಾಖಲಾಗಿವೆ. ಇದೇ ಕಾರಣಕ್ಕಾಗಿ ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ದಾಂಧಲೆ ನಡೆಸಿವೆ ಎಂದು ದೂರುದಾರರು ಆರೋಪಿಸಿದ್ದಾರೆ.

ಪೊಲೀಸರು ಯಾವುದೇ ಒತ್ತಡಕ್ಕೆ ತಲೆಬಾಗದೇ ದುಷ್ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಮನೆಯಲ್ಲಿರುವ ಪುತ್ರಿಯೊಂದಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸ್ಥಳೀಯರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.