‘ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎಂಬಂತಾಗಿದೆ ಬಜಪೆ ಪಟ್ಟಣ ಪಂಚಾಯತ್ ನ ಸದ್ಯದ ಪರಿಸ್ಥಿತಿ. ಇಲ್ಲಿನ ಚೀಫ್ ಆಫೀಸರ್ ಆನೆ ನಡೆದದ್ದೇ ಹಾದಿ ಅನ್ನುವಂತಾಗಿದೆ. ಜನಪ್ರತಿನಿಧಿಗಳ ಮಾತಿಗೆ ಕವಡೆ ಕಾಸಿನ ಬೆಲೆಯಿಲ್ಲ. ಎಲ್ಲವೂ ಹೊಸದಾಗಿ ಬಂದ ಮುಖ್ಯಾಧಿಕಾರಿಯ ಮೂಗಿನ ನೇರಕ್ಕೆ ನಡೆಯುವುದು. ಅಷ್ಟಕ್ಕೂ ಬಜಪೆ ಪಟ್ಟಣ ಪಂಚಾಯತ್ ಕರ್ಮಕಥೆ ಏನು? ಇಲ್ಲಿದೆ ಡೀಟೈಲ್ಸ್.
ಮಂಗಳೂರಿನಿಂದ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಬಜಪೆ ವೇಗವಾಗಿ ಬೆಳೆಯುತ್ತಿರುವ ನಗರ. ಇತ್ತೀಚೆಗೆ ಬಜಪೆ ಪಟ್ಟಣ ಪಂಚಾಯತ್ ಆಗಿ ಬದಲಾಗಿದೆ. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದೇ ಇಲ್ಲಿ. ಪಟ್ಟಣ ಪಂಚಾಯತ್ ಆಗಿ ಬದಲಾದರೂ ಬಜಪೆಯ ಹಣೆಬರಹವೇನೂ ಬದಲಾದಂತೆ ಕಾಣುತ್ತಿಲ್ಲ. ಬಜಪೆ ಪೇಟೆಯ ಸುತ್ತಮುತ್ತ ಅಗೆದ ರಸ್ತೆಗಳು, ತ್ಯಾಜ್ಯ ವಿಲೇವಾರಿಯ ಅಸಮರ್ಪಕತೆ, ರಸ್ತೆಯ ದು:ಸ್ಥಿತಿ ಒಂದೆರಡಲ್ಲ. ಬಜಪೆ ಹೆಸರಿಗೆ ಮಾತ್ರ ಪಟ್ಟಣವಾಗಿದೆ. ಆದರೆ ನೂರಾರು ಸಮಸ್ಯೆಗಳು ಇಲ್ಲಿ ಮಾಮೂಲಾಗಿದೆ.
ಆದರೆ ಇದೀಗ ಇಲ್ಲಿಗೆ ನೂತನವಾಗಿ ವಕ್ಕರಿಸಿಕೊಂಡಿರುವ ಮುಖ್ಯಾಧಿಕಾರಿ ಫಕೀರ ಸಿಕ್ಕಿದ್ದು ಸೀರುಂಡೆ ಅನ್ನುವಂತೆ ಎಲ್ಲವನ್ನೂ ಬಾಚಿಕೊಳ್ಳಲು ಮುಂದಾಗಿದ್ದಾರೆ. ನಿವೃತ್ತಿಗೆ ಇನ್ನು ಇರುವುದು ಬರೀ ಒಂದು ವರ್ಷ. ಅಲ್ಲಿಯವರೆಗೂ ಹಾಯಾಗಿ ಗಡದ್ದಾಗಿ ಮೇಯಲು ಬೇಕಾದ ಸಕಲ ವ್ಯವಸ್ಥೆಗಳನ್ನು ಮಾಡಿಟ್ಟುಕೊಂಡಿದ್ದಾರೆ.
