ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಮಾಡಿದ ಅಪರಾಧ ಕೃತ್ಯಕ್ಕೆ ವಯಸ್ಕನಾದಾಗ ಬಂಧನ ಹೊರಡಿಸಲು ಅಧಿಕಾವಿಲ್ಲ: ಹೈಕೋರ್ಟ್

ರಾಜ್ಯ

ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಎಸಗಿರುವ ಅಪರಾಧಗಳನ್ನು ಆಧಾರವಾಗಿಟ್ಟುಕೊಂಡು ಗೂಂಡಾ ಕಾಯಿದೆಯಡಿ ಮುನ್ನೆಚ್ಚರಿಕಾ ಕ್ರಮವಾಗಿ ಬಂಧನ ಆದೇಶ ಹೊರಡಿಸಲು ಅಧಿಕಾರವಿಲ್ಲ ಎಂದು ಹೈಕೋರ್ಟ್​ ಆದೇಶಿಸಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಬಂಧಿತರಾಗಿರುವ ಅಭಿಚೆರ್ಲಿ ಅಲಿಯಾಸ್​ ಅಭಿ ಎಂಬುವವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದೆ.

ತಮ್ಮ ಮಗನನ್ನು ಬಂಧಿಸಿರುವ ಆದೇಶವನ್ನು ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್​ನ ಮೇರಿ ಉಷಾ ಎಂಬುವರು ಸಲ್ಲಿಸಿದ್ದ ಹೆಬಿಯಸ್​ ಕಾರ್ಪಸ್​ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ಪೀಠ ಈ ಆದೇಶ ನೀಡಿದೆ. ಬಂಧಿತರು 2006ರ ಅಕ್ಟೋಬರ್ 8 ರಂದು ಜನಿಸಿದ್ದು, ಪ್ರಸ್ತುತ 19 ವರ್ಷ ವಯಸ್ಸಿನವರಾಗಿದ್ದಾರೆ. ಅವರ ವಿರುದ್ಧ 2025ರ ಡಿಸೆಂಬರ್ 11ರಂದು ಗೂಂಡಾ ಕಾಯಿದೆಯಡಿ ಬಂಧನ ಆದೇಶ ಹೊರಡಿಸಲಾಗಿದೆ. ಅವರ ವಿರುದ್ಧದ ಆರೋಪಗಳು 2023, 24, 25ರಲ್ಲಿ ನಡೆದಿರುವ ಘಟನೆಗಳಾಗಿವೆ. ಹೀಗಾಗಿ ಅವರನ್ನು ಬಂಧನಕ್ಕೆ ಆದೇಶ ಹೊರಡಿಸಿರುವುದು 18 ವರ್ಷಕ್ಕೂ ಕಡಿಮೆ ವಯಸ್ಸಿನಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.

ಆದ್ದರಿಂದ ಬಾಲನ್ಯಾಯ ಕಾಯಿದೆಯನ್ನು ಸಂವಿಧಾನದ ಪರಿಚ್ಚೇದ 15(3) ಅಡಿ ಜಾರಿ ಮಾಡಲಾಗಿದೆ. ಈ ಕಾಯಿದೆಯು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಮತ್ತು ಹೇಗ್​ ಸಮ್ಮೇಳನದಲ್ಲಿ ಆಗಿರುವ ಒಡಂಬಡಿಕೆಗಳ ಅನುಸಾರದಲ್ಲಿ ಜಾರಿ ಮಾಡಲಾಗಿದೆ. ಹೀಗಾಗಿ ಕಾಯಿದೆಯ ಸೆಕ್ಷನ್​ 24 ರ ಉದ್ದೇಶವು, ಅಪ್ರಾಪ್ತನಾಗಿದ್ದ ಸಂದರ್ಭದಲ್ಲಿ ಮಾಡಿದ ಅಪರಾಧ ಕೃತ್ಯಗಳು, ಅವರ ಪ್ರಾಪ್ತರಾದ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ ಎಂಬುದಾಗಿ ಹೇಳಲಾಗಿದೆ.

