✍️. ಇಸ್ಮಾಯಿಲ್ ಎಸ್. ವಕೀಲರು, ಲೇಖಕರು. ಮಂಗಳೂರು
ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಕರಾವಳಿ ನಾಡಿನಲ್ಲಿ ಶತಮಾನಗಳ ಕಾಲ ವ್ಯಾಪಾರ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಬ್ಯಾರಿ ಮುಸ್ಲಿಂ ಸಮಾಜ ಇಂದು ಒಂದು ನಿರ್ಣಾಯಕ ಸಂಕ್ರಮಣ ಕಾಲದಲ್ಲಿ ನಿಂತಿದೆ. ಈ ಸಮಾಜ ಹಿಂದೊಮ್ಮೆ ವರದಕ್ಷಿಣೆ ಎಂಬ ಪಿಡುಗು ಅನುಭವಿಸಿ, ಧಾರ್ಮಿಕ ಮತ್ತು ಸಾಮಾಜಿಕ ನೇತೃತ್ವದ ಮೂಲಕ ಅದರಿಂದ ಹೊರಬಂದ ಇತಿಹಾಸ ಹೊಂದಿದೆ. ಆ ಗೆಲುವು ನಿಜಕ್ಕೂ ಅಭಿಮಾನಾರ್ಹ. ಆದರೆ ಹಳೆಯ ಒಂದು ಸಮಸ್ಯೆ ಹೋಗುತ್ತಿರುವಂತೆ ಹೊಸ ಸಂಕಟಗಳ ಸರಮಾಲೆ ಒಂದರ ಹಿಂದೊಂದು ಬಂದು ಕೂಡಿಕೊಂಡಿದೆ. ಶಿಕ್ಷಣ ಅಸಮಾನತೆ, ಕೌಟುಂಬಿಕ ವ್ಯವಸ್ಥೆಯ ಒಡೆದು ಹೋಗುವಿಕೆ, ಹಿರಿಯರ ಮಾರ್ಗದರ್ಶನದ ಅನುಪಸ್ಥಿತಿ, ಮದುವೆ ನಿರ್ಧರಿಸುವ ಪ್ರಕ್ರಿಯೆಯ ಹೆಚ್ಚುತ್ತಿರುವ ಅಸ್ತವ್ಯಸ್ತತೆ ಮತ್ತು ಅದರ ಪರಿಣಾಮವಾಗಿ ಏರುತ್ತಿರುವ ಖುಲಾ ವಿವಾಹ ವಿಚ್ಛೇದನಗಳ ಸಂಖ್ಯೆ ಇವೆಲ್ಲ ಇಂದು ಒಟ್ಟಾಗಿ ಸಮಾಜದ ಬೇರನ್ನೇ ಅಲುಗಾಡಿಸುತ್ತಿವೆ. ಈ ಲೇಖನ ಆ ಎಲ್ಲ ಮಗ್ಗುಲುಗಳನ್ನು ಆಳವಾಗಿ ಪರಿಶೀಲಿಸುವ ಪ್ರಯತ್ನ.

ಶಿಕ್ಷಣ ಅಸಮಾನತೆ: ಸಂಖ್ಯೆಗಳ ಹಿಂದಿನ ಸತ್ಯ.
ಇಂದು ಬ್ಯಾರಿ ಸಮಾಜದ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಪದವಿ, ಸ್ನಾತಕೋತ್ತರ, ವೈದ್ಯಕೀಯ, ತಂತ್ರಜ್ಞಾನ ಮತ್ತು ಕಾನೂನು ಕ್ಷೇತ್ರಗಳಲ್ಲಿ ಸಮುದಾಯದ ಹೆಣ್ಣು ಮಕ್ಕಳ ಪ್ರಮಾಣ ಶೇ.70 ರಿಂದ 80ರ ಆಸುಪಾಸಿಗೆ ತಲುಪಿದೆ. ಇದು ಒಂದು ಸ್ವಾಗತಾರ್ಹ ಬೆಳವಣಿಗೆ. ಆದರೆ ಅದೇ ಸಮಾಜದ ಗಂಡು ಮಕ್ಕಳ ಪ್ರಮಾಣ ಕೇವಲ ಶೇ.20 ರಿಂದ 25ರ ಆಸುಪಾಸಿನಲ್ಲಿದೆ ಎಂಬ ಸಂಗತಿ ನಿಜಕ್ಕೂ ಆಘಾತಕಾರಿ. ಒಂದು ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ 50 ಪ್ರತಿಶತದಷ್ಟು ಶೈಕ್ಷಣಿಕ ಕಂದಕ ಏರ್ಪಟ್ಟಿದ್ದರೆ ಅದರ ಸಾಮಾಜಿಕ ಆಘಾತ ಕೇವಲ ಮದುವೆಯ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿ ಉಳಿಯುವುದಿಲ್ಲ, ಅದು ಸಮಾಜದ ಸಮಗ್ರ ರಚನೆಯನ್ನೇ ಅಸ್ಥಿರಗೊಳಿಸುತ್ತದೆ.