ಫಕೀರ ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡದ್ದೇ ತಡ ಪಟ್ಟಣ ಪಂಚಾಯತ್ತಿನ ಜನರಲ್ ಫಂಡ್ ಎಲ್ಲವೂ ಸ್ವಾಹಾ ಆಗಿದೆ. ಇಲ್ಲಿ ಯಾವೊಂದು ಕಾಮಗಾರಿಗಳು ಪಟ್ಟಣ ಪಂಚಾಯತ್ ಸದಸ್ಯರ ಪಾಲಿಗಾಗಲಿ, ಅತ್ತ ಜನಪ್ರತಿನಿಧಿಗಳ ಗಮನಕ್ಕಾಗಲಿ ಬರುತ್ತಿಲ್ಲ. ಅಧಿಕಾರಿಗಳೇ ಟೆಂಡರ್ ಕರೆಯದೆ ಬೇಕಾದ ಕಾಮಗಾರಿಗಳಿಗೆ ಗುತ್ತಿಗೆದಾರರನ್ನು ನೇಮಿಸಿಕೊಂಡು ಕಾಮಗಾರಿಗಳಾಗುತ್ತಿದೆ. ಆದರೆ ಇಲ್ಲಿ ಹಳೆಯ ಟೆಂಡರ್ ಗಳಾದ ಕಾಮಗಾರಿಗಳು ಇನ್ನೂ ಬಾಕಿಯಾಗಿದೆ. ಅದರ ನಡುವೆ ಹೊಸ ಹೊಸ ಕಾಮಗಾರಿಗಳು ನಡೆಯುತ್ತಲೇ ಇದೆ ಎನ್ನುವುದೇ ಈಗಿನ ಹೊಸ ಇಶ್ಯೂ.
ಪಟ್ಟಣ ಪಂಚಾಯತಿನ ಎಲ್ಲಾ ಕಾಮಗಾರಿಗಳು, ಕಟ್ಟಡಗಳ ಪರವಾನಿಗೆ, ಟೆಂಡರ್ ಪ್ರಕ್ರಿಯೆಗಳು, ನಿರಾಕ್ಷೇಪಣಾ ಪತ್ರಗಳು, ಕುಡಿಯುವ ನೀರಿನ ಯೋಜನೆ ಹೀಗೆ ಎಲ್ಲಾ ಕಾಮಗಾರಿಗಳ ಇಂಚಿಂಚೂ ಮಾಹಿತಿಗಳು ಆಯಾ ಜನಪ್ರತಿನಿಧಿಗಳ ಗಮನಕ್ಕೆ ಬರಲೇಬೇಕು. ಆದರೆ ಸದ್ಯ ಇಲ್ಲಿ ನಡೆಯುವ ಕಾಮಗಾರಿಗಳು, ಟೆಂಡರ್ ಗಳು, ಪರವಾನಿಗೆ, ಎನ್ ಓ ಸಿ ಗಳು, ಬಾಕಿ ಕಾಮಗಾರಿ, ಹೊಸ ಕಾಮಗಾರಿ ಎಲ್ಲಾ ವಿಚಾರಗಳು ಚೀಫ್ ಆಫೀಸರ್ ನ ಮೂಗಿನ ನೇರದಲ್ಲಿ ನಡೆಯುತ್ತಿದೆ. ಇಲ್ಲಿಯ ಸಾಧಕ ಬಾಧಕಗಳಿಗೆ ಜನಪ್ರತಿನಿಧಿಗಳು ಭಾಜನರಾದರೂ, ಅಲ್ಲಿ ಅವರಿಗೆ ಏನು ವಿಚಾರ ತಿಳಿದಿರುವುದಿಲ್ಲ.

