ಕರ್ನಾಟಕದಲ್ಲಿ SIR ನಡೆದರೆ, ರಾಜ್ಯ ಕಾಂಗ್ರೆಸ್ 1994 ರ ಪರಿಸ್ಥಿತಿಗೆ
✍️. ಆರ್.ಟಿ.ವಿಠ್ಠಲಮೂರ್ತಿ
ತೃಣಮೂಲ ಕಾಂಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ಕುಸಿದು ಬಿದ್ದ ರೀತಿಯಿಂದ ದಿಲ್ಲಿಯ ಕಾಂಗ್ರೆಸ್ ವರಿಷ್ಟರಿಗೆ ಚಿಂತೆ ಸುರುವಾಗಿದೆ. ಅಷ್ಟೇ ಅಲ್ಲ, ಈ ಚಿಂತೆಯ ಪರಿಣಾಮವಾಗಿ ಅವರೀಗ ಕರ್ನಾಟಕದ ಮೇಲೆ ಕಣ್ಣು ನೆಟ್ಟಿದ್ದಾರೆ.
ಅಂದ ಹಾಗೆ ಪಶ್ಚಿಮ ಬಂಗಾಳವನ್ನು ಅಭೇದ್ಯ ಕೋಟೆಯನ್ನಾಗಿ ಮಾಡಿಕೊಂಡಿದ್ದ ಮಮತಾ ಬ್ಯಾನರ್ಜಿ ಇತ್ತೀಚಿನ ಚುನಾವಣೆಯಲ್ಲಿ ಕುಸಿದು ಬಿದ್ದರು. ಬಿಜೆಪಿಯ ಮಾರಕ ಧಾಳಿಯ ಎದುರು ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಸೋತು ಸುಣ್ಣವಾಯಿತು. ಆದರೆ ಮಮತಾ ಬ್ಯಾನರ್ಜಿ ಅವರ ಪತನಕ್ಕೆ ಆ ರಾಜ್ಯದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರಣ. ರಾಜ್ಯದ ತೊಂಬತ್ತು ಲಕ್ಷಕ್ಕೂ ಹೆಚ್ಚು ಜನ ಈ ವಿಶೇಷ ಪರಿಷ್ಕರಣೆಯಿಂದ ಹೊರಬಿದ್ದಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಶಕ್ತಿ ಸೊರಗಿತು. ಮತ್ತು ಇದನ್ನು ಎನ್ ಕ್ಯಾಶ್‌ಮಾಡಿಕೊಂಡ ಬಿಜೆಪಿ ಪಶ್ಚಿಮ ಬಂಗಾಳದ 200 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಿತು. ಮಮತಾ ಬ್ಯಾನರ್ಜಿ ಅವರ ಅಭೇಧ್ಯ ಕೋಟೆ ಛಿದ್ರವಾಯಿತು ಎಂಬುದು ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಶಕ್ತಿಗಳ ಆರೋಪ.
ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ವರಿಷ್ಟರ ಗಮನವೀಗ ಕರ್ನಾಟಕದ ಮೇಲೆ ಬಿದ್ದಿದೆ. ಅಂದ ಹಾಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದರೂ ಬಿಜೆಪಿಗೆ ಇನ್ನೂ ದಕ್ಷಿಣ ಭಾರತ ಒಲಿಯುತ್ತಿಲ್ಲ.
ತಮಿಳುನಾಡಿನಲ್ಲಿ ಅದೇನೇ ಕಸರತ್ತು ಮಾಡಿದರೂ ಅದಕ್ಕೆ ಶಕ್ತಿ ಸಿಗುತ್ತಿಲ್ಲ. ಎಐಎಡಿಎಂಕೆಯ ಜತೆ ಸೇರಿ ದಷ್ಟಪುಷ್ಟವಾಗೋಣ ಎಂದರೂ ಅದು ಸಾಧ್ಯವಾಗಿಲ್ಲ. ತಮಿಳುನಾಡಿನ ಮತದಾರರು ಪರಂಪರಾಗತ ಎದುರಾಳಿಗಳಾದ ಡಿಎಂಕೆ-ಎಐಎಡಿಎಂಕೆಯನ್ನು ತಿರಸ್ಕರಿಸಿದರೂ ಬಿಜೆಪಿ ವಿರೋಧಿ ಮನ:ಸ್ಥಿತಿಯ ಟಿವಿಕೆ ಪಕ್ಷದ ಕೈ ಹಿಡಿದಿದ್ದಾರೆ. ಆ ಪಕ್ಷದ ನಾಯಕ ವಿಜಯ್ ಸಿಎಂ ಗದ್ದುಗೆಯ ಮೇಲೆ ಕೂರುವಂತೆ ನೋಡಿಕೊಂಡಿದ್ದಾರೆ.
