ಗುರುಪುರ ಕೈಕಂಬ ವಿಜಯ ನರ್ಸಿಂಗ್ ಹೋಂ ವೈದ್ಯರ ಬೇಜವಾಬ್ದಾರಿತನಕ್ಕೆ ಮಗು ಬಲಿಯಾದ ಪ್ರಕರಣ: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಜಿಲ್ಲಾಡಳಿತ

ಕರಾವಳಿ

ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಸಂತೋಷ್ ಬಜಾಲ್ ಒತ್ತಾಯ

ಗುರುಪುರ- ಕೈಕಂಬ ಬಳಿಯ ವಿಜಯ ನರ್ಸಿಂಗ್ ಹೋಮ್ ನಲ್ಲಿ ಇತ್ತೀಚೆಗೆ ಹೆರಿಗೆಗೆ ದಾಖಲಾಗಿದ್ದ ವೇಳೆ ವೈದ್ಯರ ಕರ್ತವ್ಯ ಲೋಪ, ಬೇಜವಾಬ್ದಾರಿತನದಿಂದ ಬಂಟ್ವಾಳ ಅಮ್ಮುಂಜೆ ಪರಿಸರ ನಿವಾಸಿ ಬಾಣಂತಿ ದಿವ್ಯ ನವೀನ್ ಪೂಜಾರಿಯವರ ಮಗು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಯ ಪ್ರಮುಖ ವೈದ್ಯರ ವಿರುದ್ಧ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಸಂತ್ರಸ್ತ ಕಟುಂಬದ ಹೇಳಿಕೆಯನ್ನು ಪಡೆಯಲು ದಿನಾಂಕ 07-01-2026 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಭೆಯನ್ನು ಆಯೋಜಿಸಿದೆ.

ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳ ಕರ್ತವ್ಯ ಲೋಪಗಳಿಗೆ ಬೇಜವಾಬ್ದಾರಿತನಕ್ಕೆ ಸಂಬಂಧಿಸಿ ದೂರುಗಳು ಬಂದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಉನ್ನತ ಮಟ್ಟದ ಸಮಿತಿಗಳನ್ನು ಸೇರಿಸಿ ಸಂತ್ರಸ್ತರ ದೂರುಗಳನ್ನು ಆಲಿಸುತ್ತದೆಯೇ ಹೊರತು ತಪ್ಪಿತಸ್ಥ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗುವುದು ಬಹಳ ಕಡಿಮೆ.

ಆದರೆ ಈ ಪ್ರಕರಣದಲ್ಲಿ ಅಂತಹ ಅಚಾತುರ್ಯ ಆಗಬಾರದು. ಗುರುಪುರ ಕೈಕಂಬ ಸಮೀಪದ ವಿಜಯ ಕ್ಲಿನಿಕ್ ಆಸ್ಪತ್ರೆಯ ವೈದ್ಯರ ವಿರುದ್ಧ ಬಾಣಂತಿ ದಿವ್ಯ ನವೀನ್ ಪೂಜಾರಿ ಗರ್ಭಧಾರಣೆಯ ಸಂದರ್ಭದ ಎಡವಟ್ಟಿನಿಂದ ಹಿಡಿದು, ಈ ಹಿಂದೆಯೂ ಹಲವಾರು ಸಂತ್ರಸ್ತರಿಗೆ ಎಡವಟ್ಟು ಮಾಡಿ, ತಪ್ಪಾದ ಚಿಕಿತ್ಸೆ ನೀಡಿರುವ ಬಗ್ಗೆ ಬಹಳಷ್ಟು ದೂರುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಈ ಬಗ್ಗೆಯೂ ಸದ್ರಿ ಅಸ್ಪತ್ರೆಯ ವಿರುದ್ದ ಸಮಗ್ರ ತನಿಖೆ ನಡೆಯಬೇಕು. ಅದೇ ರೀತಿ ಇಂತಹದೇ ಪ್ರಕರಣಗಳು ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದು ಚಿಕಿತ್ಸಾ ಕ್ರಮವಲ್ಲದ ಚಿಕಿತ್ಸೆ ನೀಡಿ, ದುಬಾರಿ ವೆಚ್ಚ ವಸೂಲಿ ಮಾಡುವ, ಅನಗತ್ಯ ಪರೀಕ್ಷೆ ನಡೆಸುವ ಈ ಎಲ್ಲಾ ಬಗೆಗೂ ಸರಿಯಾದ ಕ್ರಮಕೈಗೊಳ್ಳುವಂತಾಗಬೇಕು. ಈಗಾಗಲೇ ಮಗುವನ್ನು ಕಳೆದುಕೊಂಡು ಕಂಗಾಲಾಗಿರುವ ಬಾಣಂತಿ ದಿವ್ಯ ಕುಟುಂಬಕ್ಕೆ ನಷ್ಟ ಪರಿಹಾರವನ್ನೂ ಒದಗಿಸಿಕೊಡಲು ಜಿಲ್ಲಾಡಳಿತ ಮುಂದಾಗಬೇಕೆಂದು ಡಿವೈಎಪ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸಂಬಂಧ ಪಟ್ಟವರನ್ನು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಸದ್ರಿ ಅಸ್ಪತ್ರೆಯ ವಿರುದ್ದ ಉಗ್ರ ರೀತಿಯ ಹೋರಾಟ ನಡೆಸುವುದಾಗಿಯು ತಮ್ಮ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.