ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಅಧಿಕಾರಿಗಳಿಗೆ ಪ್ರದಾನಿ ನರೇಂದ್ರ ಮೋದಿಯವರು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ದೇಶದಲ್ಲಿ ಹೆದ್ದಾರಿಗಳು ಸುಧಾರಣೆಯಾಗಬೇಕಿದೆ. ಕಾಮಗಾರಿಗಳು ಬೇಗ ಮುಗಿಸಲು ಮೇ ತಿಂಗಳ ಗುಡುವನ್ನು ಕೊಟ್ಟಿದ್ದಾರೆ. ಸರಿಯಾಗಿ ಕಾಮಗಾರಿ ನಿರ್ವಹಣೆ ಮಾಡದ ಕಾಂಟ್ರಾಕ್ಟರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ನಿರ್ದೇಶಿಸಿದ್ದಾರೆ.
ಹೆದ್ದಾರಿಗಳ ಗುಣಮಟ್ಟವನ್ನು ಸುಧಾರಿಸಲು ಒತ್ತು ನೀಡುವಂತೆ ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ ತಿಂಗಳ ಗಡುವು ನೀಡಿದ್ದಾರೆ. ವಿಶೇಷವಾಗಿ ಮುಂಗಾರು ಹಂಗಾಮಿನಲ್ಲಿ ಮತ್ತು ಅದರ ನಂತರದ ಕಳಪೆ ರಸ್ತೆಗಳ ಬಗ್ಗೆ ಹೆಚ್ಚುತ್ತಿರುವ ದೂರುಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ದೇಶನ ನೀಡಲಾಗಿದೆ. ಹೆದ್ದಾರಿ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಹೊಣೆಗಾರಿಕೆ ಹಾಗೂ ಸ್ಥಿರತೆಯನ್ನು ಸುಧಾರಿಸಲು ಕಟ್ಟುನಿಟ್ಟಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಅಭಿವೃದ್ಧಿಪಡಿಸುವ ಗುರಿಯನ್ನು ಪ್ರಧಾನಮಂತ್ರಿಯವರ ಈ ಉಪಕ್ರಮ ಹೊಂದಿವೆ.

ಇತ್ತೀಚೆಗೆ ಹೆದ್ದಾರಿ ವಲಯದ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿಯವರು ಕಳಪೆ ಪ್ರದರ್ಶನ ನೀಡುತ್ತಿರುವ ಮತ್ತು ಪ್ರಸ್ತುತ ಕಾನೂನು ಸಂಘರ್ಷಗಳಲ್ಲಿ ತೊಡಗಿರುವ ಗುತ್ತಿಗೆದಾರರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಸಚಿವಾಲಯಕ್ಕೆ ಸೂಚಿಸಿದ್ದಾರೆ. ಕಳಪೆ ನಿರ್ಮಾಣ ಕಾಮಗಾರಿಯ ವಿರುದ್ಧ ಸರ್ಕಾರದ ಬದ್ಧತೆಯನ್ನು ಬಲಪಡಿಸಲು ಮತ್ತು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲು ಈ ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರಿ ಇಂಜಿನಿಯರ್‌ಗಳು ಮತ್ತು ಸಲಹಾ ಸಂಸ್ಥೆಗಳ ಕಳಪೆ ಮೇಲ್ವಿಚಾರಣೆಯಿಂದಾಗಿ ಯೋಜನೆಯ ಗುಣಮಟ್ಟ ಕುಸಿಯುತ್ತಿದೆ ಎಂಬ ಅಂಶವನ್ನು ಸಾರ್ವಜನಿಕ ದೂರುಗಳು ಎತ್ತಿ ತೋರಿಸಿವೆ ಎಂದು ಹೇಳಿದ್ದಾರೆ.
ಕಪ್ಪುಪಟ್ಟಿಗೆ ಸೇರಿದ ಗುತ್ತಿಗೆದಾರರು ಭವಿಷ್ಯದ ಟೆಂಡರ್ ಪ್ರಕ್ರಿಯೆಗಳಲ್ಲಿ ಪರೋಕ್ಷವಾಗಿಯೂ ಭಾಗವಹಿಸದಂತೆ ತಡೆಯಲು ವ್ಯವಸ್ಥೆಯೊಂದನ್ನು ರೂಪಿಸುವಂತೆ ಪ್ರಧಾನಿಯವರು ಕರೆ ನೀಡಿದ್ದಾರೆ. ಇದಲ್ಲದೆ, ಪದೇ ಪದೇ ಮಧ್ಯಸ್ಥಿಕೆ ಮೊರೆ ಹೋಗುವ ಗುತ್ತಿಗೆದಾರರಿಗೆ ಕಡಿಮೆ ಶ್ರೇಯಾಂಕವನ್ನು ನೀಡಲಾಗುವುದು; ಇದರಿಂದ ಅವರು ನಿರ್ಮಾಣ ಕಾರ್ಯದಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಉತ್ತೇಜಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ದೇಶಾದ್ಯಂತ ಹೆದ್ದಾರಿ ಮೂಲಸೌಕರ್ಯವನ್ನು ಪುನಶ್ಚೇತನಗೊಳಿಸುವುದು, ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಸುಧಾರಿತ ಗುಣಮಟ್ಟವನ್ನು ಖಚಿತಪಡಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