ಇನ್ನು ಕೇರಳದ ವಿಷಯ ಬಂದರೂ ಬಿಜೆಪಿಯ ಸ್ಥಿತಿ ಇಂಪ್ರೂವ್ ಆಗಿಲ್ಲ. ಬದಲಿಗೆ ಸಿಕ್ಕ ಸಿಕ್ಕ ಕಡೆ ಹೊಡೆತ ತಿನ್ನುತ್ತಿರುವ ಕಾಂಗ್ರೆಸ್ ಪಕ್ಷ ಇಲ್ಲಿ ತಲೆ ಎತ್ತಿ ಕುಳಿತಿದೆ.

ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ತಾವು ದಿಗ್ವಿಜಯ ಸಾಧಿಸಿದ ರೀತಿಯಲ್ಲಿ ಕರ್ನಾಟಕವನ್ನು ವಶಪಡಿಸಿಕೊಳ್ಳಲು ಬಿಜೆಪಿ ವರಿಷ್ಟರು ಪ್ಲಾನು ಮಾಡಿದ್ದಾರೆ. ಮತ್ತು ಆ ಪ್ಲಾನಿಗೆ ಪೂರಕವಾಗಿ ಆರೆಸ್ಸೆಸ್ ಕರ್ನಾಟಕದಲ್ಲಿ ರಂಗಪ್ರವೇಶ ಮಾಡಿದೆ. ಅದರಲ್ಲೂ ಮುಖ್ಯವಾಗಿ ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಕರ್ನಾಟಕದ ಆರೆಸ್ಸೆಸ್ ಪ್ರಮುಖರಿಗೆ ನಿರ್ಣಾಯಕ ಸೂಚನೆ ಕೊಟ್ಟಿದ್ದಾರೆ.
ಅವರ ಈ ಸೂಚನೆಯ ಹಿನ್ನೆಲೆಯಲ್ಲಿ ಅರೆಸ್ಸೆಸ್ ಕಾರ್ಯಕರ್ತರು ಕರ್ನಾಟಕದುದ್ದ ಪಸರಿಕೊಳ್ಳುತ್ತಿದ್ದಾರೆ ಮತ್ತು ಮುಖ್ಯವಾಗಿ ಯುವ ಮತದಾರರ ಒಲವುಗಳಿಸುವ ಕಸರತ್ತು ಆರಂಭಿಸಿದ್ದಾರೆ.
ಅವರು ಹೀಗೆ ಕಸರತ್ತು ನಡೆಸುತ್ತಿದ್ದಂತೆಯೇ ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆದರೆ ಮತ್ತು ಬಿಜೆಪಿಯ ಇಚ್ವೆಗೆ ತಕ್ಕಂತೆ ನಡೆದರೆ ಡೇಂಜರ್ ಗ್ಯಾರಂಟಿ ಎಂಬುದು ಕಾಂಗ್ರೆಸ್ ವರಿಷ್ಟರ ಆತಂಕ.
ಅವರಿಗಿರುವ ಸಧ್ಯದ ಮಾಹಿತಿಯ ಪ್ರಕಾರ: ಕರ್ನಾಟಕದಲ್ಲಿ ಪಶ್ಚಿಮ ಬಂಗಾಳದಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ನಡೆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಹಾಲಿ ಶಾಸಕರ ಪೈಕಿ ಮಿನಿಮಮ್ ನೂರು ಮಂದಿ ಸೋಲು ಅನುಭವಿಸಲಿದ್ದಾರೆ.
