ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಕಮಿಷನ್ ಪಡೆದು 40 ಕೋಟಿ ರೂ. ವಂಚನೆ ಮಾಡಿದ್ದಾರೆ ಎನ್ನಲಾದ ಮಂಗಳೂರು ಮೂಲದ ರೋಶನ್ ಸಲ್ಡಾನಾ ಮತ್ತು ಆತನ ಪತ್ನಿ ಹಾಗೂ ಚಿತ್ರದುರ್ಗದ ಚಂದ್ರಶೇಖರ್, ಈ ಪ್ರಕರಣದ ಮೂವರು ಆರೋಪಿಗಳ ವಿರುದ್ಧದ 11 ಎಫ್‌ಐಆರ್ ಗಳನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಪ್ರಕರಣದ ಅಪರಾಧದ ಆರೋಪಗಳು ತನಿಖಾ ಹಂತದಲ್ಲಿವೆ. ಆರೋಪಗಳ ಬಗ್ಗೆ ತನಿಖೆ ನಡೆಯಬೇಕು ಎಂಬುದು ಕಾನೂನಿನ ಸ್ಪಷ್ಟ ನಿಯಮ. ಹಾಗಾಗಿ, ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆರೋಪಿಗಳು ಹಲವು ಜನರೊಂದಿಗೆ ಆರ್ಥಿಕ ವಹಿವಾಟು ನಡೆಸಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದ್ದರಿಂದ, ಇಂತಹ ಪ್ರಕರಣಗಳಲ್ಲಿ ತನಿಖೆಗೆ ಅಡ್ಡಿಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನ್ಯಾಯಪೀಠ ವಿವರಿಸಿದೆ. ಅಲ್ಲದೆ ಇದು ಸಂಪೂರ್ಣ ಸಿವಿಲ್ ವಹಿವಾಟು ಮತ್ತು ಆರೋಪಿಗಳಾದ ಅರ್ಜಿದಾರರು ಯಾವುದೇ ಸಂಬಂಧ ಹೊಂದಿರದ ಖಾತೆಗಳಿಗೆ ದೂರುದಾರರು ಜಮೆ ಮಾಡಿದ್ದಾರೆ. ಅದಕ್ಕೂ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳುತ್ತಿದ್ದಾರೆ. ಆದರೆ ಆ ಬಗ್ಗೆ ತನಿಖೆ ನಡೆಯಬೇಕಿದೆ. ಏಕೆಂದರೆ ಇದು ಒಂದು ಪ್ರಕರಣ ಅಥವಾ ಒಬ್ಬ ದೂರುದಾರನ ಬಗ್ಗೆ ಅಲ್ಲ, ಮೂವರು ಆರೋಪಿಗಳ ವಿರುದ್ದ ಬೇರೆ ಬೇರೆ ದೂರುದಾರರಿಂದ 11 ದೂರುಗಳು ಬಂದಿವೆ. ಎಂದು ನ್ಯಾಯಾಲಯ ಹೇಳಿದೆ.
ಆರೋಪಿಗಳಾದ ಮಂಗಳೂರಿನ ದಂಪತಿ ರೋಷನ್ ಸಲ್ಡಾನಾ, ಅವರ ಪತ್ನಿ ಡಾಫ್ನಿ ನೀತು ಡಿಸೋಜಾ ಮತ್ತು ಚಿತ್ರದುರ್ಗದ ಎನ್.ಚಂದ್ರಶೇಖರ್ ತಮ್ಮ ವಿರುದ್ಧದ 11 ಎಫ್‌ಐಆರ್ ಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
