ಕಳೆದ ಡಿಸೆಂಬರ್ 2025 ರಲ್ಲಿ ರೊನಾಲ್ಡ್ ಕೊಲಾಸೊ ನೇತೃತ್ವದಲ್ಲಿ 30 ದೇಶಗಳ 43 ಅನಿವಾಸಿ ಸಂಘಟನೆಗಳ ಪ್ರತಿನಿಧಿಗಳ ನಿಯೋಗ ಸಿಎಂ, ಡಿಸಿಎಂ ಭೇಟಿ ನೀಡಿ ಇಟ್ಟ ಬೇಡಿಕೆಗೆಯನ್ನು ಈಡೇರಿಸಿ, ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಘೋಷಣೆ ಮಾಡಿದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ವಿಶ್ವದಾದ್ಯಂತದ ಅರವತ್ತಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಒಕ್ಕೊರಲಿನಿಂದ ಅಭಿನಂದಿಸಿವೆ.
ಜೂನ್ 15ರಂದು ಅನಿವಾಸಿ ಕನ್ನಡಿಗರ ಪೋಷಕರಾದ ರೊನಾಲ್ಡ್ ಕೊಲಾಸೊ ನೇತೃತ್ವದಲ್ಲಿ ನಡೆದ ಆನ್ಲೈನ್ ಸಭೆಯಲ್ಲಿ ಭಾಗವಹಿಸಿದ ವಿವಿಧ ದೇಶಗಳ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಾಯಕರು, ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಹುಕಾಲದ ಬೇಡಿಕೆಯಾಗಿದ್ದ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಕುರಿತ ಘೋಷಣೆ ಸಂತೋಷ ತಂದಿದೆ ಎಂದು ಎಲ್ಲರೂ ಅಭಿಪ್ರಾಯಪಟ್ಟರು.
ಸಚಿವಾಲಯ ರಚಿಸುವ ಘೋಷಣೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಮಾಡಿದ ನಂತರ ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದೆ. ಅವರ ಸಕಾರಾತ್ಮಕ ಸ್ಪಂದನೆ ಹಾಗೂ ನಡೆ ಸಂತಸ ಮೂಡಿಸಿದೆ. ಈ ಸಚಿವಾಲಯವು ಶೀಘ್ರದಲ್ಲೇ ಸ್ಥಾಪನೆಯಾಗಿ, ಅನಿವಾಸಿ ಕನ್ನಡಿಗರು ಸರ್ಕಾರದೊಂದಿಗೆ ಕೈಜೋಡಿಸಿ ಉದ್ಯಮ, ಹೂಡಿಕೆ ಹಾಗೂ ಅನಿವಾಸಿ ಕನ್ನಡಿಗರ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಬೆಂಬಲ ನೀಡಲು ಇದು ಹೊಸ ವೇದಿಕೆಯಾಗಲಿ’ ಎಂದು ರೊನಾಲ್ಡ್ ಕೊಲಾಸೊ ಶುಭ ಹಾರೈಸಿದರು.