ಈ ಪ್ರಮಾಣದಲ್ಲಿ ಕಾಂಗ್ರೆಸ್ ಶಾಸಕರು ಸೋಲು ಅನುಭವಿಸಿದರೆ ರಾಜ್ಯ ಕಾಂಗ್ರೆಸ್ 1994 ರ ಪರಿಸ್ಥಿತಿಗೆ ತಲುಪುತ್ತದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಲವತ್ತು ಸೀಟುಗಳ ಗಡಿ ತಲುಪಲು ವಿಫಲವಾಗಿತ್ತು. ಇಂತಹ ಹೀನಾಯ ಸ್ಥಿತಿ 2028 ರಲ್ಲಿ ರಿಪೀಟ್ ಆದರೆ ಭವಿಷ್ಯದಲ್ಲಿ ಮೇಲೆದ್ದು ನಿಲ್ಲುವುದೂ ಪಕ್ಷಕ್ಕೆ ಕಷ್ಟವಾಗಲಿದೆ. ಯಾಕೆಂದರೆ 94 ರಲ್ಲಿ ಸೋಲು ಅನುಭವಿಸಿದರೂ ಮುಂದಿನ ಚುನಾವಣೆಯ ಹೊತ್ತಿಗೆ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್. ರಂಗನಾಥ್, ಎಂ.ವೈ.ಘೋರ್ಪಡೆ ಸೇರಿದಂತೆ ಹಲವು ಅತಿರಥ-ಮಹಾರಥರಿದ್ದ ಕಾಂಗ್ರೆಸ್ ಸೈನ್ಯ ಗೆಲುವು ಗಳಿಸಿತು.
ಆದರೆ 2028 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೆ 2033 ರ ಹೊತ್ತಿಗೆ ಕಾಂಗ್ರೆಸ್ ಸೈನ್ಯವನ್ನು ಮೇಲೆಬ್ಬಿಸಿ ನಿಲ್ಲಿಸಲು ಇಂತಹ ಅತಿರಥ-ಮಹಾರಥರ ದಂಡು ಇರುವುದಿಲ್ಲ. ಅಷ್ಟೊತ್ತಿಗಾಗಲೇ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿದಂತೆ ಅತಿರಥ-ಮಹಾರಥರು ಶಸ್ತ್ರತ್ಯಾಗ ಮಾಡಿರುತ್ತಾರಾದ್ದರಿಂದ ಅವರ ಜಾಗವನ್ನು ತುಂಬುವ ಸೇನಾನಿಗಳು ಕಡಿಮೆ. ಹೀಗಾಗಿ 2028 ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರದೇ ಹೋದರೂ ಸಾಲಿಡ್ಡು ಸಂಖ್ಯೆಯ ಶಾಸಕರಾದರೂ ಇರಬೇಕು ಎಂಬುದು ಕಾಂಗ್ರೆಸ್ ವರಿಷ್ಟರ ಲೆಕ್ಕಾಚಾರ.
ಹೀಗಾಗಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಟಾರ್ಗೆಟ್ ಆಗುವ ಪಾಕೀಟು ಯಾವುದಿದೆ? ಅದರ ಮೇಲೆ ವಿಶೇಷ ಗಮನ ಹರಿಸಬೇಕು ಮತ್ತು ಆ ಪಾಕೀಟಿನ ಜನ ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳಲು ಅಗತ್ಯವಾದ ದಾಖಲೆಗಳನ್ನು ಹೊಂದಲು ಅನುಕೂಲ ಮಾಡಿಕೊಡಬೇಕು ಎಂಬುದು ಕಾಂಗ್ರೆಸ್ ವರಿಷ್ಟರ, ಅದರಲ್ಲೂ ರಾಹುಲ್ ಗಾಂಧಿಯವರ ಸಿಗ್ನಲ್ಲು.
ಮುಂದೇನಾಗುತ್ತದೋ ನೋಡಬೇಕು.

ರಾಹುಲ್ ಗೆ ತಲುಪಿದ ಸಿದ್ದು ಸಂದೇಶ
ಇನ್ನು ಪಶ್ಚಿಮ ಬಂಗಾಳದ ಎಲೆಕ್ಷನ್ ರಿಸಲ್ಟು ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಸಂಘರ್ಷಕ್ಕೆ ಹೊಸ ತಿರುವು ನೀಡಿದೆ.
ಅಂದ ಹಾಗೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಗೆದ್ದು ಅಧಿಕಾರವನ್ನೇನೋ ಹಿಡಿದಿದೆ. ಆದರೆ ಪಶ್ಚಿಮ ಬಂಗಾಳದ ಫಲಿತಾಂಶ ನೋಡಿದ ಮೇಲೆ ಅತೀವ ಆತಂಕವೂ ಅಗಿದೆ.