ಗಂಡು ಮಕ್ಕಳು ಶಿಕ್ಷಣ ಬಿಡಲು ಒಂದೇ ಕಾರಣ ಇಲ್ಲ. ಆರ್ಥಿಕ ಅಗತ್ಯ, ಗಲ್ಫ್ ಉದ್ಯೋಗದ ಆಕರ್ಷಣೆ, ಕುಟುಂಬ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಬೇಕಾದ ಒತ್ತಡ, ಮಾದಕ ದ್ರವ್ಯ ಜಾಲದ ಪ್ರಭಾವ ಮತ್ತು ಶಿಕ್ಷಣದ ಬಗ್ಗೆ ಕುಟುಂಬದ ಅನಾಸಕ್ತಿ ಇವೆಲ್ಲ ಒಟ್ಟಾಗಿ ಈ ಅಸಮತೋಲನ ಸೃಷ್ಟಿಸಿವೆ. ಹುಡುಗ ಗಲ್ಫ್‌ಗೆ ಹೋಗಿ ಹಣ ಕಳಿಸುತ್ತಿದ್ದಾನೆ ಎಂದರೆ ಸಾಕು, ಅವನ ಶಿಕ್ಷಣ ನಿಂತಿದ್ದರೂ ಕುಟುಂಬ ಅದನ್ನು ಸಾಧನೆ ಎಂದು ತಿಳಿಯುತ್ತದೆ. ಆದರೆ 40 ವರ್ಷ ದಾಟಿದ ನಂತರ ಅದೇ ಮನುಷ್ಯ ಅನರ್ಹನಾಗಿ ನಿಲ್ಲಬೇಕಾದ ಸ್ಥಿತಿ ಬರಬಹುದೆಂಬ ದೂರದ ದೃಷ್ಟಿ ಯಾರಿಗೂ ಇಲ್ಲ. ಶಿಕ್ಷಣ ಕೇವಲ ಪ್ರಮಾಣಪತ್ರ ಅಲ್ಲ, ಅದು ಚಿಂತನಾಶಕ್ತಿ, ನಿರ್ಧಾರ ಮಾಡುವ ಸಾಮರ್ಥ್ಯ, ಸಂಸಾರ ನಡೆಸುವ ಪ್ರಬುದ್ಧತೆ ಎಂಬ ಅರಿವು ಬರಬೇಕು.
ಜಂಟಿ ಕುಟುಂಬ ವ್ಯವಸ್ಥೆಯ ಒಡೆದು ಹೋಗುವಿಕೆ: ಕಾಣದ ದೊಡ್ಡ ಗಾಯ
ಬ್ಯಾರಿ ಸಮಾಜ ಹಿಂದೊಮ್ಮೆ ಬಲವಾದ ಜಂಟಿ ಕುಟುಂಬ ಪದ್ಧತಿಯನ್ನು ಹೊಂದಿತ್ತು. ಒಂದು ಮನೆಯಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಚಿಕ್ಕಪ್ಪ-ದೊಡ್ಡಪ್ಪ, ಸೋದರ-ಸೋದರಿ ಎಲ್ಲರೂ ಒಟ್ಟಿಗೆ ನೆಲೆಸುತ್ತಿದ್ದರು. ಹಿರಿಯರ ಮಾತಿಗೆ ಮಹತ್ವ ಇತ್ತು, ಅವರ ಅನುಭವ ಮನೆಯ ನಿರ್ಧಾರಗಳಿಗೆ ದಿಕ್ಸೂಚಿಯಾಗಿತ್ತು. ಮದುವೆ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಮನೆಯ ಹಿರಿಯ ಅಜ್ಜ ಅಥವಾ ಅಜ್ಜಿ ಮಾತಾಡುತ್ತಿದ್ದರು, ಊರಿನ ಹಿರಿಯರ ಅಭಿಪ್ರಾಯ ಕೇಳಲಾಗುತ್ತಿತ್ತು, ಮಸೀದಿಯ ಇಮಾಮ್ ಸಲಹೆ ಪಡೆಯಲಾಗುತ್ತಿತ್ತು. ಸಮಾಜ ಒಂದು ಸಂಬಂಧಗಳ ಜಾಲವಾಗಿ ಬೆಸೆದಿತ್ತು.
ಇಂದು ಆ ವ್ಯವಸ್ಥೆ ವೇಗವಾಗಿ ಕಣ್ಮರೆಯಾಗುತ್ತಿದೆ. ಒಂದು ಮನೆ, ಒಂದು ಕುಟುಂಬ, ಒಂದು ವ್ಯಕ್ತಿ ಎಂಬ ಪ್ರವೃತ್ತಿ ಹೆಚ್ಚಾಗಿದೆ. ಗಲ್ಫ್ ಹಣ ಬಂದ ನಂತರ ಪ್ರತ್ಯೇಕ ಮನೆ ಕಟ್ಟುವ ಆಸೆ ಅನೇಕ ಕುಟುಂಬಗಳನ್ನು ಚದುರಿಸಿದೆ. ನಗರ ಜೀವನ ಮತ್ತು ಅಪಾರ್ಟ್‌ಮೆಂಟ್ ಸಂಸ್ಕೃತಿ ನೆರೆಹೊರೆ ಎಂಬ ಪರಿಕಲ್ಪನೆಯನ್ನೇ ನಿರ್ನಾಮ ಮಾಡಿದೆ. ಅಜ್ಜ-ಅಜ್ಜಿ ಪ್ರತ್ಯೇಕ ಮನೆಯಲ್ಲಿ ಏಕಾಕಿಯಾಗಿ ಕುಳಿತಿದ್ದಾರೆ, ಮಕ್ಕಳು ಕೆಲಸ ಮಾಡುವ ನಗರದಲ್ಲಿ ಬೇರೆ ಬೇರೆ ಕೊಠಡಿ ಬಾಡಿಗೆ ಪಡೆದಿದ್ದಾರೆ. ಈ ಭೌಗೋಳಿಕ ಮತ್ತು ಭಾವನಾತ್ಮಕ ಅಂತರ ಕೇವಲ ಮನೆಯ ರಚನೆ ಬದಲಾಯಿತು ಎಂಬ ಮಾತಲ್ಲ, ಅದು ಸಾಮಾಜಿಕ ನಿಯಂತ್ರಣ ವ್ಯವಸ್ಥೆ ಮತ್ತು ನೈತಿಕ ಮಾರ್ಗದರ್ಶನದ ಕೊರತೆಗೆ ನೇರ ಕಾರಣವಾಗಿದೆ.

