ಬಜಪೆ ಪೊಲೀಸರ ಸಾಧನೆ, ಗ್ರಾಮದ ಜನತೆಯ ನಿದ್ದೆಗೆಡಿಸಿದ ಕುಖ್ಯಾತ ಕಳ್ಳನ ಬಂಧನ

ಕರಾವಳಿ

ಬಜಪೆ: ಮೂಡುಪೆರಾರ ಗ್ರಾಮದ ಮಿತ್ತಕೊಳಪಿಲದ ಬಳಿ ದೇವಸ ಎಂಬಲ್ಲಿಯ ಜನಾರ್ದನ ಗೌಡ ಎಂಬವರ ಮನೆಯ ಹಿಂಬದಿಯ ಭಾಗಿಲಿನ ಬೋಲ್ಟ್ ಗಳನ್ನು ಸ್ಪಾನರ್ ನಿಂದ ಮುರಿದು ಮನೆಯ ಒಳಗಡೆ ನುಗ್ಗಿ, ಮನೆಯಲ್ಲಿದ್ದ 40 ಸಾವಿರ ರೂಪಾಯಿ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗೆ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತ್ರತ್ವದ ಅಪರಾಧ ಪತ್ತೆ ವಿಭಾಗದ ತಂಡ ದಿನಾಂಕ 21-02-2024 ರಂದು ಸಂಜೆ 5:00 ರ ಸಮಯಕ್ಕೆ ಬಜಪೆ ಬಸ್ಸು ನಿಲ್ದಾಣದ ಬಳಿ ಆರೋಪಿ ಎನ್ನಲಾದ ಮೂಡುಪೆರಾರ ಗ್ರಾಮದ ಮಿತ್ತಕೊಳಪಿಲದ ನಿವಾಸಿ ಉಮೇಶ್ ರವರ ಮಗ ಪ್ರತಾಪ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜನಾರ್ದನ ಗೌಡರವರ ಮನೆಯಿಂದ ಹಣ ಕಳವು ಮಾಡಿರುವ ಬಗ್ಗೆ ಮತ್ತು 2023ರ ಸಪ್ಟೆಂಬರ್ ತಿಂಗಳಲ್ಲಿ ಕೊಂಪದವು ನೆಲ್ಲಿಗುಡ್ಡೆಯ ನಿವಾಸಿ ಗೋವಿಂದ ಗೌಡ ಎಂಬವರ ಮನೆಯಿಂದ ಒಟ್ಟು 4 ಗೋಣಿ ಚೀಲದಲ್ಲಿ ತುಂಬಿಸಿದ್ದ ಸುಲಿದ ಅಡಿಕೆಯನ್ನು ಕಳವು ಮಾಡಿರುವುದಲ್ಲದೆ ಊರಿನಲ್ಲಿ ಚಿಕ್ಕಪುಟ್ಟ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿ ಪ್ರತಾಪನು ಕಳವು ಮಾಡಿರುವ 10 ಸಾವಿರ ರೂಪಾಯಿ ಹಣ, ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 4 ಗೋಣಿ ಚೀಲ ಸುಲಿದ ಅಡಿಕೆ, ಸುಮಾರು 2 ಲಕ್ಷ ರೂಪಾಯಿ ಮೌಲ್ಯದ KA 19 AA 4882 ನೇ ನಂಬ್ರದ ಆಟೋ ರಿಕ್ಷಾ ಮತ್ತು ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಆರೋಪಿ ಪ್ರತಾಪನ ವಿರುದ್ದ ಬ್ಯಾಟರಿಗಳನ್ನು ಕಳವಿಗೆ ಸಂಬಂಧಿಸಿದಂತೆ 2 ಪ್ರತ್ಯೇಕ ಪ್ರಕರಣಗಳು ಸಹ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತವೆ.
ಮೂಡುಪೆರಾರ ಪರಿಸರದ ಮನೆಗಳಲ್ಲಿ ಯಾರು ಇಲ್ಲದ ಸಮಯ ನೋಡಿ ಮನೆಗಳಿಗೆ ನುಗ್ಗಿ, ಕಳವು ಮಾಡಿ ಸಾರ್ವಜನಿಕರ ನಿದ್ದೆಹಾಳು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಬಗ್ಗೆ ಪರಿಸರದ ನಾಗರಿಕರು ಬಜಪೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ರವರ ಮಾರ್ಗದರ್ಶನದಂತೆ, DCP ಗಳಾದ ಸಿದ್ದಾರ್ಥ ಗೋಯೆಲ್, ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ಮತ್ತು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣೆಯ PSI ರೇವಣ ಸಿದ್ದಪ್ಪ, PSI ಗುರಪ್ಪ ಕಾಂತಿ, PSI ರವಿ, ಸಿಬ್ಬಂದಿಗಳಾದ ASI ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್, ಸುಜನ್, ದೇವಪ್ಪ, ಬಸವರಾಜ್ ಪಾಟೀಲ್, ಕೆಂಚಪ್ಪ, ಚಿದಾನಂದ, ಪ್ರಕಾಶ್, ದುರ್ಗಾ ಪ್ರಸಾದ್, ಜಗದೀಶ್, ರವಿಕುಮಾರ್, ದಯಾನಂದ, ಮದು, ಅನಿಲ್ ಕುಮಾರ್, ವಿರುಪಾಕ್ಷ, ಭರಮಪ್ಪ ಮತ್ತು ನಗರ ಕಂಪ್ಯೂಟರ್ ವಿಭಾಗದ ಮನೋಜ್ ರವರು ಭಾಗವಹಿಸಿದ್ದರು.