ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಯೂ ಅಂತರದ ನಿಯಮ ಪಾಲಿಸಲು ಆಗ್ರಹ: ಮುನೀರ್ ಕಾಟಿಪಳ್ಳ
ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಆರಂಭಿಸಿರುವುದು ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆಗಳು ಭುಗಿಲೆದ್ದಿವೆ. ಮಂಜೇಶ್ವರದ ಶಾಸಕರೂ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
‘ಕರ್ನಾಟಕದ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ತಲಪಾಡಿ ಟೋಲ್ ಗೇಟ್ ನಿಂದ ಕುಂಬಳೆ ಟೋಲ್ ಗೇಟ್ ಗೆ ಇರುವ ಅಂತರ ಕೇವಲ 26 ಕಿ ಮೀ ಮಾತ್ರ, ಹೆದ್ದಾರಿ ಪ್ರಾಧಿಕಾರದ ನಿಯಮಗಳ ಪ್ರಕಾರ ಎರಡು ಟೋಲ್ ಗೇಟ್ ಗಳ ನಡುವಿನ ಅಂತರ ಕನಿಷ್ಟ 60 ಕಿ ಮೀ ಇರಬೇಕು, ಈ ನಿಯಮಗಳನ್ನು ಗಾಳಿಗೆ ತೂರಿ ಕುಂಬಳೆಯಲ್ಲಿ ಟೋಲ್ ಸಂಗ್ರಹಿಸುವುದುಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಪ್ರತಿಭಟನಾ ನಿರತರು ಪಟ್ಟು ಹಿಡಿದಿದ್ದಾರೆ.
“ತಲಪಾಡಿಯಿಂದ 60 ಕಿ ಮೀ ಮುಂದಕ್ಕೆ(ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ತಕ್ಷಣ) ಟೋಲ್ ಗೇಟ್ ತೆರೆಯಲಿದ್ದೇವೆ, ಆ ಸಂದರ್ಭ ಕುಂಬಳೆ ಟೋಲ್ ಗೇಟ್ ಮುಚ್ಚುತ್ತೇವೆ, ಅಲ್ಲಿಯವರಗೆ ತಾತ್ಕಾಲಿಕವಾಗಿಯಷ್ಟೆ ಕುಂಬಳೆ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ನಡೆಸುತ್ತೇವೆ” ಎಂದು ಹೆದ್ದಾರಿ ಪ್ರಾಧಿಕಾರ ಸಮಜಾಯಿಷಿ ನೀಡುತ್ತಿದೆ. ಆದರೆ, ಪ್ರತಿಭಟನಾಕಾರರು ಹೆದ್ದಾರಿ ಪ್ರಾಧಿಕಾರದ ಸಮಜಾಯಿಷಿಯನ್ನು ತಿರಸ್ಕರಿಸಿದ್ದಾರೆ.
ಕುಂಬಳೆಯಲ್ಲಿ ಪ್ರತಿಭಟನಾ ನಿರತ ಜನತೆಗೆ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತ ಪಡಿಸುತ್ತದೆ. ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟ ಕುಂಬಳೆ ಹೋರಾಟಕ್ಕೆ ಸ್ಪೂರ್ತಿ ಒದಗಿಸಿದೆ, ಅಲ್ಲಿನ ಹೋರಾಟಕ್ಕೆ ಮುಂಚಿತವಾಗಿ ನಮ್ಮೊಂದಿಗೆ ಚರ್ಚೆ ನಡೆಸಿರುತ್ತಾರೆ,ಸಲಹೆಗಳನ್ನು ಪಡೆದಿರುತ್ತಾರೆ.

ಪ್ರಶ್ನೆ ಅಷ್ಟು ಮಾತ್ರ ಇರುವುದಲ್ಲ, ಗಡಿಯ(ಕರ್ನಾಟಕ) ಈ ಭಾಗದಲ್ಲಿ ಟೋಲ್ ಗೇಟ್ ನಿಯಮಗಳು ಯಾವ ರೀತಿ ಪಾಲನೆಯಾಗುತ್ತಿದೆ ಎಂದು ನಾವೀಗ ಚರ್ಚಿಸಬೇಕಿದೆ. ತಲಪಾಡಿಯಿಂದ ಬಿ ಸಿ ರೋಡ್ (ಬ್ರಹ್ಮರಕೂಟ್ಲು) ಟೋಲ್ ಕೇಂದ್ರಕ್ಕೆ ಇರುವ ಅಂತರ ಕೇವಲ 33 ಕಿ ಮೀ ಮಾತ್ರ. ಹೆಜಮಾಡಿಯಿಂದ ಬ್ರಹ್ಮರಕೂಟ್ಲು ಟೋಲ್ ಗೇಟ್ ಗೆ ಇರುವ ಅಂತರ 45 ಕಿಮಿ, ತಲಪಾಡಿ ಟೋಲ್ ಗೇಟ್ ಗೆ ಇರುವುದು 43 ಕಿ ಮೀಟರ್. ಅದರ ಅರ್ಥ, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಟೋಲ್ ಗೇಟ್ ಗಳ ಅಂತರ ನಿಯಮವನ್ನು ಬೇಕಾಬಿಟ್ಟಿ ಗಾಳಿಗೆ ತೂರಿ ವಾಹನ ಸವಾರರ ಸುಲಿಗೆ ನಡೆಸಲಾಗುತ್ತಿದೆ ಎಂಬುದು ಸ್ಪಷ್ಟವಾಯಿತು.