ಹಿರಿಯರ ಅನುಪಸ್ಥಿತಿ ಎಂದರೆ ಏನು? ಮದುವೆ ನಿಶ್ಚಯಿಸಬೇಕಾದಾಗ ಯಾರ ಮಾತನ್ನು ಕೇಳಬೇಕೆಂಬ ಪ್ರಶ್ನೆಗೆ ಉತ್ತರವಿಲ್ಲ. ಹಿಂದಿನ ಕಾಲದಲ್ಲಿ ಹುಡುಗ-ಹುಡುಗಿ ಮನೆಯ ಹಿರಿಯರು ಪರಸ್ಪರ ಪರಿಚಯ ಮಾಡಿಕೊಂಡು ಮಾತನಾಡುತ್ತಿದ್ದರು, ಹಬ್ಬ-ಮಸೀದಿ ಕಾರ್ಯಕ್ರಮಗಳಲ್ಲಿ ಸಂಬಂಧ ಬೆಳೆಯುತ್ತಿತ್ತು, ಒಬ್ಬ ಹಿರಿಯ ವ್ಯಕ್ತಿ ಎರಡೂ ಕುಟುಂಬಗಳ ನಡುವೆ ಸೇತುವಾಗಿ ನಿಲ್ಲುತ್ತಿದ್ದ. ಇಂದು ಆ ಸೇತು ಇಲ್ಲ. ಮದುವೆ ಹುಡುಕಾಟ ವಾಟ್ಸಾಪ್ ಗ್ರೂಪ್, ಆನ್‌ಲೈನ್ ಬಯೋಡೇಟಾ ಮತ್ತು ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಿಗೆ ಇಳಿದಿದೆ. ಇದು ಅನಿವಾರ್ಯ ಆಧುನಿಕತೆ ಎಂಬುದು ನಿಜ. ಆದರೆ ಅದರ ಜೊತೆ ಬರುವ ಅಪಾಯಗಳನ್ನು ನಿಭಾಯಿಸಲು ಸಮಾಜ ಇನ್ನೂ ಸಿದ್ಧವಾಗಿಲ್ಲ.
ಮದುವೆ ನಿರ್ಧಾರ ಪ್ರಕ್ರಿಯೆ ಮತ್ತು ಅದರ ಅವ್ಯವಸ್ಥೆ. ಹಿಂದಿನ ಕಾಲದಲ್ಲಿ ಮದುವೆ ನಿರ್ಧಾರ ಒಂದು ಸಾಮಾಜಿಕ ಪ್ರಕ್ರಿಯೆ ಆಗಿತ್ತು. ಅದರಲ್ಲಿ ಕುಟುಂಬ, ನೆರೆಹೊರೆ ಮತ್ತು ಧಾರ್ಮಿಕ ನಾಯಕರ ಭಾಗವಹಿಸುವಿಕೆ ಇತ್ತು. ಹುಡುಗ ಅಥವಾ ಹುಡುಗಿಯ ಗುಣ, ಕುಟುಂಬದ ಹಿನ್ನೆಲೆ, ಧಾರ್ಮಿಕ ನಡವಳಿಕೆ ಮತ್ತು ಆರ್ಥಿಕ ಸ್ಥಿತಿ ಇವನ್ನು ಸಮಗ್ರವಾಗಿ ನೋಡಿ ನಿರ್ಧರಿಸಲಾಗುತ್ತಿತ್ತು. ಹಿರಿಯರ ಅನುಭವ ಅಲ್ಲಿ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸಂಬಂಧ ಕೇವಲ ಎರಡು ವ್ಯಕ್ತಿಗಳ ನಡುವಿನದು ಅಲ್ಲ, ಎರಡು ಕುಟುಂಬಗಳ ಮತ್ತು ಎರಡು ಸಾಮಾಜಿಕ ಜಾಲಗಳ ನಡುವಿನ ಬಾಂಧವ್ಯ ಎಂಬ ತಿಳಿವು ಆ ಕಾಲದ ಮೂಲ ತಳಹದಿ.
ಆದರೆ ಇಂದು ಮದುವೆ ನಿರ್ಧಾರ ಹೆಚ್ಚಾಗಿ ಎರಡು ವ್ಯಕ್ತಿಗಳ ನಡುವಿನ ವಿಷಯವಾಗಿ ಸಂಕುಚಿತಗೊಂಡಿದೆ. ಅಪ್ಪ-ಅಮ್ಮ ಒಂದಿಷ್ಟು ಒಪ್ಪಿಗೆ ನೀಡಿದರೆ ಸಾಕು ಎಂಬ ರೀತಿ ನಡೆಯುತ್ತದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು ಮದುವೆ ಆಗುವ ಘಟನೆಗಳೂ ಹೆಚ್ಚಾಗಿವೆ. ಇವುಗಳಲ್ಲಿ ಎಲ್ಲ ಮದುವೆಗಳೂ ತಪ್ಪು ಎಂದಲ್ಲ, ಆದರೆ ಸರಿಯಾದ ಸಾಮಾಜಿಕ ತಪಾಸಣೆ ಮತ್ತು ಕೌಟುಂಬಿಕ ತೂಗಿ ನೋಡುವಿಕೆ ಇಲ್ಲದ ಮದುವೆ ವಿವಾಹ ಜೀವನ ಪ್ರಾರಂಭಗೊಳ್ಳುತ್ತಿದ್ದ ದಿನದಿಂದಲೇ ಒಡೆಯಲು ಸಿದ್ಧವಾದ ಮಡಕೆಯಂತೆ ಇರಬಹುದು. ಅದು ಬಾಹ್ಯ ನೋಟಕ್ಕೆ ಸಂಪೂರ್ಣ ಕಾಣಿಸುತ್ತದೆ, ಒಳಗೆ ಬಿರುಕು ಇರುತ್ತದೆ.
ಹಿರಿಯರ ಮಾರ್ಗದರ್ಶನ ಇಲ್ಲದ ಮದುವೆ ಬದುಕು ಮದುವೆ ಆದ ಆರಂಭದ ವರ್ಷಗಳು ಅತ್ಯಂತ ನಾಜೂಕಾದ ಕಾಲ. ಆ ಕಾಲದಲ್ಲಿ ಜಗಳ, ಅಪ್ರಬುದ್ಧ ನಿರ್ಧಾರಗಳು, ಅರ್ಥ ಮಾಡಿಕೊಳ್ಳದ ಸಂದರ್ಭಗಳು ಸಾಮಾನ್ಯ. ಹಿಂದಿನ ಕಾಲದಲ್ಲಿ ಜಂಟಿ ಕುಟುಂಬದ ಅಜ್ಜ ಅಥವಾ ಅಜ್ಜಿ ಅಂತಹ ಸಂದರ್ಭಗಳಲ್ಲಿ ಮಧ್ಯ ಪ್ರವೇಶಿಸಿ ಸಂಬಂಧ ಸರಿಪಡಿಸುತ್ತಿದ್ದರು. ಅವರ ಮಾತಿಗೆ ಭಾವನಾತ್ಮಕ ತೂಕ ಇತ್ತು, ಪ್ರೀತಿ ಇತ್ತು, ಮತ್ತು ಎರಡೂ ಕಡೆ ಗೌರವ ಇತ್ತು. ಸಣ್ಣ ತಪ್ಪು ತಿಳಿವಳಿಕೆ ಮದುವೆ ಮುರಿಯುವಷ್ಟು ದೊಡ್ಡದಾಗುವ ಮೊದಲೇ ಅಂತಹ ಹಿರಿಯರ ಮಾತು ಅದನ್ನು ತಡೆಯುತ್ತಿತ್ತು.
ಇಂದು ಆ ಭದ್ರತಾ ಜಾಲ ಇಲ್ಲ. ನ್ಯೂಕ್ಲಿಯರ್ ಕುಟುಂಬ ವ್ಯವಸ್ಥೆಯಲ್ಲಿ ಗಂಡ-ಹೆಂಡತಿ ಇಬ್ಬರೂ ತಮ್ಮ ತಮ್ಮ ಬಾಲ್ಯದ ಕುಟುಂಬ ಸಂಸ್ಕೃತಿ ಹೊತ್ತು ಒಂದೇ ಮನೆ ಸೇರುತ್ತಾರೆ. ಒಗ್ಗಿಕೊಳ್ಳಲು ಕಾಲ ಬೇಕು. ಆದರೆ ಸಮಸ್ಯೆ ಎದ್ದಾಗ ನಡುವೆ ನಿಲ್ಲಲು ಹಿರಿಯ ವ್ಯಕ್ತಿ ಇಲ್ಲ. ಬದಲಿಗೆ ಇರುವುದು ಮೊಬೈಲ್. ಮೊಬೈಲ್‌ನಲ್ಲಿ ತಾಯಿ ಅಥವಾ ಅಕ್ಕನ ಬಳಿ ದೂರು ಹೇಳಿಕೊಂಡರೆ ಅವರು ಸಮಾಧಾನ ಮಾಡುವ ಬದಲು ಇನ್ನಷ್ಟು ಉರಿಸುವ ಸಾಧ್ಯತೆ ಹೆಚ್ಚು. ಆ ಗಾಯ ಮಾಗುವ ಮೊದಲೇ ಹೊಸ ಗಾಯ ಆಗುತ್ತದೆ. ಒಂದು ಹಂತ ಬಂದ ಮೇಲೆ ಸಹಿಷ್ಣುತೆ ಕ್ಷೀಣಿಸಿ ಬೇರ್ಪಡುವ ನಿರ್ಧಾರ ತ್ವರಿತವಾಗಿ ಬರುತ್ತದೆ.

ಖುಲಾ: ಒಂದು ಸಾಮಾಜಿಕ ಸಂಕಟದ ಪ್ರತಿಬಿಂಬ
ಖುಲಾ ಎಂದರೆ ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ ಹೆಂಡತಿಯ ಕಡೆಯಿಂದ ಮದುವೆ ವಿಸರ್ಜಿಸಿಕೊಳ್ಳುವ ಹಕ್ಕು. ಇದು ಶರೀಅತ್‌ನಲ್ಲಿ ಸ್ಪಷ್ಟವಾಗಿ ಮಾನ್ಯವಾದ ಹಕ್ಕು. ಅಸಹನೀಯ ಸಂಸಾರದಿಂದ ಹೊರಬರಲು ಹೆಣ್ಣಿಗೆ ನೀಡಲಾದ ಈ ಅವಕಾಶ ಇಸ್ಲಾಮಿನ ನ್ಯಾಯ ಪ್ರಜ್ಞೆಯ ದ್ಯೋತಕ. ಆದರೆ ಇಂದು ಬ್ಯಾರಿ ಸಮಾಜದಲ್ಲಿ ಖುಲಾ ಪ್ರಕರಣಗಳ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಮದುವೆ ಆದ ಎರಡು ಮೂರು ವರ್ಷಗಳ ಒಳಗೆ ಮದ್ರಸ ಸಮಿತಿ ಅಥವಾ ಕಾಝಿ ಕಚೇರಿಗೆ ಖುಲಾ ಅರ್ಜಿ ಬರುವ ಪ್ರಕರಣಗಳು ದಿನ ಕಳೆದಂತೆ ಹೆಚ್ಚಾಗುತ್ತಿವೆ. ಇದು ಒಂದು ತೀವ್ರ ಸಾಮಾಜಿಕ ಸಮಸ್ಯೆಯ ಸಂಕೇತ.
ಇಲ್ಲಿ ಒಂದು ಸ್ಪಷ್ಟನೆ ಅವಶ್ಯ. ಖುಲಾ ಕೋರುವ ಹೆಣ್ಣು ಮಕ್ಕಳನ್ನು ದೂಷಿಸುವ ಉದ್ದೇಶ ಈ ಲೇಖನಕ್ಕಿಲ್ಲ. ಅನೇಕ ಸಂದರ್ಭಗಳಲ್ಲಿ ಅವರ ಹಿಂದೆ ನೈಜ ನೋವು, ಅಸಮರ್ಥ ಗಂಡ, ಸಂಸಾರ ನಡೆಸಲು ಅಸಮರ್ಥ ವ್ಯಕ್ತಿ, ವ್ಯಸನ ಸಮಸ್ಯೆ ಅಥವಾ ಶಿಕ್ಷಣ ಅಸಮಾನತೆಯ ಕಾರಣ ಉಂಟಾದ ಸಹಬಾಳ್ವೆ ಅಸಾಧ್ಯತೆ ಇರುತ್ತದೆ. ಆದರೆ ಎಲ್ಲ ಪ್ರಕರಣಗಳಲ್ಲೂ ಅಷ್ಟು ಗಂಭೀರ ಕಾರಣ ಇರುವುದಿಲ್ಲ. ಕೆಲವು ಮದುವೆಗಳು ಸಣ್ಣ ವ್ಯತ್ಯಾಸ, ಅರ್ಥ ಮಾಡಿಕೊಳ್ಳದ ಅಹಂ, ಅಥವಾ ಸ್ವತಂತ್ರ ಜೀವನದ ಆಸೆಗಳಿಂದಲೂ ಮುರಿಯುತ್ತಿವೆ ಎಂಬ ಮಾತು ಅನೇಕ ಹಿರಿಯರು ಆಡುತ್ತಾರೆ. ಅದನ್ನು ಸಂಪೂರ್ಣ ನಿರಾಕರಿಸುವುದು ಕಷ್ಟ.
ಇದರ ಮೂಲ ಕಾರಣಗಳು ಹಲವು. ಮೊದಲನೆಯದಾಗಿ, ಶಿಕ್ಷಿತ ಹೆಣ್ಣು ಮಗಳಿಗೆ ಕಡಿಮೆ ಶಿಕ್ಷಿತ ಅಥವಾ ಅಸ್ಥಿರ ಉದ್ಯೋಗ ಹೊಂದಿರುವ ಗಂಡನ ಜೊತೆ ಹೊಂದಿಕೊಳ್ಳುವುದು ನಿಜಕ್ಕೂ ಕಷ್ಟ. ಅವರ ನಡುವೆ ಬೌದ್ಧಿಕ ಅಂತರ, ಆರ್ಥಿಕ ಹೊಂದಾಣಿಕೆ ಮತ್ತು ಜೀವನ ಗುರಿಗಳ ಅಂತರ ಇರುತ್ತದೆ. ಎರಡನೆಯದಾಗಿ, ಶಿಕ್ಷಿತ ಮಹಿಳೆ ಇಂದು ಆರ್ಥಿಕ ಸ್ವಾತಂತ್ರ್ಯ ಹೊಂದಿದ್ದಾಳೆ. ಅವಳಿಗೆ ಸಂಸಾರ ನಡೆಯದ ಸ್ಥಿತಿಯಲ್ಲಿ ಹಿಂದಿನ ಕಾಲದಂತೆ ಅಸಹಾಯಕಳಾಗಿ ಸಹಿಸಿಕೊಂಡಿರಲು ಅನಿವಾರ್ಯ ಇಲ್ಲ. ಆ ಸ್ವಾತಂತ್ರ್ಯ ಹೆಣ್ಣಿಗೆ ಹಿಂದಿಗಿಂತ ಹೆಚ್ಚು ಆಯ್ಕೆ ನೀಡಿದೆ, ಅದು ಒಂದು ಧನಾತ್ಮಕ ಬೆಳವಣಿಗೆ. ಆದರೆ ಅದು ತ್ವರಿತ ನಿರ್ಧಾರ ತೆಗೆದುಕೊಳ್ಳಲೂ ಪ್ರೇರಣೆ ನೀಡುತ್ತಿದೆ, ಮತ್ತು ನಡುವೆ ನಿಲ್ಲಲು ಹಿರಿಯರಿಲ್ಲ. ಮೂರನೆಯದಾಗಿ, ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಸಂವಹನ ಮನೆ ಒಳಗಿನ ಸಮಸ್ಯೆಗಳನ್ನು ತಕ್ಷಣ ಹೊರಗೆ ಹಾಕುವ ಅವಕಾಶ ನೀಡುತ್ತವೆ. ಹೆಣ್ಣು ಮಗಳ ಗೆಳತಿಯರ ಗುಂಪು ಆಕೆಯ ನೋವನ್ನು ಕೇಳಿ ತ್ವರಿತ ಪರಿಹಾರ ಸೂಚಿಸಬಹುದು. ಆ ಪರಿಹಾರ ಅನೇಕ ಬಾರಿ ಖುಲಾ ಆಗಿರುತ್ತದೆ.
ಖುಲಾ ನಂತರದ ಸ್ಥಿತಿ: ಸಮಾಜ ತಯಾರಿಯಲ್ಲಿ ಇಲ್ಲ
ಮದುವೆ ಮುರಿದ ನಂತರ ಹೆಣ್ಣು ಮಗಳ ಮರಳಿ ಮದುವೆ ಸಮಾಜದ ದೃಷ್ಟಿಯಲ್ಲಿ ಇನ್ನೂ ಕಷ್ಟ. ಒಮ್ಮೆ ಖುಲಾ ಆಗಿದ್ದರೆ ಮತ್ತೊಮ್ಮೆ ಸ್ವೀಕಾರಾರ್ಹ ವರ ಸಿಗುತ್ತಾನೋ ಎಂಬ ಆತಂಕ ಕುಟುಂಬಕ್ಕೆ ಕಾಡುತ್ತದೆ. ಮಕ್ಕಳಿದ್ದರೆ ಅವರ ಭವಿಷ್ಯ ಮತ್ತಷ್ಟು ಗೊಂದಲಮಯ. ಮಹ್ರ್ ಮರಳಿ ಕೊಡಬೇಕಾದ ಪ್ರಶ್ನೆ, ನ್ಯಾಯಾಲಯದ ಮೂಲಕ ಹೋಗಬೇಕಾದ ಸಂದರ್ಭ, ಮಕ್ಕಳ ಪಾಲನೆಯ ಹೋರಾಟ ಎಲ್ಲ ಸೇರಿ ಮನೆ ಮನೆ ಸಂಕಟ ತುಂಬಿಕೊಳ್ಳುತ್ತದೆ. ಈ ಸ್ಥಿತಿ ಹೆಣ್ಣು ಮಗಳಿಗೆ ಮತ್ತು ಅವಳ ತಂದೆ-ತಾಯಿಗೆ ಎರಡಕ್ಕೂ ಮಾನಸಿಕ ಕ್ಷೋಭೆ ತರುತ್ತದೆ. ಸಮಾಜ ಈ ಬಗ್ಗೆ ಪ್ರಬುದ್ಧ ಧೋರಣೆ ತಳೆಯಬೇಕಾದ ಅಗತ್ಯ ಇದೆ, ಆದರೆ ಅದಕ್ಕಿಂತ ಮೊದಲು ಮದುವೆ ಮುರಿಯದಂತೆ ತಡೆಯುವ ಸಂಸ್ಕೃತಿ ಬೆಳೆಯಬೇಕು.
ಸಮಸ್ಯೆಯ ಆಳದಲ್ಲಿ ಇರುವ ಮೂಲ ಪ್ರಶ್ನೆ
ಇಷ್ಟೆಲ್ಲ ಹೇಳಿದ ನಂತರ ಒಂದು ಮೂಲ ಪ್ರಶ್ನೆ ಕೇಳಬೇಕು. ಬ್ಯಾರಿ ಸಮಾಜ ಇಂದು ಅನುಭವಿಸುತ್ತಿರುವ ಈ ಸಂಕಟ ಕೇವಲ ಗಂಡು ಮಕ್ಕಳ ಶಿಕ್ಷಣ ಕಡಿಮೆ ಆಯಿತು ಎಂಬ ಒಂದೇ ಕಾರಣಕ್ಕೆ ಉದ್ಭವಿಸಿದೆಯೇ? ಇಲ್ಲ. ಅದು ಒಂದು ಬಹು ಮುಖಿ ಬಿಕ್ಕಟ್ಟು. ಶಿಕ್ಷಣ ಅಸಮಾನತೆ, ಕುಟುಂಬ ವ್ಯವಸ್ಥೆ ಒಡೆಯುವಿಕೆ, ಹಿರಿಯರ ಅನುಪಸ್ಥಿತಿ, ಮದುವೆ ನಿರ್ಧಾರದಲ್ಲಿ ಸಾಮಾಜಿಕ ಹಸ್ತಕ್ಷೇಪ ಕಡಿಮೆ ಆಗುವಿಕೆ, ಮೊಬೈಲ್ ಸಂಸ್ಕೃತಿ, ಆರ್ಥಿಕ ಸ್ವಾತಂತ್ರ್ಯದ ಜೊತೆ ಭಾವನಾತ್ಮಕ ಅಪ್ರಬುದ್ಧತೆ ಮತ್ತು ಧಾರ್ಮಿಕ ಮೌಲ್ಯಗಳ ಶಿಥಿಲತೆ ಎಲ್ಲ ಒಟ್ಟಾಗಿ ಈ ಪರಿಸ್ಥಿತಿ ಸೃಷ್ಟಿಸಿವೆ.

ನಿಜವಾದ ಪರಿಹಾರಗಳು: ಮೇಲ್ಮೈ ಮದ್ದು ಸಾಲದು
ಈ ಸಮಸ್ಯೆಗೆ ಕೇವಲ ಜಾಗೃತಿ ಕಾರ್ಯಕ್ರಮ ನಡೆಸಿದರೆ ಸಾಕಾಗುವುದಿಲ್ಲ. ಆಳಕ್ಕೆ ಹೋಗಿ ಪರಿಹಾರ ಕಾಣಬೇಕು.
ಮೊದಲನೆಯ ಮತ್ತು ಅತ್ಯಂತ ಜರೂರಿ ಪರಿಹಾರ ಗಂಡು ಮಕ್ಕಳ ಶಿಕ್ಷಣ. ಪ್ರತಿ ಮಸೀದಿ ಮತ್ತು ಜಮಾಅತ್ ತನ್ನ ವ್ಯಾಪ್ತಿಯಲ್ಲಿ ಶಾಲೆ ಬಿಟ್ಟ ಗಂಡು ಮಕ್ಕಳ ಸಂಖ್ಯೆ ದಾಖಲಿಸಬೇಕು, ಅವರ ಕುಟುಂಬದ ಜೊತೆ ನೇರ ಮಾತುಕತೆ ನಡೆಸಬೇಕು, ಮತ್ತು ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ಮತ್ತು ಮಾರ್ಗದರ್ಶನ ನೀಡಬೇಕು. ಡಿಗ್ರಿ ಕೋರ್ಸ್ ಮಾತ್ರವಲ್ಲ, ಐಟಿಐ, ಪಾಲಿಟೆಕ್ನಿಕ್, ಕೌಶಲ ತರಬೇತಿ ಕೂಡ ಸ್ವೀಕಾರಾರ್ಹ ಮಾರ್ಗ ಎಂಬ ತಿಳಿವಳಿಕೆ ಕಲ್ಪಿಸಬೇಕು.
ಎರಡನೆಯ ಪರಿಹಾರ ಜಂಟಿ ಕುಟುಂಬ ಪದ್ಧತಿಯ ಮರುಸ್ಥಾಪನೆ ಅಲ್ಲ, ಆದರೆ ಅದರ ಮೌಲ್ಯಗಳ ಮರುಸ್ಥಾಪನೆ. ಒಂದು ಮನೆಯಲ್ಲಿ ಬದುಕಲು ಸಾಧ್ಯವಾಗದ ಇಂದಿನ ಕಾಲದಲ್ಲಿ ಅಜ್ಜ-ಅಜ್ಜಿಯ ಮನೆಗೆ ತಿಂಗಳಿಗೊಮ್ಮೆ ಹೋಗಿ ಕೂಡುವ ಅಭ್ಯಾಸ, ಸಮಸ್ಯೆ ಬಂದಾಗ ಹಿರಿಯರ ಬಳಿ ಹೋಗುವ ಸಂಸ್ಕೃತಿ, ಮನೆ ವಿಷಯ ಮೊಬೈಲ್‌ನಲ್ಲಿ ಹೇಳದೆ ಮುಖಾಮುಖಿ ಮಾತನಾಡುವ ಶಿಸ್ತು ಇವನ್ನು ಬೆಳೆಸಬೇಕು.
