ಅಕ್ರಮ ಮಣ್ಣು ಮಾಫಿಯಾಕ್ಕೆ ಮೂಡಬಿದ್ರೆ ಆರ್.ಐ ಬಲಿಪಶುವಾದರೇ..?, ವರ್ಗಾವಣೆಯ ಮಸಲತ್ತು ನಡೆಸಿದ ಜಿಲ್ಲೆಯ ರಾಜಕಾರಣಿ ಯಾರು.?

ಕರಾವಳಿ

ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಇದು ಕಾಲವಲ್ಲ.!, ಬಳ್ಳಾರಿ ಗಣಿ ಮಾಫಿಯಾವನ್ನು ಮೀರಿಸುವ ಬಾಕ್ಸೈಟ್ ದಂಧೆ.!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕ ಕೇಂದ್ರವಾಗಿರುವ, ನಿರ್ಮಾಣ ಕಾಮಗಾರಿಗೆ ಅಗತ್ಯವಾಗಿರುವ, ನೂರಾರು ಬಡ ಕುಟುಂಬಗಳ ಪಾಲಿಗೆ ಆರ್ಥಿಕ ಶಕ್ತಿಯಾಗಿರುವ ಕೆಂಪು ಕಲ್ಲು ಗಣಿಗಾರಿಕೆಗೆ ದೊಡ್ಡ ಬ್ರೇಕ್ ಬಿದ್ದಿದ್ದರೂ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಮೂಡಬಿದ್ರೆಯಲ್ಲಿ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ಕುಳಗಳಿಗೆ ಸಿಂಹಸ್ವಪ್ನರಾಗಿದ್ದ ಮೂಡಬಿದ್ರೆ ಕಂದಾಯ ನಿರೀಕ್ಷಕರಾದ ಹೆಚ್ ಬಿ ಮಂಜುನಾಥ ಅವರನ್ನು ಡಿಡೀರ್ ಆಗಿ ವರ್ಗಾಯಿಸಲಾಗಿದೆ. ಮೂಡಬಿದ್ರೆ ತಾಲೂಕಿನಲ್ಲಿ ಪ್ರಾಮಾಣಿಕ ಜನಸ್ನೇಹಿ ಕಂದಾಯ ನಿರೀಕ್ಷಕ ಎಂದು ಜನಜನಿತರಾಗಿರುವ ಹೆಚ್. ಬಿ ಮಂಜುನಾಥ್ ದಿಢೀರ್ ವರ್ಗಾವಣೆಯ ಹಿಂದೆ ಅಕ್ರಮ ಬಾಕ್ಸೈಟ್ (ಅಕ್ರಮ ಕೆಂಪು ಮಣ್ಣು) ಮಾಫಿಯ ಕೈವಾಡದ ಬಲವಾದ ವಾಸನೆ ಕೇಳಿ ಬರತೊಡಗಿದೆ.

ಮೂಡಬಿದ್ರಿ ತಾಲೂಕಿನಲ್ಲಿ ಅಕ್ರಮ ಬಾಕ್ಸೈಟ್ ಮಾಫಿಯಾ (ಅಕ್ರಮ ಕೆಂಪು ಮಣ್ಣು ಸಾಗಾಟ) ದ ಹೆಡೆಮುರಿ ಕಟ್ಟಿದ್ದ ಕಂದಾಯ ನಿರೀಕ್ಷಕ ಮಂಜುನಾಥ್ ಪುತ್ತಿಗೆ ಗ್ರಾಮದಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿ ಹೊರರಾಜ್ಯಕ್ಕೆ ಕೆಂಪು ಮಣ್ಣು ಸಾಗಾಟ ಮಾಡುವ ಅಕ್ರಮ ನಾಯಕರುಗಳ ಮಾತಿಗೆ ಬೆಲೆ ಕೊಡದೆ ಕಾನೂನು ರೀತಿಯಲ್ಲಿ ಬಂದ್ ಮಾಡಿಸಿದ್ದರು.

ಬಳ್ಳಾರಿ ಮೈನ್ಸ್ ಮಾಫಿಯಾವನ್ನು ನಾಚಿಸುವಂತೆ ಪಾಲಡ್ಕ, ಪುತ್ತಿಗೆ, ಕಲ್ಲಮುಂಡ್ಕೂರು ಮುಂತಾದ ಕಡೆ ಬೃಹತ್ ರೀತಿಯಲ್ಲಿ ಬೆಳೆದು ನಿಂತಿದ್ದ ಕೆಂಪು ಮಣ್ಣು ಸಾಗಾಟದ ಅಂತರ್ ರಾಜ್ಯ ವ್ಯವಹಾರ ಕಡಿವಾಣ ಹಾಕಲು ಮುಂದಾಗಿದ್ದೇ ಆರ್. ಐ ವರ್ಗಾವಣೆಗೆ ಕಾರಣವಾಯಿತಾ ಅನ್ನುವ ಗುಸು ಗುಸು ಕೇಳಿ ಬರುತ್ತಿದೆ.

ಅಕ್ರಮಗಳನ್ನು ಮಟ್ಟ ಹಾಕುವ ಪ್ರಾಮಾಣಿಕ ಅಧಿಕಾರಿಗಳಿಗೆ ಇದು ಕಾಲವಲ್ಲ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕಂದಾಯ ನಿರೀಕ್ಷಕರ ವರ್ಗಾವಣೆಗೆ ಮಸಲತ್ತು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ವರ್ಗಾವಣೆ ಬೇಡ ಅನ್ನುವ ಪತ್ರ ಬರೆದಿದ್ದರೂ, ಪ್ರಭಾವಿ ಅಕ್ರಮ ಬಾಕ್ಸೈಟ್ ಮಾಫಿಯ ನಾಯಕರು ದೊಡ್ಡ ಮಟ್ಟದಲ್ಲಿ ಒತ್ತಡ ತಂದು ಪ್ರಾಮಾಣಿಕ ಅಧಿಕಾರಿಯನ್ನು ಎತ್ತoಗಡಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಇವರ ಜಾಗದಲ್ಲಿ ಅಕ್ರಮ ಬಾಕ್ಸೈಟ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುವ ಕಂದಾಯ ನಿರೀಕ್ಷಕರನ್ನು ತರುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎನ್ನುತ್ತಾರೆ ಮೂಡಬಿದ್ರಿಯ ಜನತೆ. ಈ ಹಿಂದೆ ಪ್ರಾಮಾಣಿಕ ಮಹಿಳಾ ತಹಶೀಲ್ದಾರ್ , ಹಾಗೂ ಪ್ರಾಮಾಣಿಕ ಮಹಿಳಾ ಸರಕಾರಿ ವೈದ್ಯರ ಎತ್ತoಗಡಿಯ ಸಾಲಿಗೆ ಇನ್ನೊಬ್ಬ ಪ್ರಾಮಾಣಿಕ ಕಂದಾಯ ನಿರೀಕ್ಷಕರು ಸೇರಿಕೊಂಡಿದ್ದು, ಪ್ರಾಮಾಣಿಕರಿಗೆ ಮೂಡಬಿದ್ರಿಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಪಕ್ಷ ಭೇದ ಮರೆತು ನಾವೆಲ್ಲರೂ ಪ್ರಾಮಾಣಿಕ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲಬೇಕಾಗಿದೆ, ಗೌರವಾನ್ವಿತ ಶಾಸಕರು, ಮೂಡಬಿದ್ರಿಯ ಮಾಜಿ ಸಚಿವರು, ಹಾಗೂ ಕಾಂಗ್ರೆಸ್ ಪಕ್ಷದ ಪುಢಾರಿ ನಾಯಕರು ದೊಡ್ಡ ಮನಸ್ಸು ಮಾಡಿದರೆ ಪ್ರಾಮಾಣಿಕ ಕಂದಾಯ ನಿರೀಕ್ಷಕರು ಮೂಡಬಿದ್ರಿಯಲ್ಲಿಯೇ ಮುಂದುವರಿಯಲು ಸಾದ್ಯ.