ಸಭೆಯಲ್ಲಿ ಗಲ್ಫ್ ರಾಷ್ಟ್ರಗಳು, ಅಮೇರಿಕ, ಯುಕೆ, ಯೂರೋಪ್, ಆಸ್ಟ್ರೇಲಿಯಾ, ಕೆನಡಾ, ಆಫ್ರಿಕಾ ರಾಷ್ಟ್ರಗಳ ಅನಿವಾಸಿ ಕನ್ನಡಿಗರ ಸಂಘಟನೆಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿ, ಮಾತನಾಡಿ, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಸಮುದಾಯವು ಕರ್ನಾಟಕದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದು, ವಿದೇಶಿ ಹಣಕಾಸು ವರ್ಗಾವಣೆ (ರೆಮಿಟೆನ್ಸ್), ಹೂಡಿಕೆ, ಉದ್ಯಮಶೀಲತೆ, ತಂತ್ರಜ್ಞಾನ ವರ್ಗಾವಣೆ ಮೂಲಕ ಅವರು ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಮಾತ್ರವಲ್ಲದೆ ಸಮಾಜಸೇವೆ, ದಾನ, ಪರೋಪಕಾರಿ ಚಟುವಟಿಕೆಯಲ್ಲಿಯೂ ಸದಾ ಮುಂದಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಸಭೆಯಲ್ಲಿ ವಿಶ್ವದಾದ್ಯಂತವಿರುವ ಅನಿವಾಸಿ ಕನ್ನಡಿಗರ ಪ್ರಸಕ್ತ ಆಗುಹೋಗುಗಳು ಹಾಗೂ ಭವಿಷ್ಯದ ಬೆಳವಣಿಗೆಳ ಕುರಿತು ಉತ್ತಮ ಚರ್ಚೆ ನಡೆಯಿತು, ಅನಿವಾಸಿ ಕನ್ನಡಿಗರ ಅಭಿವೃದ್ಧಿಗಾಗಿ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿಗಳು ಕೈಜೋಡಿಸಿ ಒಂದೇ ವೇದಿಕೆಯಲ್ಲಿ ಯೋಜನೆಯೊಂದನ್ನು ಸರ್ಕಾರದ ಸಹಕಾರದೊಂದಿಗೆ ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ಸಭೆಯ ನಿರೂಪಕರು ತಿಳಿಸಿದರು.
ಡಾ.ಆರತಿ ಕೃಷ್ಣರಿಗೆ ಅನಿವಾಸಿ ಸಚಿವಾಲಯ ನೀಡಿ
ಅನಿವಾಸಿಗಳಿಗೆ ನೂತನ ಸಚಿವಾಲಯ ಸ್ಥಾಪಿಸುವಾಗ ವಿಶ್ವದಾದ್ಯಂತವಿರುವ ಅನಿವಾಸಿ ಕನ್ನಡಿಗರ ಜೊತೆ ನಿರಂತರ ಸಂಪರ್ಕ ಹೊಂದಿರುವ, ಅನಿವಾಸಿಗಳ ನಾಡಿ ಮಿಡಿತ ಅರಿತಿರುವ, ಸದಾ ಸ್ಪಂದಿಸುವ, ಅಂತಾರಾಷ್ಟ್ರೀಯ ಕಾನೂನು ಹಾಗೂ ಸಮಸ್ಯೆ ನಿರ್ವಹಣೆಯ ಮಾಹಿತಿ ಹಾಗೂ ಅನುಭವವಿರುವ, ಅಮೇರಿಕಾದಲ್ಲಿ ಇಂಡಿಯನ್ ಕಾನ್ಸುಲೇಟ್ ನಲ್ಲಿ 13 ವರ್ಷಗಳ ಸೇವೆ ಸಲ್ಲಿಸಿರುವ ದೀರ್ಘ ಅನುಭವಿರುವ, ಕೋವಿಡ್, ರಷ್ಯಾ-ಉಕ್ರೇನ್ ಯುದ್ಧ, ಇರಾನ್ ಅಮೇರಿಕ ಯುದ್ಧ ಸಂದರ್ಭದಲ್ಲಿ ಸಿಲುಕಿದ್ದ ಸಾವಿರಾರು ಅನಿವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನುಡಿಗೆ ಕರೆತರುವಲ್ಲಿ ಮಹತ್ತರ ಜವಾಬ್ದಾರಿ ವಹಿಸಿದ್ದ ಕೆಎನ್ಆರೈ ಅಧ್ಯಕ್ಷರಾಗಿ ಅನುಭವ ಹೊಂದಿರುವ ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಅವರನ್ನು ಸಚಿವರಾಗಿ ನೇಮಕ ಮಾಡಬೇಕು ಎಂದು ಎಲ್ಲಾ ಕನ್ನಡಪರ ಸಂಘಟನೆಗಳು ಸರ್ವ ಸಮ್ಮತದಿಂದ ಮನವಿ ಸಲ್ಲಿಸಿದ್ದಾರೆ.
