ಸೌದಿ ಅರೇಬಿಯಾ: ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸರಕಾರಕ್ಕೆ ಒತ್ತಾಯ

ಅಂತಾರಾಷ್ಟ್ರೀಯ

ರಿಯಾದ್: ಕರ್ನಾಟಕ ​ಅನಿವಾಸಿ ಒಕ್ಕೂಟದ ಪ್ರಥಮ‌ ಸಭೆಯು ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಬತಫನ ರೆಸ್ಟೋರೆಂಟ್‌ನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ರಿಯಾಝ್ ಇನೋಳಿ ಕರ್ನಾಟಕದ ಅನಿವಾಸಿಗಳನ್ನು ಒಟ್ಟುಗೂಡಿಸುತ್ತಿರುವ ಉದ್ದೇಶ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಾಮಾನ್ಯ ಉದ್ಯೋಗಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕರ್ನಾಟಕ ಸರಕಾರವು ಅನಿವಾಸಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು.

ಕರ್ನಾಟಕ ಸರಕಾರದ ಆರ್ಥಿಕ ಬೆನ್ನೆಲುಬಾಗಿರುವ ಅನಿವಾಸಿಗಳ ಬಗ್ಗೆ ಕರ್ನಾಟಕ ಸರಕಾರ ಗಮನ ಹರಿಸುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸರಕಾರ ಕಿವಿಯಾಗುತ್ತಿಲ್ಲ. ಗಲ್ಪ್ ಜೀವನದಿಂದ ನಿವೃತ್ತಿ ಪಡೆದು ಊರಿಗೆ ಹಿಂದಿರುಗಿದ ನಂತರ ಸಾಮಾನ್ಯ ಜನರು ಅತ್ತ ಉದ್ಯೋಗವೂ ಇಲ್ಲದೆ, ಇತ್ತ ವ್ಯಾಪಾರ ನಡೆಸಲು ಬೇಕಾದ ಆರ್ಥಿಕ ಸಾಮರ್ಥ್ಯವೂ ಇಲ್ಲದೆ ಜೀವನ ನಡೆಸಲು ಪರದಾಡುತ್ತಿದ್ದಾರೆ. ಈ ಬಗ್ಗೆ ಸರಕಾರ ಗಮನ ಹರಿಸಿ ಅನಿವಾಸಿಗಳಿಗಾಗಿ ಸೂಕ್ತ ವ್ಯವಸ್ಥೆ ಮಾಡುವಂತೆ ಒತ್ತಾಯಿಸಲಾಯಿತು.

ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ನಮ್ಮ ಜೊತೆ ಜೊತೆಯಲ್ಲಿ ದುಡಿಯುತ್ತಿರುವ ಕೇರಳೀಯರಿಗೆ ಅಲ್ಲಿನ ಸರಕಾರ ನೀಡುತ್ತಿರುವ ಸೌಲಭ್ಯಗಳ ಕುರಿತು ವಿಮರ್ಶಿಸಲಾಯಿತು. ಕೇರಳ ಮಾದರಿಯಲ್ಲಿ ಕರ್ನಾಟಕ ಸರಕಾರವೂ ಅನಿವಾಸಿ ಕನ್ನಡಿಗರಿಗಾಗಿ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಲಾಯಿತು.

ಸಭೆಯಲ್ಲಿ ಈ ಕೆಳಗಿನ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಅಸಂಘಟಿತ ಅನಿವಾಸಿ ಕನ್ನಡಿಗರನ್ನು ಒಟ್ಟು ಸೇರಿಸಿ ವ್ಯವಸ್ಥಿತ ರೀತಿಯಲ್ಲಿ ಕಾರ್ಯಾಚರಿಸುವ ಉದ್ಧೇಶದೊಂದಿಗೆ ಸೌದಿ ಅರೇಬಿಯಾ, ಯುಎಇ, ಕತ್ತರ್, ಕುವೈಟ್, ಒಮಾನ್ ಮತ್ತು ಬಹರೈನ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಪ್ರತಿನಿಧಿಗಳನ್ನೊಳಗೊಂಡ ಕೋರ್ ಕಮಿಟಿಯನ್ನು ರಚಿಸಿ ಈ ಸಮಿತಿಯನ್ನು ಕರ್ನಾಟಕ ಸರ್ಕಾರದ ಅಧೀನದಲ್ಲಿ ಸೊಸೈಟಿ ಆಕ್ಟ್ ಪ್ರಕಾರ ಅಧಿಕೃತವಾಗಿ ನೋಂದಾಯಿಸಲು ತೀರ್ಮಾನಿಸಲಾಯಿತು.

ರಿಯಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಒಕ್ಕೂಟದ ಪರವಾಗಿ ಒಬ್ಬ ಪ್ರತಿನಿಧಿಯನ್ನು ನೇಮಿಸಲು ಸರ್ಕಾರದ ಅನುಮತಿ ಪಡೆಯುವ ಬಗ್ಗೆ ಚರ್ಚಿಸಲಾಯಿತು.

ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯ ನೀಡಲು ರಿಯಾದ್ ಕೇಂದ್ರೀಕರಿಸಿ ‘ಸಾಮಾಜಿಕ ಸೇವಾ‌ ತಂಡವನ್ನು ರಚಿಸಲು ತೀರ್ಮಾನಿಸಲಾಯಿತು.

ಕೋರ್ ಕಮಿಟಿ ಪ್ರತಿನಿಧಿಗಳ ನೇತೃತ್ವದಲ್ಲಿ ಗಲ್ಫ್‌ನ ಇತರೆ ರಾಷ್ಟ್ರಗಳಲ್ಲಿರುವ ಕನ್ನಡಿಗರನ್ನು ಒಗ್ಗೂಡಿಸಿ ಆಯಾ ದೇಶಗಳಲ್ಲಿ ಪ್ರತ್ಯೇಕ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಕರ್ನಾಟಕ ಅನಿವಾಸಿ ಒಕ್ಕೂಟದ ಅಧಿಕೃತ ಲೋಗೋವನ್ನು ಅನಾವರಣಗೊಳಿಸಲಾಯಿತು. ಸಭೆಯಲ್ಲಿ ಪ್ರಮುಖರಾದ ಜಮಾಲ್ ಗಂಟಲ್ ಕಟ್ಟೆ, ಅಬ್ದುಲ್ ಅಝೀಝ್ ಕಲ್ಲಡ್ಕ, ಸಿದ್ದೀಕ್ ಅಬ್ದುಲ್ ಖಾದರ್ ಸೇರಿದಂತೆ ಸೌದಿ ಅರೇಬಿಯಾದ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಕ್ಬಾಲ್ ವಗ್ಗ ಸ್ವಾಗತಿಸಿದರು. ಶಬೀರ್ ಅಲಿ ತಲಪಾಡಿ ವಂದನೆ ಸಲ್ಲಿಸಿದರು.