ಯಾಕೆಂದರೆ ಪಶ್ಚಿಮ ಬಂಗಾಳವನ್ನು ಗೆದ್ದ ಮೇಲೆ ಬಿಜೆಪಿಯ ಒಟ್ಟಾರೆ ಗಮನ ಕರ್ನಾಟಕದ ಕಡೆ ಸರಿದಿದೆ. ಇವತ್ತು ದಕ್ಷಿಣ ಭಾರತವನ್ನು ವಶಪಡಿಸಿಕೊಳ್ಳಲು ಬಿಜೆಪಿ ಪಾಲಿಗೆ ಕರ್ನಾಟಕವೇ ಖೈಬರ್ ಕಣಿವೆ ಇದ್ದಂತೆ. 2028 ರಲ್ಲಿ ಕರ್ನಾಟಕವನ್ನು ವಶಪಡಿಸಿಕೊಂಡರೆ ಮುಂದೆ ತಮಿಳುನಾಡು, ಕೇರಳದಂತಹ ರಾಜ್ಯಗಳಲ್ಲಿ ಪಕ್ಷದ ನೆಲೆಯನ್ನು ಭದ್ರಪಡಿಸಿಕೊಳ್ಳಬಹುದು ಎಂಬುದು ಮೋದಿ-ಅಮಿತ್ ಶಾ ಯೋಚನೆ.
ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸುವ ಸಣ್ಣ ಅವಕಾಶವನ್ನೂ ಈ ಜೋಡಿ ಕಳೆದುಕೊಳ್ಳಲು ಬಯಸುವುದಿಲ್ಲ. ಅದರಲ್ಲೂ 2023 ರಲ್ಲಿ ತಾವೇ ನಿರಂತರವಾಗಿ ಕರ್ನಾಟಕಕ್ಕೆ ನುಗ್ಗಿದರೂ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲಾಗದ ಹತಾಶೆ, ಅವಮಾನವಾಗಿ ಪರಿವರ್ತನೆಗೊಂಡು ಪ್ರಧಾನಿ ನರೇಂದ್ರಮೋದಿ ಅವರನ್ನು ಕಾಡುತ್ತಿದೆ. ಹೀಗಾಗಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ಮತ್ತೆ ಅವರು ಕರ್ನಾಟಕಕ್ಕೆ ನುಗ್ಗತೊಡಗಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ-ಡಿಕೆಶಿ ನಡುವಣ ಖುರ್ಚಿ ಕಾಳಗದ ಬಗ್ಗೆ ಪ್ರಸ್ತಾಪಿಸತೊಡಗಿದ್ದಾರೆ.
ಪರಿಣಾಮ? ಸಿದ್ದರಾಮಯ್ಯ-ಡಿಕೆಶಿ ನಡುವಣ ಅಧಿಕಾರ ಸಂಘರ್ಷದ ಎಪಿಸೋಡಿನ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಉತ್ಸಾಹವಿಲ್ಲ. ಇದೇ ರೀತಿ ಈಗ ಸಿದ್ದರಾಮಯ್ಯ ಕೂಡಾ ಎಷ್ಟು ಅಗ್ರೆಸಿವ್ ಅಗಿದ್ದಾರೆ ಎಂದರೆ ರಾಹುಲ್ ಗಾಂಧಿ ಪ್ರಸ್ತಾಪಿಸುವ ಮುನ್ನವೇ: ‘ಅಧಿಕಾರದಿಂದ ಕೆಳಗಿಳಿಯಲು ನಾನು ರೆಡಿ. ಆದರೆ ಹಾಲಿ ಗೃಹ ಸಚಿವ, ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರೇ ಮುಂದಿನ ಸಿಎಂ ಆಗಬೇಕು. ಹಾಗಾಗದಿದ್ದರೆ ಮುಂದಿನ ಪರಿಣಾಮಗಳಿಗೆ ನಾನು ಹೊಣೆಯಲ್ಲ’ ಎಂಬ ಮೆಸೇಜು ರಾಹುಲ್ ಕಿವಿಗೆ ತಲುಪುವಂತೆ ಮಾಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ತಾವು ದುಡುಕಿ ಒಂದು ಹೆಜ್ಜೆ ಇಟ್ಟರೆ ಮೋದಿ-ಅಮಿತ್ ಶಾ ಜೋಡಿ ರಾಜ್ಯ ಸರ್ಜಾರವನ್ನೇ ಖೆಡ್ಡಾಗೆ ಬೀಳಿಸಬಹುದು ಎಂಬುದು ರಾಹುಲ್ ಅತಂಕ. ಹೀಗಾಗಿ ಅವರು ಅಧಿಕಾರ ಹಂಚಿಕೆಯ ಹಿಯರಿಂಗ್ ಡೇಟನ್ನೇ ಮುಂದೂಡಲು ನಿರ್ಧರಿಸಿದ್ದಾರೆ ಎಂಬುದು ಕಾಂಗ್ರೆಸ್ ಮೂಲಗಳ ಮಾತು.

