ಮಹಾ ವಂಚಕ, ಅವತಾರ ಪುರುಷ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಜೈಲು ಪಾಲು

ರಾಜ್ಯ

ಸಿನಿಮಾ ಸ್ಟೈಲ್‌ನಲ್ಲಿ ಅಬ್ಬರಿಸುತ್ತಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ. ಮುಗ್ಧ ಜನರಿಗೆ ವಾರ್ಷಿಕ ಬರೋಬ್ಬರಿ 36% ಬಡ್ಡಿಯ ಆಮಿಷ ಒಡ್ಡಿ, ಬರೊಬ್ಬರಿ 4,500 ಕೋಟಿ ರೂಪಾಯಿ ಲೂಟಿ ಹೊಡೆದಿದ್ದ ಈ ಮಹಾ ವಂಚಕನ ಸಾಮ್ರಾಜ್ಯದ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸರು ನಡುರಾತ್ರಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ ಸಿಕ್ಕ ರಹಸ್ಯ ದಾಖಲೆಗಳನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಹಣ ವಂಚನೆ ಆರೋಪದಡಿ ಅವತಾರ ಪುರುಷ ಶಿವಾನಂದ ನೀಲಣ್ಣವರ್ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಮೇರೆಗೆ ಬಡ್ಸ್ ಆ್ಯಕ್ಟ್ ಸೆಕ್ಷನ್ 21 ಮತ್ತು ಕೆಪಿಐಡಿ ಸೆಕ್ಷನ್ 9 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಜಬಿವುಲ್ಲಾ ಕೆ. ನೀಡಿದ ದೂರಿನನ್ವಯ ಕೇಸ್ ದಾಖಲಾಗಿದ್ದು, ಶಿವಾನಂದ ನೀಲಣ್ಣವರ್ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

2016ರಲ್ಲಿ ಶಿವಂ ಅಸೋಸಿಯೇಟ್ ಎಂಬ ಹೆಸರಿನ ಸಂಸ್ಥೆ ಪ್ರಾರಂಭಿಸಿ ನಿಯಮ ಬಾಹಿರವಾಗಿ ಯಾವುದೇ ಪರವಾನಿಗೆ ಪಡೆಯದೇ ಕಾನೂನು ಪಾಲಿಸದೇ 35 ಸಾವಿರ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಸಾರ್ವಜನಿಕರು ಹೂಡಿಕೆ ಮಾಡಿದ ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿಯ ಲಾಭ ನೀಡುವುದಾಗಿ ಆಮಿಷ ಒಡ್ಡಿ, ಸಾವಿರಾರು ಕೋಟಿ ಹಣವನ್ನು ಸಂಗ್ರಹ ಮಾಡಿ, ಅದರಲ್ಲಿ ಭಾಗಶಃ ಮೊತ್ತವನ್ನು ಸ್ಟಾಕ್ ಮಾರ್ಕೆಟ್​​​ನಲ್ಲಿ ಹೂಡಿಕೆ ಮಾಡಿ, ಹೆಚ್ಚಿನ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಸಾರ್ವಜನಿಕರಿಗೆ ಮೋಸ ವಂಚನೆ ಮಾಡುತ್ತಿರುವ ಅಪರಾಧ ಎಂದು ಎಫ್‌ಐಆರ್​ನಲ್ಲಿ ಉಲ್ಲೇಖವಾಗಿದೆ.

ಚಿಟಿಕೆ ಹೊಡೆಯೊದ್ರೊಳಗೆ ಸಿಎಂ ಆಗ್ತೀನಿ, ನನ್ನ ಹತ್ತಿರ 15,000 ಬಂದೂಕುಗಳಿವೆ, 2028ಕ್ಕೆ 224 ಕ್ಷೇತ್ರ ಗೆದ್ದು ನಾನೇ ಸಿಎಂ. ಎಂದು ಸಿನಿಮಾ ಸ್ಟೈಲ್‌ನಲ್ಲಿ ಅಬ್ಬರಿಸುತ್ತಿದ್ದ, 35 ಸಾವಿರ ಮಂದಿಗೆ ವಂಚಿಸಿದ ಅವತಾರ ಪುರುಷನ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ. ಮುಗ್ಧ ಜನರಿಗೆ ವಾರ್ಷಿಕ ಬರೋಬ್ಬರಿ 36% ಬಡ್ಡಿಯ ಆಮಿಷ ಒಡ್ಡಿ, ಬರೊಬ್ಬರಿ 4,500 ಕೋಟಿ ರೂಪಾಯಿ ಲೂಟಿ ಹೊಡೆದಿದ್ದ ಈ ಮಹಾ ವಂಚಕನ ಸಾಮ್ರಾಜ್ಯದ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸರು ನಡುರಾತ್ರಿ ಭೀಕರ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ.