ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟದಲ್ಲಿ ಭಾರತದ ಐತಿಹಾಸಿಕ ಯಶಸ್ಸು; 182 ಕೋಟಿ ರೂಪಾಯಿ ಮೌಲ್ಯದ 227.7 ಕೆಜಿ ತೂಕದ ಕ್ಯಾಪ್ಟಗನ್ ವಶ

ರಾಷ್ಟ್ರೀಯ

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟದಲ್ಲಿ ಭಾರತದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಐತಿಹಾಸಿಕ ಯಶಸ್ಸು ಸಾಧಿಸಿದೆ. ರಹಸ್ಯ ಕಾರ್ಯಾಚರಣೆ ಆಪರೇಷನ್ ರೇಜ್‌ಪಿಲ್ ಅಡಿಯಲ್ಲಿ ಎನ್‌ಸಿಬಿ ಅಧಿಕಾರಿಗಳು ಭೀಕರ ಉಗ್ರಗಾಮಿ ಕೃತ್ಯಗಳಿಗೆ ಲಿಂಕ್ ಹೊಂದಿರುವ ಸುಮಾರು 227.7 ಕೆಜಿ ತೂಕದ ಕ್ಯಾಪ್ಟಗನ್ ಮಾತ್ರೆ ಹಾಗೂ ಪೌಡರ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದರ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 182 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಜಾಲದ ಹಿಂದಿದ್ದ ಸಿರಿಯಾ ಮೂಲದ ವಿದೇಶಿ ಪ್ರಜೆಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.

ಈ ಬೃಹತ್ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ನಮ್ಮ ಭದ್ರತಾ ಸಂಸ್ಥೆಗಳು ದೇಶದಲ್ಲೇ ಮೊದಲ ಬಾರಿಗೆ 182 ಕೋಟಿ ರೂಪಾಯಿ ಮೌಲ್ಯದ ಜಿಹಾದಿ ಡ್ರಗ್ ಕ್ಯಾಪ್ಟಗನ್ ಅನ್ನು ವಶಪಡಿಸಿಕೊಂಡಿವೆ ಎಂದು ಹಂಚಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಭಾರತವನ್ನು ಡ್ರಗ್ಸ್ ಸಾಗಾಣಿಕೆಯ ಮಾರ್ಗವಾಗಿ ಬಳಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಭಾರತಕ್ಕೆ ಬರುವ ಅಥವಾ ಇಲ್ಲಿಂದ ಹೊರಹೋಗುವ ಪ್ರತಿಯೊಂದು ಗ್ರಾಂ ಡ್ರಗ್ಸ್ ಮೇಲೂ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಎನ್‌ಸಿಬಿ ವೀರರನ್ನು ಅಭಿನಂದಿಸಿದ್ದಾರೆ.

ವಿದೇಶಿ ಡ್ರಗ್ಸ್ ತಡೆಗಟ್ಟುವಿಕೆ ಸಂಸ್ಥೆಯೊಂದರಿಂದ ಸಿಕ್ಕ ರಹಸ್ಯ ಮಾಹಿತಿಯ ಆಧಾರದ ಮೇಲೆ ಎನ್‌ಸಿಬಿ ದಕ್ಷಿಣ ದೆಹಲಿಯ ‘ನೇಬ್ ಸರಾಯ್’ ಪ್ರದೇಶದಲ್ಲಿರುವ ಮನೆಯೊಂದರ ಮೇಲೆ ಮೇ 11 ರಂದು ದಾಳಿ ನಡೆಸಿತ್ತು. ಅಲ್ಲಿ ತಪಾಸಣೆ ನಡೆಸಿದಾಗ ಅಧಿಕಾರಿಗಳೇ ದಂಗಾಗಿದ್ದಾರೆ. ಸೌದಿ ಅರೇಬಿಯಾದ ಜಿದ್ದಾ ನಗರಕ್ಕೆ ರಫ್ತು ಮಾಡಲು ಸಿದ್ಧಪಡಿಸಲಾಗಿದ್ದ ವಾಣಿಜ್ಯ ಬಳಕೆಯ ಚಪಾತಿ ಕಟಿಂಗ್ ಮಿಷನ್ ಒಳಗಡೆ ಅತ್ಯಂತ ಚಾಣಾಕ್ಷತನದಿಂದ ಅಡಗಿಸಿಡಲಾಗಿದ್ದ 31.5 ಕೆಜಿ ತೂಕದ ಕ್ಯಾಪ್ಟಗನ್ ಮಾತ್ರೆಗಳು ಪತ್ತೆಯಾಗಿವೆ. ಅಲ್ಲಿ ಸಿಕ್ಕ ಸಿರಿಯಾ ದೇಶದ ಪ್ರಜೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದು, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಮತ್ತೊಂದು ಬೃಹತ್ ಕನ್ಸೈನ್‌ಮೆಂಟ್ ಇರುವುದು ಪತ್ತೆಯಾಗಿದೆ. ಮೇ 14 ರಂದು ಮುಂದ್ರಾ ಬಂದರಿನ ಕಂಟೈನರ್ ಸೌಲಭ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ, ಸಿರಿಯಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಕುರಿ ಉಣ್ಣೆಯ ಚೀಲಗಳ ನಡುವೆ ಅಡಗಿಸಿಟ್ಟಿದ್ದ ಮೂರು ಬ್ಯಾಗ್‌ಗಳಲ್ಲಿ 196.2 ಕೆಜಿ ಕ್ಯಾಪ್ಟಗನ್ ಪೌಡರ್ ಸಿಕ್ಕಿಬಿದ್ದಿದೆ. ಭಾರತವನ್ನು ಕೇವಲ ಟ್ರಾನ್ಸಿಟ್ ರೂಟ್ ಆಗಿ ಬಳಸಿ ಮಧ್ಯಪ್ರಾಚ್ಯ ದೇಶಗಳಿಗೆ ಇದನ್ನು ಸಾಗಿಸುವುದು ಈ ಅಂತಾರಾಷ್ಟ್ರೀಯ ಮಾಫಿಯಾದ ಪ್ಲಾನ್ ಆಗಿತ್ತು.

ಪಶ್ಚಿಮ ಏಷ್ಯಾದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳು ತಮ್ಮ ಉಗ್ರರಿಗೆ ದಾಳಿಯ ಸಮಯದಲ್ಲಿ ಭಯವಿಲ್ಲದೆ ಕ್ರೂರವಾಗಿ ವರ್ತಿಸಲು ಈ ಮಾತ್ರೆಗಳನ್ನು ನೀಡುತ್ತವೆ. ಹೀಗಾಗಿಯೇ ಇದಕ್ಕೆ ಜಿಹಾದಿ ಡ್ರಗ್ ಅಥವಾ ಪೂವರ್ ಮ್ಯಾನ್ಸ್ ಕೊಕೇನ್ ಎಂಬ ಹೆಸರು ಬಂದಿದೆ. ಇದರ ಮಾರಾಟದಿಂದ ಬರುವ ನೂರಾರು ಕೋಟಿ ಹಣವನ್ನು ಅಂತಾರಾಷ್ಟ್ರೀಯ ಅಪರಾಧ ಕೃತ್ಯಗಳು ಮತ್ತು ಉಗ್ರಗಾಮಿ ಸಂಘಟನೆಗಳಿಗೆ ಫಂಡಿಂಗ್ ಮಾಡಲು ಬಳಸಲಾಗುತ್ತದೆ ಎಂದು ಇಂಟೆಲಿಜೆನ್ಸ್ ವರದಿಗಳು ತಿಳಿಸಿವೆ.