ರಾಜ್ಯಾಧ್ಯಕ್ಷರಾಗಿ ಷಡಾಕ್ಷರಪ್ಪ ಜಿ.ಆರ್., ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ ಹೆಬ್ಬಾರ್ ಆಯ್ಕೆ
ಬೆಂಗಳೂರು: ರಾಜ್ಯದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರು ಮತ್ತು ಪ್ರಕಾಶಕರನ್ನು ಒಳಗೊಂಡ ‘ಕರ್ನಾಟಕ ಅಸೋಷಿಯೇಷನ್ ಆಫ್ ಸ್ಮಾಲ್ ಅಂಡ್ ಮೀಡಿಯಂ ನ್ಯೂಸ್ ಪೇಪರ್ಸ್’ (KASMN) (ಕರ್ನಾಟಕ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಘ) ಅಸ್ತಿತ್ವಕ್ಕೆ ಬಂದಿದ್ದು, ಸಂಘದ ರಾಜ್ಯಾಧ್ಯಕ್ಷರಾಗಿ ಶಿವಮೊಗ್ಗದ ಸುದ್ದಿಸಾರ ದಿನಪತ್ರಿಕೆಯ ಪ್ರಕಾಶಕ ಷಡಾಕ್ಷರಪ್ಪ ಜಿ.ಆರ್. ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರು ಜಯನಗರದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಹೊನ್ನಾವರದ (ಉತ್ತರ ಕನ್ನಡ ಜಿಲ್ಲೆ) ನಾಗರೀಕ ಪತ್ರಿಕೆಯ ಸಂಪಾದಕ-ಪ್ರಕಾಶಕ ಕೃಷ್ಣಮೂರ್ತಿ ಹೆಬ್ಬಾರ್, ಕಾರ್ಯದರ್ಶಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಜಾಕಾಲ ಪತ್ರಿಕೆಯ ಸಂಪಾದಕ-ಪ್ರಕಾಶಕ ಪುರುಷೋತ್ತಮ ಕೆ., ಜಂಟಿ ಕಾರ್ಯದರ್ಶಿಯಾಗಿ ಬೆಂಗಳೂರು ನಗರ ಜಿಲ್ಲೆಯ ಐನಿ ಟಿವಿ ಯೂಟೂಬ್ ಚಾನಲ್‍ನ ಸಂಪಾದಕಿ ಶ್ರೀಮತಿ ಭಾರತಿ ರವಿ ಕುಮಾರ್, ಖಜಾಂಚಿಯಾಗಿ ಸ್ಪೆಷಲ್ ನ್ಯೂಸ್ ಪತ್ರಿಕೆ ಇದರ ಸಂಪಾದಕ, ಬಾವ ಪದರಂಗಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ, ಈ ನೆಲದ ಪ್ರಭ ಪತ್ರಿಕೆ ಸಂಪಾದಕ-ಪ್ರಕಾಶಕ ಸಿ. ಶ್ರೀನಿವಾಸಮೂರ್ತಿ, ಕೋಲಾರ, ಭೋವಿ ಸಮಾಜ ಪತ್ರಿಕೆ ಪ್ರಕಾಶಕ-ಸಂಪಾದಕ ಚಿತ್ರಪ್ಪ ಯರಬಾಳ, ನರಸಿಂಹರಾಜಪುರ. ಮಲೆನಾಡು ಸಮೀಕ್ಷಾ ಪತ್ರಿಕೆ ಸಂಪಾದಕ-ಪ್ರಕಾಶಕ ಹೆಚ್.ಎ. ಪ್ರಭಾಕರ್ (ಹಾತೂರು ಪ್ರಭಾಕರ್), ಪುರದರ್ಶನ ಪತ್ರಿಕೆಯ ಸಂಪಾದಕ-ಪ್ರಕಾಶಕ ಎನ್. ಗಿರೀಶ್ ಕುಮಾರ್, ಉದಯ ಕೇಸರಿ ಪತ್ರಿಕೆ ಸಂಪಾದಕ-ಪ್ರಕಾಶಕ ಕೆ.ಎಸ್. ಶ್ರೀಹರಿಪ್ರಸಾದ್, ಅರಸಿಕೆರೆ. ಕಡೂರಿನ ಸುದ್ದಿ ಅಕ್ಷಯ ಪತ್ರಿಕೆ ಸಂಪಾದಕ ವೀರೇಶ್ ಮೂರ್ತಿ ಕೆ.