“(ಕೇರಳದ)ಕುಂಬಳೆಯಲ್ಲಿ ತೆರೆದಿರುವುದು ತಾತ್ಕಾಲಿಕ ಟೋಲ್ ಗೇಟು, ಮುಂದಕ್ಕೆ 60 ಕಿ ಮೀ ದೂರದಲ್ಲಿ ಟೋಲ್ ಗೇಟ್ ತೆರೆಯಲಿದ್ದೇವೆ, ಆಗ ಕುಂಬಳೆಯಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಳಿಸುತ್ತೇವೆ” ಎಂದು ಅಧಿಕೃತವಾಗಿ ಹೇಳುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗಡಿಯ ಈ ಭಾಗದ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಅಂತರ ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಹೆದ್ದಾರಿ ಸುಲಿಗೆ ಕೇಂದ್ರಗಳ ಕುರಿತು ಈ ರೀತಿಯ ಮಾತುಗಳನ್ನು ಯಾಕೆ ಆಡುವುದಿಲ್ಲ, ಕುಂಬಳೆಯಲ್ಲಿ ಅಂತರದ ನಿಯಮ ಖಂಡಿತವಾಗಿಯೂ ಪಾಲಿಸುತ್ತೇವೆ, ಈಗಿನದ್ದು ತಾತ್ಕಾಲಿಕ ಎಂದು ಭರವಸೆ ನೀಡುವ ಅಧಿಕಾರಿಗಳು ಇಲ್ಲೇಕೆ ಅದೇ ಹೇಳಿಕೆ ನೀಡುವುದಿಲ್ಲ ? ಇಲ್ಲಿನ ಸಂಸದರು, ಶಾಸಕರು, ರಾಜಕೀಯ ಪಕ್ಷಗಳೇಕೆ ಮೌನ ?
ಇನ್ನೀಗ ಮಂಗಳೂರು – ಬೆಂಗಳೂರು ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ವಳಾಲಿನಲ್ಲಿ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ, ಹಾಗೆಯೆ ಮಂಗಳೂರು -ಮೂಡಬಿದ್ರೆ – ಕಾರ್ಕಳ ಹೆದ್ದಾರಿಯ ಗಂಜಿಮಠದ ಸಮೀಪವು ಟೋಲ್ ಗೇಟ್ ನಿರ್ಮಾಣ ನಡೆಯುತ್ತಿದೆ. ಇಲ್ಲಿ ಅಂತರದ ಪ್ರಶ್ನೆ ಏನು ? ಬ್ರಹ್ಮರ ಕೂಟ್ಲು ಟೋಲ್ ಗೇಟ್ ನಿಂದ ವಳಾಲು ಟೋಲ್ ಗೇಟ್ ಗೆ ಇರುವ ಅಂತರ 34 ಕಿ ಮೀ ಮಾತ್ರ. ತಲಪಾಡಿಯಿಂದ ವಳಾಲು ಟೋಲ್ ಗೇಟ್ ಗೆ ಇರುವ ಅಂತರ 67 ಕಿ ಮೀ. ಹಾಗಾದರೆ, ವಳಾಲು ಟೋಲ್ ಗೇಟ್ ತೆರೆಯುವಾಗ, ಬ್ರಹ್ಮರ ಕೂಟ್ಲು ಟೋಲ್ ಗೇಟ್ ಮುಚ್ಚಬೇಕಲ್ಲವೆ ? ಕನಿಷ್ಟ ವಳಾಲು ಟೋಲ್ ಗೇಟ್ ಅನ್ನು ಇನ್ನೂ 25 ಕಿ ಮೀ ಮುಂದಕ್ಕೆ ತೆಗೆದುಕೊಂಡು ಹೋಗಬೇಕಲ್ಲವೆ ? ಇಂತಹ ಯಾವ ಪ್ರಸ್ತಾಪವೂ ಹೆದ್ದಾರಿ ಪ್ರಾಧಿಕಾರದ ಮುಂದೆ ಇಲ್ಲ. ಇಲ್ಲಿ ಯಾರೂ ಈ ಕುರಿತು ಮಾತಾಡುವುದಿಲ್ಲ.