ಸಭೆಯಲ್ಲಿ ಝಕಾರಿಯಾ ಜೋಕಟ್ಟೆ, ಪ್ರವೀಣ್ ಶೆಟ್ಟಿ, ಹಿದಾಯತ್ ಅಡ್ಡೂರ್, ಅಜಿತ್ ಭಾಸ್ಕರ್ ನ್ಯೂಯಾರ್ಕ್, ಶಶಿಧರ್ ನಾಗರಾಜಪ್ಪ, ಚಂದ್ರಶೇಖರ್ ಪ್ಯಾರಿಸ್, ರವಿ ಶೆಟ್ಟಿ ಕತಾರ್, ಪ್ರಕೃತಿ ಆಸ್ಟ್ರೇಲಿಯಾ, ಜಯಪ್ರಕಾಶ್ ನೆದರ್ಲೆಂಡ್, ಸಚಿನ್ ಪಾರ್ಥ ಪೋಲೆಂಡ್, ಮಂಜುನಾಥ ಇಟೆಲಿ, ಪ್ರಭಾಕರ್ ಬಸವರಾಜ, ಅಭಿನವ್ ಹಂಗೇರಿ, ಹೇಮೇಗೌಡ ಇಟೆಲಿ, ಹನೀಫ್ ಯುಕೆ, ಪರಶಿವ ಮೂರ್ತಿ ಜರ್ಮನಿ, ಶ್ರೀನಿವಾಸ್ ನಿಗ್ಗೇರಿಯಾ, ರಾಜ್ ಕುಮಾರ್ ಬಹ್ರೈನ್, ಅಜಿತ್ ಬಂಗೇರ, ಅಫ್ರೋಜ್ ಅಸಾದಿ, ದಯಾ ಕಿರೋಡಿಯನ್, ಸತೀಶ್ ಬಜಾಲ್, ಸರ್ವೋತ್ತಮ ಶೆಟ್ಟಿ, ಗಣೇಶ್ ರೈ, ಅಶ್ರಫ್ ಖಾನ್, ಅರುಣ್ ಕುಮಾರ್, ಮಹಮ್ಮದ್ ಅಲಿ ಉಚ್ಚಿಲ್, ಕಮರುದ್ದೀನ್ ಗೂಡಿನಬಳಿ, ಶೇಕ್ ಮುಝಫರ್, ಅಬ್ದುಲ್ಲಾ ಮೋನು ಕತಾರ್, ಭಾರ್ಗವ ಶರ್ಮಾ, ಸಿಧ್ಧಲಿಂಗೇಶ್, ಕೆ.ಎಚ್ ರಫೀಕ್, ಡಾ. ರಶ್ಮಿ ನಂದಕಿಶೋರ್, ಎಂ.ಇ ಮೂಳೂರು, ಮುಸ್ತಾಕ್ ಕದ್ರಿ, ಯತೀಶ್ ಗೌಡ, ಸಲೀಂ ಮೂಡುಬಿದಿರೆ, ಶಕೀಲ್ ಜಿದ್ದಾ, ಸತೀಶ್ ಬಜಾಲ್, ಲತೀಫ್ ಮುಲ್ಕಿ, ಸಮದ್ ಬಿರಾಲಿ, ಅನ್ವರ್ ಹುಸೇನ್, ವಿಶ್ವನಾಥ್ ಶೆಟ್ಟಿ, ಸುಗಂಧರಾಜ್ ಬೇಕಲ್, ನಾಗರಾಜ್ ರಾವ್, ದೀಪಕ್ ಸೋಮಶೇಖರ್, ಸಂದೇಶ್, ಫಾರೂಕ್ ಅಂಗರಗುಂಡಿ, ಫಿರೋಜ್ ಕಲ್ಲಡ್ಕ, ನವಾಜ್ ಕೋಟೆಕಾರ್, ಆಸಿಫ್ ಕನ್ನಂಗಾರ್, ನಜೀರ್ ವಾಮಂಜೂರು, ಇಕ್ರಂ ಮೂಳೂರು, ರಿಫಾಯಿ, ಅಯಾಜ್ ಸೌದಿ, ಹಕೀಂ ತುರ್ಕಲಿಕೆ, ಮತ್ತಿತರರು ಉಪಸ್ಥಿತರಿದ್ದರು.
