ಗಂಜಿಮಠದ ಯುವಕನಿಗೆ ಒಂದೇ ದಿನದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಟ್ಟು ಮಾನವೀಯತೆ ಮೆರೆದ ಮೊಹಿದ್ದೀನ್ ಬಾವಾ
ತಂದೆ ವಿದೇಶದಲ್ಲಿ ಮರಣ, ಮಗ ಊರಿನಲ್ಲಿ. ತಂದೆಯ ಮುಖವನ್ನು ಕೊನೆಯ ಬಾರಿ ನೋಡಿ ಬೀಳ್ಕೊಡಬೇಕಾದ ಮಗನಿಗೆ ಪಾಸ್ ಪೋರ್ಟ್ ಇಲ್ಲದೇ ಊರಿನಲ್ಲಿಯೇ ಬಾಕಿಯಾಗುವ ದುಃಖತಪ್ತದ ವಾತಾವರಣ. ಆ ಸಂದರ್ಭದಲ್ಲಿ ಕುಟುಂಬಕ್ಕೆ ನೆನಪಾಗಿದ್ದು ಮಾಜಿ ಶಾಸಕ ಮೊಹಿದ್ದೀನ್ ಬಾವಾ. ವಿಷಯ ತಿಳಿಯುತ್ತಿದ್ದಂತೆ ಮಗನಿಗೆ ಒಂದೇ ದಿನದಲ್ಲಿ ಪಾಸ್ ಪೋರ್ಟ್ ಮಾಡಿಸಿ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ ಮೊಹಿದ್ದೀನ್ ಬಾವಾ.
ಈ ಘಟನೆ ನಡೆದಿರುವುದು ಮಂಗಳೂರು ತಾಲೂಕಿನ ಗಂಜಿಮಠದಲ್ಲಿ. ಗಂಜಿಮಠ ನಿವಾಸಿಯಾಗಿರುವ ಮುಹಮ್ಮದ್ ಅಸ್ಲಾಂ ಎಂಬವರು ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಜನವರಿ 12 ರಂದು ಮೃತರಾಗಿದ್ದರು. ಅವರ ನಾಲ್ವರು ಮಕ್ಕಳ ಪೈಕಿ ಇಬ್ಬರು ದಮ್ಮಾಮ್ ನಲ್ಲಿಯೇ ಕೆಲಸ ಮಾಡಿಕೊಂಡಿದ್ದಾರೆ. ಇನ್ನುಳಿದ ಇಬ್ಬರು ಮಕ್ಕಳು ಹಾಗೂ ಧರ್ಮಪತ್ನಿ ಗಂಜಿಮಠ ದಲ್ಲಿ ವಾಸವಾಗಿದ್ದರು. ಮಕ್ಕಳು ತಂದೆಯ ಅಂತ್ಯಸಂಸ್ಕಾರವನ್ನು ದಮ್ಮಾಮ್ ನಲ್ಲಿ ನೆರವೇರಿಸುವುದಾಗಿ ತೀರ್ಮಾನಿಸಿದ್ದರು. ಅದರಂತೆ ಅವರ ಧರ್ಮಪತ್ನಿ ಹಾಗೂ ಓರ್ವ ಮಗ ದಮ್ಮಾಮ್ ಗೆ ತೆರಳಿದ್ದಾರೆ. ಆದರೆ ಕೊನೆಯ ಮಗ ಹದಿನೇಳರ ಹರೆಯದ ಮೊಹಮ್ಮದ್ ಶಾದ್ ಎಂಬಾತನ ಪಾಸ್ ಪೋರ್ಟ್ ಅವಧಿ ಮುಗಿದಿರುವುದರಿಂದ ಆತನಿಗೆ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಅಸಾಧ್ಯವಾದ ಸನ್ನಿವೇಶ ಉಂಟಾಗಿತ್ತು. ಕೂಡಲೇ ಈ ವಿಷಯವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಇರ್ಫಾನ್ ಅವರ ಗಮನಕ್ಕೆ ತಂದಾಗ, ಇರ್ಫಾನ್ ಈ ವಿಚಾರವನ್ನು ಮೊಹಿದ್ದೀನ್ ಬಾವಾ ರ ಗಮನಕ್ಕೆ ತಂದಿದ್ದರು . ಕೂಡಲೇ ಕಾರ್ಯಪ್ರವೃತ್ತರಾದ ಮೊಹಿದ್ದೀನ್ ಬಾವಾ ಸಕಲ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಜನವರಿ 13 ರಂದು ಮಂಗಳೂರು ಪಾಸ್ ಪೋರ್ಟ್ ಆಫೀಸಿನಲ್ಲಿ ಖುದ್ದು ಅಪಾಯಿಂಟ್ ಮೆಂಟ್ ತೆಗೆಸಿಕೊಟ್ಟು, ಅಲ್ಲಿನ ಕೆಲಸ ಕಾರ್ಯಗಳನ್ನು ತಟ್ಟನೇ ಮಾಡಿಕೊಟ್ಟು, ಪೊಲೀಸ್ ವೆರಿಫಿಕೇಶನ್ ಗಾಗಿ ಬಜಪೆ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ಅಲ್ಲಿಯೂ ಶ್ರೀಘ್ರದಲ್ಲಿ ಕೆಲಸ ಮಾಡಿಸಿ ಪೊಲೀಸ್ ಆಯುಕ್ತರ ಕಚೇರಿಗೆ ದಾಖಲೆಗಳನ್ನು ನೀಡಿ ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿ ಜನವರಿ 14 ರ ಬೆಳಿಗ್ಗೆ 10 ಗಂಟೆಗೆ ಪಾಸ್ ಪೋರ್ಟ್ ಕೈ ಸೇರುವಂತೆ ಮಾಡಿದ್ದಾರೆ.

ಮಗ ತಂದೆಯ ಕೊನೆಯ ಬಾರಿಗೆ ಮುಖ ನೋಡಲು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತಾಗ ಆತನಿಗೆ ಆಪತ್ಭಾಂದವ ನಾಗಿ ಬಂದು ನೆರವಾದವರು ಮೊಹಿದ್ದೀನ್ ಬಾವಾ ರವರು.
ಮಂಗಳೂರು ಭಾಗದಲ್ಲಿ ಸಮುದಾಯಕ್ಕೆ ಅನ್ಯಾಯವಾದಾಗ ಮೊದಲಿಗೆ ಅಲ್ಲಿ ಕಾಣಸಿಗುವುದೇ ಮೊಹಿದ್ದೀನ್ ಬಾವಾ, ಸಾಮಾಜಿಕ ಸೇವೆಗಳಲ್ಲೂ ಮುಂಚೂಣಿಯಾಗಿ ಭಾಗವಹಿಸುವ ಬಾವಾ ಆಸ್ಪತ್ರೆಗಳಲ್ಲಿ ದುಬಾರಿ ಬಿಲ್ ಪಾವತಿಸಲಾಗದೇ ಕಣ್ಣೀರು ಹಾಕುವ ಕುಟುಂಬದ ಪರ ನಿಂತು ನೇರವಾಗಿ ಆಸ್ಪತ್ರೆಗೆ ತೆರಳಿ ಆಡಳಿತ ಮಂಡಳಿ ಜೊತೆಗೆ ಮಾತನಾಡಿಸಿ ಬಿಲ್ ಮೊತ್ತ ಕಡಿತಗೊಳಿಸುವ ಮೂಲಕ ರೋಗಿಗಳ ಪಾಲಿಗೂ ಆಪತ್ಭಾಂದವರಾದ ಹಲವಾರು ಉದಾಹರಣೆಗಳಿವೆ.
ಮಂಗಳೂರಿನಲ್ಲಿ ಹಲವಾರು ಜನಪ್ರತಿನಿಧಿಗಳು, ಶಾಸಕರು ಇದ್ದರೂ ಕಷ್ಟದ ಸಮಯದಲ್ಲಿ ಅವರಿಗೆ ನೆರವಾಗುವುದು ಮೊಹಿದ್ದೀನ್ ಬಾವಾ ಅನ್ನುವ ಮಾತುಗಳು ಇವೆ. ಮೊಹಿದ್ದೀನ್ ಬಾವಾ ರ ಗಮನಕ್ಕೆ ವಿಷಯ ತಂದರೆ ಕೆಲಸ ಸಕ್ಸಸ್ ಅನ್ನುವುದು ಕೇಳಿ ಬರುತ್ತಿರುವ ಮಾತು.