ಆದ್ದರಿಂದ ಬಂಧಿತನ ವಿರುದ್ಧದ ಪ್ರಕರಣಗಳು ಅಪ್ರಾಪ್ತನಾಗಿದ್ದಾಗಿನವಾಗಿದ್ದು. ಆ ಪ್ರಕರಣಗಳ ಆಧಾರದಲ್ಲಿ ಗೂಂಡಾ ಕಾಯಿದೆಯಡಿ ಬಂಧನ ಆದೇಶ ಹೊರಡಿಸಲಾಗುವುದಿಲ್ಲ. ಬಂಧನದ ನಿರ್ಧಾರ ತೆಗೆದುಕೊಳ್ಳುವಾಗ ಅಧಿಕಾರಿಗಳು ಹಳೆಯ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡಿರುವುದು ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ ಬಂಧನ ಆದೇಶ ರದ್ದುಪಡಿಸಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆದೇಶಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಅದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ತನ್ನ ಮಗ ಅಭಿಚೆರಿ ಕೊಲೆ ಯತ್ನ, ಹಲ್ಲೆ ಸೇರಿದಂತೆ ಹತ್ತು ಪ್ರಕರಣಗಳು ದಾಖಲಾಗಿವೆ ಎಂಬ ಕಾರಣಕ್ಕೆ 2025ರ ಡಿಸೆಂಬರ್ 11 ರಂದು ಜಿಲ್ಲಾಧಿಕಾರಿಗಳು ಆತನನ್ನು ‘ಗೂಂಡಾ ಕಾಯ್ದೆ’ ಅಡಿ ಬಂಧಿಸಲು ಆದೇಶಿಸಿದ್ದರು. ಬಳಿಕ ಬಳ್ಳಾರಿಯ ಕೇಂದ್ರಕಾರಾಗೃಹದ ಬಂದನದಲ್ಲಿಟಿರುವುದಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲಾಧಿಕಾರಿ 2025ರ ಡಿಸೆಂಬರ್ 11ರಂದು ಹೊರಡಿಸಿರುವ ಆದೇಶ ಮತ್ತು ಈ ಆದೇಶವನ್ನು ಅಂಗೀಕರಿಸಿರುವ ಗೃಹ ಇಲಾಖೆಯ ಕಾರ್ಯದರ್ಶಿ 2025ರ ಡಿಸೆಂಬರ್ 17ರಂದು ಹೊರಡಿಸಿರುವ ಆದೇಶ ಕಾನೂನು ಬಾಹಿರ ಎಂದು ಘೋಷಣೆ ಮಾಡಿ ಬಂಧನದಿಂದ ತಕ್ಷಣ ಬಿಡುಗಡೆಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಂಧಿತರಾಗಿರುವ ಅರ್ಜಿದಾರರ ಮಗನಿಗೆ ಪ್ರಸ್ತುತ 19 ವರ್ಷ ವಯಸ್ಸಾಗಿದ್ದು, ಅವರ ವಿರುದ್ಧ 10 ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳು ಬಂಧಿತರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಬಾಲಾಪರಾಧಿಯಾಗಿದ್ದಾಗ ದಾಖಲಿಸಿರುವ ಪ್ರಕರಣಗಳಾಗಿವೆ.

ಆದರೆ, ಬಾಲ (ಮಕ್ಕಳ ಆರೈಕೆ ಮತ್ತು ರಕ್ಷಣೆ) ನ್ಯಾಯ ಕಾಯಿದೆಯ ಸೆಕ್ಷನ್​ 24ರ ಪ್ರಕಾರ 18 ವರ್ಷಕ್ಕೂ ಮುನ್ನ ನಡೆದಿರುವ ಅಪರಾಧಗಳ ಆಧಾರದಲ್ಲಿ ಬಂಧನಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಆದ್ದರಿಂದ ಅರ್ಜಿದಾರರ ಮಗನನ್ನು ಬಂಧಿಸಿರುವುದು ಅಕ್ರಮ ಎಂದು ಘೋಷಣೆ ಮಾಡಬೇಕು ಮತ್ತು ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಕೋರಿದರು.

ಸರ್ಕಾರದ ಪರ ವಕೀಲರು, ಬಂಧಿತ ಆರೋಪಿ ಸಮಾಜ ವಿರೋಧಿ ಕೃತ್ಯಗಳು, ಗಂಭೀರ ಕ್ರಿಮಿನಲ್​ ಆರೋಪಗಳು, ಕೊಲೆ ಮಾಡಿದ ಆರೋಪ. ಸರ್ಕಾರಿ ನೌಕರರಿಗೆ ಬೆದರಿಕೆ, ಶಸ್ತ್ರಾಸ್ತ್ರ ಕಾಯಿದೆ ಸೇರಿದಂತೆ ವಿವಿಧ ಕಾಯಿದೆಯಡಿ ದೂರುಗಳು ದಾಖಲಾಗಿವೆ. ಅರ್ಜಿದಾರರಿಗೆ 19 ವರ್ಷ ಆಗಿದ್ದರೂ, ಅಪ್ರಾಪ್ತನಾಗಿದ್ದಾಗಿನಿಂದಲೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ತಿಳಿಸಿ ಆರೋಪ ಸಂಬಂಧ ದಾಖಲಾಗಿದ್ದ ಪ್ರಕರಣಗಳ ಪಟ್ಟಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದರು.

ಅಲ್ಲದೆ, ಆರೋಪಿಯ ವಿರುದ್ಧ ಆಂಡ್ರೆಸನ್​ಪೇಟೆ ಮತ್ತು ಉರಿಗ್ರಾಂಪೇಟೆ ಪೊಲೀಸ್​ ಠಾಣೆಯಲ್ಲಿ ರೌಡಿ ಶೀಟರ್​ನ್ನು ಪ್ರಾರಂಭಿಸಲಾಗಿದೆ. ಆದ್ದರಿಂದ ಬಂಧನ ಆದೇಶ ಎತ್ತಿಹಿಡಿದು, ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.