ಮೂರನೆಯ ಪರಿಹಾರ ಮದುವೆ ಪೂರ್ವ ಮಾರ್ಗದರ್ಶನ. ಇಸ್ಲಾಂ ಧರ್ಮ ಮದುವೆಗೆ ನಿಕಾಹ್‌ಗೆ ಮೊದಲು ಸರಿಯಾದ ತಿಳಿವಳಿಕೆ ಮತ್ತು ಒಪ್ಪಿಗೆ ಅವಶ್ಯ ಎಂದು ಒತ್ತಿ ಹೇಳುತ್ತದೆ. ಈ ಆಶಯಕ್ಕನುಗುಣವಾಗಿ ಮಸೀದಿ ಸಮಿತಿಗಳು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ ಜೋಡಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಒಂದು ಅಥವಾ ಎರಡು ಸಭೆಗಳ ಮೂಲಕ ವಿವಾಹ ಜೀವನದ ಜವಾಬ್ದಾರಿ, ಹೊಂದಿಕೊಳ್ಳುವ ರೀತಿ ಮತ್ತು ಸಮಸ್ಯೆ ಬಂದಾಗ ಧಾರ್ಮಿಕ ವ್ಯಾಸಂಗ ಮೂಲಕ ಪರಿಹರಿಸಿಕೊಳ್ಳುವ ದಾರಿ ತೋರಿಸಬೇಕು.
ನಾಲ್ಕನೆಯ ಪರಿಹಾರ ಖುಲಾ ಮೊದಲ ಅಲ್ಲ, ಕೊನೆಯ ಆಯ್ಕೆ ಎಂಬ ಪ್ರಜ್ಞೆ. ಸಮಸ್ಯೆ ಬಂದಾಗ ತಕ್ಷಣ ಮದ್ರಸ ಸಮಿತಿ ಅಥವಾ ಖಾಝಿ ಬಳಿ ಹೋಗುವ ಮೊದಲು ಕುಟುಂಬ ಮಟ್ಟದಲ್ಲಿ ಶಾಂತಿ ಪ್ರಯತ್ನ ಆಗಬೇಕು. ಪವಿತ್ರ ಕುರ್‌ಆನ್‌ನ ಸೂರಾ ನಿಸಾದ 35ನೇ ಆಯತ್ ಇದನ್ನೇ ಹೇಳುತ್ತದೆ. ಎರಡು ಕಡೆಯ ಕುಟುಂಬದಿಂದ ಒಬ್ಬೊಬ್ಬ ಮಧ್ಯಸ್ಥ ನೇಮಿಸಿ ಸಂಧಾನ ನಡೆಸಬೇಕು ಎಂಬ ಮಾತು ಅಲ್ಲಿದೆ. ಇಂದು ಅದು ಕಾಗದದ ಮೇಲೆ ಮಾತ್ರ ಉಳಿದಿದೆ.
ಐದನೆಯ ಪರಿಹಾರ ಮದುವೆ ನಿರ್ಧಾರ ಪ್ರಕ್ರಿಯೆಯ ಗುಣಮಟ್ಟ ಸುಧಾರಿಸುವಿಕೆ. ಹುಡುಗನ ವಿದ್ಯಾರ್ಹತೆ ಮಾತ್ರ ನೋಡಬಾರದು, ಅವನ ಸ್ವಭಾವ, ಧಾರ್ಮಿಕ ನಿಷ್ಠೆ, ಕುಟುಂಬ ಮೌಲ್ಯಗಳು ಮತ್ತು ಸಂಸಾರ ನಡೆಸುವ ಪ್ರಬುದ್ಧತೆ ಇವು ಮಹತ್ವದ ಮಾನದಂಡಗಳಾಗಬೇಕು. ಅದೇ ರೀತಿ ಹೆಣ್ಣು ಮಗಳ ಶಿಕ್ಷಣ ಅರ್ಹತೆ ಮಾತ್ರ ನೋಡಿ ಗಂಡನ್ನು ಅನರ್ಹ ಎನ್ನುವ ಬದಲು ಅವನ ಒಟ್ಟಾರೆ ವ್ಯಕ್ತಿತ್ವ ಮೌಲ್ಯಮಾಪನ ಆಗಬೇಕು.
ಆರನೆಯ ಪರಿಹಾರ ಮಾದಕ ದ್ರವ್ಯ ಸಮಸ್ಯೆ. ಇದನ್ನು ಕೇವಲ ಪೊಲೀಸ್ ಕೆಲಸ ಎಂದು ಬಿಡಬಾರದು. ಸಮಾಜ ತನ್ನ ಯುವಕರನ್ನು ಗುರುತಿಸಿ, ಅವರ ಜೊತೆ ನಿಲ್ಲಬೇಕು. ಅನೇಕ ಯುವಕರು ವ್ಯಸನಕ್ಕೆ ಬೀಳುವುದು ಉದ್ದೇಶವಿಲ್ಲದ ಜೀವನ, ಮಾರ್ಗದರ್ಶನ ಇಲ್ಲದ ಪರಿಸ್ಥಿತಿ ಮತ್ತು ಗೆಳೆಯರ ಒತ್ತಡದಿಂದ. ಅದಕ್ಕೆ ಧಾರ್ಮಿಕ ಮತ್ತು ಮಾನಸಿಕ ಕೌನ್ಸೆಲಿಂಗ್ ಒಟ್ಟಿಗೆ ಬೇಕು.
ಸಮಾಜ ಈಗ ಆಯ್ಕೆ ಮಾಡಬೇಕು
ಬ್ಯಾರಿ ಸಮಾಜ ಇಂದು ಒಂದು ನಿರ್ಣಾಯಕ ಘಟ್ಟದಲ್ಲಿ ನಿಂತಿದೆ. ಒಂದು ದಶಕದ ಹಿಂದೆ ಈ ಸಮಾಜ ವರದಕ್ಷಿಣೆ ಎಂಬ ಸಾಮಾಜಿಕ ಕಾಯಿಲೆ ಗುಣಪಡಿಸಿಕೊಂಡಿತು, ಏಕೆಂದರೆ ಸಮಾಜ ಒಟ್ಟಾಗಿ ಇಚ್ಛಾಶಕ್ತಿ ತೋರಿಸಿತ್ತು. ಇಂದು ಎದುರಿಸುತ್ತಿರುವ ಸಮಸ್ಯೆ ಅದಕ್ಕಿಂತ ಹೆಚ್ಚು ಸಂಕೀರ್ಣ, ಆದರೆ ಅಸಾಧ್ಯ ಅಲ್ಲ.
ಹೆಣ್ಣು ಮಕ್ಕಳ ಶಿಕ್ಷಣ ಸಾಧನೆ ಸಮಾಜಕ್ಕೆ ಹೆಮ್ಮೆ. ಅದನ್ನು ಹಿಂದೆ ಎಳೆಯಬಾರದು. ಆದರೆ ಅದರ ಜೊತೆ ಗಂಡು ಮಕ್ಕಳನ್ನೂ ಮೇಲೆತ್ತಬೇಕು. ಕುಟುಂಬ ಬಂಧ ಕ್ಷೀಣಿಸದಂತೆ ಕಾಪಾಡಬೇಕು. ಹಿರಿಯರ ಜ್ಞಾನ ಮತ್ತು ಅನುಭವ ಮರೆತು ಹೋಗದಂತೆ ನೋಡಬೇಕು. ಮದುವೆ ಎಂಬ ಪವಿತ್ರ ಸಂಬಂಧ ತ್ವರಿತ ನಿರ್ಧಾರಗಳಿಗೆ ಬಲಿ ಆಗದಂತೆ ಧಾರ್ಮಿಕ ಮತ್ತು ಸಾಮಾಜಿಕ ರಕ್ಷಣಾ ವ್ಯವಸ್ಥೆ ಕಟ್ಟಬೇಕು.

ಕೊನೆಯ ಮಾತು ಸರಳ, ಸಮಾಜ ಸ್ವಸ್ಥವಾಗಬೇಕಾದರೆ ಸಂಸಾರ ಸ್ವಸ್ಥವಾಗಿರಬೇಕು. ಸಂಸಾರ ಸ್ವಸ್ಥವಾಗಬೇಕಾದರೆ ಮದುವೆ ಸಂಬಂಧ ಮೌಲ್ಯ ಆಧಾರಿತವಾಗಿರಬೇಕು. ಮೌಲ್ಯ ಆಧಾರ ಬೇಕಾದರೆ ಶಿಕ್ಷಣ ಮತ್ತು ಧಾರ್ಮಿಕ ಪ್ರಬುದ್ಧತೆ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಇರಬೇಕು. ಅದು ಸಾಧ್ಯವಾದಾಗ ಮಾತ್ರ ಈ ಸಮುದಾಯ ನಿಜವಾದ ಪ್ರಗತಿ ಕಾಣಬಲ್ಲದು.
ಮನೆಯಲ್ಲಿ ಹಿರಿಯರ ಮಾತು ಇಲ್ಲದ ಸಂಸಾರ ದಿಕ್ಸೂಚಿ ಇಲ್ಲದ ಹಡಗಿನಂತೆ; ಶಿಕ್ಷಣ ಇಲ್ಲದ ಗಂಡು ಮಗ ಇರುವ ಮದುವೆ ಅಡಿಪಾಯ ಇಲ್ಲದ ಕಟ್ಟಡದಂತೆ, ಎರಡೂ ಬೇಗ ಉರುಳುತ್ತದೆ; ಎಚ್ಚರ ಆಗಬೇಕಾದದ್ದು ಉರುಳಿದ ನಂತರ ಅಲ್ಲ, ಮೊದಲೇ. ಹೆಣ್ಣು ಮಗಳು ಡಿಗ್ರಿ ಪಡೆದರೆ ಸಮಾಜ ಹೆಮ್ಮೆಪಡುತ್ತದೆ, ಆದರೆ ಅದೇ ಸಮಾಜ ಅವಳಿಗೆ ಅರ್ಹ ವರ ಕೊಡಲು ಸೋತರೆ ಆ ಹೆಮ್ಮೆ ಅವಳ ಜೀವನದ ಭಾರ ಆಗುತ್ತದೆ. ಜಂಟಿ ಕುಟುಂಬ ಎಂದರೆ ಕೇವಲ ಒಂದೇ ಮನೆಯಲ್ಲಿ ವಾಸ ಅಲ್ಲ, ಅದು ಒಂದೇ ನೋವಿಗೆ ಒಟ್ಟಾಗಿ ಅಳುವ, ಒಂದೇ ಸಂತೋಷಕ್ಕೆ ಒಟ್ಟಾಗಿ ನಗುವ ಜೀವಂತ ವ್ಯವಸ್ಥೆ, ಅದು ಹೋದರೆ ಸಮಾಜದ ಬೆನ್ನೆಲುಬು ಹೋದಂತೆ. ಖುಲಾ ಹೆಣ್ಣಿನ ಹಕ್ಕು, ನಿಜ; ಆದರೆ ಅದು ಬಳಸಬೇಕಾದ ಸ್ಥಿತಿ ಬಾರದಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿ. ಮಗನನ್ನು ಗಲ್ಫ್‌ಗೆ ಕಳಿಸಿದ ತಂದೆ ಹಣ ಪಡೆದ, ಆದರೆ ಮಗನಿಗೆ ಶಿಕ್ಷಣ ಕೊಡದ ತಂದೆ ಮಗ ಭವಿಷ್ಯ ಕಳೆದುಕೊಂಡ ಎಂದಾಗಬಾರದು. ಕೊನೆಯದಾಗಿ ನನಗೆ ಹೇಳಲಿಕ್ಕಿರುವುದು ಸಮಾಜ ಸ್ವಸ್ಥವಾಗಬೇಕಾದರೆ ಮನೆ ಮನೆ ಸ್ವಸ್ಥವಾಗಬೇಕು; ಮನೆ ಸ್ವಸ್ಥವಾಗಬೇಕಾದರೆ ಮದುವೆ ಸ್ವಸ್ಥವಾಗಬೇಕು; ಅದು ಸಾಧ್ಯವಾಗಬೇಕಾದರೆ ಗಂಡು ಮತ್ತು ಹೆಣ್ಣು ಇಬ್ಬರೂ ಶಿಕ್ಷಣ ಮತ್ತು ಪ್ರಬುದ್ಧತೆಯಲ್ಲಿ ಸಮಾನರಾಗಿರಬೇಕು. ಬ್ಯಾರಿ ಸಮಾಜ ಈ ನಿಟ್ಟಿನಲ್ಲಿ ಸಮಯೋಚಿತವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವ ವಿಶ್ವಾಸ ನನ್ನದು.