ಇವರಿಗೆ ಬೇಕು ಅವರಿಗೆ ಬೇಡ
ಈ ಮಧ್ಯೆ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಯನ್ನು ತ್ವರಿತವಾಗಿ ಮಾಡಿ ಅಂತ ರಾಹುಲ್ ಗಾಂಧಿ ರಾಜ್ಯದ ನಾಯಕರಿಗೆ ಸೂಚನೆ ಕೊಟ್ಟಿದ್ದಾರಂತೆ.
ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ರಾಜಧಾನಿಯಲ್ಲಿ ಹೋರಾಡಲು ಕಾರ್ಪೊರೇಟರುಗಳ ಪಡೆ ಬೇಕಲ್ಲ?ಅವರಿದ್ದರೆ ತಾನೇ ತಳಹಂತದಲ್ಲಿ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವುದು ಎಂಬುದು ರಾಹುಲ್ ಗಾಂಧಿಯವರ ಯೋಚನೆ.
ಹೀಗೆ ರಾಹುಲ್ ಗಾಂಧಿ ಅವರು ನೀಡಿದ ಸೂಚನೆಯನ್ನು ಪಾಲಿಸಲು ಸಿಎಂ ಸಿದ್ದರಾಮಯ್ಯ ಅವರಂತೂ ರೆಡಿ ಇದ್ದಾರೆ. ಆದರೆ ಜಿಬಿಎ ಚುನಾವಣೆ ನಡೆಸುವ ವಿಷಯದಲ್ಲಿ ಅವರಿಗೆ ಉತ್ಸುಕತೆ ಇದ್ದರೂ ಅವರ ವಿರೋಧಿ ಪಾಳಯಕ್ಕೆ ಬಿಲ್ ಕುಲ್ ಇಷ್ಟವಿಲ್ಲ.
ಕಾರಣ? ಒಂದು ಸಲ ಜಿಬಿಎ ಚುನಾವಣೆ ಘೋಷಣೆಯಾದರೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಲ್ಲಿ ಮತ್ತಷ್ಟು ಗಟ್ಟಿಯಾಗಿ ಸೆಟ್ಲಾಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆ ನಡೆದರೆ ಕಾಂಗ್ರೆಸ್ ಗೆಲ್ಲುವುದು ಕಷ್ಟ. ಈಗಿರುವ ಮಾಹಿತಿಯ ಪ್ರಕಾರ ಐದು ಜಿಬಿಎಗಳ ಪೈಕಿ ನಾಲ್ಕು ಜಿಬಿಎಗಳ ಅಧಿಕಾರ ಬಿಜೆಪಿ-ಜೆಡಿಎಸ್ ಮಿತ್ರಕೂಟದ ತೆಕ್ಕೆಗೆ ಹೋಗುತ್ತದೆ. ಇದ್ದುದರಲ್ಲಿ ಸೆಂಟ್ರಲ್ ಜಿಬಿಎ ಕಾಂಗ್ರೆಸ್ ವಶಕ್ಕೆ ಬರಬಹುದು. ಇವತ್ತು ಚುನಾವಣೆಯಲ್ಲಿ ಕನಿಷ್ಟ ಮೂರು ಜಿಬಿಎಗಳನ್ನು ವಶಪಡಿಸಿಕೊಂಡರೆ ಓಕೆ. ಹಾಗಾಗದೆ ಒಂದೇ ಜಿಬಿಎ ಕೈಗೆ ಬಂದರೆ ಸಿದ್ದರಾಮಯ್ಯ ಗ್ಯಾಂಗು ಹೊಸ ಆಟಕ್ಕಿಳಿಯುತ್ತದೆ. ಇದು ಬೆಂಗಳೂರು ಉಸ್ತುವಾರಿ ನಾಯಕರ ವೈಫಲ್ಯ ಎನ್ನುತ್ತದೆ. ಹೀಗಾಗಿ ಜಿಬಿಎ ಚುನಾವಣೆ ತಕ್ಷಣ ನಡೆಯುವ ಬದಲು ಇನ್ನಷ್ಟು ಕಾಲ ಮುಂದಕ್ಕೆ ಹೋಗಲಿ ರಂಬುದು ಸಿದ್ದರಾಮಯ್ಯ ವಿರೋಧಿ ಪಾಳಯದ ಲೆಕ್ಕಾಚಾರ.