ಹೆಚ್., ದೇವನಹಳ್ಳಿ ಎಕ್ಸ್ ಪ್ರೆಸ್ ಪತ್ರಿಕೆ ಸಂಪಾದಕ-ಪ್ರಕಾಶಕ ಎನ್. ಮಧು, ದಿವ್ಯದೃಷ್ಟಿ ಮತ್ತು ರಣತಂತ್ರ ಪತ್ರಿಕೆಗಳ ಸಂಪಾದಕ-ಪ್ರಕಾಶಕ, ದಾನಯ್ಯ ವಿರೂಪಾಕ್ಷಯ್ಯ ಹಿರೇಮಠ, ಪ್ರೈಮ್ ಟಿ.ವಿ.ಯ ಪ್ರಧಾನ ಸಂಪಾದಕ ರೂಪೇಶ್ ಕಲ್ಮಾಡಿ, ಉಡುಪಿ, ಹಾಗೂ ಧಾರವಾಡ ಜಿಲ್ಲೆಯ ಖಡಕ ನುಡಿ ಪತ್ರಿಕೆಯ ಸಂಪಾದಕ-ಪ್ರಕಾಶಕ ಬಸವರಾಜ ಮರಡ್ಡಿ ಇವರುಗಳು ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈ ನೂತನ ಸಂಘದ ಕಚೇರಿಯು ನಂ. 434, 16ನೇ ಎ-ಮೈನ್, 4ನೇ ಟಿ-ಬ್ಲಾಕ್, ಜಯನಗರ, ಬೆಂಗಳೂರು-560041 ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು, ಯೂಟ್ಯೂಬ್ ಚಾನೆಲ್ ಮತ್ತು ಆನ್‍ಲೈನ್ ಪೋರ್ಟಲ್‍ಗಳ ಸಂಪಾದಕರು-ಪ್ರಕಾಶಕರುಗಳನ್ನು ಸದಸ್ಯರನ್ನಾಗಿ ಹೊಂದಿರುವ ‘ಕರ್ನಾಟಕ ಅಸೋಷಿಯೇಷನ್ ಆಫ್ ಸ್ಮಾಲ್ ಅಂಡ್ ಮೀಡಿಯಂ ನ್ಯೂಸ್ ಪೇಪರ್ಸ್’ (ಕರ್ನಾಟಕ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಘ) ಸಂಪಾದಕರು-ಪ್ರಕಾಶಕರುಗಳಿಗೆ ವೃತ್ತಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ ನೀಡುವ, ಅವರ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಸಂಘದ ಅಧ್ಯಕ್ಷ ಷಡಾಕ್ಷರಪ್ಪ ಜಿ.ಆರ್. ತಿಳಿಸಿದ್ದಾರೆ.
ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾಧ್ಯಮ ನೀತಿಗಳು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಅಸ್ತಿತ್ವಕ್ಕೆ ಮತ್ತು ಬೆಳವಣಿಗೆಗೆ ಪೂರಕವಾಗಿರದೆ, ಧಮನಕಾರಿ ನೀತಿಯಾಗಿವೆ. ಸಣ್ಣ ಪತ್ರಿಕೆಗಳ ಬೆಳವಣಿಗೆಗೆ ಪೂರಕವಾಗಿದ್ದ 2ನೇ ಪತ್ರಿಕಾ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಪ್ರೆಸ್ ಕೌನ್ಸಿಲ್‍ನ ಸ್ಥಾಪನೆಯ ಮೂಲ ಉದ್ದೇಶ ಈಡೇರದೇ ಇರುವುದರಿಂದಾಗಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಸಂಕಷ್ಟದಲ್ಲಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘವು ಕೆಲಸ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