ಮೂಡಬಿದ್ರೆ – ಮಂಗಳೂರು ಹೆದ್ದಾರಿಯ ಗಂಜಿಮಠದಲ್ಲಿ ಸಿದ್ದಗೊಳ್ಳುತ್ತಿರುವ ಟೋಲ್ ಗೇಟ್ ನಿಂದ ತಲಪಾಡಿ ಟೋಲ್ ಗೇಟ್ ಗೆ ಇರುವ ಅಂತರ 34 ಕಿ ಮೀ, ಹೆಜಮಾಡಿ ಟೋಲ್ ಗೇಟ್ ಗೆ ಇರುವ ಅಂತರ 45 ಕಿ ಮೀ ಮಾತ್ರ. ಇದು ಅಂತರ ನಿಯಮಗಳ ಸ್ಪಷ್ಟ ಉಲ್ಲಂಘನೆ ಅಲ್ಲವೆ, 60 ಕಿ ಮೀ ನಿಯಮ ಪ್ರಕಾರ ಮೂಡಬಿದ್ರೆಯಿಂದ ಆ ಕಡೆಗೆ ಟೋಲ್ ಗೇಟ್ ಸ್ಥಳಾಂತರ ಗೊಳ್ಳಬೇಕಾಗುತ್ತದೆ.
ಇದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅಂತರದ ನಿಯಮ ಉಲ್ಲಂಘಿಸಿ ಈಗ ನಡೆಯುತ್ತಿರುವ ಟೋಲ್ ಸುಲಿಗೆ ಹಾಗು ತಕ್ಷಣಕ್ಕೆ ಆರಂಭಗೊಳ್ಳಲಿರುವ ಇನ್ನೆರಡು ನಿಯಮ ಬಾಹಿರ ಟೋಲ್ ಗೇಟ್ ಗಳ ವಾಸ್ತವ ಚಿತ್ರಣ. ಕೇರಳಕ್ಕೆ ಸೇರಿರುವ ಕುಂಬಳೆ, ಕಾಸರಗೋಡಿನಲ್ಲಿ 60 ಕಿ ಮೀ ಅಂತರದ ನಿಯಮಗನ್ನು ಖಂಡಿತಾ ಪಾಲಿಸಲಿದ್ದೇವೆ ಎಂದು ಹೇಳುವ ಹೆದ್ದಾರಿ ಪ್ರಾಧಿಕಾರ ಗಡಿಯ ಈ ಭಾಗದ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಈ ಕುರಿತು ಬಾಯಿಬಿಡದಿರುವುದು, ವಳಾಲು, ಗಂಜಿಮಠದಲ್ಲಿ ನಿಮಯ ಉಲ್ಲಂಘಿಸಿ ಮತ್ತೆರಡು ಟೋಲ್ ಗೇಟ್ ತೆರೆಯಲು ಸಿದ್ದತೆ ನಡೆಸಿರುವುದರ ಅರ್ಥ ಏನು ?
ಈ ಕುರಿತು ಇಲ್ಲಿನ ಸಂಸದರು, ಶಾಸಕರುಗಳು ಚಕಾರ ಶಬ್ದ ಎತ್ತದಿರುವುದು, ರಾಜಕೀಯ ಪಕ್ಷಗಳು ಮೌನವಹಿಸಿರುವುದರ ಅರ್ಥ ಏನು ? ಇವರುಗಳಿಗೆ ಜವಾಬ್ದಾರಿ ಇಲ್ಲವೆ ? ಇದಲ್ಲದೆ ಇವರುಗಳ ಜವಾಬ್ದಾರಿ ಏನು ?
ಕಾಸರಗೋಡು, ಕುಂಬಳೆಯವರು ಸುರತ್ಕಲ್ ಟೋಲ್ ತೆರವು ಹೋರಾಟದಿಂದ ಸ್ಪೂರ್ತಿ ಪಡೆದಿದ್ದರೆ, ನಾವೀಗ ಕುಂಬಳೆಯಲ್ಲಿ ನಡೆಯುತ್ತಿರುವ ಹೋರಾಟದಿಂದ ಸ್ಪೂರ್ತಿ ಪಡೆದು ಸುರತ್ಕಲ್ ಮಾದರಿ ಹೋರಾಟಕ್ಕೆ ಮುಂದಾಗಬೇಕಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಟೋಲ್ ಗೇಟ್ ಗಳ ನಡುವಿನಲ್ಲಿ ಅಂತರದ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಆಗಬೇಕು.