ಹಾಗಾಗಿ ಈ ಎಲ್ಲಾ ವಿಚಾರಗಳನ್ನು ಅಧಿಕಾರಿಗಳೇ ನಿಭಾಯಿಸುವುದಾದರೆ ಜನಪ್ರತಿನಿಧಿಗಳು ಯಾತಕ್ಕಾಗಿ? ಸಾರ್ವಜನಿಕರಿಗೆ ಅನ್ಯಾಯ ವಾದರೆ ಅವರು ಮೊದಲು ಹೋಗುವುದು ಜನಪ್ರತಿನಿಧಿಗಳ ಬಳಿಗೆ ತಾನೇ? ಜನಪ್ರತಿನಿಧಿಗಳಿಗೆ ವಿಚಾರನೇ ತಿಳಿಯದಿದ್ದರೆ ಅವರು ಆ ಸ್ಥಾನದಲ್ಲಿ ಇದ್ದು ಏನು ಪ್ರಯೋಜನ? ಹಾಗಾಗಿ ಈ ಬಾರಿ ಮುಖ್ಯಾಧಿಕಾರಿಯ ವಿರುದ್ಧ ಜನಪ್ರತಿನಿಧಿಗಳಂತೂ ಟೋಟಲ್ ಗರಂ ಆಗಿದ್ದಾರೆ.
ಮುಖ್ಯಾಧಿಕಾರಿ ಫಕೀರಪ್ಪನ ವಿರುದ್ಧ ಜೋರಾಗಿ ಕೇಳಿ ಬರುತ್ತಿರುವ ಸುದ್ದಿ ಏನೆಂದರೆ, ಜನರಲ್ ಫಂಡ್ ಮತ್ತು ಎಸ್ ಡಬ್ಲ್ಯೂ ಎಂ ಫಂಡನ್ನು ಯಾರಿಗೂ ತಿಳಿಯದಂತೆ ಸ್ವಾಹಾ ಮಾಡುತ್ತಿರುವ ಬಗ್ಗೆ. ಅಧಿಕಾರ ವಹಿಸಿದ ತಕ್ಷಣ ಇವರು ಮಾಡಿರುವ ಮೊದಲ ಕೆಲಸವೇ ಇದು. ಖಜಾನೆಯಲ್ಲಿ ಉಳಿತಾಯದ ಮೊತ್ತ ಎಷ್ಟಿದೆ ಎಂಬುದು. ಜನರಲ್ ಫಂಡ್ ಮತ್ತು ಎಸ್ ಡಬ್ಲ್ಯೂ ಎಂ ಫಂಡಿನಲ್ಲಿರುವ ಹಣವನ್ನು ಹೊಸ ಕಾಮಗಾರಿಗೆ ಬಳಸಿಕೊಂಡು ಖಾಲಿ ಮಾಡುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಟೆಂಡರ್ ಕರೆಯದೆ ತ್ಯಾಜ್ಯ ವಾಹನಕ್ಕೆ ಬಿಲ್ ರೆಡಿಮಾಡಿಟ್ಟುಕೊಂಡಿದ್ದಾರಂತೆ. ಹೊಸ ಕಾಮಗಾರಿಯನ್ನು ತುರ್ತಾಗಿ ಮಾಡುತ್ತಿದ್ದು, ನಿಯಮ ಪ್ರಕಾರ ಟೆಂಡರ್ ಕರೆದಿಲ್ಲ ಅನ್ನುವ ಆರೋಪ ಇದೆ. ತಮಗೆ ಬೇಕಾದ ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿಗೆ ಇಂತಿಷ್ಟು ಕಮೀಷನ್ ಪಡೆಯುತ್ತಿದ್ದಾರೆ ಅನ್ನುವ ಗಂಭೀರ ಆರೋಪಗಳಿವೆ. ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಮಾನ್ಯ ಮುಖ್ಯಮಂತ್ರಿಗಳು, ಸಭಾಧ್ಯಕ್ಷರು, ಪೌರಾಡಳಿತ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದಾರೆ.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಈ ಹಿಂದೆ ಎರಡು ವರ್ಷ ಮೊದಲು ಮೂರು ತಿಂಗಳುಗಳ ಕಾಲ ಬಜಪೆಯಲ್ಲಿಯೇ ಕಂದಾಯ ನಿರೀಕ್ಷಕರಾಗಿ ಕೆಲಸ ನಿರ್ವಹಿಸಿದ್ದರು. ವಿಟ್ಲದಲ್ಲೂ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡಿದ್ದರು. ಬಜಪೆಯಲ್ಲಿ ಕಂದಾಯ ನಿರೀಕ್ಷಕರಾಗಿ ಇದ್ದಿದ್ದು ಬರೀ ಮೂರು ತಿಂಗಳಾದರೂ 30 ವರ್ಷಕ್ಕೆ ಆಗುವಷ್ಟು ಕೂಡಿಟ್ಟು ಹೋಗಿದ್ದರು ಎಂದು ಜನರಾಡಿಕೊಳ್ಳುತ್ತಿದ್ದಾರೆ! ಕಂದಾಯ ನಿರೀಕ್ಷಕರಾಗಿದ್ದ ಸಂದರ್ಭ ಪರವಾನಿಗೆ ಇಲ್ಲದೆ ಕಟ್ಟಡಕ್ಕೆ ಡೋರ್ ನಂಬರ್ ಕೊಟ್ಟು ಸಾಕಷ್ಟು ಕಮಾಯಿ ಮಾಡಿದ್ದಾರಂತೆ! ಹಲವಾರು ಅನಧಿಕೃತ ಫೈಲ್ ಮಾಡಿರುವ ಬಗ್ಗೆಯೂ ಮಾತು ಕೇಳಿ ಬರುತ್ತಿದೆ. ಮೂಡುಬಿದಿರೆಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಸಂದರ್ಭ ಖಾಲಿ ಜಾಗಕ್ಕೆ ಡೋರ್ ನಂಬರ್ ಕೊಟ್ಟಿದ್ದರು. ಬಜಪೆ ಮುಖ್ಯಾಧಿಕಾರಿ ವಹಿಸಿಕೊಂಡ ನಂತರ ಹುಲ್ಲು ಕಟ್ ಮಾಡದೇನೇ 75 ಸಾವಿರ ಬಿಲ್ ಮಾಡಿ ಗುಳುಂ ಮಾಡಿದ್ದಾರಂತೆ. ಈ ಬಗ್ಗೆ ತನಿಖೆ ಆಗಬೇಕೆಂದು ಜನ ಆಗ್ರಹಿಸುತ್ತಿದ್ದಾರೆ. ವಿಟ್ಲದಲ್ಲೂ ಇರುವಾಗಲೂ ಇಂತಹದ್ದೇ ಕಸುಬು ಮಾಡಿದ್ದಾರಂತೆ! ಹಂತ ಹಂತವಾಗಿ ಭಡ್ತಿ ಪಡೆದು ಬಂದ ಫಕೀರಪ್ಪ ಕಮಾಯಿಯಲ್ಲೂ ಎಕ್ಸ್ ಫರ್ಟ್ ಅಂತೆ! ಬಜಪೆಯ ನರನಾಡಿ ಗೊತ್ತಿರುವುದರಿಂದ ಇದೀಗ ಪಟ್ಟಣ ಪಂಚಾಯಿತಿ ನಲ್ಲಿ ಉಣ್ಣಲು ಕುಳಿತಿದ್ದಾರಂತೆ! ಎಲ್ಲೆಲ್ಲೂ ರೈಡ್ ಮಾಡುವ ಲೋಕಾಯುಕ್ತರು ಬಜಪೆಯ ದಾರಿಯನ್ನೊಮ್ಮೆ ನೋಡಿದರೆ ಒಳ್ಳೆಯದಿತ್ತು ಅಂತ ಜನರಾಡಿಕೊಳ್ಳುವಂತಾಗಿದೆ.
