ಹೊಸ ವರ್ಷದ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಬಗ್ಗೆ ಸಾಕಷ್ಟು ವಿಷಯಗಳು ಹೊರ ಬರುತ್ತಿದ್ದು, ಆಶ್ಚರ್ಯ ಹಾಗೂ ಆತಂಕ ಎರಡೂ ವ್ಯಕ್ತವಾಗುತ್ತಿವೆ. ಬೆಂಗಳೂರು ಸಿಸಿಬಿ ಪೊಲೀಸರು ಕಳೆದ ಅಕ್ಟೋಬರ್ ತಿಂಗಳಲ್ಲಿ ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಅನುಮಾನಾಸ್ಪದ 3,500 ಕೊರಿಯರ್‌ಗಳನ್ನು ಪರಿಶೀಲಿಸಿದ ವೇಳೆ 606 ಕೊರಿಯರ್‌ಗಳಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. ಈ ಪ್ರಕರಣ ಬೆನ್ನಟ್ಟಿದ್ದ ಪೊಲೀಸರಿಗೆ ಮಾತ್ರ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ.
ಈ ಕೊರಿಯರ್ ಗಳ ಪೈಕಿ ಒಂದೇ ಒಂದು ಅಡ್ರೆಸ್ ಕೂಡ ಪೊಲೀಸರಿಗೆ ಪತ್ತೆಯಾಗಿಲ್ಲ. ಹೊಸ ವರ್ಷದ ಹಿನ್ನೆಲೆಯಲ್ಲಿ ಪೋಸ್ಟ್ ಆಫೀಸ್‌ಗಳು, ಖಾಸಗಿ ಕೋರಿಯರ್ ಸಂಸ್ಥೆಗಳು, ಟ್ರಾವೆಲ್ ಏಜೆನ್ಸಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸುತ್ತಿದ್ದು, ಮತ್ತೆ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇವು ಕೂಡ ಸುಳ್ಳು ವಿಳಾಸದ ಹಿನ್ನೆಲೆ ಹೊಂದಿವೆ. ಸದ್ಯ ಪೊಲೀಸರು ಅಲರ್ಟ್ ಆಗಿದ್ದು, ಇಂತಹ ಪ್ರಕರಣಗಳನ್ನು ಬೇಧಿಸುವ ಕಾರ್ಯ ಮಾಡುತ್ತಿದ್ದಾರೆ.