ಮಂಗಳೂರು: ಮಹಿಳೆಯರನ್ನು ನಂಬಿಸಿ, ಹಲವಾರು ಮದುವೆ; ಬಹು ಪತ್ನಿ ವಲ್ಲಭ ಸುಶಾಂತ್ ಪೂಜಾರಿ ಬಂಧನ

ಕರಾವಳಿ

ನೊಂದ ಮಹಿಳೆಯೊಬ್ಬರಿಗೆ ಸುಶಾಂತ್ ಪೂಜಾರಿ ಎಂಬ ವ್ಯಕ್ತಿಯು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈ ನಲ್ಲಿ 02/02/2025 ರಲ್ಲಿ ಮದುವೆಯಾಗಿದ್ದಲ್ಲದೆ, ಅವರನ್ನು ನಂಬಿಸಿ ಹಂತ ಹಂತವಾಗಿ 6 ಲಕ್ಷದ 60 ಸಾವಿರ ರೂ. ಹಣವನ್ನು ಪಡೆದುಕೊಂಡು ಮೋಸ ಮಾಡುವ ಉದ್ದೇಶದಿಂದ ದಿನಾಂಕ 15/11/2025 ರಂದು ನಾಪತ್ತೆಯಾಗಿರುತ್ತಾನೆ.

ನಂತರದ ದಿನಗಳಲ್ಲಿ ದೂರುದಾರರು ಅತನ ಬಗ್ಗೆ ಅನುಮಾನಗೊಂಡ ವಿಚಾರಿಸಿದಾಗ ಇದೇ ರೀತಿ ಸುಮಾರು ಕಡೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಮೋಸ ಮಾಡಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದ ಮೇರೆಗೆ ನೊಂದ ಮಹಿಳೆಯು ಕಾವೂರು ಪೊಲೀಸು ಠಾಣಾ ಅಕ್ರ: 184/2025 ಕಲಂ: 318(4), 316(2), 316(1), 336(3), 340(1) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ.

ಪ್ರಕರಣದಲ್ಲಿನ ಆರೋಪಿತನಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ದಿನಾಂಕ:05/02/2026 ರಂದು ಪೊಲೀಸರು ಪತ್ತೆ ಹಚ್ಚಿ ದಸ್ತಗಿರಿ ಮಾಡಿ, ವಿಚಾರಣೆ ನಡೆಸಿದಾಗ ಆಪಾದಿತನು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಈ ಮೊದಲು 2021 ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುತ್ತಾನೆ. ಹಾಗೂ ಉಡುಪಿ ಎರಡು ಮಂದಿ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದುಕೊಂಡಿರುತ್ತಾನೆ, ಮುಂಬೈಯಲ್ಲಿ ಎರಡು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುತ್ತಾನೆ. ಬೆಂಗಳೂರಿನಲ್ಲೂ ಎರಡು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುತ್ತಾನೆ. ಕಾರ್ಕಳದ ಒಂದು ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಇದೆಲ್ಲವನ್ನು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.

ಆರೋಪಿಯನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ. ಸದ್ರಿ ಪ್ರಕರಣದಲ್ಲಿ ಆರೋಪಿತ ಸುಶಾಂತ್ ಪೂಜಾರಿ ಯವನೊಂದಿಗೆ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನು ಪಿರ್ಯಾದಿದಾರರಿಗೆ ಮತ್ತು ಕುಟುಂಬದವರಿಗೆ ನಂಬಿಸುವ ಉದ್ದೇಶದಿಂದ ಆರೋಪಿತ ಸುಶಾಂತ್ ನನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿ ಆರೋಪಿತ ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು ಮದುವೆ ನಡೆಸಿದವರಾಗಿರುತ್ತಾನೆ. ಆತನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಆರೋಪಿ ಸುಶಾಂತ್ ಪೂಜಾರಿ ವಿರುದ್ದ ಮಂಗಳೂರು ಉರ್ವ ಪೊಲೀಸ್ ಠಾಣಾಯಲ್ಲಿ ಅ.ಕ್ರ: 202/2017, ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣಾ ಅ.ಕ್ರ: 132/2022 ಮತ್ತು ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣಾ ಅ.ಕ್ರ:354/2022 ಇಮ್ಮೋರಲ್ ಟ್ರಾಫಿಕಿಂಗ್ ಆ್ಯಕ್ಟ್, ಪೋಕ್ಸೋ ಕಾಯ್ದೆ ರಂತೆ ಪ್ರಕರಣಗಳು ದಾಖಲಾಗಿರುತ್ತದೆ.