ಮೂಲಗಳ ಪ್ರಕಾರ ಇದೇ ಕಾರಣಕ್ಕಾಗಿ ಜಿಬಿಎ ಚುನಾವಣೆ ನಡೆಸದಂತೆ ಸುಪ್ರೀಂಕೋರ್ಟಿನ ಮೊರೆ ಹೋಗಲು ಈ ಪಾಳಯ ನಿರ್ಧರಿಸಿದೆ. ಅಂದ ಹಾಗೆ ಜಿಬಿಎ ಚುನಾವಣೆಯನ್ನು ಮುಂದೂಡಲು ಅನುಕೂಲವಾಗುವಂತೆ ಸುಪ್ರೀಂ ಕೋರ್ಟಿನಲ್ಲಿ ವಾದಿಸಲು ಅದಕ್ಕೆ ಕಾರಣವೂ ಇದೆ. ಯಾಕೆಂದರೆ ಈಗ ಆಗಿರುವ ಜಿಬಿಎ ವಾರ್ಡುಗಳು ಕ್ರಮಬದ್ಧವಾಗಿಲ್ಲ. ಕೆಲವು ವಾರ್ಡುಗಳಲ್ಲಿ ಒಂಬತ್ತು ಸಾವಿರ ಮತದಾರರಿದ್ದರೆ, ಕೆಲವು ವಾರ್ಡುಗಳಲ್ಲಿ ನಲವತ್ತೈದು ಸಾವಿರ ಮತದಾರರಿದ್ದಾರೆ. ಇನ್ನು ಕೆ.ಆರ್.ಪುರಂ ವ್ಯಾಪ್ತಿಯ ಗುಂಜೂರಿನಲ್ಲಿ ಎರಡು ಅಪಾರ್ಟ್ ಮೆಂಟು ಮತ್ತು ಸ್ವಲ್ಪೇ ಸ್ವಲ್ಪ ಪ್ರದೇಶವನ್ನು ಒಳಗೊಂಡ ಚೋಟಾ ವಾರ್ಡನ್ನು ಸೃಷ್ಟಿಸಲಾಗಿದೆ. ಇದೇ ರೀತಿ ಮಹಿಳಾ ಮೀಸಲಾತಿ ಸಮರ್ಪಕವಾಗಿಲ್ಲ ಎಂಬುದು ಸೇರಿದಂತೆ ಹಲವು ಲೋಪಗಳನ್ನು ಎತ್ತಿ ತೋರಿಸಲು ಈ ಪಾಳಯ ನಿರ್ಧರಿಸಿದ್ದು, ಇದೆಲ್ಲವನ್ನು ಹಿಡಿದುಕೊಂಡು ಈ ಪಾಳಯದ ಒಂದು ಗುಂಪು ದೇಶದ ಖ್ಯಾತ ನ್ಯಾಯವಾದಿ ಮುಕುಲ್ ರೋಹ್ಟಗಿ ಬಳಿ, ಮತ್ತೊಂದು ಗುಂಪು ಅಭಿಷೇಕ್ ಮನು ಸಿಂಘ್ವಿ ಅವರನ್ನು ಸಂಪರ್ಕಿಸಿದೆ. ಎಲ್ಲವೂ ಲೆಕ್ಕಾಚಾರದ ಪ್ರಕಾರ ನಡೆದರೆ ಜಿಬಿಎ ಚುನಾವಣೆಗೆ ಬ್ರೇಕ್ ಹಾಕಲು ಸಿದ್ದು ವಿರೋಧಿ ಪಾಳಯ ಸುಪ್ರೀಂ ವಾರ್ ಆರಂಭಿಸಲಿದೆ.
